ಶುಕ್ರವಾರ, ಜನವರಿ 22, 2021
22 °C
ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿವೆ 46 ಸಾವಿರಕ್ಕೂ ಅಧಿಕ ಪರಿಕರ

ಉದ್ಘಾಟನೆಗೆ ಸಿದ್ಧ ಮುರುಘಾಶ್ರೀ ಮ್ಯೂಸಿಯಂ

ಜಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಆಸಕ್ತಿಯಿಂದ ಸಂಗ್ರಹಿಸಿದ ಪ್ರಾಚ್ಯವಸ್ತುಗಳ ‘ಮುರುಘಾಶ್ರೀ’ ವಸ್ತುಸಂಗ್ರಹಾಲಯ ಉದ್ಘಾಟನೆಗೆ ಸಜ್ಜಾಗಿದೆ. ಮಠದ ಪರಂಪರೆಗೆ, ಕೋಟೆನಾಡಿನ ಪ್ರವಾಸಿ ತಾಣಗಳ ಪಟ್ಟಿಗೆ ಇದೊಂದು ಹೊಸ ಸೇರ್ಪಡೆಯಾಗಲಿದೆ.

ಮುರುಘರಾಜೇಂದ್ರ ಬೃಹನ್ಮಠದ ಆವರಣದಲ್ಲಿರುವ ಸುಸಜ್ಜಿತ ಕಟ್ಟಡದಲ್ಲಿ ಮ್ಯೂಸಿಯಂ ನಿರ್ಮಾಣಗೊಂಡಿದೆ. ಎರಡು ಅಂತಸ್ತಿನ ಕಟ್ಟಡದಲ್ಲಿ 46 ಸಾವಿರಕ್ಕೂ ಅಧಿಕ ಪರಿಕರಗಳನ್ನು ಇರಿಸಲಾಗಿದೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಇದೇ 29ರಂದು ಮ್ಯೂಸಿಯಂ ಉದ್ಘಾಟಿಸಲಿದ್ದಾರೆ.

ಮ್ಯೂಸಿಯಂ ಒಳಹೊಕ್ಕರೆ ಪ್ರಾಚೀನ ಕಾಲದ ಜಗತ್ತು ತೆರೆದುಕೊಳ್ಳಲಿದೆ. ಶಿಲಾಯುಗದಿಂದ ಹಿಡಿದು ಆಧುನಿಕ ಕಾಲದವರೆಗಿನ ಬಹುತೇಕ ವಸ್ತುಗಳು ಹೊಸದೊಂದು ಅನುಭವ ಕಟ್ಟಿಕೊಡುತ್ತವೆ. ಕಲ್ಲು, ಕಂಚು, ಹಿತ್ತಾಳೆ, ತಾಮ್ರ ಸೇರಿ ಹಲವು ಬಗೆಯ ಪರಿಕರಗಳು ವಿಸ್ಮಯಗೊಳಿಸುತ್ತವೆ. ಪೂರ್ವಜರು ಬಳಕೆ ಮಾಡುತ್ತಿದ್ದ ಪ್ರತಿ ವಸ್ತುವೂ ಇಲ್ಲಿ ಕಾಣಸಿಗುತ್ತದೆ.

ಒಂದನೇ ಶತಮಾನದಿಂದ 21ನೇ ಶತಮಾನದವರೆಗಿನ ಹಲವು ವಸ್ತುಗಳು ಮ್ಯೂಸಿಯಂನಲ್ಲಿ ಸ್ಥಾನ ಪಡೆದಿವೆ. ಎಲ್ಲವನ್ನೂ ಒಪ್ಪವಾಗಿ ಜೋಡಿಸಲಾಗಿದೆ. ಪ್ರತಿ ವಸ್ತುವಿನ ಸಮೀಪ ಅಗತ್ಯ ಮಾಹಿತಿ ನೀಡಲಾಗಿದೆ. ವಸ್ತುವನ್ನು ಯಾವ ಉದ್ದೇಶಕ್ಕೆ ಬಳಕೆ ಮಾಡಲಾಗುತ್ತಿತ್ತು ಎಂಬ ಮಾಹಿತಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಲಭ್ಯವಾಗುತ್ತದೆ. ಪ್ರತಿಯೊಂದನ್ನು ಸೂಕ್ಷ್ಮವಾಗಿ ವೀಕ್ಷಿಸಿದರೆ ಇಡೀ ವಸ್ತುಸಂಗ್ರಹಾಲಯ ಕಣ್ತುಂಬಿಕೊಳ್ಳಲು ಕನಿಷ್ಠ ಮೂರು ಗಂಟೆ ಬೇಕಾಗುತ್ತದೆ.

ನೀರು ತುಂಬಲು ಕಲ್ಲಿನಲ್ಲಿ ನಿರ್ಮಿಸಿದ ಬಾನಿಗಳು ಬೆರಗುಗೊಳಿಸುತ್ತವೆ. ಬೃಹತ್‌ ಗಾತ್ರದ ಕಲ್ಬಾನಿಗಳು ಪೂರ್ವಜರ ಕೌಶಲವನ್ನು ಬಿಚ್ಚಿಡುತ್ತವೆ. ಮಾಸ್ತಿಕಲ್ಲು, ವೀರಗಲ್ಲು, ಶಾಸನ ಕಲ್ಲು, ಬೀಸುವ ಕಲ್ಲುಗಳು ಸೂಜಿಗಲ್ಲಿನಂತೆ ಸೆಳೆಯುತ್ತವೆ. ಆನೆ ಕಟ್ಟಿ ಬಳಕೆ ಮಾಡುತ್ತಿದ್ದ ಬೃಹತ್‌ ಗಾತ್ರದ ಬೀಸುವ ಕಲ್ಲು ಇಲ್ಲಿದೆ. ಲಕ್ಷ್ಮಿ, ಸರಸ್ವತಿ, ಶನಿ, ಗಣೇಶನ ಅಪರೂಪದ ವಿಗ್ರಹಗಳು ಭಕ್ತಿ ಭಾವ ಮೂಡಿಸುತ್ತವೆ. ಯಡಿಯೂರು ಸಿದ್ಧಲಿಂಗೇಶ್ವರರ ವಚನವಿರುವ ಏಕೈಕ ಶಿಲಾಶಾಸನ ಇಲ್ಲಿದೆ.


ಶಿವಮೂರ್ತಿ ಮುರುಘಾ ಶರಣರು

ರಾಜ, ಮಹಾರಾಜರು ಬಳಸುತ್ತಿದ್ದ ಅಪರೂಪದ ಕತ್ತಿ, ಗುರಾಣಿಗಳ ಸಂಗ್ರಹ ಇಲ್ಲಿದೆ. ಯೋಧರ ರಕ್ಷಣಾ ಕವಚಗಳು ಯುದ್ಧತಂತ್ರಕ್ಕೆ ಸಾಕ್ಷ್ಯ ಒದಗಿಸುತ್ತವೆ. ಪ್ರಾಚೀನ ಕಾಲದ ಆಯುಧಗಳು, ಫಿರಂಗಿಗೆ ತುಂಬುತ್ತಿದ್ದ ಮದ್ದು–ಗುಂಡುಗಳು ಆಧುನಿಕತೆಯ ಪ್ರತೀಕದಂತೆ ಗೋಚರಿಸುತ್ತವೆ. ಟಿಪ್ಪು ಸುಲ್ತಾನ್‌, ಚೋಳರ ಕಾಲದ ನಾಣ್ಯ, ಭಾರತ, ಚೀನಾ ಹಾಗೂ ರೋಮ್‌ ಸಾಮ್ರಾಜ್ಯದ ನಾಣ್ಯಗಳು ಇಲ್ಲಿವೆ.

ಆಧುನಿಕ ಜಗತ್ತಿಗೆ ಮಾನವ ಹೊರಳಿದ ರೀತಿಯನ್ನು ಸಂಗ್ರಹಾಲಯದ ವಸ್ತುಗಳು ಕಟ್ಟಿಕೊಡುತ್ತವೆ. ಅಂಚೆಚೀಟಿ, ಬೀಗ, ತೂಕದ ಯಂತ್ರ, ಮುದ್ರಣ ಯಂತ್ರದ ಆವಿಷ್ಕಾರ, ಗಡಿಯಾರ, ಸಂಗೀತ ಪರಿಕರ ವಿಸ್ಮಯಗೊಳಿಸುತ್ತವೆ. ತಾಳೆಗರಿಯಲ್ಲಿ ರಚಿಸಿದ ರಾಮಾಯಣ, ಮಹಾಭಾರತ, ಶ್ರೀಕೃಷ್ಣನ ವೈವಿಧ್ಯಮಯ ಕಥೆಗಳ ಗುಚ್ಛ ತೆರೆದುಕೊಳ್ಳುತ್ತದೆ. ಒಂದು ಮತ್ತು ಎರಡನೇ ಶತಮಾನದ ಚಂದ್ರವಳ್ಳಿಯ ಅವಶೇಷಗಳು ಸಂಗ್ರಹಾಲಯ ಸೇರಿವೆ.

ಮುರುಘಾ ಮಠದ ನಾಲ್ವರು ಪೀಠಾಧೀಶರಿಗೆ ಭಕ್ತರು, ರಾಜವಶಂಸ್ಥರು ಸಲ್ಲಿಸಿದ ಬಿನ್ನವತ್ತಳೆ, ಪಲ್ಲಕ್ಕಿ, ಪೂಜಾ ಸಾಮಗ್ರಿಗಳನ್ನು ಇಡಲಾಗಿದೆ. ಮಠಾಧೀಶರು ಬಳಸಿದ ಪೀಠೋಪಕರಣ, ಎಂಟು ದಶಕದಷ್ಟು ಹಿಂದಿನ ಮಠದ ಫೋಟೊ ಆಲ್ಬಂ, ಕಲಾವಿದರ ಕೈಯಲ್ಲಿ ಅರಳಿದ ಅಪರೂಪದ ಕಲಾಕೃತಿಗಳನ್ನು ಕಣ್ತುಂಬಿಕೊಳ್ಳುವುದೇ ಆನಂದ.

**
ಜಗತ್ತಿನ ಹಲವು ದೇಶಗಳಲ್ಲಿ 40 ವರ್ಷಗಳಿಂದ ಸಂಗ್ರಹಿಸಿದ ವಸ್ತುಗಳ ಪ್ರದರ್ಶನಕ್ಕೆ ಕಾಲ ಕೂಡಿಬಂದಿದೆ. ಲಾಕ್‌ಡೌನ್‌ ಸಮಯವನ್ನು ಸದ್ಬಳಕೆ ಮಾಡಿಕೊಂಡು ಮ್ಯೂಸಿಯಂ ನಿರ್ಮಿಸಲಾಗಿದೆ.
-ಶಿವಮೂರ್ತಿ ಮುರುಘಾ ಶರಣರು, ಮುರುಘಾ ಮಠ, ಚಿತ್ರದುರ್ಗ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು