ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈರುಳ್ಳಿಗೆ ಕೊಳೆರೋಗ: ಆತಂಕದಲ್ಲಿ ರೈತ

ನಿರೀಕ್ಷೆಗೂ ಮೀರಿದ ಮಳೆ, ಮೋಡಕವಿದ ವಾತಾವರಣಕ್ಕೆ ಕೊಳೆಯುತ್ತಿರುವ ಈರುಳ್ಳಿ
Last Updated 16 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಚಿತ್ರದುರ್ಗ: ಬಹುನಿರೀಕ್ಷೆ ಹಾಗೂ ಉತ್ತಮ ಆರೈಕೆಯೊಂದಿಗೆ ರೈತರು ಬೆಳೆದ ಈರುಳ್ಳಿಗೆ ಸತತ 15 ದಿನಗಳಿಂದಲೂ ಕೊಳೆರೋಗ ಹಾಗೂ ನೇರಳೆ ಮಚ್ಚೆ ರೋಗಬಾಧೆ ಕಾಣಿಸಿಕೊಳ್ಳುತ್ತಿದ್ದು, ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.

ಬೆಳೆಗಾರರ ಕಿಸೆ ತುಂಬಿಸಬೇಕಿದ್ದ ಈರುಳ್ಳಿ ಈ ಬಾರಿ ಅನೇಕ ರೈತರಿಗೆ ಕಣ್ಣೀರು ತರಿಸಿದರೂ ಅಚ್ಚರಿ ಇಲ್ಲ. ಜುಲೈ ಕೊನೆ ವಾರ ಹಾಗೂ ಆಗಸ್ಟ್ ಮೊದಲ ವಾರದಲ್ಲಿ ಆಗಿಂದಾಗ್ಗೆ ಸುರಿದ ಅಧಿಕ ಮಳೆಯಿಂದಾಗಿ ರೋಗಬಾಧೆಗೆ ನಲುಗಿ ಬೆಳೆ ಹಾನಿಯಾಗುತ್ತಿದೆ. ಬೆಳೆ ಉಳಿಸಿಕೊಳ್ಳಲು ರೈತರು ಹರಸಾಹಸ ಪಡುವಂತಾಗಿದೆ. ಜತೆಗೆ ಬೆಲೆ ಕುಸಿತದ ಬರೆಯೂ ಬಿದ್ದಿದೆ.

ಪ್ರಸಕ್ತ ವರ್ಷ ನಿರೀಕ್ಷೆಗೂ ಮೀರಿ ಮುಂಗಾರು ಮಳೆ ಸುರಿದಿದ್ದರಿಂದಾಗಿ ಜಿಲ್ಲೆಯ ಕೆಲವೆಡೆ ರಭಸ ಹೆಚ್ಚಾಗಿ ರೈತರ ಜಮೀನುಗಳಲ್ಲಿ ನೀರು ನುಗ್ಗಿ ನಿಂತಿದೆ. ಇದರಿಂದ ಕೊಳೆರೋಗ, ನೇರಳೆ ಮಚ್ಚೆ ರೋಗ ಬಂದು, ಕೊಯ್ಲಿಗೆ ಬಂದಿರುವ ಬೆಳೆಯು ಹಳದಿ ಮತ್ತು ಕೆಂಪು ಬಣ್ಣಕ್ಕೆ ತಿರುಗಿದೆ. ಭೂಮಿಯಲ್ಲೇ ಕೊಳೆಯುತ್ತಿರುವ ಈರುಳ್ಳಿಯನ್ನು ಕೀಳುವುದಕ್ಕೂ ರೈತರು ಕಷ್ಟಪಡುತ್ತಿದ್ದಾರೆ. ಇದರ ಮಧ್ಯೆಯೇ ನಿತ್ಯ ಜಿಟಿಜಿಟಿ ಮಳೆ ಸುರಿಯುತ್ತಿದ್ದು, ಮತ್ತಷ್ಟು ಭೀತಿ ಸೃಷ್ಟಿಸಿದೆ.

ತೇವಾಂಶ ಹೆಚ್ಚಳದ ಜತೆಗೆ ಮೋಡಕವಿದ ವಾತಾವರಣ ಇರುವುದರಿಂದ ಜಿಲ್ಲೆಯಲ್ಲಿ ಎರಡು ವಾರದಿಂದ ಸುಮಾರು 75 ಹೆಕ್ಟೇರ್‌ ಪ್ರದೇಶದ ಈರುಳ್ಳಿ ಸಂಪೂರ್ಣ ಕೊಳೆತು ಹೋಗಿದೆ. 20 ಹೆಕ್ಟೇರ್ ಪ್ರದೇಶಗಳಲ್ಲಿನ ಬಾಳೆ ಸೇರಿ ಇತರೆ ಬೆಳೆಗಳು ಕೊಳೆಯುತ್ತಿವೆ. ಮತ್ತಷ್ಟು ಹೆಕ್ಟೇರ್ ಪ್ರದೇಶದಲ್ಲಿ ಕೊಳೆಯುವ ಆತಂಕ ಎದುರಾಗಿದೆ.

ಜಿಲ್ಲೆಯ ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು ಭಾಗದಲ್ಲಿ ಅನೇಕ ರೈತರು ಈರುಳ್ಳಿ ಬೆಳೆಯುತ್ತಾರೆ. ಈ ಬೆಳೆಯ ಮೇಲೆ ಅವಲಂಬನೆ ಆಗಿರುವವರ ಸಂಖ್ಯೆಯೂ ಅಧಿಕ. ಬೆಳೆ ಕೊಳೆತು ಹೋಗುತ್ತಿರುವ ಕಾರಣ ಹೊಸದುರ್ಗ ತಾಲ್ಲೂಕಿನ ನಾಕೀಕೆರೆ ಸೇರಿ ಕೆಲ ಭಾಗದ ಸಣ್ಣಪುಟ್ಟ ಬೆಳೆಗಾರರು (2-3 ಎಕರೆಗಳಲ್ಲಿ ಬೆಳೆಯುವ ರೈತರು) ಸಂಪೂರ್ಣ ಬೆಳೆಯನ್ನೇ ಕೀಳುತ್ತಿದ್ದಾರೆ. ಈರುಳ್ಳಿಯಿಂದ ಒಂದು ವರ್ಷ ಲಾಭವಾದರೆ, ಮತ್ತೊಂದು ವರ್ಷ ನಷ್ಟ ಕಂಡವರೂ ಇದ್ದಾರೆ.

‘ಹಿಂದಿನ ವರ್ಷ 4 ಎಕರೆಯಲ್ಲಿ ಈರುಳ್ಳಿ ಬೆಳೆದು ₹ 4 ಲಕ್ಷ ಲಾಭ ಗಳಿಸಿದ್ದೆ. ಈ ಬಾರಿ 3 ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದೇನೆ. ಆರಂಭದಲ್ಲಿ ಬೆಳೆ ನೋಡಿ ಒಳ್ಳೆಯ ಫಸಲು ಕೈ ಸೇರಲಿದೆ ಎಂಬ ನಿರೀಕ್ಷೆ ಇತ್ತು. ಎಕರೆಗೆ ₹ 35 ಸಾವಿರದಿಂದ ₹ 40 ಸಾವಿರದವರೆಗೂ ಖರ್ಚು ಮಾಡಿದ್ದೆ. ಆದರೆ, ಈಚೆಗೆ ಬಿಡದೆ ಸುರಿದ ಮಳೆಯಿಂದಾಗಿ ಬೆಳೆ ನಾಶವಾಗುತ್ತಿದ್ದು, ಅಸಲು ಕೈಗೆ ಸಿಗುವುದಿಲ್ಲ’ ಎಂದು ಹಿರಿಯೂರಿನ ಹರ್ತಿಕೋಟೆಯ ರೈತ ಮಹಾಂತೇಶ್ ‘ಪ್ರಜಾವಾಣಿ’ ಜತೆ ಅಳಲು ತೋಡಿಕೊಂಡರು.

ಪರ್ಯಾಯ ಬೆಳೆಯತ್ತ ಚಿತ್ತ: ‘ಒಂದೆಡೆ ಕೊಳೆರೋಗ ಬಾಧೆ. ಮತ್ತೊಂದೆಡೆ ಕೂಲಿಕಾರರ ಸಮಸ್ಯೆ. ಈಗಾಗಲೇ 9 ಎಕರೆ ಪ್ರದೇಶದಲ್ಲಿ ಈರುಳ್ಳಿ ಹಾಕಿದ್ದು, ಅರ್ಧ ಬೆಳೆ ನಾಶವಾಗಿದೆ. ಅದಕ್ಕಾಗಿ ಪರ್ಯಾಯ ಬೆಳೆ ಬೆಳೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಸರ್ಕಾರ ಬೆಳೆ ಹಾನಿ ಪರಿಹಾರ ನೀಡಿದರೆ ಬೆಳೆಗಾರರಿಗೆ ಅನುಕೂಲವಾಗಲಿದೆ’ ಎನ್ನುತ್ತಾರೆ ಚಳ್ಳಕೆರೆಯ ರೈತ ತಿಪ್ಪೇಸ್ವಾಮಿ.

ಕ್ವಿಂಟಲ್‌ಗೆ ಕೇವಲ ₹1 ಸಾವಿರ: ‘ಹಿಂದಿನ ವರ್ಷ ಕ್ವಿಂಟಲ್‌ ಈರುಳ್ಳಿಗೆ ₹ 2,700 ರಿಂದ ₹ 4.5 ಸಾವಿರ ಬೆಲೆ ಸಿಕ್ಕಿತ್ತು. ಎರಡು ತಿಂಗಳಿನಿಂದಲೂ ₹1 ಸಾವಿರಕ್ಕೆ ಬೆಲೆ ಕುಸಿದಿದೆ. ಅಲ್ಪಸ್ವಲ್ಪ ಕೊಳೆತಿದ್ದ ಈರುಳ್ಳಿಯನ್ನು ಬೆಳಿಗ್ಗೆ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿದ್ದಾಗ, ಮಾರಾಟಗಾರರು ಕ್ವಿಂಟಲ್‌ಗೆ ಕೇವಲ ₹ 500ಕ್ಕೆ ಕೇಳಿದರು’ ಎಂದು ಚಿತ್ರದುರ್ಗ ತಾಲ್ಲೂಕಿನ ರೈತ ಬೋರಯ್ಯ ಬೇಸರ ವ್ಯಕ್ತಪಡಿಸಿದರು.

ಗ್ರಾಮೀಣ ಭಾಗದ ಕೆಲ ಹೊಲಗಳಲ್ಲಿ ಈರುಳ್ಳಿ ಕೊಯ್ಲಿಗೆ ಬಂದಿದ್ದರೂ, ಕೀಳಲು ರೈತರು ಹಿಂದೇಟು ಹಾಕುತ್ತಿದ್ದಾರೆ. ವಿಪರೀತ ಶೀತದಿಂದಾಗಿ ಕೊಳೆತಿರುವ ಈರುಳ್ಳಿಯನ್ನು ಕಿತ್ತಿದರೆ, ಕೂಲಿಗಳಿಗೆ ನೀಡುವಷ್ಟು ಹಣವೂ ಅದರಿಂದ ಗಿಟ್ಟುವುದಿಲ್ಲ ಎಂಬುದು ರೈತರ ಅಳಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT