ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂದಗತಿ ಹಾದಿಯಲ್ಲಿ ವಾಣಿಜ್ಯ ವಹಿವಾಟು

ಹಸಿರು ವಲಯದಲ್ಲಿ ಲಾಕ್‌ಡೌನ್‌ ನಿಯಮ ಸಡಿಲು
Last Updated 1 ಮೇ 2020, 19:45 IST
ಅಕ್ಷರ ಗಾತ್ರ

ಚಿತ್ರದುರ್ಗ: ಹಸಿರು ವಲಯದಲ್ಲಿರುವ ಕೋಟೆನಾಡಿನಲ್ಲಿ ಲಾಕ್‌ಡೌನ್‌ ನಿಯಮ ಕೊಂಚ ಸಡಿಲಿಕೆಯಾಗಿ ಮೂರು ದಿನ ಕಳೆದರೂ ವಾಣಿಜ್ಯ ವಹಿವಾಟು ಚೇತರಿಕೆ ಮಂದಗತಿಯಲ್ಲಿ ಸಾಗುತ್ತಿದೆ. ವಾಣಿಜ್ಯ ಮಳಿಗೆ, ಅಂಗಡಿ ಬಾಗಿಲು ತೆರೆದಿದ್ದರೂ ಗ್ರಾಹಕರ ಸಂಖ್ಯೆ ಅತಿ ವಿರಳವಾಗಿದೆ.

ಸರ್ಕಾರ ಅನುಮತಿ ನೀಡಿದ ಮಳಿಗೆಗಳು ಮೂರು ದಿನಗಳಿಂದ ಬಾಗಿಲು ತೆರೆದಿವೆ. ಹೀಗಾಗಿ, ನಗರದಲ್ಲಿ ಜನ ಮತ್ತು ವಾಹನ ಸಂಚಾರ ಕಾಣಿಸಿಕೊಳ್ಳಲಾರಂಭಿಸಿದೆ. ನಗರವು ಬೆಳಿಗ್ಗೆ ಸಮಯದಲ್ಲಿ ಸಹಜ ಸ್ಥಿತಿಯಂತೆ ಕಂಡುಬರುತ್ತಿದ್ದರೂ, ಮಧ್ಯಾಹ್ನದ ಬಳಿಕ ವಾಣಿಜ್ಯ ಬೀದಿಗಳು ಖಾಲಿ–ಖಾಲಿಯಾಗಿರುತ್ತವೆ.

ಸ್ಟೇಷನರಿ, ಪ್ಲಾಸ್ಟಿಕ್‌, ಪಾತ್ರೆ, ಗಡಿಯಾರ, ಎಲೆಕ್ಟ್ರಾನಿಕ್‌ ಉಪಕರಣ, ಹೋಟೆಲು, ಸಿದ್ಧ ಆಹಾರ ಮಾರಾಟ ಮಳಿಗೆ, ಮೊಬೈಲ್‌, ಕೃಷಿ ಉಪಕರಣ, ಬೀಜ ಮತ್ತು ಗೊಬ್ಬರ ಸೇರಿ ಹಲವು ಅಂಗಡಿ ಬಾಗಿಲು ತೆರೆಯುತ್ತಿವೆ. ಬೆಳಿಗ್ಗೆ 10ಕ್ಕೆ ವಹಿವಾಟು ಆರಂಭವಾದರೂ ಕೆಲ ಮಳಿಗೆ ಮಧ್ಯಾಹ್ನ ಹಾಗೂ ಇನ್ನೂ ಕೆಲವು ಸಂಜೆ ಹೊತ್ತಿಗೆ ಮುಚ್ಚುತ್ತಿವೆ.

ಬಹುತೇಕ ಮಳಿಗೆಯಲ್ಲಿ ಕಡಿಮೆ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಅಂಗಡಿ ಮುಂಭಾಗ ಬಣ್ಣದಲ್ಲಿ ಗುರುತು ಮಾಡಲಾಗಿದೆ. ಮಾಸ್ಕ್‌ ಧರಿಸಿದ ಒಬ್ಬ ಗ್ರಾಹಕರಿಗೆ ಮಾತ್ರ ಪ್ರವೇಶಾವಕಾಶ. ಅಂತರ ಕಾಯ್ದುಕೊಂಡು ವಹಿವಾಟು ನಡೆಸಲಾಗುತ್ತಿದೆ. ಆದರೂ, ಬಹುತೇಕ ಮಳಿಗೆಗಳು ಗ್ರಾಹಕರಿಲ್ಲದೇ ಭಣಗುಡುತ್ತವೆ.

ಲಾಕ್‌ಡೌನ್‌ ಅವಧಿಯಲ್ಲಿ ಮನೆಗೆ ಬೇಕಾಗಿರುವ ಅಗತ್ಯ ವಸ್ತುಗಳಿಗೆ ಮಾತ್ರ ಗ್ರಾಹಕರು ಒತ್ತು ನೀಡುತ್ತಿದ್ದಾರೆ. ಮೊಬೈಲ್‌ ಖರೀದಿ ಹಾಗೂ ರಿಪೇರಿ, ಅಡುಗೆ ತಯಾರಿಸುವ ಪಾತ್ರೆಗಳ ದುರಸ್ತಿ, ಎಲೆಕ್ಟ್ರಾನಿಕ್‌ ಉಪಕರಣಗಳ ರಿಪೇರಿಗೆ ಹೆಚ್ಚು ಜನರು ಬರುತ್ತಿದ್ದಾರೆ. ಫ್ಯಾನ್ಸಿ, ಪುಸ್ತಕದಂಗಡಿ, ಹಾರ್ಡ್‌ವೇರ್, ಆಫ್ಟಿಕಲ್ಸ್‌, ರಿವೈಂಡಿಂಗ್‌ ಶಾಪ್‌, ಪಂಕ್ಚರ್ ಅಂಗಡಿಗಳಲ್ಲಿ ವಹಿವಾಟು ನಿಧಾನವಾಗಿ ಆರಂಭವಾಗುತ್ತಿದೆ. ಕೆಲವು ಮಳಿಗೆಗಳು ಅರ್ಧ ಬಾಗಿಲು ತೆರೆದಿವೆ. ಗ್ರಾಹಕರು ಬರಬಹುದು ಎಂಬ ನಿರೀಕ್ಷೆಯಲ್ಲಿ ಅಂಗಡಿ ಮಾಲೀಕರು ಕಾಯುತ್ತಿದ್ದಾರೆ.

ಕೃಷಿ ಸಂಬಂಧಿತ ಉಪಕರಣಗಳ ವಹಿವಾಟು ಚೇತರಿಕೆ ಕಾಣುತ್ತಿದೆ. ಪೂರ್ವ ಮುಂಗಾರು ಹಂಗಾಮು ಬಿತ್ತನೆಗೆ ರೈತರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ದವಸ–ಧಾನ್ಯ, ತರಕಾರಿ ತುಂಬಲು ಅಗತ್ಯವಿರುವ ಗೋಣಿಚೀಲಗಳಿಗೆ ಬೇಡಿಕೆ ಬಂದಿದೆ. ಕೃಷಿ ಪಂಪ್‌ಸೆಟ್‌ ರಿಪೇರಿ, ಟ್ರ್ಯಾಕ್ಟರ್‌ ಗ್ಯಾರೇಜುಗಳಲ್ಲಿ ಜನರು ಕಾಣಿಸಿಕೊಳ್ಳುತ್ತಿದ್ದಾರೆ.

ಕಟ್ಟಡ ನಿರ್ಮಾಣ ಉದ್ಯಮ ಸುಗಮ ಹಾದಿಗೆ ಮರಳುತ್ತಿದೆ. ಸಿಮೆಂಟ್‌, ಕಬ್ಬಿಣ, ಟೈಲ್ಸ್‌, ಗೃಹೋಪಯೋಗಿ ಉಪಕರಣ ಮಳಿಗೆ ವ್ಯಾಪಾರ ಶುರುವಾಗಿದೆ. ಕಟ್ಟಡ ನಿರ್ಮಾಣ ಹಾಗೂ ರಸ್ತೆ ಕಾಮಗಾರಿ ಆರಂಭವಾಗಿರುವುದರಿಂದ ಕಾರ್ಮಿಕರ ಸಂಚಾರ ಕಾಣಿಸಿಕೊಳ್ಳಲಾರಂಭಿಸಿದೆ. ಹೂ ಮಾರುಕಟ್ಟೆ ಮಂಕಾಗಿದೆ. ಶುಭ ಸಮಾರಂಭ ಇಲ್ಲದಿರುವ ಕಾರಣ ಹಾಗೂ ಧಾರ್ಮಿಕ ಕೇಂದ್ರಗಳು ಬಾಗಿಲು ತೆರೆಯದಿರುವುದರಿಂದ ಪುಷ್ಪೋದ್ಯಮದ ಮೇಲೆ ಕರಿನೆರಳು ಆವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT