ಸೋಮವಾರ, ಮಾರ್ಚ್ 27, 2023
29 °C

ಈರುಳ್ಳಿಯಲ್ಲಾದ ನಷ್ಟ: ಚೆಂಡು ಹೂವಿನಲ್ಲಿ ಬಂತು- ರೈತ ಎಲ್. ಬಸವರಾಜು ಯಶೋಗಾಥೆ

ಜಿ.ಡಿ. ಪ್ರಭುದೇವ Updated:

ಅಕ್ಷರ ಗಾತ್ರ : | |

Prajavani

ಸಿರಿಗೆರೆ: ಈರುಳ್ಳಿಗೆ ಸೂಕ್ತ ಬೆಲೆ ಬಾರದೇ ಬೆಳೆಯಲ್ಲಿ ನಷ್ಟ ಹೊಂದಿದ್ದ ಅಳಗವಾಡಿಯ ರೈತ ಎಲ್. ಬಸವರಾಜು ಚೆಂಡು ಹೂವು ಬೆಳೆದು ಲಾಭ ಕಂಡುಕೊಂಡಿದ್ದಾರೆ.

ಈ ಹಿಂದೆ ಸೌತೆಕಾಯಿ, ಬಟಾಣಿ, ಬೀನ್ಸ್, ಕ್ಯಾರೆಟ್ ಕೃಷಿ ಮಾಡಿದರೆ ಒಂದರಲ್ಲಿ ಉತ್ತಮ ಲಾಭಾಂಶ ಬಂದರೆ, ಕೆಲವೊಂದು ತರಕಾರಿಗಳಿಂದ ನಷ್ಟವೇ ಹೆಚ್ಚಾಗಿ ಹೋಯಿತು. ಕೊನೆಗೆ ಕಂಡುಕೊಂಡಿದ್ದು, ಚೆಂಡು ಹೂವಿನ ಕೃಷಿ. ಬಸವರಾಜು ಅವರು 15 ಕೊಳವೆ ಬಾವಿಗಳನ್ನು ಕೊರೆಸಿದ್ದರೂ ಎರಡರಲ್ಲಿ ಮಾತ್ರ ನೀರು ಬಂದಿತ್ತು. ಆದರೂ ಮಳೆಯ ನೀರನ್ನೂ ಆಶ್ರಯಿಸಿ ಪ್ರಥಮ ಬಾರಿಗೆ ಚೆಂಡು ಹೂವು ಬೆಳೆ ತೆಗೆದಿದ್ದಾರೆ.

‘ಬೆಂಗಳೂರು ಸಮೀಪದ ಚಂದಾಪುರದಲ್ಲಿ ಒಂದು ಸಸಿಗೆ ₹ 3ರಂತೆ ಸುಪ್ರೀಂ ತಳಿಯ 8 ಸಾವಿರ ಸಸಿಗಳನ್ನು ತಂದು ನಾಟಿ ಮಾಡಿದ್ದೇನೆ. ಜಮೀನು ಹನಸು ಮಾಡಲು, ಗೊಬ್ಬರ ಹಾಕಲು, ಸಸಿ ನಾಟಿ ಮಾಡಲು ₹30 ಸಾವಿರಕ್ಕೂ ಹೆಚ್ಚು ಖರ್ಚಾಗಿದೆ. ಆಯುಧಪೂಜೆ ಸಮಯದಲ್ಲಿ ಒಂದು ಕೆ.ಜಿಗೆ ₹ 50ರಿಂದ ₹ ₹70 ಇತ್ತು ಆ ವೇಳೆ 20 ಕೆ.ಜಿಯ 4 ಚೀಲಗಳನ್ನು ಮಾರಾಟ ಮಾಡಿದ್ದೆ. ಆಯುಧಪೂಜೆ ಬಳಿಕ ಮಳೆ ಬಂದಿದ್ದರಿಂದ ದಪ್ಪದಾಗಿ ಬೆಳೆದಿದ್ದ ಚೆಂಡು ಹೂಗಳು ಕೆಳಗೆ ಬಿದ್ದು ಹಾಳಾದವು’ ಎಂದು ಬಸವರಾಜು ಅಳಲು ತೋಡಿಕೊಂಡರು.

‘ಒಂದು ಗಿಡದಲ್ಲಿ ಎರಡುವರೆ ಕೆ.ಜಿ.ಯಷ್ಟು ಹೂವು ಬಂದಿತ್ತು. ಸಸಿಯಿಂದ ಸಸಿಗೆ ಒಂದೂವರೆ ಅಡಿ, ಸಾಲಿನಿಂದ ಸಾಲಿಗೆ ಎರಡು ಅಡಿ ಬೆಳೆ ನಾಟಿ ಮಾಡಿದ್ದರಿಂದ ಹೂವುಗಳು ಸಮೃದ್ಧವಾಗಿ ಬಿಟ್ಟವು. ಅಗಲವಾಗಿ ಹರಡಿಕೊಂಡಿರುವ ಸಸಿಗಳಲ್ಲಿ ಹೂವು ಹೆಚ್ಚಾಗಿ ಬಿಟ್ಟಿರುವುದನ್ನು ಕಂಡಿದ್ದೇನೆ’ ಎಂದು ಬಸವರಾಜು ಸಂತಸ ವ್ಯಕ್ತಪಡಿಸುತ್ತಾರೆ.

‘ಸಸಿಗಳಲ್ಲಿ ಕೀಟದ ಬಾಧೆ ಅಷ್ಟಾಗಿ ಇರಲಿಲ್ಲ. ಹೂವು ದಪ್ಪವಾಗಿ ಬಾರಲಿ ಎಂಬ ಉದ್ದೇಶದಿಂದ ‘ಆಕ್ವಿವ್‌ ಗೋಲ್ಡ್‘, ‘ಆಕ್ವಿವಿಟಿ’ ಔಷಧಗಳ ಮೊರೆ ಹೋಗಿದ್ದೆ. ಆಗಸ್ಟ್ ತಿಂಗಳ ಬಳಿಕ ಸಸಿಗಳನ್ನು ನಾಟಿ ಮಾಡಿದ್ದರಿಂದ ಹೂವುಗಳು ಸಮೃದ್ಧವಾಗಿ ಬಂದಿವೆ’ ಎನ್ನುತ್ತಾರೆ ಅವರು.

‘ಆಯುಧಪೂಜೆ ವೇಳೆ ಹೆಚ್ಚಿನ ಮಳೆಯಾಗಿದ್ದರಿಂದ ಉತ್ತಮ ಫಸಲು ಬಂದರೂ ಗಿಡಗಳು ನೆಲಕ್ಕೆ ಬಾಗಿ ಹೆಚ್ಚಿನ ಲಾಭ ಬರಲಿಲ್ಲ. ದೀಪಾವಳಿ ವೇಳೆ ಲಕ್ಷ್ಮೀ ಪೂಜೆಗೆ ಹೆಚ್ಚು ಬೇಡಿಕೆ ಇರುವುದರಿಂದ ಒಳ್ಳೆಯ ಲಾಭ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದೇನೆ’ ಎಂದು ಬಸವರಾಜು ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು