ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀಮಸಮುದ್ರ: ಬಡವರು ಬದುಕದಂತ ಸ್ಥಿತಿ ನಿರ್ಮಾಣ

ಸರ್ಕಾರದ ವಿರುದ್ಧ ಕಾಂಗ್ರೆಸ್‌ ಆರೋಪ, ಇಂಧನ ದರ ಏರಿಕೆ ವಿರುದ್ಧ ಆಕ್ರೋಶ
Last Updated 15 ಜೂನ್ 2021, 13:42 IST
ಅಕ್ಷರ ಗಾತ್ರ

ಭೀಮಸಮುದ್ರ (ಚಿತ್ರದುರ್ಗ): ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ಜಿಲ್ಲಾ ಘಟಕ ಹಾಗೂ ಕೆಪಿಸಿಸಿ ಅಸಂಘಟಿತ ಕಾರ್ಮಿಕರ ವಿಭಾಗದಿಂದ ತಾಲ್ಲೂಕಿನ ಭೀಮಸಮುದ್ರದ ಪೆಟ್ರೋಲ್‌ ಬಂಕ್‌ ಮುಂಭಾಗ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ‘ನೂರು ನಾಟೌಟ್‌ ಕೇಂದ್ರ ಸರ್ಕಾರದ ಸಾಧನೆ’ ಎಂದು ಕಾರ್ಯಕರ್ತರು ಘೋಷಣೆ ಕೂಗಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಡಬಲ್ ಇಂಜಿನ್‌ನ ಕೇಂದ್ರ ಸರ್ಕಾರ ಅಧಿಕಾರದಲ್ಲಿ ಹೀಗೆ ಮುಂದುವರೆದರೆ ಪೆಟ್ರೋಲ್‌ ಮತ್ತು ಡೀಸೆಲ್‌ ಡಬಲ್ ಸೆಂಚುರಿ ಭಾರಿಸಿದರೂ ಅಚ್ಚರಿ ಇಲ್ಲ. ಇವರ ಅವಧಿಯಲ್ಲಿ ಬೆಲೆ ಏರಿಕೆಯಿಂದಾಗಿ ಈಗಾಗಲೇ ಜನತೆ ತತ್ತರಿಸಿ ಹೋಗಿದ್ದಾರೆ. ಸಾಮಾನ್ಯ ಜನರ ಬಗ್ಗೆ ಕಿಂಚಿತ್ತು ಕಾಳಜಿಯೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ದೇಶದ ಇತಿಹಾಸದಲ್ಲೇ ಪೆಟ್ರೋಲ್ ಬೆಲೆ ನೂರರ ಗಡಿ ದಾಟಿರಲಿಲ್ಲ. ಇದು ಪ್ರಧಾನಿ ಅವರ ಸಾಧನೆಯಾಗಿದ್ದು, ಬಡವರು ಬದುಕದಂತ ಸ್ಥಿತಿ ನಿರ್ಮಿಸಿದ್ದಾರೆ’ ಎಂದು ಕೆಪಿಸಿಸಿ ಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಜಿ.ಎಸ್. ಮಂಜುನಾಥ್ ವಾಗ್ದಾಳಿ ನಡೆಸಿದರು.

‘ಭಾರತವನ್ನು ವಿಶ್ವದಲ್ಲೇ ಸರ್ವಶ್ರೇಷ್ಠ ದೇಶವನ್ನಾಗಿ ಮಾಡುತ್ತೇನೆ. ಪ್ರತಿಯೊಬ್ಬ ಪ್ರಜೆಗೂ ಉತ್ತಮ ದಿನಗಳು ಬರಲಿವೆ ಎಂಬುದಾಗಿ ಹೇಳಿ ಮೋದಿ ಅವರು ಅಧಿಕಾರಕ್ಕೆ ಬಂದು ಏಳು ವರ್ಷಗಳಾಗಿವೆ. ಯಾವ ಒಳ್ಳೆಯ ದಿನಗಳು ಈವರೆಗೆ ಬಂದಿಲ್ಲ. ಎಲ್ಲ ಕ್ಷೇತ್ರಗಳಲ್ಲೂ ಹಿನ್ನಡೆ ಉಂಟಾಗುತ್ತಿದೆ. ಇಂಧನ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳು, ಆಹಾರ ಧಾನ್ಯಗಳ ಬೆಲೆ ಹೆಚ್ಚುತ್ತವೆ ಎಂಬುದು ತಿಳಿದಿದ್ದರೂ ಅವೈಜ್ಞಾನಿಕವಾಗಿ ಏರಿಕೆ ಮಾಡಿ ಜನರ ಮೇಲೆ ಸವಾರಿ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಮುಖಂಡರಾದ ಹನುಮಲಿ ಷಣ್ಮುಖಪ್ಪ, ಭೀಮಸಮುದ್ರದ ಜಿ.ಎಸ್‌.ಮಂಜುನಾಥ್‌, ಎನ್‌.ಡಿ.ಕುಮಾರ್ ಇದ್ದರು. ಚಿತ್ರದುರ್ಗ ನಗರದ ಧವಳಗಿರಿ ಬಡಾವಣೆಯ ಪೆಟ್ರೋಲ್‌ ಬಂಕ್‌ ಮುಂಭಾಗ ಮುಖಂಡ ಬಿ.ಟಿ.ಜಗದೀಶ್‌ ನೇತೃತ್ವದಲ್ಲಿ ಹಾಗೂ ಚಳ್ಳಕೆರೆ ಗೇಟಿನ ಮಾಗನೂರು ಪೆಟ್ರೋಲ್‌ ಬಂಕ್‌ ಎದುರು ಕಾಂಗ್ರೆಸ್‌ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ, ಕಾರ್ಯದರ್ಶಿ ಕೆ.ಪಿ.ಸಂಪತ್‌ಕುಮಾರ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT