ಮಂಗಳವಾರ, ಜೂನ್ 28, 2022
26 °C
2 ಕಿ.ಮೀ ಉದ್ದದ ರಸ್ತೆಯ ಎರಡೂ ಬದಿಗಳಲ್ಲಿ ನಳನಳಿಸುತ್ತಿರುವ ನೂರಾರು ಬೇವಿನ ಮರಗಳು

ಹೊಸದುರ್ಗ: ಕಣ್ಮನ ಸೆಳೆವ ರಸ್ತೆ ಬದಿ ಮರಗಳು

ಎಸ್‌. ಸುರೇಶ್‌ ನೀರಗುಂದ Updated:

ಅಕ್ಷರ ಗಾತ್ರ : | |

Prajavani

ಹೊಸದುರ್ಗ: ತಾಲ್ಲೂಕಿನಲ್ಲಿ ಆಗಾಗ ಉತ್ತಮ ಮಳೆ ಬರುತ್ತಿರುವುದರಿಂದ ಪರಿಸರಕ್ಕೆ ಜೀವಕಳೆ ಬಂದಿದೆ. ಹೊಳಲ್ಕೆರೆ ಮುಖ್ಯರಸ್ತೆಯಿಂದ ನಾಗೇನಹಳ್ಳಿವರೆಗೂ ರಸ್ತೆ ಬದಿಯಲ್ಲಿರುವ ಬೇವಿನ ಮರಗಳು ಕಣ್ಮನ ಸೆಳೆಯುತ್ತಿವೆ.

ಸಾಮಾಜಿಕ ವಲಯ ಅರಣ್ಯ ಇಲಾಖೆಯವರು ಇಲ್ಲಿ ಸುಮಾರು 2 ಕಿ.ಮೀ ಉದ್ದದ ರಸ್ತೆಯ ಎರಡೂ ಬದಿಗಳಲ್ಲಿ ನಾಲ್ಕೈದು ವರ್ಷಗಳ ಹಿಂದೆ ನೂರಾರು ಬೇವಿನ ಸಸಿಗಳನ್ನು ನಾಟಿ ಮಾಡಿದ್ದರು. ಸಸಿ ಒಣಗಿ ಹೋದ ಜಾಗದಲ್ಲಿ ಮತ್ತೊಂದು ಸಸಿ ನಾಟಿ ಮಾಡಲಾಯಿತು. ಈ ರಸ್ತೆಯ ಎರಡು ಬದಿಗಳಲ್ಲಿ ಬರುವ ಜಮೀನಿನ ರೈತರ ಮನವೊಲಿಸಿ ಸಸಿ ಪೋಷಿಸಿದ್ದರಿಂದ ನೂರಾರು ಬೇವಿನಮರಗಳು ಹುಲುಸಾಗಿ ಬೆಳೆದು ನಿಂತಿದ್ದು ಪರಿಸರ ಪ್ರಿಯರ ಗಮನ ಸೆಳೆಯುತ್ತಿವೆ.

ವಿಶ್ವ ಪರಿಸರದ ದಿನ ಸಸಿ ನೆಟ್ಟು ಬಿಟ್ಟರೆ ಸಾಲದು. ಇಲ್ಲಿಯ ರಸ್ತೆ ಬದಿಯಲ್ಲಿ ಸಸಿ ನೆಟ್ಟು ಕಾಳಜಿ ವಹಿಸಿ ಬೆಳೆಸಿರುವುದು ಸಂತಸದ ಸಂಗತಿ. ಆದರೆ, ಇದೇ ರೀತಿಯಲ್ಲಿ ಅರಣ್ಯ ಇಲಾಖೆಯವರು ತಾಲ್ಲೂಕಿನ ಎಲ್ಲ ಮಾರ್ಗಗಳ ರಸ್ತೆ ಬದಿ, ಅರಣ್ಯ ಪ್ರದೇಶ, ಬೆಟ್ಟಗುಡ್ಡಗಳಲ್ಲಿಯೂ ವಿವಿಧ ತಳಿಯ ಸಸಿಗಳನ್ನು ನೆಟ್ಟು ಪೋಷಿಸಬೇಕು. ಏಕೆಂದರೆ ಹಲವೆಡೆ ರಸ್ತೆ ಬದಿ, ಅರಣ್ಯ ಪ್ರದೇಶದಲ್ಲಿದ್ದ ಮರಗಳ ಪ್ರಮಾಣ ಕ್ಷೀಣಿಸುತ್ತಿದೆ. ಹಾಗಾಗಿ, ಇಂತಹ ಜಾಗದಲ್ಲಿ ಯಥೇಚ್ಛವಾಗಿ ಸಸಿಗಳನ್ನು ನೆಟ್ಟು ಬೆಳೆಸಿದಲ್ಲಿ ಪರಿಸರ ಸೌಂದರ್ಯ ಹೆಚ್ಚುತ್ತದೆ. ಇದರಿಂದಾಗಿ ಮನುಷ್ಯನ ಆರೋಗ್ಯ ಪಾಲನೆಗೆ ಬೇಕಾದ ನೈಸರ್ಗಿಕ ಆಮ್ಲಜನಕ ಪಡೆದುಕೊಳ್ಳಲು ನೆರವಾಗುತ್ತದೆ. ಹಾಗಾಗಿ, ಇಂತಹ ಮಹಾನ್‌ ಕಾರ್ಯಕ್ಕೆ ಎಲ್ಲರೂ ಮುಂದಾಗಬೇಕು ಎಂಬುದು ಪರಿಸರ ಪ್ರಿಯರ ಮನವಿ.

ಉತ್ತಮ ಮಳೆಯಿಂದಾಗಿ ತಾಲ್ಲೂಕಿನ ಹಲವೆಡೆ ಜಮೀನುಗಳು ಹದವಾಗಿವೆ. ರೈತರು ಜಮೀನಿನಲ್ಲಿ ಬಿತ್ತನೆ ಮಾಡಿದ್ದ ವಿವಿಧ ಬೀಜಗಳು ಮೊಳಕೆಯೊಡೆದು ಭೂಮಿಯ ಮೇಲೆ ಬಂದಿವೆ. ವಿವಿಧ ಬಗೆಯ ಗಿಡಮರಗಳಲ್ಲಿಯೂ ಹೊಸ ಚಿಗುರು ಬಂದಿರುವುದರಿಂದ ಪರಿಸರ ಮಲೆನಾಡಿನಂತೆ ಹಸಿರಿನಿಂದ ಕಂಗೊಳಿಸುತ್ತಿದೆ. ಕಳೆದ ತಿಂಗಳು ವೇದಾವತಿ ನದಿಯಲ್ಲಿ ಭದ್ರಾ ಜಲಾಶಯದ ನೀರು ಹರಿದಿದ್ದರಿಂದ ನದಿ ಪಾತ್ರದ ಕೊರಟಿಕೆರೆ, ಬಲ್ಲಾಳಸಮುದ್ರ, ಕೆಲ್ಲೋಡು, ಕಾರೇಹಳ್ಳಿ ಬ್ಯಾರೇಜ್‌ಗಳು ಭರ್ತಿಯಾಗಿವೆ. ಇದರಿಂದಾಗಿ ಈ ಭಾಗದಲ್ಲಿ ಅಂತರ್ಜಲ ವೃದ್ಧಿಯಾಗಿದೆ. ರೈತಾಪಿ ವರ್ಗದವರ ಮೊಗದಲ್ಲಿ ಮಂದಹಾಸ ಮೂಡಿದೆ. ತ್ವರಿತವಾಗಿ ಭದ್ರಾ ಮೇಲ್ದಂಡೆ ಯೋಜನೆಯಡಿ ಕಾಲುವೆ ಮೂಲಕ ತಾಲ್ಲೂಕಿನ ಕೆರೆಕಟ್ಟೆಗಳಿಗೆ ನೀರು ಹರಿಸಿದಲ್ಲಿ ಪರಿಸರ ಚಿತ್ರಣ ಬದಲಾಗಲಿದೆ ಎಂಬುದು ನಾಗರಿಕರ ಬಯಕೆಯಾಗಿದೆ.

ಸಸಿ ಬೆಳೆಸಲು ಸಹಕಾರ ಮುಖ್ಯ
ಚಿಣ್ಣಾಪುರ, ನಾಗೇನಹಳ್ಳಿ, ಮುದ್ದಯ್ಯನಹಟ್ಟಿ, ಅತ್ತಿಮಗ್ಗೆ, ಕೈನೋಡು ರಸ್ತೆ ಬದಿಯಲ್ಲಿ ಅರಳಿ, ಹೊಂಗೆ, ನೇರಳೆ, ಬೇವು ತಳಿಯ ಸಾವಿರಾರು ಸಸಿಗಳನ್ನು ಬೆಳೆಸಲಾಗಿದೆ. ಸಸಿ ಬೆಳೆಸಲು ರೈತರ ಸಹಕಾರ ಮುಖ್ಯ. ರಸ್ತೆ ಬದಿಯಲ್ಲಿ ಮರ ಬೆಳೆದರೆ ಸೌಂದರ್ಯ ಹೆಚ್ಚುತ್ತದೆ. ಆ ಮರಗಳು ಮುಂದೆ ನಿಮಗೆ ಸೇರುತ್ತವೆ ಎಂದು ನಾಗೇನಹಳ್ಳಿ ರೈತರಿಗೆ ಮನವೊಲಿಸಿದ್ದರಿಂದ ನೂರಾರು ಬೇವಿನ ಸಸಿಗಳನ್ನು ಬೆಳೆಸಲು ಸಾಧ್ಯವಾಗಿದೆ ಎಂದು ಸಾಮಾಜಿಕ ವಲಯ ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿ ನಾಯಕ್‌ ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು