ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಗನಕ್ಕೇರಿದ್ದ ಈರುಳ್ಳಿ ಬೆಲೆ ₹ 40ಕ್ಕೆ ಕುಸಿತ; ಗ್ರಾಹಕರು ನಿರಾಳ

ಮಾರುಕಟ್ಟೆಗೆ ಲಗ್ಗೆಯಿಟ್ಟ ಮಹಾರಾಷ್ಟ್ರ ಬೆಳೆ
Last Updated 13 ಜನವರಿ 2020, 19:30 IST
ಅಕ್ಷರ ಗಾತ್ರ

ಚಿತ್ರದುರ್ಗ: ಗಗನಮುಖಿಯಾಗಿದ್ದ ಈರುಳ್ಳಿ ಬೆಲೆ ವಾರದಿಂದ ₹ 40ಕ್ಕೆ ಕುಸಿದಿದೆ. ಮಹಾರಾಷ್ಟ್ರದ ಈರುಳ್ಳಿ ರಾಜ್ಯಕ್ಕೆ ಲಗ್ಗೆ ಇಟ್ಟಿದ್ದರಿಂದ ಬೆಲೆ ಭಾರಿ ಪ್ರಮಾಣದ ಇಳಿಕೆ ಕಂಡಿದೆ.

ಸೋಮವಾರದ ಸಂತೆಯಲ್ಲಿ ಈರುಳ್ಳಿ ಖರೀದಿ ಜೋರಾಗಿತ್ತು. ಈರುಳ್ಳಿ ಖರೀದಿಗೆ ಗ್ರಾಹಕರು ಮುಗಿಬಿದ್ದಿದ್ದರು. ಹಿಂಗಾರು ಬೆಳೆ ಫಸಲಿಗೆ ಬಂದ ಬಳಿಕ ಈರುಳ್ಳಿ ಬೆಲೆ ಇನ್ನೂ ಇಳಿಕೆ ಕಾಣುವ ಸಾಧ್ಯತೆ ಇದೆ. ಇದು ಬೆಳೆಗಾರರಲ್ಲಿ ಆತಂಕವನ್ನೂ ಮೂಡಿಸಿದೆ.

ನೆರೆ ಹಾಗೂ ಬರ ಪರಿಸ್ಥಿತಿಯಿಂದ ಮುಂಗಾರು ಹಂಗಾಮಿನ ಈರುಳ್ಳಿ ರೈತರ ಕೈಸೇರಿರಲಿಲ್ಲ. ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕದಲ್ಲಿ ಸುರಿದ ಭಾರಿ ಮಳೆಗೆ ಈರುಳ್ಳಿ ಬೆಳೆ ನಷ್ಟವಾಗಿತ್ತು. ಚಿತ್ರದುರ್ಗ ಸೇರಿ ಹಲವೆಡೆ ಸಮಯಕ್ಕೆ ಸರಿಯಾಗಿ ಮುಂಗಾರು ಮಳೆ ಬೀಳದ ಪರಿಣಾಮ ನಿರೀಕ್ಷಿತ ಪ್ರಮಾಣದ ಬೆಳೆ ಬಂದಿರಲಿಲ್ಲ. ಹೀಗಾಗಿ, ಚಿತ್ರದುರ್ಗದಲ್ಲಿಯೇ ಕೆ.ಜಿ. ಈರುಳ್ಳಿ ಬೆಲೆ ₹ 200ಕ್ಕೆ ಏರಿತ್ತು.

ಗ್ರಾಹಕರ ಕಣ್ಣಲ್ಲಿ ನೀರು ತರಿಸಿದ್ದ ಈರುಳ್ಳಿ ದಿನಕ್ಕೊಂದು ಬೆಲೆ ಕಾಣುತ್ತಿತ್ತು. ಸುಮಾರು ಮೂರು ತಿಂಗಳು ಕೆ.ಜಿ. ಈರುಳ್ಳಿ ಬೆಲೆ ₹ 100ಕ್ಕಿಂತ ಕಡಿಮೆ ಆಗಿರಲಿಲ್ಲ. ಇದು ಹೋಟೆಲ್‌ ಹಾಗೂ ಅಡುಗೆ ಮನೆಯ ಆಹಾರ ಪದಾರ್ಥಗಳ ಮೇಲೂ ಪ್ರಭಾವ ಬೀರಿತ್ತು.

20 ವರ್ಷಗಳಿಂದ ಸಗಟು ವಹಿವಾಟಿನಲ್ಲಿ ತೊಡಗಿರುವ ಸಲ್ಮನ್‌ ಖಾನ್‌ ಹಳ್ಳಿಗೆ ತೆರಳಿ ಈರುಳ್ಳಿ ಖರೀದಿಸುತ್ತಿದ್ದರು. ಅತಿವೃಷ್ಟಿಯ ಪರಿಣಾಮ ಚಿತ್ರದುರ್ಗದ ಈರುಳ್ಳಿ ಗುಣಮಟ್ಟ ಚೆನ್ನಾಗಿಲ್ಲ ಎಂಬುದು ಅವರ ಅನುಭವ. ಹೀಗಾಗಿ, ಮಹಾರಾಷ್ಟ್ರದ ಪುಣೆ ಮತ್ತು ನಾಸಿಕ್‌ಗಳಿಂದ ಈರುಳ್ಳಿ ತರುತ್ತಿದ್ದಾರೆ. ಸಗಟು ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ ಈರುಳ್ಳಿಗೆ ₹ 3 ರಿಂದ 4 ಸಾವಿರ ಬೆಲೆ ಇದೆ. ಸಾಗಣೆ ವೆಚ್ಚ, ನಿರ್ವಹಣೆ ಹಾಗೂ ಲಾಭ ಸೇರಿ ಕೆ.ಜಿ. ಈರುಳ್ಳಿಗೆ ₹ 45ರಿಂದ 50 ಬೆಲೆ ನಿಗದಿ ಮಾಡಿದ್ದಾರೆ.

ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಈರುಳ್ಳಿ ಪ್ರಮುಖ ವಾಣಿಜ್ಯ ಬೆಳೆ. ಚಿತ್ರದುರ್ಗ, ದಾವಣಗೆರೆ ಸೇರಿ ಉತ್ತರ ಕರ್ನಾಟಕ ಹಲವು ಜಿಲ್ಲೆಯ ರೈತರು ಈರುಳ್ಳಿ ಬೆಳೆ ನಂಬಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಎರಡನೇ ಹಂತದಲ್ಲಿ ಬಿತ್ತನೆ ಮಾಡಿದ ಈರುಳ್ಳಿ ಮಾರುಕಟ್ಟೆಗೆ ಬರುತ್ತಿದೆ. ಕರ್ನಾಟಕದ ಬಹುತೇಕ ನಗರಗಳಿಗೆ ಮಹಾರಾಷ್ಟ್ರ ಈರುಳ್ಳಿ ಪೂರೈಕೆ ಆಗುತ್ತಿದೆ.

‘ಬೆಲೆ ಸಿಗುವ ನಿರೀಕ್ಷೆಯಲ್ಲಿ ಬೆಳೆಗಾರರು ಈರುಳ್ಳಿ ಕಿತ್ತು ಮಾರುಕಟ್ಟೆಗೆ ತರುತ್ತಿದ್ದಾರೆ. ಹಸಿ ಗೆಡ್ಡೆಯನ್ನು ಹೆಚ್ಚು ದಿನ ಸಂರಕ್ಷಣೆ ಮಾಡಲು ಸಾಧ್ಯವಿಲ್ಲ. ಹೀಗಾಗಿ, ಹೆಚ್ಚು ಈರುಳ್ಳಿ ಖರೀದಿಸಿ ದಾಸ್ತಾನು ಮಾಡಿಕೊಳ್ಳಲು ಆಗದು. ಈರುಳ್ಳಿ ಮೇಲಿನ ಸಿಪ್ಪೆ ಒಣಗಿದ ಬಳಿಕ ಅದರ ಮೌಲ್ಯವೂ ಕಡಿಮೆಯಾಗುತ್ತದೆ. ಹೀಗಾಗಿ, ವಾರದಲ್ಲಿ ಮಾರಾಟ ಮಾಡಿ ಮುಗಿಸುತ್ತೇವೆ’ ಎನ್ನುತ್ತಾರೆ ಸಲೀಂ ಬೇಗ್‌.

ತಿಂಗಳಾಂತ್ಯಕ್ಕೆ ಇನ್ನೂ ಕುಸಿತ:ಈರುಳ್ಳಿಗೆ ಬಂಗಾರದ ಬೆಲೆ ಬಂದ ಬಳಿಕ ಹಲವು ರೈತರು ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದಾರೆ. ಇದು ಮಾರುಕಟ್ಟೆಗೆ ಬರಲು ಇನ್ನೂ 20 ದಿನ ಬೇಕು. ಹೀಗಾಗಿ, ಜನವರಿ ತಿಂಗಳ ಅಂತ್ಯಕ್ಕೆ ಈರುಳ್ಳಿ ಬೆಲೆ ಇನ್ನೂ ಕುಸಿತ ಕಾಣುವ ಸಾಧ್ಯತೆ ಇದೆ ಎಂಬುದು ಸಗಟು ಮಾರಾಟಗಾರ ಸಲ್ಮನ್‌ ಖಾನ್ ಅವರ ವಿಶ್ಲೇಷಣೆ.

‘ಮಹಾರಾಷ್ಟ್ರದಲ್ಲಿ ಎರಡನೇ ಬೆಳೆ ಮಾರುಕಟ್ಟೆಗೆ ಬಂದ ತಕ್ಷಣ ಈರುಳ್ಳಿ ಬೆಲೆ ದಿಡೀರ್‌ ಕುಸಿಯಿತು. ಕರ್ನಾಟಕದ ಬೆಳೆ ಮಾರುಕಟ್ಟೆಗೆ ಬರಲು ಆರಂಭಿಸುತ್ತಿದ್ದಂತೆ ಇದು ಇನ್ನಷ್ಟು ಇಳಿಮುಖವಾಗಲಿದೆ. ಕೆ.ಜಿ. ಈರುಳ್ಳಿ ದರ ₹ 10ಕ್ಕೆ ಕುಸಿದರೂ ಅಚ್ಚರಿಪಡಬೇಕಿಲ್ಲ’ ಎನ್ನುತ್ತಾರೆ ಸಲ್ಮನ್‌ ಖಾನ್‌.

ಸೆಳೆಯದ ಟರ್ಕಿ ಈರುಳ್ಳಿ:ಈರುಳ್ಳಿ ಬೆಲೆ ಹೆಚ್ಚಾಗುತ್ತಿದ್ದಂತೆ ಟರ್ಕಿ ಈರುಳ್ಳಿ ಚಿತ್ರದುರ್ಗ ಮಾರುಕಟ್ಟೆಗೆ ಬಂದಿದೆ. ಆದರೆ, ಅದನ್ನು ಖರೀದಿಸಲು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ.

ಗಾತ್ರದಲ್ಲಿ ದೊಡ್ಡದಾಗಿರುವ ಟರ್ಕಿ ಈರುಳ್ಳಿ ಆಕರ್ಷಕವಾಗಿ ಕಾಣುತ್ತದೆ. ಆದರೆ, ಗ್ರಾಹಕರನ್ನು ಸೆಳೆಯುವಲ್ಲಿ ಇದು ಸೋತು ಹೋಗಿದೆ.

‘ಟರ್ಕಿ ಈರುಳ್ಳಿ ತಂದಿದ್ದೆವು. ಆದರೆ, ಅದು ಮಾರಾಟವಾಗಲಿಲ್ಲ. ದೇಸಿ ಈರುಳ್ಳಿ ಹೆಚ್ಚಿದರೆ ಕಣ್ಣಲ್ಲಿ ನೀರು ಬರುತ್ತದೆ. ಟರ್ಕಿ ಈರುಳ್ಳಿ ವಾಸನೆ ಕೂಡ ಬರುವುದಿಲ್ಲ. ಹೀಗಾಗಿ ಗ್ರಾಹಕರು ಇದನ್ನು ಇಷ್ಟ ಪಡುವುದಿಲ್ಲ’ ಎನ್ನುತ್ತಾರೆ ಸಲೀಂ ಬೇಗ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT