ಹೊಸದುರ್ಗ: ತಾಲ್ಲೂಕಿನಾದ್ಯಂತ ಈರುಳ್ಳಿ ಬೆಳೆಗೆ ನೇರಳೆ ಮಚ್ಚೆರೋಗ (ಕೊಳೆರೋಗ) ಕಂಡುಬಂದಿದ್ದು, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ವಿಜ್ಞಾನಿಗಳು ಶುಕ್ರವಾರ ಬಾಗೂರಿನ ಜಮೀನುಗಳಿಗೆ ಭೇಟಿ ನೀಡಿ, ರೈತರಿಗೆ ಸಲಹೆ ಸೂಚನೆ ನೀಡಿದರು.
ಹತ್ತು ದಿನಗಳಿಂದ ನಿರಂತರ ಜಿಟಿಜಿಟಿ ಮಳೆಯಾಗಿದೆ. ಈ ಭಾಗದಲ್ಲಿ ಕಪ್ಪು ಮಣ್ಣು ಅಧಿಕವಾಗಿದೆ. ಈ ಮಣ್ಣಿಗೆ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿದೆ. ಹಾಗಾಗಿ ತೇವಾಂಶದಿಂದ ಈ ರೋಗ ಅಧಿಕವಾಗಿದೆ. ಬಿಸಿಲು ಬಂದರೆ ನಿವಾರಣೆಯಾಗುತ್ತದೆ. ಅಲ್ಲಿಯವರೆಗೂ ಔಷಧ ಸಿಂಪಡಣೆ ಮಾಡಬೇಕು ಎಂದು ತೋಟಗಾರಿಕೆ ಉಪನಿರ್ದೇಶಕ ಶರಣಬಸಪ್ಪ ಭೋಗಿ ಹೇಳಿದರು.
‘ನೇರಳೆಮಚ್ಚೆ ರೋಗದ ಹತೋಟಿಗಾಗಿ ಕಾರ್ಬೆಂಡಾಝಿನ್, ಮ್ಯಾಂಕೋಜೆಬ್ ಅಥವಾ ಪ್ರೋಪಿಕೋನಜೋಲ್ 25 ಇ.ಸಿ. 1 ಮಿ.ಲೀ. ಅಥವಾ ಹೆಕ್ಸಕೋನಜೋಲ್ 5 ಇ.ಸಿ. 1 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಜೊತೆಗೆ ಅಂಟು ದ್ರಾವಣ 0.25 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಬೇಕು. ಬಿಸಿಲು ಬರುವವರಿಗೂ 10 ದಿನಗಳಿಗೊಮ್ಮೆಯಾದರೂ ಈ ಶೀಲಿಂದ್ರ ನಾಶಕಗಳ ಸಿಂಪಡಣೆ ಮಾಡಬೇಕು’ ಎಂದು ಕೀಟ ಮತ್ತು ರೋಗ ತಜ್ಞ ಎಸ್. ಓಂಕಾರಪ್ಪ ತಿಳಿಸಿದರು.
ರೈತರು ಬೆಳೆವಿಮೆ ಅವಧಿ ವಿಸ್ತರಿಸಬೇಕು. ಇಲಾಖೆಯಲ್ಲಿ ಔಷಧಗಳು ರಿಯಾಯಿತಿ ದರದಲ್ಲಿ ದೊರೆಯುವಂತಾದರೆ ರೈತರಿಗೆ ಅನುಕೂಲವಾಗುತ್ತದೆ ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿದರು.
ತೋಟಗಾರಿಕೆ ತಜ್ಞ ಬಿ.ಎಸ್. ಮಹಾಂತೇಶ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ವೆಂಕಟೇಶ್ ಮೂರ್ತಿ, ಸಹಾಯಕ ನಿರ್ದೇಶಕರಾದ ಶೋಭಾ, ಹೋಬಳಿ ಅಧಿಕಾರಿಗಳಾದ ಪುಟ್ಟಣ್ಣ ಸಿ., ನರಸಿಂಹಮೂರ್ತಿ ಎಚ್., ನಿರಂಜನ್, ಬಿ. ರಂಗನಾಥ್ ಇದ್ದರು.
‘ತೇವಾಂಶ ಅಧಿಕ ಈರುಳ್ಳಿ ಬೆಳೆಗೆ ಕೊಳೆರೋಗ’ ಶೀರ್ಷಿಕೆಯಡಿ ಜುಲೈ 30ರಂದು ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾಗಿತ್ತು. ವರದಿ ಹಿನ್ನೆಲೆಯಲ್ಲಿ ಅಧಿಕಾರಿಗಳು ಭೇಟಿ ನೀಡಿದ್ದು, ‘ಪ್ರಜಾವಾಣಿ’ ಕಾರ್ಯ ಶ್ಲಾಘನೀಯ ಎಂದು ರೈತರು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.