ಗುರುವಾರ , ಜುಲೈ 7, 2022
25 °C
ಚಿತ್ರದುರ್ಗದಲ್ಲಿ ಇಂಗ್ಲಿಷ್‌ ಮಾಧ್ಯಮಕ್ಕೆ ಹೆಚ್ಚಿದ ಬೇಡಿಕೆ

ಸರ್ಕಾರಿ ಶಾಲೆಗಳತ್ತ ಪಾಲಕರ ಚಿತ್ತ

ಕೆ.ಪಿ. ಓಂಕಾರಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ‘ನಿಮ್ಮ ಶಾಲೆಯಲ್ಲಿ ನನ್ನ ಮಗಳಿಗೊಂದು ಸೀಟು ಕೊಡಿ.. ನೀವು ಏನೇ ಪ್ರಶ್ನೆ ಕೇಳಿದರೂ ಹೇಳುತ್ತಾಳೆ...’ ಎನ್ನುತ್ತಾ ಸರ್ಕಾರಿ ಮಹಿಳಾ ಉದ್ಯೋಗಿ ಮಗುವಿನ ದಾಖಲೆ ಹಿಡಿದು ಶಾಲಾ ಮುಖ್ಯಶಿಕ್ಷಕರಿಗೆ ಮನವಿ ಮಾಡುತ್ತಿದ್ದ ದೃಶ್ಯಕ್ಕೆ ನಗರದ ವಿಪಿ ಬಡಾವಣೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸೋಮವಾರ ಸಾಕ್ಷಿಯಾಯಿತು.

ಶೈಕ್ಷಣಿಕ ವರ್ಷ ಪ್ರಾರಂಭಕ್ಕೂ ಮುನ್ನವೇ ಖಾಸಗಿ ಶಾಲೆಗಳ ಆವರಣದಲ್ಲಿ ಪಾಲಕರು ಸರತಿ ಸಾಲಿನಲ್ಲಿ ನಿಂತು ಮಕ್ಕಳನ್ನು ದಾಖಲಾತಿ ಮಾಡಿಸುವುದು ಸಾಮಾನ್ಯ. ಆದರೆ, ಕೊರೊನಾ ಬಳಿಕ ಶಾಲೆಗಳ ಚಿತ್ರಣ ಸಂಪೂರ್ಣ ಬದಲಾಗಿದ್ದು, ಸರ್ಕಾರಿ ಶಾಲೆಗಳ ಮುಂದೆ ಪಾಲಕರ ದಂಡು ಕಾಣುತ್ತಿದೆ.

2019–20ನೇ ಶೈಕ್ಷಣಿಕ ವರ್ಷದಲ್ಲಿ ಅಂದಿನ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಆದೇಶದಂತೆ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಆರಂಭಿಸಲಾಯಿತು. ಖಾಸಗಿ ಶಾಲೆಗಳ ಅಬ್ಬರದಲ್ಲಿ ನಗರದ ಶಾಲೆಗಳ ದಾಖಲಾತಿ ವಿಚಾರದಲ್ಲಿ ಕೆಲ ಶಿಕ್ಷಕರೇ ಅನುಮಾನ ವ್ಯಕ್ತಪಡಿಸಿದ್ದರು.

ಪ್ರಾರಂಭದ ವರ್ಷದಿಂದಲೇ ಶಾಲೆಗೆ ಸಿಕ್ಕ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ನಿರ್ಧರಿಸಿದ ಶಾಲಾ ಸಿಬ್ಬಂದಿ ಅಗತ್ಯ ಸೌಲಭ್ಯದಲ್ಲೇ ಖಾಸಗಿ ಶಾಲೆಗಳಂತೆ ತರಗತಿಗಳನ್ನು ಸಿದ್ಧಗೊಳಿಸಿ ಪ್ರವೇಶಾತಿ ಪ್ರಾರಂಭಿಸಿದರು. ಇದರ ಫಲವಾಗಿ ನಾಲ್ಕು ವರ್ಷದ ಹಿಂದೆ 22 ವಿದ್ಯಾರ್ಥಿಗಳು ಇಂಗ್ಲಿಷ್‌ ಮಾಧ್ಯಮಕ್ಕೆ ಪ್ರವೇಶ ಪಡೆದರು. ವರ್ಷದಿಂದ ವರ್ಷಕ್ಕೆ ಏರಿಕೆ ಕಂಡು 2021–22ರಲ್ಲಿ 30 ಮಕ್ಕಳು ದಾಖಲಾತಿ ಪಡೆದಿದ್ದರು.

ಶಾಲೆಯಲ್ಲಿ ಒಂದರಿಂದ ನಾಲ್ಕನೇ ತರಗತಿವರೆಗೂ ಈವರೆಗೂ ಒಟ್ಟು 92 ಮಕ್ಕಳಿದ್ದಾರೆ. ಒಂದನೇ ತರಗತಿ ಪ್ರವೇಶಕ್ಕೆ ಜುಲೈ 31ರವರೆಗೆ ಕಾಲಾವಕಾಶವಿರುವುದರಿಂದ ಈ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ.

ಇಂಗ್ಲಿಷ್‌ ಪಠ್ಯ ಬೋಧನೆಗೆ ಶಿಕ್ಷಕಿಯರು ವಿಶೇಷ ತರಬೇತಿ ಪಡೆದಿದ್ದು, ಭಾಷೆಯ ಮೇಲಿನ ಹಿಡಿತ, ಪ್ರಾವಿಣ್ಯ, ಕೌಶಲವನ್ನು ಸಾಧಿಸಿದ್ದು, ಕನ್ನಡ ಶಾಲೆಯಲ್ಲಿ ಮಕ್ಕಳು ಇಂಗ್ಲಿಷ್‌ನಲ್ಲೇ ಸಂವಹನ ನಡೆಸುತ್ತಾರೆ. ಈ ಎಲ್ಲ ಕಾರಣಕ್ಕೆ ಇದೀಗ ವಿಪಿ ಬಡಾವಣೆಯ ಶಾಲೆಗೆ ಪಾಲಕರಿಂದ ನಿರೀಕ್ಷೆಗೂ ಮೀರಿ ಸ್ಪಂದನ ದೊರೆತಿದೆ.

‘2022–23ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ದಾಖಲಾತಿ ಪ್ರಾರಂಭವಾದ ಕೆಲ ದಿನಕ್ಕೆ 1ನೇ ತರಗತಿಗೆ ಬಹುತೇಕ ಶೇ 75ರಷ್ಟು ಪ್ರವೇಶಾತಿ ಪೂರ್ಣವಾಗಿದೆ. ಒಂದು ತರಗತಿಗೆ ಮೂವತ್ತು ಮಕ್ಕಳನ್ನು ಮಾತ್ರ ದಾಖಲಾತಿ ಮಾಡಿಕೊಳ್ಳಲು ಅವಕಾಶವಿದೆ’ ಎನ್ನುತ್ತಾರೆ ವಿಪಿ ಬಡಾವಣೆಯ ಶಿಕ್ಷಕಿ ಸುಕನ್ಯಾ ಎಂ.ಜೆ.

ಒಂದನೇ ತರಗತಿ ಅಷ್ಟೇ ಅಲ್ಲದೇ ಎರಡು, ಮೂರು, ನಾಲ್ಕನೇ ತರಗತಿಗೂ ಖಾಸಗಿ ಶಾಲೆಗಳಿಂದ ಹೊರ ಬಂದು ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದಾರೆ. ವಿಪಿ ಬಡಾವಣೆ ಶಾಲೆಯಂತೆ ಜಿಲ್ಲೆಯ ಉಳಿದ 22 ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳಲ್ಲೂ ವರ್ಷದಿಂದ ವರ್ಷಕ್ಕೆ ದಾಖಲಾತಿ ಏರಿಕೆ ಕಾಣುತ್ತಿದೆ.

ಸರ್ಕಾರಿ ಶಾಲೆಯೇ ಉತ್ತಮ

ಸರ್ಕಾರಿ ಶಾಲೆಯ ಇಂಗ್ಲಿಷ್‌ ಮಾಧ್ಯಮಕ್ಕೆ ಸರ್ಕಾರಿ ನೌಕರರು ಆಸಕ್ತಿ ತೋರಿದ್ದಾರೆ.

‘ಸಂತೆ ಪೇಟೆಯ ಸರ್ಕಾರಿ ಶಾಲೆಯಲ್ಲಿ ಮಗಳು ಮೀನಾಕ್ಷಿ ಶ್ರೀಸಾಯಿ ಒಂದನೇ ತರಗತಿ ಕಲಿತಿದ್ದಾಳೆ. ಆ ಶಾಲೆಯಲ್ಲಿ ಇಂಗ್ಲಿಷ್‌ ಮಾಧ್ಯಮ ಇಲ್ಲ ಎಂಬ ಕಾರಣಕ್ಕೆ ವಿಪಿ ಬಡಾವಣೆಗೆ ವರ್ಗಾವಣೆ ತಂದಿದ್ದೇವೆ. ನನ್ನ ನಿರ್ಧಾರಕ್ಕೆ ಮನೆಯಲ್ಲಿ ಪ್ರಾರಂಭದಲ್ಲಿ ವಿರೋಧ ವ್ಯಕ್ತಪಡಿಸಿದರು. ಸರ್ಕಾರಿ ಶಾಲೆ ಹಾಗೂ ಶಿಕ್ಷಕರ ಶೈಕ್ಷಣಿಕ ಹಿನ್ನೆಲೆ ವಿವರಿಸಿದಾಗ ಸಮ್ಮತಿಸಿದರು. ಸರ್ಕಾರ ನಗರ ಕೇಂದ್ರದ ಎಲ್ಲ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಪ್ರಾರಂಭಿಸಬೇಕು’ ಎನ್ನುತ್ತಾರೆ ಚಿತ್ರದುರ್ಗದ ಬಿಸಿಎಂ ವಿದ್ಯಾರ್ಥಿನಿಲಯದ ನಿಲಯಪಾಲಕಿ ಪಿ.ಲಾವಣ್ಯ.

***

ಜಿಲ್ಲೆಯ ಸರ್ಕಾರಿ ಶಾಲೆಗಳ ಇಂಗ್ಲಿಷ್‌ ಮಾಧ್ಯಮಕ್ಕೆ ಪ್ರವೇಶಾತಿ ಉತ್ತಮವಾಗಿದ್ದು, ಬಹುತೇಕ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುವ ಕಾರಣಕ್ಕೆ ಹೆಚ್ಚಿನ ತರಗತಿಗೆ ಬೇಡಿಕೆ ಬರುತ್ತಿದೆ.
–ಕೆ.ರವಿಶಂಕರ್ ರೆಡ್ಡಿ, ಉಪನಿರ್ದೇಶಕ, ಸಾರ್ವಜನಿಕ ಶಿಕ್ಷಣ ಇಲಾಖೆ

ಶಾಲಾ ಪ್ರಾರಂಭದಿಂದಲೂ ಇಂಗ್ಲಿಷ್‌ ಮಾಧ್ಯಮ ಪ್ರವೇಶಕ್ಕೆ ಬೇಡಿಕೆ ಹೆಚ್ಚಾಗಿದೆ. ಖಾಸಗಿ ಶಾಲೆಗಳಿಂದ ಬಂದು ದಾಖಲಾತಿ ಪಡೆಯುತ್ತಿದ್ದಾರೆ. ಹೆಚ್ಚಿನ ಪ್ರವೇಶಾತಿಗೆ ಅವಕಾಶ ಕಲ್ಪಿಸಲು ಅನುಮತಿ ಕೇಳಲಾಗಿದೆ.
–ವೈ.ವೆಂಕಟಪತಿ, ಮುಖ್ಯಶಿಕ್ಷಕ, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು