ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಸಿಪಿಆರ್‌ ತರಬೇತಿಗೆ ಅಧಿಕೃತ ಚಾಲನೆ

ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ನಡೆಯುತ್ತಿರುವ ಆರೋಗ್ಯ ಮೇಳ
Last Updated 25 ಸೆಪ್ಟೆಂಬರ್ 2021, 3:20 IST
ಅಕ್ಷರ ಗಾತ್ರ

ಚಿತ್ರದುರ್ಗ: ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಹೃದಯ ಮತ್ತು ಶ್ವಾಸಕೋಶ ಕಾಯಿಲೆಗೆ ಪ್ರಾಥಮಿಕ ಚಿಕಿತ್ಸೆ ನೀಡುವ ‘ಸಿಪಿಆರ್’ ತರಬೇತಿಗೆ ಶುಕ್ರವಾರ ಮುರುಘಾಮಠದ ಅನುಭವ ಮಂಟಪದಲ್ಲಿ ಅಧಿಕೃತವಾಗಿ ಚಾಲನೆ ದೊರೆಯಿತು.

ಸಾವಿರಾರು ವೈದ್ಯಕೀಯ ವಿದ್ಯಾರ್ಥಿಗಳು, ನರ್ಸಿಂಗ್ ವ್ಯಾಸಂಗ ಮಾಡುತ್ತಿರುವವವರು, ಅರೆ ವೈದ್ಯಕೀಯ ಹಾಗೂ ವೈದ್ಯಕೀಯ ಸಿಬ್ಬಂದಿಗೆ ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಲಾಯಿತು. ಎಲ್ಲರೂ ಉತ್ಸಾಹದಿಂದಲೇ ತರಬೇತಿ ಪಡೆಯಲು ಮುಂದಾದರು.

ಕೋವಿಡ್ ಇಂಡಿಯಾ ಅಭಿಯಾನ, ದೇಶದ ವಿಪ್ಪತ್ತು ಬೆಂಬಲ ಕಾರ್ಯಪಡೆ, ಹಾರ್ಟ್ ಅಂಡ್ ಸ್ಟ್ರೋಕ್ ಫೌಂಡೇಷನ್ ಆಫ್ ಇಂಡಿಯಾ, ಕ್ರಿಪ್ಟೋ ರಿಲೀಫ್, ಸೊಸೈಟಿ ಆಫ್ ಎಮರ್ಜೆನ್ಸಿ ಮೆಡಿಸಿನ್ ಇಂಡಿಯಾದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ನೂರಾರು ತಜ್ಞ ವೈದ್ಯರು ಯಾವ ರೀತಿ ಪ್ರಾಥಮಿಕ ಚಿಕಿತ್ಸೆ ನೀಡಬೇಕು ಎಂದು ತರಬೇತಿ ನೀಡಿದರು.

ಹೃದಯ ಶ್ವಾಸಕೋಶದ ಪುನರುಜ್ಜೀವನಗೊಳಿಸುವ ಈ ತರಬೇತಿ ನಿರ್ಣಾಯಕ ಪಾತ್ರ ವಹಿಸಲಿದೆ. ಹೃದಯಾಘಾತ ಅಥವಾ ಹೃದಯ ಸ್ತಂಭನದ ಸಮಯದಲ್ಲಿ ರೋಗಿಯ ಉಸಿರಾಟ ಅಥವಾ ಹೃದಯ ಬಡಿತ ನಿಂತಾಗ ಸಿಪಿಆರ್‌ ಪ್ರಾಥಮಿಕ ಚಿಕಿತ್ಸೆ ಸಹಕಾರಿಯಾಗಲಿದೆ. ಯಾರೂ ಬೇಕಾದರು ಈ ತರಬೇತಿ ಪಡೆಯಬಹುದು.

ಎದೆಯ ಸಂಕೋಚನವನ್ನು ಕೃತಕ ವಾತಾಯನದೊಂದಿಗೆ ಸಂಯೋಜಿಸುವ ತುರ್ತು ಪ್ರಕ್ರಿಯೆ ಇದಾಗಿದೆ. ಹೃದಯ ಸ್ತಂಭನದಲ್ಲಿರುವ ವ್ಯಕ್ತಿಯಲ್ಲಿ ಸ್ವಾಭಾವಿಕ ರಕ್ತ ಪರಿಚಲನೆ ಮತ್ತು ಉಸಿರಾಟವನ್ನು ಪುನಃ ಸ್ಥಾಪಿಸಲು ಹೆಚ್ಚಿನ ಚಿಕಿತ್ಸೆ ನೀಡುವವರೆಗೆ ಮೆದುಳಿನ ಸಂಪೂರ್ಣ ಕಾರ್ಯವನ್ನು ಕೈಯಾರೆ ಸಂರಕ್ಷಿಸುವ ಪ್ರಯತ್ನವೇ ಈ ತರಬೇತಿಯಾಗಿದೆ.

ತರಬೇತಿ ಉದ್ಘಾಟಿಸಿದ ಕ್ರಿಪ್ಟೋ ರಿಲೀಫ್‌ ಸಂಸ್ಥೆಯ ಸಿಇಒ ಪುನೀತ್ ಅಗರ್‌ವಾಲ್, ‘ಇಂತಹ ಮಹತ್ತರ ಕಾರ್ಯದಲ್ಲಿ ಸಿಐಸಿ ಜೊತೆ ಪಾಲುದಾರಿಕೆ ಹೊಂದಿದ್ದಕ್ಕೆ ಸಂತೋಷ ಉಂಟಾಗಿದೆ. ಒಂದು ಸಂಸ್ಥೆಯಾಗಿ ಸಾರ್ವಜನಿಕ ಹೊಣೆಗಾರಿಕೆ ಉದ್ದೇಶದಿಂದ ಇದಕ್ಕೆ ಕೈಜೋಡಿಸಿದ್ದೇವೆ. ಆರೋಗ್ಯ ಕ್ಷೇತ್ರಕ್ಕೆ ಒಂದಿಷ್ಟು ಮೂಲ ಸೌಕರ್ಯ ಕಲ್ಪಿಸಿ, ತರಬೇತಿ ಮೂಲಕ ಜನರ ಪ್ರಾಣ ಉಳಿಸುವ ಗುರಿ ಹೊಂದಲಾಗಿದೆ’ ಎಂದರು.

₹ 20 ಕೋಟಿ ಉಪಕರಣ ನೀಡಿದ್ದೇವೆ

‘ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಕೋವಿಡ್ ಇಂಡಿಯಾ ಅಭಿಯಾನದ ಮೂಲಕ ₹ 20 ಕೋಟಿ ಮೌಲ್ಯದ ವೈದ್ಯಕೀಯ ಉಪಕರಣವನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದೇವೆ’ ಎಂದು ಅಭಿಯಾನದ ಸಹ ಸಂಸ್ಥಾಪಕ ಸ್ವದೀಪ್ ಪಿಳ್ಳರಿಸೆಟ್ಟಿ ತಿಳಿಸಿದರು.

‘ಸಿಐಸಿ ದೇಶದಲ್ಲಿ ಇರುವ ವಿಪತ್ತು ಬೆಂಬಲ ಕಾರ್ಯಪಡೆಯಾಗಿದೆ. ಸಾಂಕ್ರಾಮಿಕ ಸಮಯದಲ್ಲಿ ವೈದ್ಯಕೀಯ ಸಮುದಾಯವನ್ನು ಸದಾ ಬೆಂಬಲಿಸುತ್ತದೆ. 150ಕ್ಕೂ ಹೆಚ್ಚು ಸಮುದಾಯ ಆಮ್ಲಜನಕ ಕೇಂದ್ರ ಸ್ಥಾಪಿಸಲಾಗಿದೆ. ಈಗಲೂ ಸವಾಲಿನ ಕಾಲ ಎದುರಿಸುತ್ತಿದ್ದೇವೆ. ಜನರ ಆರೋಗ್ಯ ಮತ್ತು ಪ್ರಾಣ ರಕ್ಷಣೆಯೇ ಈ ಎಲ್ಲಾ ಸಂಘ–ಸಂಸ್ಥೆಗಳ ಧ್ಯೇಯವಾಗಿದೆ’ ಎಂದರು.

ಶಿವಮೂರ್ತಿ ಮುರುಘಾ ಶರಣರು, ಉತ್ಸವ ಸಮಿತಿ ಗೌರವಾಧ್ಯಕ್ಷ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಸಮಿತಿ ಕಾರ್ಯಾಧ್ಯಕ್ಷ ಕೆ.ಎಸ್. ನವೀನ್, ಐಸಿಎಐಟಿ ಸಂಸ್ಥೆ ಸ್ಥಾಪಕಿ ಡಾ.ಶಾಲಿನಿ ನಲ್ವಾಡ್, ಎಸ್‌ಇಎಂಐ ರಾಜ್ಯ ಸಮಿತಿ ಅಧ್ಯಕ್ಷ ಡಾ. ನಾಗನಿಶ್ಚಲ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಂಗನಾಥ್, ಸೂಕ್ ಸಂಸ್ಥೆ ಸಿಇಒ ಅರ್ಜುನ್ ನಾಗರಾಜನ್, ಸಂಜೀವಿನಿ ಜೀವ ರಕ್ಷಕ ಟ್ರಸ್ಟಿನ ಅಧ್ಯಕ್ಷ ರಂಗಸ್ವಾಮಿ, ಸಿಯೋಕ್ ಸಹ ಸಂಸ್ಥಾಪಕಿ ಶ್ರೇಯಾ ಶಾ, ನಿಶಿತ್ ಮೋಹನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT