ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲೋಕನಿಂದನೆಗೆ ದಿಟ್ಟವಾಗಿ ಉತ್ತರಿಸಿದ ವಚನಗಳು’

ಮತ್ತೆ ಕಲ್ಯಾಣ ಕಾರ್ಯಕ್ರಮದಲ್ಲಿ ಸಾಕ್ಷ್ಯಚಿತ್ರ ನಿರ್ಮಾಪಕಿ ಡಾ.ಪಿ. ಚಂದ್ರಿಕಾ
Last Updated 8 ಆಗಸ್ಟ್ 2021, 4:22 IST
ಅಕ್ಷರ ಗಾತ್ರ

ಸಾಣೇಹಳ್ಳಿ (ಹೊಸದುರ್ಗ): ‘12ನೇ ಶತಮಾನದ ವಚನಗಳು ಸಾಮಾಜಿಕ ಪರಿವರ್ತನೆಯ ಬಹುದೊಡ್ಡ ಪರ್ಯಾಯಗಳು. ಹುಟ್ಟಿನಿಂದ ಬಂದ ಜಾತಿ, ಸಾಮಾಜಿಕ ಅಂತಸ್ತು ಮುಖ್ಯವಲ್ಲ ಎಂಬುದನ್ನು ಇವು ತಿಳಿಸಿಕೊಟ್ಟವು’ ಎಂದು ಬೆಂಗಳೂರಿನ ಸಾಹಿತಿ, ಸಾಕ್ಷ್ಯಚಿತ್ರ ನಿರ್ದೇಶಕಿ, ನಿರ್ಮಾಪಕಿ ಡಾ.ಪಿ.ಚಂದ್ರಿಕಾ ತಿಳಿಸಿದರು.

ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದಿಂದ ಆಯೋಜಿಸಿರುವ ಮತ್ತೆ ಕಲ್ಯಾಣ ಅಂತರ್ಜಾಲ ಕಾರ್ಯಕ್ರಮದ 7ನೇ ದಿನವಾದ ಶನಿವಾರ ಸಂಜೆ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಅಕ್ಕಮ್ಮ ವಿಷಯ ಕುರಿತು ಅವರು ಮಾತನಾಡಿದರು.

‘ಆತ್ಮದ ಉದ್ಧರಣಕ್ಕೆ ಹಾಗೂ ಸಾಮಾಜಿಕ ಸ್ಥಿತ್ಯಂತರಕ್ಕೆ ಕಾರಣವಾಗುವ ಘನ ಉದ್ದೇಶವನ್ನು ವಚನ ಚಳವಳಿ ಹೊಂದಿತ್ತು. ಇದರ ಮೂಲಕ ಶ್ರಮ ಮೂಲದ ಸಮುದಾಯಗಳು ತಮ್ಮ ಧ್ವನಿಗಳನ್ನು ದಾಖಲಿಸಲು ಸಾಧ್ಯವಾಯಿತು’ ಎಂದು ಅವರು ಹೇಳಿದರು.

‘ಹೆಣ್ಣಿನ ಲೋಕ ನಿಂದನೆಯ ಕತೆ ಇಂದು- ನಿನ್ನೆಯದಲ್ಲ. ಸಮಾಜ ಕೂಡ ಹೆಣ್ಣಿನ ಶಕ್ತಿಯನ್ನು ಅನುಮಾನಿಸುತ್ತಲೇ ಬರುತ್ತಿದೆ. ಇಂಥ ಲೋಕನಿಂದನೆಗೆ ಅಳುವ ಬದಲು ದಿಟ್ಟವಾಗಿ ಮಾತನಾಡಿದಂತಹ ಮೊದಲ ಮಾತುಗಳು ವಚನಗಳು. ಹೀಗೆ ನಿಯಮಗಳ ಜಗತ್ತನ್ನು ಧಿಕ್ಕರಿಸಿ ನಿಯಮರಹಿತ ಜಗತ್ತಿಗೆ ಪ್ರವೇಶಿಸಿ ಜೀವನ್ಮರಣದ ಪ್ರಶ್ನೆಗಳಿಗೆ ಉತ್ತರಿಸುವುದು ಸುಲಭವಾದ ಸಂಗತಿಯಲ್ಲ. ವಚನಗಳು ರಂಜನೆಯಾಗದೇ ಅಮಿತವಾದದ್ದನ್ನು ಆಶಿಸಿ ನಿನ್ನೆಗಳಿಗೆ ಬೇರು ಬಿಟ್ಟಂತಹ ವಟವೃಕ್ಷಗಳಿದ್ದಂತೆ. ವಚನಕಾರರು ಇಂದ್ರಿಯಾತೀತವಾದುದನ್ನು ಇಂದ್ರಿಯಗಳ ಮೂಲಕ ಖಂಡರಿಸಿದವರು. ತುಂಬ ಗಟ್ಟಿಯಾಗಿ ಮಾತನಾಡುವ ಅಕ್ಕಮ್ಮನ 153 ವಚನಗಳು ದೊರೆತಿವೆ. ಆಚಾರವೇ ಪ್ರಾಣವಾದ ರಾಮೇಶ್ವರ ವಚನಾಂಕಿತ. ಈ ವಚನಗಳಲ್ಲಿ ಸನ್ನಡತೆ, ಸದಾಚಾರ, ಸದ್ವಿಚಾರಗಳಲ್ಲಿ ದೇವರನ್ನು ಕಾಣುವ ಪ್ರಯತ್ನ ಕಾಣುತ್ತದೆ’ ಎಂದು ವಿವರಿಸಿದರು.

ಸಾನ್ನಿಧ್ಯ ವಹಿಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ‘ಧರ್ಮದ ಅರಿವಿಲ್ಲದ ವೇಷಾಡಂಬರಿಗಳ ಬಣ್ಣವನ್ನು ಅಕ್ಕಮ್ಮ ತನ್ನ ವಚನಗಳ ಮೂಲಕ ಬಯಲು ಮಾಡಿದ್ದಾಳೆ. ಗುರುವಾದವರು ಅರಿವುಳ್ಳವರಾಗಿ ಬೇರೆಯವರ ಅಜ್ಞಾನವನ್ನು ಕಳೆಯುವ ಸಾಮರ್ಥ್ಯ ಹೊಂದಿರಬೇಕು. ಸ್ವಚ್ಛತೆ ಬದುಕಿನ ನಿರಂತರ ಕ್ರಿಯೆಯಾಗಬೇಕೇ ಹೊರತು ಸಾಂದರ್ಭಿಕ ಘಟನೆಯಾಗಬಾರದು. ಬಾಹ್ಯ ವೇಷ ಮುಖ್ಯವಾಗದೇ ಅರಿವು ಮತ್ತು ಆಚಾರ ಮುಖ್ಯವಾಗಬೇಕೆನ್ನುವುದು ಅಕ್ಕಮ್ಮನ ಕಳಕಳಿ’ ಎಂದು ತಿಳಿಸಿದರು.

‘ಅಕ್ಕಮ್ಮ ಅತ್ಯಂತ ತಳವರ್ಗದಿಂದ ಬಂದವಳು. ಆಕೆಯ ವಚನಗಳಲ್ಲಿ ವ್ರತ, ಶೀಲ, ಆಚಾರ, ಲಿಂಗ, ಜಂಗಮ, ಪಂಚಾಚಾರ ವಿಚಾರಗಳು ಪ್ರತಿಪಾದಿತವಾಗಿವೆ. ಆಕೆಯ ಜನ್ಮಸ್ಥಳ, ಕೌಂಟುಂಬಿಕ ಹಿನ್ನೆಲೆಯ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯುವುದಿಲ್ಲ. ಆಕೆ ಸಮಾಜದ ಹುಳುಕುಗಳನ್ನು ನಿರ್ಭೀತವಾಗಿ ಹೊರಹಾಕಿದ್ದಾಳೆ. ಕಾಯಕದಲ್ಲಿಯೇ ಆತ್ಮೋದ್ಧಾರದ ಮಾರ್ಗ ಕಂಡುಕೊಂಡವಳು. ಮೊದಲಿಗೆ ವೇಶ್ಯಾವೃತ್ತಿ ಮಾಡುತ್ತಿದ್ದರೂ ಶರಣರ ಸಂಪರ್ಕಕ್ಕೆ ಬಂದ ಮೇಲೆ ಆ ವೃತ್ತಿಯನ್ನು ನಿರಾಕರಿಸಿ ಶುದ್ಧ ಸಾತ್ವಿಕ ಬದುಕನ್ನು ಸಾಗಿಸುತ್ತಿದ್ದಳು ಎನ್ನುವುದಕ್ಕೆ ಆಕೆಯ ವಚನಗಳೇ ಸಾಕ್ಷಿ ನುಡಿಯುತ್ತಿವೆ’ ಎಂದು ಹೇಳಿದರು.

ಗುಲ್ಬರ್ಗದ ಸುನಿಲ್ ಹುಡುಗಿ ಸ್ವಾಗತಿಸಿದರು. ಶಿವಸಂಚಾರದ ಕೆ. ಜ್ಯೋತಿ, ಕೆ. ದಾಕ್ಷಾಯಣಿ, ಎಚ್.ಎಸ್. ನಾಗರಾಜ್ ಮತ್ತು ತಬಲಸಾಥಿ ಶರಣ್ ತಂಡ ವಚನಗೀತೆಗಳನ್ನು ಹಾಡಿತು. ಶಿವಮೊಗ್ಗದ ಸಹಚೇತನ ನಾಟ್ಯಾಲಯ ಕೇಂದ್ರದ ಕಲಾವಿದರು ವಚನನೃತ್ಯ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT