ಚಿತ್ರದುರ್ಗ: ತ್ಯಾಗ – ಬಲಿದಾನ, ಭಾವೈಕ್ಯದ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಭಾನುವಾರ ಜಿಲ್ಲೆಯಾದ್ಯಂತ ಹಿಂದೂ– ಮುಸ್ಲಿಮರು ಒಗ್ಗೂಡಿ ಶ್ರದ್ಧಾಭಕ್ತಿಯಿಂದ ಆಚರಿಸಿದರು.

ನಗರಕ್ಕಿಂತ ಗ್ರಾಮೀಣ ಭಾಗದಲ್ಲಿ ಹಬ್ಬದ ಕಳೆ ಜೋರಾಗಿದ್ದು, ಜಾತಿ–ಧರ್ಮ ಭೇದವಿಲ್ಲದೆ ಎಲ್ಲರೂ ಒಂದಾಗಿ ಸಂಭ್ರಮಿಸಿದ್ದು ವಿಶೇಷವಾಗಿತ್ತು.

ಗ್ರಾಮೀಣ ಭಾಗದಲ್ಲಿ ‘ಪೀರಲ ಹಬ್ಬ’ ಎಂದು ಕರೆಯುವ ಮೊಹರಂ ಭಾವೈಕ್ಯದ ಸಂಕೇತವಾಗಿದೆ. ಜಿಲ್ಲೆಯ ಬಹುತೇಕ ಹಳ್ಳಿಗಳಲ್ಲಿ ಸಂಪ್ರದಾಯದಂತೆ ಹತ್ತು ದಿನಗಳಿಂದ ನಿತ್ಯ ಒಂದೊಂದು ಪೂಜೆ ನೆರವೇರಿಸಲಾಯಿತು. ಪೆಟ್ಟಿಗೆಯಲ್ಲಿನ ದೇವರನ್ನು ಹೊರತೆಗೆದು ಪ್ರತಿಷ್ಠಾಪನೆ ಮಾಡುವ ಮೂಲಕ ವಾರದ ಹಿಂದೆಯೇ ಹಬ್ಬಕ್ಕೆ ಚಾಲನೆ ನೀಡಲಾಗಿತ್ತು.

ಗುದ್ದಲಿ ಪೂಜೆ ಈ ಹಬ್ಬದ ಮತ್ತೊಂದು ವಿಶೇಷ. ಹಬ್ಬದ ಅಂಗವಾಗಿ ಜಿಲ್ಲೆಯ ಗ್ರಾಮೀಣ ಭಾಗದ ವಾತಾವರಣ ರಂಗಿನಿಂದ ಕೂಡಿತ್ತು. ಆಲಂ, ಪಂಜಾ, ತಾಜಿಯಾ ಆಚರಣೆಯನ್ನು ರಸ್ತೆ, ಗಲ್ಲಿ, ಓಣಿ, ಮೈದಾನಗಳಲ್ಲಿ ನಡೆಸಲಾಯಿತು.

ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಿದ್ದ ದೇವರ ಮೆರವಣಿಗೆ ನಗರದ ಪ್ರಮುಖ ಮಾರ್ಗಗಳಲ್ಲಿ ಸಾಗಿ ಗಾಂಧಿ ವೃತ್ತದ ಮೂಲಕ ಆನೆ ಬಾಗಿಲು, ಚಿಕ್ಕಪೇಟೆ, ದೊಡ್ಡಪೇಟೆ ದರ್ಗಾ ತಲುಪಿತು. ವಾದ್ಯಮೇಳಗಳು ಮೆರವಣಿಗೆಗೆ ಮೆರುಗು ನೀಡಿದವು. ಯುವಕರು ಉತ್ಸಾಹದಿಂದ ಹೆಜ್ಜೆಹಾಕುತ್ತ ಗಮನ ಸೆಳೆದರು. ಮೆರವಣಿಗೆಯ ಮಾರ್ಗದಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು.

ತಾಲ್ಲೂಕಿನ ಕೆಲವೆಡೆ ಸಂಪ್ರದಾಯದಂತೆ ಐದು ದಿನ ಪೀರಲ ದೇವರನ್ನು (ಹೊನ್ನೂರು ಸ್ವಾಮಿ) ಕೂರಿಸುವ ಪರಂಪರೆ ಇದೆ. ಈ ವೇಳೆ ಬೆಲ್ಲ ಹಾಗೂ ಸಕ್ಕರೆಯನ್ನು ದೇಗುಲಕ್ಕೆ ತಂದು ಭಕ್ತರು ಹರಕೆ ತೀರಿಸಿದರು.

ತಾಲ್ಲೂಕಿನ ಜಿ.ಆರ್.ಹಳ್ಳಿಯಲ್ಲಿ ಅದ್ದೂರಿಯಾಗಿ ಮೊಹರಂ ಆಚರಿಸಲಾಯಿತು. ಗ್ರಾಮದಲ್ಲಿರುವ ಪೀರಲ ದೇವರ (ಹೊನ್ನೂರು ಸ್ವಾಮಿ) ಗುಡಿಯಲ್ಲಿ 9 ಪಂಜಾ ದೇವರನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಲಾಯಿತು. ಹಿಂದೂ–ಮುಸ್ಲಿಂಮರು ದೇವಾಲಯಕ್ಕೆ ಬಂದು ದೇವರ ದರ್ಶನ ಪಡೆದರು. ಭಾನುವಾರ ನಸುಕಿನಲ್ಲಿ ಕೆಂಡೋತ್ಸವ (ಅಲಾಯಿ) ಸಂಭ್ರಮವನ್ನು ಸೃಷ್ಟಿಸಿತು.

ಹೊನ್ನೂರಸ್ವಾಮಿ ದೇವಾಲಯದಲ್ಲಿ ಪಂಜಾ ಪ್ರತಿಷ್ಠಾಪಿಸಿ ಒಡವೆ, ವಸ್ತ್ರಗಳೊಂದಿಗೆ ವಿಶಿಷ್ಟ ರೀತಿಯಲ್ಲಿ ಅಲಂಕಾರ ಮಾಡಲಾಗಿತ್ತು. ಮುಸ್ಲಿಮರು ಕೂಡ ಪಾಲ್ಗೊಂಡು ದೇವರಿಗೆ ಸಕ್ಕರೆ, ಮಂಡಕ್ಕಿ, ಕಲ್ಲುಸಕ್ಕರೆ, ಒಣದ್ರಾಕ್ಷಿ ಅರ್ಪಿಸಿ ಓದಿಕೆ (ನಮಾಜ್) ನೆರವೇರಿಸಿದರು.

ಗ್ರಾಮದ ಜನ ಮೊಹರಂ ದಿನ ಉಪವಾಸ ಇದ್ದು ರಾತ್ರಿಯಿಡೀ ವಿವಿಧ ಆಚರಣೆಯಲ್ಲಿ ತೊಡಗಿದ್ದು ವಿಶೇಷವಾಗಿತ್ತು. ದೇವರಿಗೆ ಹರಕೆ ಕಟ್ಟಿಕೊಂಡಿದ್ದ ಭಕ್ತರು ತಮ್ಮ ದೇಹದ ತೂಕದಷ್ಟು ಬೆಲ್ಲ, ಸಕ್ಕರೆ ಅರ್ಪಿಸಿದರು.

ಮುಂಜಾನೆ ಕೆಂಡ ತುಳಿದ ಭಕ್ತರು

ಮುಸ್ಲಿಂ ಸಮುದಾಯದ ಜನರೇ ಇಲ್ಲದಿರುವ ಚಿತ್ರದುರ್ಗ ತಾಲ್ಲೂಕಿನ ಬಚ್ಚಬೋರನಹಟ್ಟಿಯಲ್ಲಿ ಹಿಂದೂ ಸಮುದಾಯದವರೇ ಸೋಮವಾರ ಮೊಹರಂ ಹಬ್ಬವನ್ನು ಆಚರಿಸುತ್ತಿದ್ದಾರೆ.

ಅಮಾವಾಸ್ಯೆಯ ಮೂರು ದಿನದ ನಂತರ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಪೀರಲ ಹಬ್ಬಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಗಿತ್ತು. ನಂತರ ಪೆಟ್ಟಿಗೆಯಲ್ಲಿನ ದೇವರುಗಳನ್ನು ಹೊರತೆಗೆದು ಪ್ರತಿಷ್ಠಾಪನೆ ಮಾಡಿ ಹತ್ತು ದಿನ ಹಲವು ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಾಗಿತ್ತು.

ಭಾನುವಾರ ರಾತ್ರಿ ಗ್ರಾಮಸ್ಥರು ಮಂಡಕ್ಕಿ, ಸಕ್ಕರೆ, ಬೆಲ್ಲ, ನೈವೇದ್ಯ ಅರ್ಪಿಸಿದರು. ಹರಕೆ ಹೊತ್ತ ಕೆಲವರು ರಾತ್ರಿ ಇಡೀ ಸ್ತ್ರೀ ವೇಷ, ಕರಡಿ ಕುಣಿತದಂತಹ ವೇಷಗಳನ್ನು ತೊಟ್ಟು ಗಮನ ಸೆಳೆದರು. ಸೋಮವಾರ ಬೆಳಗಿನ ಜಾವ ಕೆಂಡ ತುಳಿದು ಭಕ್ತಿ ಸಮರ್ಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.