ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಂಡವಾಳಶಾಹಿಗಳ ಕಪ್ಪುಚುಕ್ಕೆ ನಮಗೆ ದೃಷ್ಟಿಬೊಟ್ಟು: ತರಳಬಾಳು ಶ್ರೀ

ಸಿರಿಗೆರೆಯಲ್ಲಿ ಹರಪನಹಳ್ಳಿ, ಚಿತ್ರದುರ್ಗ, ಹೊಳಲ್ಕೆರೆ ತಾಲ್ಲೂಕು ಭಕ್ತರ ಸಭೆ
Published 29 ಆಗಸ್ಟ್ 2024, 15:53 IST
Last Updated 29 ಆಗಸ್ಟ್ 2024, 15:53 IST
ಅಕ್ಷರ ಗಾತ್ರ

ಸಿರಿಗೆರೆ: ‘ಕೆಲ ಬಂಡವಾಳಶಾಹಿಗಳು ನಿರಂತರವಾಗಿ ಮಾಡುತ್ತಿರುವ ಮಿಥ್ಯಾರೋಪಗಳು ನಮಗೆ ಕಪ್ಪುಚುಕ್ಕೆಗಳಾಗಿರದೆ, ಅವು ಪುಟ್ಟ ಮಕ್ಕಳ ಗಲ್ಲದ ಮೇಲೆ ಇಡುವ ದೃಷ್ಟಿಬೊಟ್ಟುಗಳಂತಿವೆ. ಅವುಗಳಿಂದ ನಮ್ಮ ಮಠದ ಘನತೆ ಮತ್ತಷ್ಟು ಹೆಚ್ಚುತ್ತದೆ’ ಎಂದು ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಇಲ್ಲಿನ ಗುರುಶಾಂತರಾಜ ದೇಶಿಕೇಂದ್ರ ದಾಸೋಹ ಮಂಟಪದಲ್ಲಿ ಏರ್ಪಡಿಸಿದ್ದ ಹರಪನಹಳ್ಳಿ, ಚಿತ್ರದುರ್ಗ ಮತ್ತು ಹೊಳಲ್ಕೆರೆಯ ಸಾದು ವೀರಶೈವ ಸಂಘದ ಭಕ್ತರ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

‘ನಮ್ಮ ಮಠವು ಬಂಡವಾಳಶಾಹಿಗಳ ಹಿಡಿತದಲ್ಲಿಲ್ಲ. ಅವರು ಮಾಡುವ ಆಪಾದನೆಗಳಿಂದ ನಾವು ಧೃತಿಗೆಟ್ಟಿಲ್ಲ. ಅವುಗಳಿಗೆ ನಾವು ಜಗ್ಗುವುದೂ ಇಲ್ಲ, ಬಗ್ಗುವುದೂ ಇಲ್ಲ’ ಎಂದು ಸ್ವಾಮೀಜಿ ಹೇಳಿದರು.

‘ಬಂಡವಾಳಶಾಹಿಗಳ ಮನಸ್ಸಿನಲ್ಲಿರುವ ವ್ಯಕ್ತಿಗೆ ಉತ್ತರಾಧಿಕಾರ ನೀಡದೇ ಇರುವುದರಿಂದ ಆರೋಪ ಮಾಡುತ್ತಿದ್ದಾರೆ. ವಿವಾದ  ಹುಟ್ಟುಹಾಕುವುದೇ ಅವರ ಕೆಲಸ. ಮಠಕ್ಕೆ ಸೇರಿದ ಯಾವುದೇ ಆಸ್ತಿ ಮತ್ತು ಹಣ ನಮ್ಮದಲ್ಲ ಎಂದು ಟ್ರಸ್ಟ್‌ ಡೀಡ್‌ನಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಮಠದ ಹೆಸರಿನಲ್ಲಿ ಆಸ್ತಿಗಳಿವೆ. ನಮ್ಮ ಹೆಸರಿನಲ್ಲೂ ಕೆಲವು ಇವೆ. ಮಠದ ಭಕ್ತರ ಹೆಸರಿನಲ್ಲಿಯೂ ಕೆಲ ಆಸ್ತಿಗಳಿವೆ. ಇವೆಲ್ಲವೂ ಮಠದ ಆಸ್ತಿಗಳೇ’ ಎಂದು ಶ್ರೀಗಳು ಸ್ಪಷ್ಟಪಡಿಸಿದರು.

‘ಟ್ರಸ್ಟ್‌ ಡೀಡ್‌ ವಿಚಾರ ಈಗ ನ್ಯಾಯಾಲಯದಲ್ಲಿದೆ. ನಮ್ಮ ಮಠದ ಇತಿಹಾಸವನ್ನು ಗಮನಿಸಿದರೆ ಮಠವು ಕೋರ್ಟ್‌ ತೀರ್ಪುಗಳಿಂದಲೇ ಹುಟ್ಟಿದೆ. ಈಗಲೂ ಈ ಎಲ್ಲ ವಿಚಾರಗಳನ್ನು ಕಾನೂನಿನ ಮೂಲಕವೇ ಹೋರಾಟ ಮಾಡುತ್ತೇವೆ. ಶಿಷ್ಯರು ಉದ್ವೇಗಕ್ಕೆ ಒಳಗಾಗಿ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಕೆಲವರು ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಾರೆ. ಆದ್ದರಿಂದ ಶಿಷ್ಯರು ಸಂಯಮ ಮತ್ತು ತಾಳ್ಮೆಯಿಂದ ಇರಬೇಕು’ ಎಂದು ತಿಳಿಸಿದರು.

‘ಹಿರಿಯ ಶ್ರೀಗಳ ಅಪೇಕ್ಷೆಯಂತೆ ನಾವು ವಿದೇಶಿ ವಿ.ವಿ.ಯಲ್ಲಿ ಅಭ್ಯಾಸ ಮಾಡಿದ್ದೇವೆ. ಅದಕ್ಕಾಗಿ ಮಠದ ಹಣವನ್ನು ಬಳಸಿಕೊಂಡಿಲ್ಲ. ಬನಾರಸ್‌ ವಿ.ವಿ.ಯಲ್ಲಿ ಸಂಶೋಧನಾ ವ್ಯಾಸಂಗಕ್ಕೂ ವಿಶ್ವವಿದ್ಯಾಲಯ ಧನಸಹಾಯ ಆಯೋಗದಿಂದ ಸ್ಕಾಲರ್‌ಶಿಪ್‌ ದೊರಕಿತ್ತು. ಹೀಗಿದ್ದರೂ ಓದಿಗೆ ಮಠದ ಹಣ ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸುತ್ತಿದ್ದಾರೆ’ ಎಂದರು.

‘ಉತ್ತರಾಧಿಕಾರಿ ನೇಮಕದ ಹೊಣೆಗಾರಿಕೆ 101 ವರ್ಷಗಳ ಹಿಂದೆಯೇ ಅಸ್ತಿತ್ವಕ್ಕೆ ಬಂದಿರುವ ಸಾಧು ಸದ್ಧರ್ಮ ವೀರಶೈವ ಸಂಘ ಹಾಗೂ ಮಠದ ಭಕ್ತರ ಮೇಲಿದೆ. ಅವರು ಆಯ್ಕೆ ಮಾಡುವ ವ್ಯಕ್ತಿಗೆ ಸಹಮತ ನೀಡುವುದು ನಮ್ಮ ಕೆಲಸ’ ಎಂದು ಶ್ರೀಗಳು ಸ್ಪಷ್ಟಪಡಿಸಿದರು.

ನೆಲ್ಲಿಕಂಬ ಗ್ರಾಮದ ಮಂಜುನಾಥ್‌, ಭೀಮಸಮುದ್ರದ ಜಯಪ್ಪ, ಹರಪನಹಳ್ಳಿಯ ಶ್ರೀನಿವಾಸ, ಕೆಂಚನಗೌಡ, ಹಿರೇಕಂದವಾಡಿ ಈಶ್ವರಪ್ಪ, ಹೆಮ್ಮನಬೇತೂರು ಚಿದಾನಂದ, ಹರಪನಹಳ್ಳಿಯ ನಿವೃತ್ತ ಎಂಜಿನಿಯರ್‌ ನಾಗರಾಜ್‌, ಮಹಾಬಲೇಶ್ವರಗೌಡ ಮುಂತಾದವರು ಶ್ರೀಗಳಿಗೆ ಬೆಂಬಲ ಘೋಷಿಸಿ, ಶ್ರೀಗಳು ತೆಗೆದುಕೊಳ್ಳುವ ಯಾವುದೇ ನಿರ್ಣಯಗಳಿಗೆ ಬೆಂಬಲವಾಗಿ ನಿಲ್ಲುತ್ತೇವೆ ಎಂದು ಘೋಷಿಸಿದರು.

ಡಾ.ಮೂಗನಗೌಡ, ಭೀಮಮುದ್ರದ ಜಿ.ಎಸ್.‌ ಅನಿತ್‌, ಉದ್ಯಮಿ ಬಿ.ಟಿ. ಪುಟ್ಟಪ್ಪ ಮುಂತಾದವರು ಇದ್ದರು.

- ಶಾಮನೂರು ವಿರುದ್ಧ ಗರಂ

ಮಠದ ಶ್ರೀಗಳ ವಿರುದ್ಧ ದಾವಣಗೆರೆಯಲ್ಲಿ ನಡೆದ ಸಭೆಯಲ್ಲಿ ಸಮಾಜದ ಹಿರಿಯರೂ ಶಾಸಕರೂ ಆದ ಶಾಮನೂರು ಶಿವಶಂಕರಪ್ಪ ಆಡಿದ ಮಾತುಗಳನ್ನು ಈಚೆಗೆ ಕೇಳಿಸಿಕೊಂಡಿದ್ದೇವೆ. ಅವರ ಮಾತುಗಳು ಅಪೇಕ್ಷಣೀಯವಲ್ಲ. ಅವರು ಆಡಿರುವ ಮಾತುಗಳು ಅವರಿಗೆ ಘನತೆ ತರುವುದಿಲ್ಲ ಎಂದು ತರಳಬಾಳು ಶ್ರೀ ತಿಳಿಸಿದರು. ರಾಜಕಾರಣಿಗಳು ಐದು ವರ್ಷ ಕಳೆದ ಮೇಲೆ ಮಾಜಿಯಾಗುತ್ತಾರೆ. ಅರಮನೆಗಳು ಅಸ್ತಿತ್ವ ಕಳೆದುಕೊಂಡರೂ ಗುರುಮನೆಗಳಿಗೆ ಭಕ್ತರು ತಮ್ಮ ಶ್ರದ್ಧಾಭಕ್ತಿ ತೋರುತ್ತಾರೆ ಎಂದು ಶ್ರೀಗಳು ಟೀಕಿಸಿದರು.

- ಉತ್ತರಾಧಿಕಾರಿ ಗುರುತಿಸಿ ತರಬೇತಿ ನೀಡಿ

‘ನೀವು ಪಟ್ಟಾಭಿಷಕ್ತರಾದ ನಂತರ ನಮ್ಮ ಮಠ ಮತ್ತು ಸಮಾಜದ ಕೀರ್ತಿ ಎಲ್ಲಾ ದಿಕ್ಕುಗಳಿಗೆ ಹರಡಿದೆ. ರೈತರ ಬದುಕು ಹಸನಾಗಿದೆ. ಸಮಾಜದ ಎಲ್ಲಾ ಸಮುದಾಯಗಳಿಗೂ ಕೆರೆಗಳನ್ನು ತುಂಬಿಸುವ ಯೋಜನೆಯಿಂದ ಅನುಕೂಲವಾಗಿದೆ. ಆದರೂ ನಮ್ಮ ಮಠದ ಭಕ್ತರ ಮನಸಿನೊಳಗೊಂದು ಜಿಜ್ಞಾಸೆ ಇದೆ. ಅದನ್ನು ಹೇಳಿಕೊಳ್ಳಲು ಮುಂದೆ ಬರುತ್ತಿಲ್ಲ. ನಮ್ಮ ಸಮಾಜ ಬಹು ದೊಡ್ಡದು. ಇಂತಹ ಸಮಾಜವನ್ನು ಮುನ್ನಡೆಸಿಕೊಂಡು ಹೋಗಲು ಸೂಕ್ತ ಉತ್ತರಾಧಿಕಾರಿ ಅಗತ್ಯ ಇದೆ. ಅವರ ನೇಮಕವನ್ನು ಕೂಡಲೇ ಮಾಡಿ ಅವರಿಗೆ ತರಬೇತಿ ನೀಡುವುದಲ್ಲದೇ ಸಮಾಜದೊಂದಿಗೆ ಬೆರೆಯುವ ರೀತಿ-ನೀತಿಗಳನ್ನು ಕಲಿಸಬೇಕು ಎಂದು ಹರಪನಹಳ್ಳಿಯ ಕೆಂಚನಗೌಡ ಶ್ರೀಗಳಲ್ಲಿ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT