ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ‘ಮೈತ್ರಿ’ ಗಟ್ಟಿಗೊಳಿಸಲು ಸಜ್ಜಾದ ಜೆಡಿಎಸ್‌

ಪಕ್ಷ ಸಂಘಟನೆಗೆ ವರಿಷ್ಠರ ಸೂಚನೆ, ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವ ಪ್ರಯತ್ನ
Published 22 ಫೆಬ್ರುವರಿ 2024, 5:20 IST
Last Updated 22 ಫೆಬ್ರುವರಿ 2024, 5:20 IST
ಅಕ್ಷರ ಗಾತ್ರ

ಚಿತ್ರದುರ್ಗ: ಲೋಕಸಭೆ ಚುನಾವಣೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ–ಜೆಡಿಎಸ್‌, ಕ್ಷೇತ್ರ ಹಂಚಿಕೆ ಸೂತ್ರಕ್ಕೆ ಚರ್ಚಿಸುತ್ತಿರುವಾಗಲೇ ಚಿತ್ರದುರ್ಗ ಕ್ಷೇತ್ರದಲ್ಲಿ ಕಮಲ ಪಾಳೆಯದ ಶಕ್ತಿ ಹೆಚ್ಚಿಸಲು ದಳಪತಿಗಳು ಸಜ್ಜಾಗಿದ್ದಾರೆ. ಪಕ್ಷ ಸಂಘಟಿಸಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲು ಮುಂದಾಗಿದ್ದಾರೆ.

ಲೋಕಸಭಾ ಕ್ಷೇತ್ರಕ್ಕೆ ಜೆಡಿಎಸ್ ವರಿಷ್ಠರು ಉಸ್ತುವಾರಿಗಳನ್ನು ನೇಮಕ ಮಾಡಿದ ಬೆನ್ನಲ್ಲೇ ಪ್ರಮುಖ ಮುಖಂಡರ ಸಭೆ ನಡೆಸಲಾಗಿದೆ. ಹೊಂದಾಣಿಕೆ ಸೂತ್ರಕ್ಕೆ ಧಕ್ಕೆಯಾಗದ ರೀತಿಯಲ್ಲಿ ಹೇಗೆ ವರ್ತಿಸಬೇಕು ಎಂಬ ಸಲಹೆ ನೀಡಲಾಗಿದೆ.

ಚಿತ್ರದುರ್ಗ ಜಿಲ್ಲೆಯ ಆರು ಹಾಗೂ ತುಮಕೂರು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳು ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿವೆ. ಪಾವಗಡ, ಶಿರಾ, ಹಿರಿಯೂರು, ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜೆಡಿಎಸ್‌ ಪ್ರಾಬಲ್ಯ ಹೆಚ್ಚಾಗಿದೆ. ಚಿತ್ರದುರ್ಗ ಸೇರಿ ಇತರೆಡೆಯೂ ಪಕ್ಷದ ಪ್ರಭಾವವಿದೆ. ಪಕ್ಷದ ಶಕ್ತಿಯನ್ನು ಒಗ್ಗೂಡಿಸಿ ‘ಮೈತ್ರಿ’ ಅಭ್ಯರ್ಥಿಗೆ ಧಾರೆ ಎರೆಯುವಂತೆ ವರಿಷ್ಠರು ನೀಡಿದ ಸೂಚನೆಯನ್ನು ಪಾಲಿಸುವ ಪ್ರಯತ್ನಗಳು ಶುರುವಾಗಿವೆ.

‘ಪಾವಗಡದ ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ ಅವರಿಗೆ ಕ್ಷೇತ್ರದ ಉಸ್ತುವಾರಿ ನೀಡಲಾಗಿದೆ. ಎಂ.ರವೀಂದ್ರಪ್ಪ ಹಾಗೂ ಎಂ.ರವೀಶ್‌ಕುಮಾರ್‌ ಅವರನ್ನು ಸಹ ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ. ಚುನಾವಣೆಗೆ ಸಿದ್ಧತೆಗಳನ್ನು ಆರಂಭಿಸುವ ಮುನ್ನ ಪಕ್ಷದ ಮುಖಂಡರ ಸಭೆ ನಡೆಸಲಾಗಿದೆ. ಪಕ್ಷ ಸಂಘಟನೆ, ಕಾರ್ಯಕರ್ತರನ್ನು ಚುನಾವಣೆಗೆ ಸಜ್ಜುಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ’ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಜಯಣ್ಣ ತಿಳಿಸಿದ್ದಾರೆ.

ಜನತಾ ಪರಿವಾರದ ಪ್ರಭಾವ:

ಕ್ಷೇತ್ರಕ್ಕೆ ಈವರೆಗೆ 17 ಚುನಾವಣೆಗಳು ನಡೆದಿದ್ದು, ಕಾಂಗ್ರೆಸ್‌ 11 ಬಾರಿ ಗೆದ್ದಿದೆ. ಬಿಜೆಪಿ ಹಾಗೂ ಜನತಾ ಪರಿವಾರದ ಅಭ್ಯರ್ಥಿಗಳು ತಲಾ ಎರಡು ಬಾರಿ ವಿಜೇತರಾಗಿದ್ದಾರೆ. 1996ರಲ್ಲಿ ಜನತಾದಳದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಪಿ.ಕೋದಂಡರಾಮಯ್ಯ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 1999ರಲ್ಲಿ ಚಿತ್ರನಟ ಶಶಿಕುಮಾರ್‌ ಜೆಡಿಯು ಪ್ರತಿನಿಧಿಸಿದ್ದರು. ಜನತಾ ಪರಿವಾರ ಇಬ್ಭಾಗವಾಗಿದ್ದರೂ ಕ್ಷೇತ್ರದಲ್ಲಿ ಜೆಡಿಎಸ್‌ ಪ್ರಭಾವವನ್ನು ಕಡೆಗಣಿಸಲು ಸಾಧ್ಯವಿಲ್ಲ.

1999ರಲ್ಲಿ ಜೆಡಿಯು 3.7 ಲಕ್ಷ ಹಾಗೂ ಜೆಡಿಎಸ್‌ ಅಭ್ಯರ್ಥಿ 1 ಲಕ್ಷ ಮತಗಳನ್ನು ಗಳಿಸಿದ್ದರು. 2004ರಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಪಿ.ಕೋದಂಡರಾಮಯ್ಯ 2.8 ಲಕ್ಷ ಮತಗಳಿಸಿದ್ದರು. 2009ರಲ್ಲಿ ಜೆಡಿಎಸ್‌ನ ಎಂ.ರತ್ನಾಕರ 1.4 ಲಕ್ಷ, 2014ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಗೂಳಿಹಟ್ಟಿ ಶೇಖರ್‌ 2 ಲಕ್ಷ ಮತಗಳನ್ನು ಗಳಿಸಿದ್ದಾರೆ.

‘2023ರಲ್ಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಪಾವಗಡದಲ್ಲಿ 72,000, ಶಿರಾದಲ್ಲಿ 58,000, ಹಿರಿಯೂರಿನಲ್ಲಿ 38,000 ಹಾಗೂ ಚಳ್ಳಕೆರೆಯಲ್ಲಿ 51,000 ಮತಗಳನ್ನು ಜೆಡಿಎಸ್‌ ಪಡೆದಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಜೆಡಿಎಸ್‌ಗೆ 2 ಲಕ್ಷಕ್ಕೂ ಅಧಿಕ ಸಾಂಪ್ರದಾಯಿಕ ಮತಗಳಿವೆ. ಈ ಮತಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಕಾರ್ಯತಂತ್ರಗಳನ್ನು ರೂಪಿಸಲಾಗುತ್ತಿದೆ’ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಜಯಣ್ಣ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT