ಬುಧವಾರ, ಮೇ 25, 2022
30 °C
ನೋಡುಗರ ಕಣ್ಮಣ ಸೆಳೆಯುವ ಕಿಚ್ಚು ಹಾಯಿಸುವ ಕಾರ್ಯಕ್ರಮ

ಗ್ರಾಮೀಣ ಸೊಗಡಿನ ಎತ್ತಿನ ಹಬ್ಬ

ತಿಮ್ಮಯ್ಯ ಜೆ. ಪರಶುರಾಂಪುರ Updated:

ಅಕ್ಷರ ಗಾತ್ರ : | |

ಪರಶುರಾಂಪುರ: ಹೋಬಳಿಯ ಬಹುತೇಕ ಹಳ್ಳಿಗಳಲ್ಲಿ ದೀಪಾಪಳಿಯ ನಂತರ ಗ್ರಾಮೀಣ ಸೊಗಡಿನ ಎತ್ತಿನ ಹಬ್ಬ ಆಚರಿಸುವುದು ಸಂಪ್ರದಾಯ. ದೀಪಾವಳಿ ಅಮಾವಾಸ್ಯೆಯಾದ ಐದು, ಏಳು, ಒಂಬತ್ತು ಹೀಗೆ ಹುಣ್ಣಿಮೆಯವರೆಗೆ ಬೆಸ ಸಂಖ್ಯೆ ಬರುವ ಸೋಮವಾರ, ಬುಧವಾರದಂದು ಈ ಭಾಗದಲ್ಲಿ ಎತ್ತಿನ ಹಬ್ಬ ಆಚರಿಸುವುದು ವಾಡಿಕೆ.

ಅ ಊರಿನ ತಳವಾರನಾಯಕ ಎತ್ತಿನ ಹಬ್ಬದ ದಿನಾಂಕವನ್ನು ನಿಗದಿ ಮಾಡಿ ಆದಾದ ಮೇಲೆ ಊರ ಹೊರವಲಯದಲ್ಲಿ ವಿಶಾಲವಾದ ಮತ್ತು ಎತ್ತರವಾದ ಸ್ಥಳದಲ್ಲಿ ಊರಿನವರೆಲ್ಲಾ ಸೇರಿಕೊಂಡು ಈಡನ್ನು ಹಾಕುತ್ತಾರೆ. ಆ ಈಡಿಗೆ ಎತ್ತಿನ ಹಬ್ಬದ ದಿನ ಬೆಂಕಿ ಹಚ್ಚಿ ಅಲಂಕಾರ ಮಾಡಿದ ಎತ್ತುಗಳನ್ನು ಅದರ ಸುತ್ತು ಪ್ರದಕ್ಷಿಣೆ ಹಾಕುತ್ತಾರೆ.

ಹಬ್ಬ ನಿಗದಿಯಾದ ಮೂರು ದಿನಗಳ ಹಿಂದಿನಿಂದ ಹಬ್ಬದವರೆಗೆ ಪ್ರತಿಮನೆಯ ಅಂಗಳಕ್ಕೆ ತಂಗಟೆ ಹೂ ಚೆಲ್ಲಿ ಪ್ರತಿ ಮನೆಯಿಂದ ಅಕ್ಕಿ, ರಾಗಿಹಿಟ್ಟು ಸಂಗ್ರಹಿಸಿ ಹಬ್ಬದ ದಿನ ಅಲ್ಲಿರುವ ಲಕ್ಕಮ್ಮ ದೇವಿಗೆ ರಾಗಿಮುದ್ದೆ, ಬದನೆಕಾಯಿ ಬಜ್ಜಿಯ ನೈವೇದ್ಯ ಮಾಡಿ ಪೂಜೆಗೆ ಇಟ್ಟು ಪೂಜೆ ಸಲ್ಲಿಸುವುದು ವಿಶೇಷ.

ಎತ್ತುಗಳಿಗೆ ವಿಶೇಷ ಅಲಂಕಾರ: ಎತ್ತಿನ ಹಬ್ಬದ ದಿನ ಎತ್ತುಗಳನ್ನು ಮೈತೊಳೆದು ಅವುಗಳಿಗೆ ವಿವಿಧ ರೀತಿಯ ಹೂಗಳು, ಕುಚ್ಚು, ಕೊಡಣಸು, ಜೂಲುಗಳನ್ನು ಹಾಕಿ ಅಲಂಕರಿಸುತ್ತಾರೆ. ಆ ದಿನ ಎತ್ತುಗಳಿಗೆ ಬಿಡುವು.

ಶೃಂಗಾರ ಮಾಡಿದ ಎತ್ತುಗಳನ್ನು ಊರಿನ ಪ್ರಮುಖ ಬೀದಿಗಳಲ್ಲಿ ಮೆರೆವಣಿಗೆ ಮಾಡಿ ಊರ ಹೊರವಲಯದಲ್ಲಿ ಹಾಕಿದ್ದ ಈಡನ್ನು ಪ್ರದಕ್ಷಿಣೆ ಹಾಕಿಸಿ ನಂತರ ಅವರವರ ಮನೆಗಳಿಗೆ ತೆರಳುತ್ತಾರೆ. ಅಲ್ಲಿ ಮತ್ತೈದೆಯರು ಆರತಿ ಎತ್ತಿ ಜಾನಪದ ಹಾಡುಗಳನ್ನು ಹಾಡುವ ಮೂಲಕ ಸ್ವಾಗತಿಸುತ್ತಾರೆ. ಜೊತೆಗೆ ಎತ್ತುಗಳಿಗೆ ಮನೆಯಲ್ಲಿ ಮಾಡಿದ ಹಬ್ಬದ ಅಡುಗೆಗಳನ್ನು ಉಣಬಡಿಸಿದ ನಂತರವೇ ಮನೆ ಮಂದಿಯಲ್ಲಾ ಕುಳಿತು ಊಟ ಮಾಡುತ್ತಾರೆ.

ಎತ್ತುಗಳ ಕಿಚ್ಚು ಹಾಯಿಸುವುದು: ಊರಿನ ಹೊರವಲಯದಲ್ಲಿ ಹಾಕಿರುವ ಈಡನ್ನು ಎತ್ತಿನ ಹಬ್ಬದ ದಿನ ಊರಿನ ತಳವಾರನಾಯಕ ಪೂಜೆ ಸಲ್ಲಿಸಿದ ಮೇಲೆ ಅದಕ್ಕೆ ಬೆಂಕಿ ಹಚ್ಚುತ್ತಾರೆ. ಆಗ ಎಲ್ಲಾ ಎತ್ತುಗಳನ್ನು ಬೆಂಕಿ ಇಟ್ಟಿರುವ ಈಡಿನ ಸುತ್ತ ಪ್ರದಕ್ಷಿಣೆ ಹಾಕಿಸಿ ಕಿಚ್ಚು ಹಾಯಿಸುವ ಮೂಲಕ ಮನೆಗಳಿಗೆ ತೆರಳುವುದು ಹಬ್ಬದ ವಿಶೇಷ.

ಎತ್ತಿನ ಹಬ್ಬ ಎಂದರೆ ರೈತರಿಗೆ ಇನ್ನಿಲ್ಲದ ಸಂತೋಷ. ದಿನವಿಡೀ ಎತ್ತುಗಳನ್ನು ಅಲಂಕಾರ ಮಾಡಿ ಅವುಗಳಿಗೆ ಕಿಚ್ಚು ಹಾಯಿಸಿ ನಂತರ ಹಬ್ಬದ ಊಟ ಮಾಡುವುದು ಹಿಂದಿನಿಂದ ಬಂದಿರುವ ವಾಡಿಕೆ.
ರಘು, ಚೌಳೂರು ಗ್ರಾಮಸ್ಥ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು