ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೇಲ್ಮನೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಬೇಕಿದೆ: ಕೆ.ಸಿ. ನಾಗರಾಜ್‌

Published 1 ಜೂನ್ 2024, 16:18 IST
Last Updated 1 ಜೂನ್ 2024, 16:18 IST
ಅಕ್ಷರ ಗಾತ್ರ

ಚಿತ್ರದುರ್ಗ: ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್‌ಗೆ ಬಹುಮತದ ಕೊರತೆ ಇದೆ. ಕಾಂಗ್ರೆಸ್‌ ಸದಸ್ಯರ ಸಂಖ್ಯೆ ಹೆಚ್ಚಾದರೆ ಶಿಕ್ಷಕರ ಪರವಾದ ಕಾಯ್ದೆ, ನೀತಿಗಳನ್ನು ರೂಪಿಸಲು ಸರ್ಕಾರಕ್ಕೆ ಅನುಕೂಲವಾಗಲಿದೆ ಎಂದು ಕೆಡಿಪಿ ಸದಸ್ಯ ಕೆ.ಸಿ. ನಾಗರಾಜ್‌ ಅಭಿಪ್ರಾಯಪಟ್ಟರು.

ಇಲ್ಲಿನ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಿ.ಟಿ. ಶ್ರೀನಿವಾಸ್‌ ಪರ ಶನಿವಾರ ಮತಯಾಚನೆ ಮಾಡಿ ಅವರು ಮಾತನಾಡಿದರು. ಬಾಲಕರ ಪದವಿಪೂರ್ವ ಕಾಲೇಜು ಹಾಗೂ ಇಂಡಿಯನ್‌ ಇಂಟರ್‌ನ್ಯಾಷನಲ್‌ ಶಿಕ್ಷಣ ಸಂಸ್ಥೆಗಳಲ್ಲಿಯೂ ಮತಯಾಚನೆ ಮಾಡಲಾಯಿತು.

‘ಕಾಂಗ್ರೆಸ್‌ ಅಭ್ಯರ್ಥಿ ಶ್ರೀನಿವಾಸ್‌ ಅವರಿಗೆ ಶಿಕ್ಷಣ ಕ್ಷೇತ್ರದ ಬಗ್ಗೆ ಅಪಾರ ಜ್ಞಾನವಿದೆ. ಶಿಕ್ಷಕ ಸಮುದಾಯದ ಬಗ್ಗೆ ಕಾಳಜಿ ಹೊಂದಿದ್ದಾರೆ. ಕ್ರಿಯಾಶೀಲ ವ್ಯಕ್ತಿಯಾಗಿ ಶಿಕ್ಷಕರ ಧ್ವನಿಯಾಗಿ ಕೆಲಸ ಮಾಡುವ ಸಾಮರ್ಥ್ಯ ಅವರಲ್ಲಿದೆ. ವಿಧಾನಪರಿಷತ್‌ನಲ್ಲಿ ಶಿಕ್ಷಕ ಸಮುದಾಯವನ್ನು ಪ್ರತಿನಿಧಿಸಲು ಅರ್ಹರಾಗಿದ್ದಾರೆ’ ಎಂದು ಹೇಳಿದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ರಾಜ್ಯ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ಚುನಾವಣೆ ಸಂದರ್ಭದಲ್ಲಿ ಜನರಿಗೆ ನೀಡಿದ್ದ ಆಶ್ವಾಸನೆಗಳನ್ನು ಸರ್ಕಾರ ವರ್ಷದಲ್ಲಿ ಈಡೇರಿಸಿದೆ. ಸರ್ಕಾರದ ಆಡಳಿತ ವೈಖರಿಗೆ ಜನಮನ್ನಣೆ ಸಿಕ್ಕಿದೆ. ಬಿಜೆಪಿ ನಾಯಕರು ಮಾತ್ರ ಸರ್ಕಾರದ ಮೇಲೆ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ನಂದಿನಿಗೌಡ, ಕಾಂಗ್ರೆಸ್‌ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ ಕುಮಾರ್, ಮೈಲಾರಪ್ಪ, ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಯು.ಲಕ್ಷ್ಮಿಕಾಂತ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್. ಪ್ರಕಾಶ್, ಶಿಕ್ಷಕರು ಹಾಗೂ ಪದವೀಧರ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಮುದಸಿರ್ ನವಾಜ್, ವೆಂಕಟೇಶ್, ಕುಮಾರಗೌಡ, ಮೋಕ್ಷಾ ರುದ್ರಸ್ವಾಮಿ ಇದ್ದರು.

ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್‌ ಸದಸ್ಯರ ಬಲ ಹೆಚ್ಚಿದರೆ ಸರ್ಕಾರಕ್ಕೆ ಅನುಕೂಲವಾಗುತ್ತದೆ. ಶಿಕ್ಷಕರು ಹಾಗೂ ಶಿಕ್ಷಣ ಕ್ಷೇತ್ರದ ಪರ ಸರ್ಕಾರ ಕೆಲಸ ಮಾಡಲಿದೆ.
ಗೀತಾ ನಂದಿನಿಗೌಡ ಅಧ್ಯಕ್ಷೆ ಜಿಲ್ಲಾ ಕಾಂಗ್ರೆಸ್‌ ಮಹಿಳಾ ಘಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT