ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚತ್ರದುರ್ಗ: ಭೂ ಕಬಳಿಕೆ ತಡೆದ ಸಂಸದ ಎ.ನಾರಾಯಣಸ್ವಾಮಿ

₹ 10 ಕೋಟಿ ವೆಚ್ಚದಲ್ಲಿ ಚಂದ್ರವಳ್ಳಿ ಅಭಿವೃದ್ಧಿ
Last Updated 10 ಜುಲೈ 2020, 10:43 IST
ಅಕ್ಷರ ಗಾತ್ರ

ಚಿತ್ರದುರ್ಗ: ಇಲ್ಲಿನ ಚಂದ್ರವಳ್ಳಿ ಕೆರೆ ಮುಂಭಾಗದ ಸರ್ಕಾರಿ ಜಮೀನು ಕಬಳಿಸಲು ಯತ್ನಿಸಿದ ಪ್ರಕರಣವನ್ನು ಬಯಲಿಗೆ ಎಳೆದಿರುವ ಸಂಸದ ಎ.ನಾರಾಯಣಸ್ವಾಮಿ, 38 ಎಕರೆ ಭೂಮಿಯನ್ನು ಸ್ವಾಧೀನಕ್ಕೆ ಪಡೆಯುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಭೂ ಮಾಪನಾ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳೊಂದಿಗೆ ಶುಕ್ರವಾರ ಸ್ಥಳ ಪರಿಶೀಲನೆ ನಡೆಸಿದ ಸಂಸದರು ಒತ್ತುವರಿ ಸಂಬಂಧ ಮಾಹಿತಿ ಪಡೆದರು. ಚಂದ್ರವಳ್ಳಿಗೆ ಪೂರಕವಾಗಿ ರೂಪಿಸಲು ನಿರ್ಧರಿಸಿರುವ ಉದ್ಯಾನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದರು. ಗಿಡಗಳನ್ನು ಶುಚಿಗೊಳಿಸುವಂತೆ ಸಲಹೆ ನೀಡಿದರು.

ಚಂದ್ರವಳ್ಳಿ ಮುಂಭಾಗದಲ್ಲಿ ಸರ್ಕಾರ ಹಾಗೂ ಮುರುಘಾ ಮಠಕ್ಕೆ ಸೇರಿದ ಜಮೀನು ಇದೆ. ಕೋಟೆಗೆ ಸೇರಿದ ಬೆಟ್ಟಕ್ಕೆ ಕೇಂದ್ರ ಪುರಾತತ್ವ ಇಲಾಖೆ ಬೇಲಿ ಹಾಕಿದೆ. ಬೇಲಿ ಸಮೀಪದಲ್ಲಿರುವ ಸರ್ಕಾರಿ ಭೂಮಿಯನ್ನು ಕೆಲ ವ್ಯಕ್ತಿಗಳು ವಶಕ್ಕೆ ಪಡೆಯಲು ಪ್ರಯತ್ನಿಸಿದ್ದರು. ಉದ್ಯಾನ ನಿರ್ಮಾಣಕ್ಕೆ ಮುಂದಾದಾಗ ಭೂ ಕಬಳಿಕೆ ವಿಚಾರ ಸಂಸದರ ಗಮನಕ್ಕೆ ಬಂದಿತ್ತು. ಭೂಮಿಯನ್ನು ಆಳತೆ ಮಾಡಿ ಸ್ವಾಧೀನಕ್ಕೆ ಪಡೆಯುವಂತೆ ಹಲವು ದಿನಗಳ ಹಿಂದೆಯೇ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು.

‘ಚಂದ್ರವಳ್ಳಿ ಕೆರೆ ಮುಂಭಾಗದಲ್ಲಿ 38 ಎಕರೆ ಹಾಗೂ ಹಿಂಭಾಗದಲ್ಲಿ 19 ಎಕರೆ ಸರ್ಕಾರಿ ಖರಾಬು ಇದೆ. ಇದನ್ನು ಸ್ವಾಧೀನಕ್ಕೆ ಪಡೆಯಲು ಯಾರೊಬ್ಬರನ್ನು ಕೇಳಬಾಕಾಗಿಲ್ಲ. ಖಾಸಗಿ ವ್ಯಕ್ತಿಗಳಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಇದನ್ನು ಸಂಪೂರ್ಣ ಸ್ವಾಧೀನಕ್ಕೆ ಪಡೆದು ಉದ್ಯಾನ ನಿರ್ಮಾಣ ಮಾಡಲಾಗುವುದು’ ಎಂದು ಸಂಸದ ಎ.ನಾರಾಯಣಸ್ವಾಮಿ ಸುದ್ದಿಗಾರರಿಗೆ ತಿಳಿಸಿದರು.

‘ಹುಲುಗುಂದೆ ಹಾಗೂ ನೇರಲಗುಂದೆ ಗ್ರಾಮಕ್ಕೆ ಸೇರಿದ ಸರ್ಕಾರಿ ಖರಾಬು ಭೂಮಿ ಖಾಸಗಿ ವ್ಯಕ್ತಿಗಳ ಪಾಲಾಗಲು ಬಿಡುವುದಿಲ್ಲ. ಕಾನೂನು ಪ್ರಕಾರವೇ ಇದನ್ನು ಸ್ವಾಧೀನಕ್ಕೆ ಪಡೆಯಲಾಗುತ್ತದೆ. ಎರಡು ಬಾರಿ ಅಳತೆ ಮಾಡಲಾಗಿದ್ದು, ವಾರದಲ್ಲಿ ಕಲ್ಲು, ಬಾಂದ್‌ ಹಾಕಲಾಗುವುದು. ಕೇಂದ್ರ ಪುರಾತತ್ವ ಇಲಾಖೆ ಕೂಡ ಐದಾರು ಎಕರೆ ಒತ್ತುವರಿ ಮಾಡಿ ಬೇಲಿ ಹಾಕಿದೆ. ಈಗ ಇದನ್ನು ಪ್ರಶ್ನಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಚಂದ್ರವಳ್ಳಿ ಕರೆ ಅಭಿವೃದ್ಧಿಗೆ ಪ್ರವಾಸೋದ್ಯ ಇಲಾಖೆ ₹ 10 ಕೋಟಿ ಬಿಡುಗಡೆ ಮಾಡಲು ಸಿದ್ಧವಿದೆ. ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರೊಂದಿಗೆ ಹಲವು ಸುತ್ತಿನ ಸಭೆಗಳು ನಡೆದಿವೆ. ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರೊಂದಿಗೆ ಚರ್ಚಿಸಿದ್ದೇನೆ. ಕರೆಯನ್ನು ಇನ್ನಷ್ಟು ವಿಸ್ತರಿಸಿ ಬೋಟಿಂಗ್‌ ವ್ಯವಸ್ಥೆ ಕಲ್ಪಿಸಲಾಗುತ್ತದೆ. ವಾಯುವಿಹಾರಕ್ಕೆ ಪಥ ನಿರ್ಮಾಣ, ಕಾರಂಜಿ, 100 ಅಡಿ ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿದೆ’ ಎಂದರು.

ಫುಡ್‌ ಪಾರ್ಕ್‌ ವಿರುದ್ಧ ಕಿಡಿ:ಹಿರಿಯೂರು ತಾಲ್ಲೂಕಿನ ಉಚ್ಚವ್ವನಹಳ್ಳಿಯ ಅಕ್ಷಯ ಫುಡ್‌ ಪಾರ್ಕ್‌ ಯುವ ಉದ್ದಿಮೆದಾರರಿಗೆ ಸಹಕಾರ ನೀಡದಿದ್ದರೆ ಯೋಜನೆಯನ್ನು ರದ್ದುಪಡಿಸಲಾಗುವುದು ಎಂದು ಸಂಸದ ಎ.ನಾರಾಯಣಸ್ವಾಮಿ ಎಚ್ಚರಿಕೆ ನೀಡಿದರು.

‘2006–07ರಲ್ಲಿ ಆರಂಭವಾದ ಅಕ್ಷಯ್‌ ಫುಡ್‌ ಪಾರ್ಕ್‌ 106 ಎಕರೆ ಭೂಮಿ ಹೊಂದಿದೆ. 14 ವರ್ಷದಲ್ಲಿ ಬೆರಳೆಣಿಕೆ ಉದ್ದಿಮೆಗಳಿಗೆ ಮಾತ್ರ ಅವಕಾಶ ಕಲ್ಪಿಸಿದೆ. ಔದ್ಯೋಗಿಕ ವಾತಾವರಣ ನಿರ್ಮಾಣ ಮಾಡುವಲ್ಲಿ ಪ್ರಮೋಟರ್‌ ಸಂಪೂರ್ಣ ವಿಫಲರಾಗಿದ್ದಾರೆ’ ಎಂದು ಕಿಡಿಕಾರಿದರು.

‘ಫುಡ್‌ ಪಾರ್ಕ್‌ ಪ್ರಮೋಟರ್‌ ಉಪ ಗುತ್ತಿಗೆ ನೀಡಿ ಉದ್ದಿಮೆ ಸ್ಥಾಪನೆಗೆ ಉತ್ತೇಜನ ನೀಡಬೇಕು. ಉದ್ದಿಮೆಗೆ ಅನೇಕರು ಆಸಕ್ತಿ ತೋರಿದ್ದಾರೆ. ಸಾಲ ನೀಡಲು ಕೆಎಸ್‌ಎಫ್‌ಸಿ ಕೂಡ ಸಿದ್ಧವಿದೆ. ಆದರೆ, ಪ್ರಮೋಟರ್‌ ನಿರಾಸಕ್ತಿಯಿಂದ ಇದು ನನೆಗುದಿಗೆ ಬಿದ್ದಿದೆ’ ಎಂದರು.

ನಗರಸಭೆ ಪೌರಾಯುಕ್ತ ಜೆ.ಟಿ.ಹನುಮಂತರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT