ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಕ್ರಾಂತಿ ಹಬ್ಬ: ದುರ್ಗದ ಮಾರುಕಟ್ಟೆಗೆ ಹೊಸೂರು ಕಬ್ಬು ಲಗ್ಗೆ

ಸಂಕ್ರಾಂತಿ ಹಬ್ಬಕ್ಕೆ ಸಡಗರದ ಸಿದ್ಧತೆ ; ಪೂಜಾ ಸಾಮಾಗ್ರಿಗಳ ಖರೀಧಿ ಭರಾಟೆ
Published 14 ಜನವರಿ 2024, 15:55 IST
Last Updated 14 ಜನವರಿ 2024, 15:55 IST
ಅಕ್ಷರ ಗಾತ್ರ

ಚಿತ್ರದುರ್ಗ: ಕ್ಯಾಲೆಂಡರ್ ವರ್ಷಾರಂಭದ ಮೊದಲ ಹಬ್ಬವಾದ ಸೂರ್ಯ ದೇವನ ಆರಾಧನೆಯ ಮಕರ ಸಂಕ್ರಾಂತಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲು ಜನರು ಭಾನುವಾರ ಭರದ ಸಿದ್ಧತೆ ನಡೆಸಿದರು. ಈ ಬಾರಿ ಚಿತ್ರದುರ್ಗದ ಮಾರುಕಟ್ಟೆಗೆ ತಮಿಳುನಾಡಿನ ಕಬ್ಬು ಲಗ್ಗೆ ಹಾಕಿದೆ.

ಸಂಕ್ರಾಂತಿಯಲ್ಲಿ ಕಬ್ಬು, ಎಳ್ಳು, ಬೆಲ್ಲ, ಕುಂಬಳಕಾಯಿಗೆ ವಿಶೇಷ ಪ್ರಾತಿನಿಧ್ಯ. ಪ್ರತಿ ವರ್ಷ ಮಾರುಕಟ್ಟೆಗೆ ಚಿತ್ರದುರ್ಗದ ಕುರುಬರಹಳ್ಳಿ, ಚನ್ನಗಿರಿ, ಹಾಸನದಿಂದ ಕಬ್ಬು ಮಾರುಕಟ್ಟೆಗೆ ಬರುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ತಮಿಳುನಾಡಿನ ಹೊಸೂರಿನಿಂದ ಟನ್‌ಗಟ್ಟಲೆ ಕಬ್ಬು ಬಂದಿಳಿದೆ.

ಶನಿವಾರ ರಾತ್ರಿಯಿಂದ ಭಾನುವಾರ ಮುಂಜಾನೆಯವರೆಗೂ ಹೊಸೂರಿನಿಂದ ಬಂದು ಮಾರುಕಟ್ಟೆ ಆವರಿಸಿದೆ. ನೋಡಲು ದಪ್ಪ ಹಾಗೂ ಕೆಂಪು ಮಿಶ್ರಿತ ಕಡುಗಪ್ಪು ಬಣ್ಣದಿಂದ ಕೂಡಿರುವ ಕಾರಣ ಆಕರ್ಷಿಸುತ್ತಿದೆ. ಇದರಿಂದಾಗಿ ಸ್ಥಳೀಯ ಕಬ್ಬಿಗೆ ಬೇಡಿಕೆ ಕುಸಿದಿದೆ. ಹೊಸರು ಕಬ್ಬಿನ ಒಂದು ಕೋಲು ₹ 40 ರಿಂದ 50, ಸ್ಥಳೀಯ ಕಬ್ಬು ₹ 30 ರಿಂದ 40 ಕ್ಕೆ ಮಾರಾಟ ಮಾಡುತ್ತಿದ್ದದ್ದು ಕಂಡು ಬಂದಿತು.

ಭಾನುವಾರ ಬೆಳಿಗ್ಗೆಯಿಂದಲೇ ಹಬ್ಬದ ಸಾಮಾಗ್ರಿಗಳ ಖರೀಧಿ ಭರಾಟೆ ಜೋರಾಗಿತ್ತು. ನಗರದ ಗಾಂಧಿವೃತ್ತ, ಚಳ್ಳಕೆರೆ ಟೋಲ್‌ ಗೇಟ್‌, ಸಂತೆಹೊಂಡ, ವೈಶಾಲಿ ಕ್ರಾಸ್‌, ಮೇದೆಹಳ್ಳಿ ರಸ್ತೆ, ಜೆಸಿಆರ್‌ ಮುಖ್ಯ ರಸ್ತೆಯಲ್ಲಿ ಕಬ್ಬು ಖರೀದಿಗೆ ಜನರು ಮುಗಿಬಿದ್ದಿದ್ದರು. ಗಾಂಧಿ ವೃತ್ತದಲ್ಲಿ ಹೂವಿನ ವ್ಯಾಪಾರ ಜೋರಾಗಿತ್ತು.

ಹೂ, ಹಣ್ಣು, ಕಬ್ಬು, ಕಡಲೆ ಕಾಯಿ, ಗೆಣಸಿನ ಖರೀದಿಗೆ ಜನರು ಮುಗಿ ಬಿದ್ದಿದ್ದರು. ಎಳ್ಳು -ಬೆಲ್ಲ, ಸಕ್ಕರೆ ಅಚ್ಚುಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಗ್ರಾಮೀಣ ಸೊಗಡಿನ ಸಂಕ್ರಾಂತಿ ನಗರದಲ್ಲಿಯೂ ತನ್ನ ಹಿಂದಿನ ಸಂಪ್ರದಾಯ ಉಳಿಸಿಕೊಂಡು ಬಂದಿದೆ. ಹೀಗಾಗಿ ಹಿಂದಿನಂತೆಯೇ ಈ ಹಬ್ಬದಲ್ಲೂ ಹೊಸ ಮಡಕೆ ಖರೀದಿಸಿ ಒಲೆ ಹಚ್ಚಿ ಪೊಂಗಲ್ ತಯಾರಿಸುತ್ತಾರೆ. ಇದರಿಂದಾಗಿ ಮಡಕೆಗಳಿಗೂ ಮಾರುಕಟ್ಟೆಯಲ್ಲಿ ಕೊಂಚ ಬೇಡಿಕೆ ಕಂಡುಬಂತು. ಇದರ ಜತೆಗೆ ರಾಸುಗಳನ್ನು ಸಿಂಗರಿಸಲು ವಿವಿಧ ವಸ್ತುಗಳನ್ನು ಖರೀದಿಸಲು ರೈತರು ಮುಂದಾದರು.

ಕಬ್ಬು, ಸಜ್ಜೆ, ಜೋಳದ ರೊಟ್ಟಿ, ಶೇಂಗಾ ಪುಡಿ, ಎಳ್ಳು, ಬೆಲ್ಲ, ಒಣ ಕೊಬ್ಬರಿ, ಕಡ್ಲೆ ಬೀಜ, ಹುರಿಗಡಲೆಗಳ ಮಿಶ್ರಣವನ್ನು ದೇವರಿಗೆ ಸಮರ್ಪಿಸಲು ಮನೆಗಳಲ್ಲಿ ಮಹಿಳೆಯರು ಸಿದ್ಧತೆ ನಡೆಸಿದರು. ಹಬ್ಬದ ನಿಮಿತ್ತ ಎಪಿಎಂಸಿ ಆವರಣದ ಹೂವಿನ ಮಾರುಕಟ್ಟೆಯಲ್ಲಿ ಜನಜಾತ್ರೆ ಕಂಡು ಬಂದಿತು. ಪ್ರತಿ ಹಬ್ಬದಂತೆ ಈ ಬಾರಿಯೂ ಪುಷ್ಪಗಳ ದರ ಏರಿಕೆ ಸಾಮಾನ್ಯವಾಗಿತ್ತು.

ಎಪಿಎಂಸಿ ಸಗಟು ಹೂವಿನ ಮಾರುಕಟ್ಟೆಯಲ್ಲಿ ಎಲ್ಲಾ ವರ್ಣದ ಗುಣಮಟ್ಟದ ಸೇವಂತಿ 12-15 ಮಾರಿಗೆ ತಲಾ ₹ 1,000, ಕನಕಾಂಬರ 10 ಮಾರಿಗೆ ₹ 1,000, ಬಟನ್ಸ್‌ ರೋಸ್‌ ಕೆ.ಜಿ.ಗೆ ₹ 200ರಿಂದ ₹300, ಖಾಸಗಿ ಬಸ್ ನಿಲ್ದಾಣ ಸಮೀಪದ ಮಾರುಕಟ್ಟೆಯಲ್ಲಿ ದೊಡ್ಡ ಹಾರಗಳು ಅಳತೆ ಮತ್ತು ಗಾತ್ರಕ್ಕೆ ತಕ್ಕಂತೆ ಮಾರಾಟವಾದವು.

ಮಹಮದ್‌ ಅಜಮ್‌
ಮಹಮದ್‌ ಅಜಮ್‌

ನವದುರ್ಗಿಯರಾದ ಏಕನಾಥೇಶ್ವರಿ, ಬರಗೇರಮ್ಮ, ಉಚ್ಚಂಗಿಯಲ್ಲಮ್ಮ, ಕಣಿವೆಮಾರಮ್ಮ, ತ್ರಿಪುರಸುಂದರಿ ತಿಪ್ಪನಘಟ್ಟಮ್ಮ, ಗೌರಸಂದ್ರ ಮಾರಮ್ಮ, ಚೌಡೇಶ್ವರಿ, ಕುಕ್ಕವಾಡೇಶ್ವರಿ, ಬನ್ನಿ ಮಹಾಕಾಳಮ್ಮ ಸೇರಿ ದುರ್ಗಾಂಬಿಕಾ, ಮಲೆನಾಡು ಚೌಡೇಶ್ವರಿ, ಕೊಲ್ಲಾಪುರದ ಮಹಾಲಕ್ಷ್ಮೀ, ಅಂತರಘಟ್ಟಮ್ಮ, ಮಾಸ್ತಮ್ಮ, ಬುಡ್ಡಮ್ಮ, ಕಾಳಿಕಮಠೇಶ್ವರಿ, ಬೆಟ್ಟದ ಗಣಪತಿ, ಮೇಲುದುರ್ಗದ ಹಿಡಂಭೇಶ್ವರ, ಸಂಪಿಗೆ ಸಿದ್ದೇಶ್ವರ ಸೇರಿ ಹಲವು ದೇಗುಲಗಳಲ್ಲಿ ವಿಶೇಷ ಅಲಂಕಾರದ ಜತೆ ಪೂಜೆ ನೆರವೇರಲಿದೆ. ದೇಗುಲಗಳನ್ನು ಹೂವು, ಮಾವಿನಸೊಪ್ಪಿನ ತಳಿರು ತೋರಣಗಳಿಂದ ಸಿಂಗರಿಸಲಾಗಿದೆ.

ಮುಂಜಾನೆಯಿಂದ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ ಹಾಗೂ ಪೂಜೆಗಳು ಪ್ರಾರಂಭವಾಗಲಿವೆ. ಭಕ್ತರಿಗೆ ಪ್ರಸಾದ ನೀಡಲು ತಯಾರಿ ನಡೆದಿವೆ.

ಚಿತ್ರದುರ್ಗದ ಸಂತೆಹೊಂಡದ ಬಳಿ ಕಬ್ಬಿನ ರಾಶಿ
ಚಿತ್ರದುರ್ಗದ ಸಂತೆಹೊಂಡದ ಬಳಿ ಕಬ್ಬಿನ ರಾಶಿ
ಮಕರ ಸಂಕ್ರಾಂತಿಗೆ ಇದೇ ಮೊದಲ ಬಾರಿಗೆ ಚಿತ್ರದುರ್ಗ ಮಾರುಕಟ್ಟೆಗೆ ಹೊಸೂರು ಕಬ್ಬು ಬಂದಿದೆ. 70 ಟನ್‌ಗೂ ಹೆಚ್ಚು ಕಬ್ಬು ವ್ಯಾಪಾರವಾಗುವ ಲಕ್ಷಣಗಳಿವೆ. ಜನರು ಸಹ ಹೆಚ್ಚಾಗಿ ಇದನ್ನೇ ಖರೀದಿಸುತ್ತಿದ್ದಾರೆ
– ಮಹಮದ್‌ ಅಜೀಮ್‌ ಕಬ್ಬಿನ ವ್ಯಾಪಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT