ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Lok Sabha Elections 2024 | ಕುತೂಹಲ ಕೆರಳಿಸಿದ ಚಿತ್ರದುರ್ಗ ಕ್ಷೇತ್ರ

ಲೋಕಸಭಾ ಚುನಾವಣೆಗೆ ಇನ್ನೂ ಅಂತಿಮಗೊಂಡಿಲ್ಲ ಬಿಜೆಪಿ–ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆ
Published 14 ಮಾರ್ಚ್ 2024, 6:59 IST
Last Updated 14 ಮಾರ್ಚ್ 2024, 6:59 IST
ಅಕ್ಷರ ಗಾತ್ರ

ಚಿತ್ರದುರ್ಗ: ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಿಸುವ ಪ್ರಹಸನ ಕಾಂಗ್ರೆಸ್ ಮತ್ತು ಬಿಜೆಪಿ ಪಾಳೆಯದಲ್ಲಿ ಇನ್ನೂ ಮುಗಿದಿರುವಂತೆ ಕಾಣುತ್ತಿಲ್ಲ. ‘ಕೈ’ ಮತ್ತು ‘ಕಮಲ’ದ ಹುರಿಯಾಳು ಯಾರಾಗಲಿದ್ದಾರೆ ಎಂಬ ಕುತೂಹಲ ಕ್ಷೇತ್ರದ ಮತದಾರರಲ್ಲಿ ಹೆಚ್ಚಾಗಿದೆ.

ರಾಜ್ಯದ 20 ಕ್ಷೇತ್ರಗಳಿಗೆ ಬಿಜೆಪಿ ಬುಧವಾರ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಚಿತ್ರದುರ್ಗ ಸೇರಿ ಇನ್ನೂ ಕೆಲ ಕ್ಷೇತ್ರಗಳ ಹುರಿಯಾಳು ಆಯ್ಕೆ ಬಾಕಿ ಉಳಿಸಿಕೊಂಡಿದೆ. ಮಾರ್ಚ್‌ 8ರಂದು ರಾಜ್ಯದ 7 ಲೋಕಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಇದರಲ್ಲಿ ಕೂಡ ಚಿತ್ರದುರ್ಗ ಕ್ಷೇತ್ರದ ಅಭ್ಯರ್ಥಿ ಹೆಸರು ಹೊರಬಿದ್ದಿಲ್ಲ. ಮೀಸಲು ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದೆಯೇ ಎಂಬ ಪ್ರಶ್ನೆ ಎರಡು ಪಕ್ಷಗಳ ಕಾರ್ಯಕರ್ತರನ್ನು ಕಾಡತೊಡಗಿದೆ.

ತುಮಕೂರು ಜಿಲ್ಲೆಯ ಎರಡು ಹಾಗೂ ಚಿತ್ರದುರ್ಗ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರವನ್ನು ಒಳಗೊಂಡಿರುವ ಲೋಕಸಭಾ ಕ್ಷೇತ್ರಕ್ಕೆ ಎರಡು ಪಕ್ಷಗಳಲ್ಲಿ ಆಕಾಂಕ್ಷಿಗಳ ದಂಡು ದೊಡ್ಡದಾಗಿದೆ. ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿ, ರಾಜ್ಯ ಹಾಗೂ ಕೇಂದ್ರ ಸಮಿತಿಗೆ ಶಿಫಾರಸು ಮಾಡುವ ಪ್ರಕ್ರಿಯೆ ಮುಗಿದಿದೆ. ಗೆಲ್ಲುವ ಸಾಮರ್ಥ್ಯ, ಜಾತಿ, ಆರ್ಥಿಕ ಸ್ಥಿತಿ ಸೇರಿ ಹಲವು ಆಯಾಮಗಳಲ್ಲಿ ಗಮನಿಸಿ ಅಭ್ಯರ್ಥಿ ಆಯ್ಕೆ ಅಂತಿಮಗೊಳಿಸುವ ಪ್ರಯತ್ನ ನಡೆಯುತ್ತಿದೆ. ವರಿಷ್ಠರ ಓಲೈಕೆ, ಲಾಬಿಗೆ ಟಿಕೆಟ್‌ ಆಕಾಂಕ್ಷಿಗಳು ಬೆಂಗಳೂರು ಹಾಗೂ ದೆಹಲಿಯಲ್ಲಿ ವಾಸ್ತವ್ಯ ಹೂಡಿದ್ದಾರೆ.

ಯಾವ ಸಮುದಾಯಕ್ಕೆ ಬಿಜೆಪಿ ಮಣೆ?: 

ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರು ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಎರಡನೇ ಬಾರಿಗೆ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಬಿಜೆಪಿ, ಮರಳಿ ಕಮಲ ಅರಳಿಸುವ ಉತ್ಸುಕತೆಯಲ್ಲಿದೆ. ನಾರಾಯಣಸ್ವಾಮಿ ಸೇರಿ ಎಂಟು ಆಕಾಂಕ್ಷಿಗಳು ಟಿಕೆಟ್‌ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಹಾಲಿ ಸಂಸದರಿಗೆ ಮತ್ತೆ ಅವಕಾಶ ಸಿಗುತ್ತದೆಯೇ ಅಥವಾ ಬೇರೆ ಹುರಿಯಾಳನ್ನು ಬಿಜೆಪಿ ಕಣಕ್ಕೆ ಇಳಿಸಲಿದೆಯೇ ಎಂಬ ಚರ್ಚೆ ಆರಂಭವಾಗಿದೆ. ಮಾಜಿ ಸಂಸದ ಜನಾರ್ದನಸ್ವಾಮಿ ಹೆಸರು ಮುನ್ನೆಲೆಗೆ ಬಂದಿದೆ.

ಪರಿಶಿಷ್ಟ ಜಾತಿಗೆ ಮೀಸಲಾಗಿರುವ ರಾಜ್ಯದ ಐದು ಕ್ಷೇತ್ರಗಳಲ್ಲಿ ಮೂರು ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಅಂತಿಮಗೊಂಡಿದೆ. ವಿಜಯಪುರದಲ್ಲಿ ಎಡಗೈ, ಕಲಬುರ್ಗಿಯಲ್ಲಿ ಲಂಬಾಣಿ, ಚಾಮರಾಜನಗರದಲ್ಲಿ ಬಲಗೈ ಸಮುದಾಯದ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ. ಮಾದಿಗ ಹಾಗೂ ಭೋವಿ ಸಮುದಾಯದ ಹುರಿಯಾಳುಗಳು ಚಿತ್ರದುರ್ಗ ಕ್ಷೇತ್ರದ ಟಿಕೆಟ್‌ ನಿರೀಕ್ಷೆಯಲ್ಲಿದ್ದಾರೆ. ಯಾವ ಸಮುದಾಯಕ್ಕೆ ಬಿಜೆಪಿ ಅವಕಾಶ ನೀಡಲಿದೆ ಎಂಬ ಲೆಕ್ಕಾಚಾರಗಳು ಜೋರಾಗಿ ನಡೆಯುತ್ತಿವೆ.

ಸ್ಥಳೀಯ–ಹೊರಗಿನವರ ಪೈ‍ಪೋಟಿ:

ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳ ಆಯ್ಕೆ ಪ್ರಕ್ರಿಯೆ ದೆಹಲಿ ಹೈಕಮಾಂಡ್‌ ಅಂಗಳ ತಲುಪಿದೆ. ಮೊದಲ ಪಟ್ಟಿಯಲ್ಲಿಯೇ ಚಿತ್ರದುರ್ಗ ಕ್ಷೇತ್ರದ ಅಭ್ಯರ್ಥಿ ಘೋಷಣೆಯಾಗಲಿದೆ ಎನ್ನಲಾಗಿತ್ತು. ಆಕಾಂಕ್ಷಿಯೊಬ್ಬರಿಗೆ ಟಿಕೆಟ್‌ ಅಂತಿಮಗೊಂಡಿದೆ ಎಂಬ ವದಂತಿ ಸಾಕಷ್ಟು ಸದ್ದು ಮಾಡಿತ್ತು. ಜಾತಿ ಪ್ರಾತಿನಿಧ್ಯ, ಸ್ಥಳೀಯ ಹಾಗೂ ಹೊರಗಿನವರ ನಡುವಿನ ಬಿಕ್ಕಟ್ಟು ತೀವ್ರಗೊಂಡಿದ್ದರಿಂದ ಟಿಕೆಟ್‌ ಘೋಷಣೆ ತಡೆಹಿಡಿಯಲಾಗಿದೆ.

ಕ್ಷೇತ್ರದ ಟಿಕೆಟ್‌ ಕೋರಿ 24 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಆಂತರಿಕ ಸಮೀಕ್ಷೆಯ ಫಲಿತಾಂಶವನ್ನು ಆಧರಿಸಿ ಮೂವರ ಹೆಸರನ್ನು ಕೆಪಿಸಿಸಿ ಶಿಫಾರಸು ಮಾಡಿತ್ತು. ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನೇರ್ಲಗುಂಟೆ ರಾಮಪ್ಪ ಹಾಗೂ ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ ಅವರ ಹೆಸರು ಮುನ್ನೆಲೆಗೆ ಬಂದಿದ್ದವು. ಶಿಫಾರಸು ಪತ್ರ ದೆಹಲಿ ತಲುಪಿದ ಬಳಿಕ ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಪುತ್ರ ವಿನಯ್‌ ತಿಮ್ಮಾಪುರ ಹೆಸರು ಚರ್ಚೆಗೆ ಬಂದಿದೆ. ಅಂತಿಮವಾಗಿ ಯಾರಿಗೆ ಅವಕಾಶ ಸಿಗಲಿದೆ ಎಂಬ ಕುತೂಹಲ ಮೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT