ಭಾನುವಾರ, ಏಪ್ರಿಲ್ 5, 2020
19 °C
ಐಮಂಗಲ ಪೊಲೀಸ್‌ ತರಬೇತಿ ಶಾಲೆಯ ಪ್ರಶಿಕ್ಷಣಾರ್ಥಿಗಳು

ಕಾನ್‌ಸ್ಟೆಬಲ್‌ಗಳಾದ ಬಿಇ, ಎಂಬಿಎ ಪದವೀಧರರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಬಿಇ ಹಾಗೂ ಎಂಬಿಎ ಪದವೀಧರರು ಪೊಲೀಸ್‌ ಕಾನ್‌ಸ್ಟೆಬಲ್‌ಗಳಾಗಿ ಹೊರಹೊಮ್ಮುತ್ತಿದ್ದಾರೆ. ಎಂಟು ತಿಂಗಳ ಬುನಾದಿ ತರಬೇತಿ ಪೂರ್ಣಗೊಳಿಸಿ ನಗರ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯಲ್ಲಿ ಸೇವೆ ಸಲ್ಲಿಸಲು ಸಜ್ಜಾಗಿದ್ದಾರೆ.

ಎಂಜಿನಿಯರಿಂಗ್‌ ಪದವೀಧರರಾದ ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಗೌರೀಶ್‌ ನಾಯ್ಕ ಹಾಗೂ ಎಂಬಿಎ ಪದವೀಧರರಾದ ಚನ್ನಪಟ್ಟಣ ತಾಲ್ಲೂಕಿನ ಗೋವಿಂದನಹಳ್ಳಿಯ ಜಿ.ಆರ್‌.ಮಹೇಂದ್ರ ಕಾನ್‌ಸ್ಟೆಬಲ್‌ ತರಬೇತಿ ಪಡೆದವರು. ಬೆಂಗಳೂರು ನಗರ ವಿಭಾಗದ ಸಶಸ್ತ್ರ ಪೊಲೀಸ್‌ ಪಡೆಗೆ 2019ರಲ್ಲಿ ನಡೆದ ನೇಮಕಾತಿಯಲ್ಲಿ ಇವರು ಆಯ್ಕೆಯಾಗಿದ್ದರು.

ಖಾಕಿ ಸಮವಸ್ತ್ರದ ಪ್ರೀತಿ: ಗೌರೀಶ್‌ ನಾಯ್ಕ್‌ ಅವರಿಗೆ ಖಾಕಿ ಸಮವಸ್ತ್ರದ ಮೇಲೆ ಹೆಚ್ಚು ಪ್ರೀತಿ. 2006ರಲ್ಲಿ ಪದವಿ ಪಡೆದು ಹೊರಬಂದಿರುವ ಇವರು ಖಾಸಗಿ ಕಂಪನಿಯಲ್ಲಿ ಹಲವು ವರ್ಷ ಕೆಲಸ ಮಾಡಿದ್ದಾರೆ. ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕಾತಿಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಿದ್ದಾರೆ. ಕಾನ್‌ಸ್ಟೆಬಲ್‌ ವೃತ್ತಿಯ ಮೂಲಕ ಪೊಲೀಸ್‌ ಇಲಾಖೆಗೆ ಪದಾರ್ಪಣೆ ಮಾಡಿದ್ದಾರೆ.

‘ಚಿಕ್ಕಂದಿನಿಂದಲೂ ಪೊಲೀಸ್‌ ವೃತ್ತಿಯ ಮೇಲೆ ವ್ಯಾಮೋಹ ಹೆಚ್ಚು. ಖಾಕಿ ಸಮವಸ್ತ್ರ ಧರಿಸಬೇಕು ಎಂಬ ಹಂಬಲವಿತ್ತು. ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಎಸ್‌ಐ ಹುದ್ದೆ ನೇಮಕಾತಿಗೆ ಬಯಸಿದ್ದೆ. ಕಾನ್‌ಸ್ಟೆಬಲ್‌ ಆಗಿದ್ದರೂ ಎಸ್‌ಐ ಹುದ್ದೆಯ ಮೇಲೆಯೇ ಹೆಚ್ಚು ಆಸಕ್ತಿ ಇದೆ. ಇದಕ್ಕೆ ತಯಾರಿ ನಡೆಸುತ್ತಿದ್ದೇನೆ’ ಎನ್ನುತ್ತಾರೆ ಗೌರೀಶ್‌.

ಕುಂದಾಪುರದ ಮೂಡಲಕಟ್ಟೆ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ‘ಎಲೆಕ್ಟ್ರಾನಿಕ್ಸ್‌ ಅಂಡ್‌ ಕಮ್ಯುನಿಕೇಷನ್‌’ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. ತಂದೆ, ತಾಯಿ ಹಾಗೂ ಸಹೋದರ ಇರುವ ಸಣ್ಣ ಕುಟುಂಬಕ್ಕೆ ಒಂದು ಎಕರೆ ಕೃಷಿ ಭೂಮಿ ಇದೆ. ಐಟಿಐ ಪೂರೈಸಿದ ಸಹೋದರ ಗುತ್ತಿಗೆ ಆಧಾರದ ಮೇರೆಗೆ ಕೆಇಬಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

‘ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಭದ್ರತೆ ಇರಲಿಲ್ಲ. ಪದವಿ ಪೂರ್ಣಗೊಳಿಸಿ ಉದ್ಯೋಗಕ್ಕೆ ಸೇರಿದಾಗ ವಾಸ್ತವದ ಅರಿವಾಯಿತು. ಹೀಗಾಗಿ, ಸರ್ಕಾರಿ ಉದ್ಯೋಗ ಪಡೆಯಲು ನಿಶ್ಚಯಿಸಿದೆ. ಹಲವು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಿದೆ. ಉನ್ನತ ಹುದ್ದೆಗೆ ಏರುವ ಆಕಾಂಕ್ಷೆ ಇದೆ’ ಎನ್ನುತ್ತಾರೆ ಗೌರೀಶ್‌.

ಉದ್ಯೋಗ ಭದ್ರತೆ: ಚನ್ನಪಟ್ಟಣ ತಾಲ್ಲೂಕಿನ ಜಿ.ಆರ್‌.ಮಹೇಂದ್ರ ಅವರದು ಪುಟ್ಟ ಕುಟುಂಬ. ಬೆಂಗಳೂರಿನ ಆರ್‌.ಸಿ ಕಾಲೇಜಿನಲ್ಲಿ 2015ರಲ್ಲಿ ಎಂಬಿಎ ಪದವಿ ಪೂರೈಸಿದ್ದಾರೆ. ಖಾಸಗಿ ಫೈನಾನ್ಸ್‌ ಕಂಪನಿಯೊಂದರಲ್ಲಿ ಕೆಲಸ ಮಾಡಿದ ಅನುಭವ ಇವರಿಗಿದೆ. ಹಣಕಾಸು ವ್ಯವಹಾರ, ಗ್ರಾಹಕರೊಂದಿಗೆ ನಡೆದ ಸಂಘರ್ಷ ಅವರನ್ನು ಸರ್ಕಾರಿ ಉದ್ಯೋಗದತ್ತ ಕರೆತಂದಿದೆ.

‘ಫೈನಾನ್ಸ್‌ ಕಂಪನಿಯಲ್ಲಿ ಮಾಡುತ್ತಿದ್ದ ಉದ್ಯೋಗದ ಬಗ್ಗೆ ತೃಪ್ತಿ ಇರಲಿಲ್ಲ. ಖಾಸಗಿ ಫೈನಾನ್ಸ್‌ ಕಂಪನಿಗಳಲ್ಲಿ ಉದ್ಯೋಗ ಭದ್ರತೆಯೂ ಇರಲಿಲ್ಲ. ಗ್ರಾಹಕರೊಂದಿಗೆ ವ್ಯವಹರಿಸಿ ಸಾಕಾಗಿತ್ತು. ಅಲ್ಲದೇ, ಬಹುತೇಕ ಕೈಗಾರಿಕೆಗಳು ಬಾಗಿಲು ಮುಚ್ಚತೊಡಗಿದ್ದವು. ಹೀಗಾಗಿ, ಬೇರೆ ಉದ್ಯೋಗದ ಬಗ್ಗೆ ಆಲೋಚನೆ ಮಾಡುವುದು ಅನಿವಾರ್ಯವಾಗಿತ್ತು. ಪೊಲೀಸ್‌ ಇಲಾಖೆ ಸೇರಿರುವುದಕ್ಕೆ ಕೀಳರಿಮೆ ಇಲ್ಲ’ ಎನ್ನುತ್ತಾರೆ ಮಹೇಂದ್ರ.

6ಕ್ಕೆ ನಿರ್ಗಮನ ಪಥಸಂಚಲನ: ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ (ಕೆಎಸ್ಐಎಸ್‌ಎಫ್‌) ಹಾಗೂ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯ 363 ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಮಾರ್ಚ್‌ 6ರಂದು ನಡೆಯಲಿದೆ.

ಕೆಎಸ್‌ಐಎಸ್‌ಎಫ್‌ನ 95 ಹಾಗೂ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯ 258 ಪ್ರಶಿಕ್ಷಣಾರ್ಥಿಗಳು ತರಬೇತಿ ಪಡೆದಿದ್ದಾರೆ. ಎಂಎ, ಎಂಕಾಂ, ಎಂಎಸ್ಸಿ ಸೇರಿ ಸ್ನಾತಕೋತ್ತರ ಪದವಿ ಪಡೆದ 42, ಬಿಎಸ್ಸಿ, ಬಿಕಾಂ, ಬಿಎ ಪದವೀಧರರು 205, ಬಿಬಿಎಂ, ಬಿಸಿಎ, ಬಿಬಿಎ ಪದವಿ ಪಡೆದವರು 8, ಬಿಇಡಿ, ಡಿಇಡಿ ಪದವಿ ಪಡೆದ 30, ಪಿಯುಸಿ ಶಿಕ್ಷಣ ಪಡೆದ 51 ಪ್ರಶಿಕ್ಷಣಾರ್ಥಿಗಳು ಇದ್ದಾರೆ.

‘ವಿಮಾನ ನಿಲ್ದಾಣ ಭದ್ರತೆ, ವಿದೇಶಿ ಪ್ರಜೆಗಳ ತಪಾಸಣೆ, ವಿಐಪಿ ಭದ್ರತೆ ಸೇರಿ ಹಲವು ರೀತಿಯ ತರಬೇತಿ ನೀಡಲಾಗಿದೆ. ಈವರೆಗೆ ಇಲ್ಲಿ 1,680 ಪ್ರಶಿಕ್ಷಣಾರ್ಥಿಗಳು ತರಬೇತಿ ಪಡೆದಿದ್ದಾರೆ. ಕವಾಯತು ಮೈದಾನದ ವಿಸ್ತರಣೆ ಹಾಗೂ ಫೈರಿಂಗ್‌ ರೇಂಜ್‌ ಸ್ಥಾಪನೆಗೆ ಕೋರಿಕೆ ಸಲ್ಲಿಸಲಾಗಿದೆ’ ಎಂದು ಪೊಲೀಸ್‌ ತರಬೇತಿ ಶಾಲೆಯ ಪ್ರಾಂಶುಪಾಲ ಪಿ.ಪಾಪಣ್ಣ ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು