ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾಯಕನಹಟ್ಟಿ: 39 ತಿಂಗಳ ನಂತರ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನದ ‘ಭಾಗ್ಯ’

Published 7 ಆಗಸ್ಟ್ 2024, 6:43 IST
Last Updated 7 ಆಗಸ್ಟ್ 2024, 6:43 IST
ಅಕ್ಷರ ಗಾತ್ರ

ನಾಯಕನಹಟ್ಟಿ: ಇಲ್ಲಿನ ಪಟ್ಟಣ ಪಂಚಾಯಿತಿಯ ಅಧ್ಯಕ್ಷ- ಉಪಾಧ್ಯಕ್ಷರ ಸ್ಥಾನಕ್ಕೆ 39 ತಿಂಗಳುಗಳ ನಂತರ ಸರ್ಕಾರವು ಸೋಮವಾರ ಮೀಸಲಾತಿ ಪ್ರಕಟಿಸಿದ್ದು, ಸ್ಥಳೀಯವಾಗಿ ರಾಜಕೀಯ ಚಟುವಟಿಕೆ ಗರಿಗೆದರಿದೆ.

ನಾಯಕನಹಟ್ಟಿ ಪಟ್ಟಣವು ಹೋಬಳಿ ಕೇಂದ್ರವಾಗಿದ್ದು, 48 ಹಳ್ಳಿಗಳಿಗೆ ಕೇಂದ್ರಸ್ಥಾನವಾಗಿದೆ. 2011ರ ಜನಗಣತಿ ಪ್ರಕಾರ ನಾಯಕನಹಟ್ಟಿಯ ಜನಸಂಖ್ಯೆ 15,000ಕ್ಕೂ ಅಧಿಕ ಎಂಬ ಕಾರಣ 2015ರ ಜನವರಿ 9ರಂದು ಇಲ್ಲಿನ ಗ್ರಾಮ ಪಂಚಾಯಿತಿಯು ಪಟ್ಟಣ ಪಂಚಾಯಿತಿಗೆ ಮೇಲ್ದರ್ಜೆಗೇರಿ 16 ವಾರ್ಡ್‌ಗಳನ್ನು ರಚಿಸಿಲಾಯಿತು.

2016ರ ಏಪ್ರಿಲ್ 24ರಂದು 16 ವಾರ್ಡ್‌ಗಳಿಗೆ ಚುನಾವಣೆ ನಡೆಸಿದಾಗ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ನಂತರ ಮೊದಲ ಅವಧಿಯು 2021ರ ಮೇ 30ಕ್ಕೆ ಮುಕ್ತಾಯವಾದ ಪ್ರಯುಕ್ತ ಮೊದಲ ಬಾರಿಗೆ ಆಯ್ಕೆಯಾದ ಸರ್ವ ಸದಸ್ಯರ ಸಭೆಯನ್ನು ವಿಸರ್ಜಿಸಲಾಯಿತು. ದೈನಂದಿನ ಆಡಳಿತವನ್ನು ಮುಖ್ಯಾಧಿಕಾರಿ ನಿರ್ವಹಿಸಿದ್ದರು. ತಹಶೀಲ್ದಾರ್‌ ಆಡಳಿತಾಧಿಕಾರಿಯಾಗಿದ್ದರು.

39 ತಿಂಗಳಿನಿಂದ ಗೆದ್ದ ಸದಸ್ಯರಿಗೆ ಅಧಿಕಾರವಿಲ್ಲ:

ನಾಯಕನಹಟ್ಟಿ ಪಟ್ಟಣ ಪಂಚಾಯಿತಿಗೆ 2ನೇ ಅವಧಿಗೆ ಚುನಾವಣೆ ನಡೆಸಲು ಸರ್ಕಾರವು ಮೊದಲ ಅವಧಿಯ ಸದಸ್ಯರ ಅವಧಿ ಮುಗಿದ 7 ತಿಂಗಳ ನಂತರ 2021ರ ನವೆಂಬರ್ 29ರಂದು ಅಧಿಸೂಚನೆ ಹೊರಡಿಸಿತ್ತು. ಅದರಂತೆ 2021ರ ಡಿಸೆಂಬರ್ 27ರಂದು ಚುನಾವಣೆ ನಡೆದು ಡಿಸೆಂಬರ್ 30ಕ್ಕೆ ಫಲಿತಾಂಶ ಪ್ರಕಟಿಸಲಾಯಿತು. ಚುನಾವಣೆಯಲ್ಲಿ ಕಾಂಗ್ರೆಸ್ 11, ಬಿಜೆಪಿಯ ಇಬ್ಬರು, ಸ್ವತಂತ್ರ  ಅಭ್ಯರ್ಥಿಗಳು ಮೂವರು ಜಯಗಳಿಸಿದ್ದರು. ಕಾಂಗ್ರೆಸ್ ಬಹುಮತ ಪಡೆಯಿತು. ಆದರೆ, ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಮೀಸಲಾತಿ ವಿಷಯದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಹುಮ್ಮಸ್ಸಿನಲ್ಲಿದ್ದ ಸದಸ್ಯರ ಆಡಳಿತ ನಡೆಸುವ ಆಸೆಗೆ ತಣ್ಣೀರು ಎರಚಿದಂತಾಗಿತ್ತು.‌

ಜನವರಿ 2022ರಿಂದ 2024ರ ಆಗಸ್ಟ್‌ವರೆಗೂ 16 ಜನ ಸದಸ್ಯರು ಅಧಿಕಾರವಿಲ್ಲದೆ ಬೇಸತ್ತಿದ್ದರು. ಆದರೆ, ಸರ್ಕಾರವ ಸೋಮವಾರ ಸುಪ್ರೀಂಕೋರ್ಟ್ ಆದೇಶದಂತೆ ರಾಜ್ಯದ ಸ್ಥಳಿಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಸದಸ್ಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. 16 ಜನ ಪಟ್ಟಣ ಪಂಚಾಯಿತಿ ಸದಸ್ಯರಲ್ಲಿ ಸಂಭ್ರಮ ಮನೆಮಾಡಿದೆ.

ಗರಿಗೆದರಿದ ರಾಜಕೀಯ ಚಟುವಟಿಕೆ:

ಪ್ರಸ್ತುತ ಕಾಂಗ್ರೆಸ್ ಪಕ್ಷವು 11 ಸ್ಥಾನಗಳನ್ನು ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾಗಿದೆ. ಮೀಸಲಾತಿ ಪಟ್ಟಿಯಲ್ಲಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ, ಉಪಾಧ್ಯಕ್ಷ ಸ್ಥಾನವು ಸಾಮಾನ್ಯ (ಮಹಿಳೆ) ವರ್ಗಕ್ಕೆ ಮೀಸಲಾಗಿದೆ.

ಅದರಂತೆ ಅಧ್ಯಕ್ಷ ಸ್ಥಾನಕ್ಕೆ 4ನೇ ವಾರ್ಡ್‌ನ ಗುರುಶಾಂತಮ್ಮ, 8ನೇ ವಾರ್ಡ್‌ನ ಮಂಜುಳಾ ಶ್ರೀಕಾಂತ್ ಅವರು ಕಾಂಗ್ರೆಸ್‌ ಬೆಂಬಲದಿಂದ ಗೆದ್ದಿದ್ದು, ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ. ಗುರುಶಾಂತಮ್ಮ ಇದೇ ಮೊದಲ ಬಾರಿಗೆ ಪಟ್ಟಣ ಪಂಚಾಯಿತಿಗೆ ಆಯ್ಕೆಯಾಗಿದ್ದರೆ, ಮಂಜುಳಾ ಶ್ರೀಕಾಂತ್ ಎರಡನೇ ಬಾರಿ ಗೆದ್ದಿದ್ದಾರೆ. ಇವರಿಬ್ಬರಲ್ಲಿ ಅಧ್ಯಕ್ಷ ಸ್ಥಾನದ ಆಯ್ಕೆಗೆ ಶಾಸಕ ಎನ್.ವೈ. ಗೋಪಾಲಕೃಷ್ಣ ಮತ್ತು ಕಾಂಗ್ರೆಸ್ ವರಿಷ್ಠರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ (ಮಹಿಳೆ) ಕೋಟಾದಲ್ಲಿ ಕಾಂಗ್ರೆಸ್‌ನಿಂದ ಒಬ್ಬ ಸದಸ್ಯರೂ ಆಯ್ಕೆಯಾಗಿಲ್ಲ. ಬದಲಿಗೆ ಪರಿಶಿಷ್ಟ ಪಂಗಡದ 5 ಜನ ಮಹಿಳಾ ಸದಸ್ಯರೇ ಸಾಮಾನ್ಯ (ಮಹಿಳೆ) ಕೋಟಾದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಸಂಭವವಿದೆ. ಆದರೆ, 10ನೇ ವಾರ್ಡ್‌ನ ಸರ್ವಮಂಗಳಾ ಅವರು ಸಾಮಾನ್ಯ (ಮಹಿಳೆ) ಮೀಸಲಾತಿಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದಿದ್ದಾರೆ. ಅವರೂ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT