ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ಅಭಿವೃದ್ಧಿಗೆ ಸಿಎಸ್‌ಆರ್‌ ನಿಧಿ ಬಳಸಿ

ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಸಂಸದ ಎ. ನಾರಾಯಣಸ್ವಾಮಿ ಸಭೆ
Last Updated 19 ಏಪ್ರಿಲ್ 2021, 14:41 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್‌) ತರುವೆ. ಯೋಜನೆ ಸಿದ್ಧಪಡಿಸಿ ಸದ್ಬಳಕೆ ಮಾಡಿಕೊಳ್ಳಲು ಸಜ್ಜಾಗಿ. ಹೋಬಳಿಗೆ ಒಂದು ಮಾದರಿ ಶಾಲೆಯನ್ನು ನಿರ್ಮಿಸಿಲು ಪ್ರಸ್ತಾವ ಸಲ್ಲಿಸಿ ಎಂದು ಸಂಸದ ಎ. ನಾರಾಯಣಸ್ವಾಮಿ ಸೂಚನೆ ನೀಡಿದರು.

ಇಲ್ಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಚೇರಿಯಲ್ಲಿ ಸೋಮವಾರ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‍ಆರ್) ಅಡಿಯಲ್ಲಿ ಅನುದಾನ ಬಳಕೆ ಕುರಿತು ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

‘ಸಾಮಾಜಿಕ ಹೊಣೆಗಾರಿಕೆ ನಿಧಿ ಅಡಿಯಲ್ಲಿ ಮಾದರಿ ಶಾಲೆಗಳ ನಿರ್ಮಾಣಕ್ಕೆ ಸಾಕಷ್ಟು ಅವಕಾಶಗಳಿವೆ. ಜಿಲ್ಲೆಯಲ್ಲಿ ಇರುವ ಶಾಲೆಗಳ ಆರಂಭವಾದ ವರ್ಷ, ಶಾಲೆಯ ಇತಿಹಾಸ, ಶಾಲೆಯ ವಿಸ್ತೀರ್ಣ, ಮಕ್ಕಳ ಸಂಖ್ಯೆ, ಶಾಲೆಯ ಸಾಧನೆ ಹೀಗೆ ಮುಂತಾದ ವಿಷಯಗಳ ಬಗ್ಗೆ ಸವಿಸ್ತರವಾದ ವರದಿ ಸಿದ್ಧಪಡಿಸಿ’ ಎಂದು ತಾಕೀತು ಮಾಡಿದರು.

‘ಮುಂಬರುವ ಶೈಕ್ಷಣಿಕ ವರ್ಷದೊಳಗೆ ಜಿಲ್ಲೆಯಲ್ಲಿ ಸಾಮಾಜಿಕ ಹೊಣೆಗಾರಿಕೆ ನಿಧಿ ಅನುದಾನದಲ್ಲಿ ಮಾದರಿ ಶಾಲೆ ಆರಂಭವಾಗಿರಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಎಲ್ಲ ಅಧಿಕಾರಿಗಳು ಒಗ್ಗೂಡಿ ಕಾರ್ಯನಿರ್ವಹಿಸಬೇಕು. ಶಾಲಾ ಕೊಠಡಿಗಳ ಚಾವಣಿ, ಕಾಂಪೌಂಡ್ ನಿರ್ಮಾಣ, ದುರಸ್ತಿ ಇರುವ ಶಾಲೆಗಳ ವಿವರವನ್ನು ಪಟ್ಟಿ ಮಾಡಿ ವಾರದೊಳಗೆ ಪ್ರಸ್ತಾವ ಸಲ್ಲಿಸಬೇಕು’ ಎಂದು ಹೇಳಿದರು.

‘ಕೋವಿಡ್ ಸಂದರ್ಭದಲ್ಲಿ ಜಿಲ್ಲೆಯ ಶಿಕ್ಷಕರು ಮಕ್ಕಳಿಗೆ ಯಾವ ವಿಧಾನದಲ್ಲಿ ಬೋಧನೆ ಮಾಡಬೇಕು ಎಂಬುದನ್ನು ತಿಳಿಸುವ ಅಗತ್ಯವಿದೆ. ಮಕ್ಕಳು ಕಲಿಕೆಯಲ್ಲಿ ಹೇಗೆ ಆಸಕ್ತಿಯುತವಾಗಿ ತೊಡಗಿಸಿಕೊಳ್ಳಬೇಕು ಎಂಬುವುದರ ಕುರಿತು ನುರಿತ ವಿಷಯ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಿ’ ಎಂದು ಸಲಹೆ ನೀಡಿದರು.

ಹಲವು ಕಂಪನಿಗಳು ಸಿಎಸ್‌ಆರ್‌ ನಿಧಿಯನ್ನು ಸರಿಯಾದ ಮಾರ್ಗದಲ್ಲಿ ಬಳಕೆ ಮಾಡುತ್ತಿಲ್ಲ. ಈ ಬಗ್ಗೆ ಕಾನೂನು ತಿದ್ದುಪಡಿ ಮಾಡುವ ಅಗತ್ಯವಿದೆ ಎಂದು ಸಂಸದ ಎ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.

‘ಸಾರ್ವಜನಿಕ ಉದ್ದಿಮೆಗಳ ಸಿಎಸ್‌ಆರ್‌ ಬಳಕೆ ಮಾಡಿಕೊಳ್ಳಲು ಜಿಲ್ಲಾಧಿಕಾರಿ ಪ್ರಸ್ತಾವ ಸಲ್ಲಿಸಬೇಕು. ಈ ಪ್ರಯತ್ನ ನಡೆಯುತ್ತಿದೆ. ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಸಿಎಸ್‌ಆರ್‌ ನಿಧಿಯನ್ನು ಚಿತ್ರದುರ್ಗ ಜಿಲ್ಲೆಗೆ ತರಲಾಗುವುದು. ನಿಧಿಯನ್ನು ನೀಡಲು ಹಲವು ಸಂಸ್ಥೆಗಳು ಸಮ್ಮತಿ ನೀಡಿವೆ’ ಎಂದು ಹೇಳಿದರು.

ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ ಸಹ ನಿರ್ದೇಶಕ ಎಚ್.ಮಂಜುನಾಥ್, ಡಯಟ್ ಪ್ರಾಂಶುಪಾಲ ಎಸ್‍ಕೆಬಿ ಪ್ರಸಾದ್ ಇದ್ದರು.

***

ಫಲಿತಾಂಶ ಹೆಚ್ಚಿಸುವ ದೃಷ್ಟಿಯಿಂದ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ವಿಷಯವಾರು ವಿಶೇಷ ಪುಸ್ತಕ ಬಿಡುಗಡೆ ಮಾಡಲಾಗಿದೆ. ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲಾಗಿದೆ.

–ಕೆ. ರವಿಶಂಕರ್ ರೆಡ್ಡಿ
ಡಿಡಿಪಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT