ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲೆಮಾರಿ ನಿಗಮಕ್ಕೆ ಸಿಕ್ಕಿಲ್ಲ ಬಿಡಿಗಾಸು: ರವೀಂದ್ರ ಶೆಟ್ಟಿ ಬೇಸರ

ರಾಜ್ಯ ಬಜೆಟ್‌ಗೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ
Last Updated 17 ಮಾರ್ಚ್ 2021, 13:47 IST
ಅಕ್ಷರ ಗಾತ್ರ

ಚಿತ್ರದುರ್ಗ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮಂಡಿಸಿದ 2021–22ನೇ ಸಾಲಿನ ಬಜೆಟ್‌ನಲ್ಲಿ ಅಲೆಮಾರಿ ಹಾಗೂ ಅರೆ ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ ಬಿಡಿಗಾಸು ಕೂಡ ಸಿಕ್ಕಿಲ್ಲ ಎಂದು ನಿಗಮದ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಬೇಸರ ವ್ಯಕ್ತಪಡಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದಲಿತ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿಗಳಿಗೆ ಇತ್ತೀಚೆಗೆ ₹ 149 ಕೋಟಿ ಹಂಚಿಕೆ ಮಾಡಲಾಗಿದೆ. ಇದರಲ್ಲಿ ಅನೇಕ ನಿಗಮಗಳಿಗೆ ಅನುದಾನ ಒದಗಿಸಲಾಗಿದೆ. ಆದರೆ, ಅಲೆಮಾರಿ ಸಮುದಾಯದ ಏಳಿಗೆಗೆ ಸ್ಥಾಪಿಸಿದ ನಿಗಮಕ್ಕೆ ಅನುದಾನ ನೀಡದಿರುವುದು ಏಕೆ’ ಎಂದು ಪ್ರಶ್ನಿಸಿದರು.

‘2019–20ನೇ ಆರ್ಥಿಕ ವರ್ಷದಲ್ಲಿ ₹ 25 ಕೋಟಿ ಅನುದಾನ ಸಿಕ್ಕಿತ್ತು. 2020–21ರಲ್ಲಿ ₹ 29 ಲಕ್ಷ ಷೇರುಗಳನ್ನು ಮಾತ್ರ ನೀಡಲಾಯಿತು. ಪ್ರಸಕ್ತ ವರ್ಷ ಕನಿಷ್ಠ ₹ 250 ಕೋಟಿ ಅನುದಾನ ನೀಡಬೇಕು ಎಂದು ಬಜೆಟ್‌ ಪೂರ್ವದಲ್ಲಿ ಮನವಿ ಸಲ್ಲಿಸಿದ್ದೆ. ಪೂರಕ ಬಜೆಟ್‌ನಲ್ಲಿ ಹಣ ನೀಡುವಂತೆ ಕೋರಿಕೆ ಸಲ್ಲಿಸಲಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ಡೇರಿ ಮುಕ್ತ ಗುರಿ:ಅಲೆಮಾರಿ, ಅರೆ ಅಲೆಮಾರಿ ಜನಾಂಗದಲ್ಲಿ 46 ಜಾತಿಗಳಿವೆ. ಗೊಲ್ಲ, ಜೋಗಿ, ಹೆಳವ, ದೊಂಬಿದಾಸ, ಬುಡಬುಡಕಿ ಮತ್ತು ಗೋಸಾಯಿ ಜನಾಂಗದವರು ಜಿಲ್ಲೆಯಲ್ಲಿದ್ದಾರೆ. ಈ ಪೈಕಿ ಗೊಲ್ಲ ಜನಾಂಗದವರ ಸಂಖ್ಯೆಯೇ ಹೆಚ್ಚಾಗಿದೆ. ಅರ್ಹ ಫಲಾನುಭವಿಗಳನ್ನು ಗುರುತಿಸಿ ಸಾಲ ಸೌಲಭ್ಯ ಒದಗಿಸಲಾಗುತ್ತದೆ ಎಂದರು.

ಅಲೆಮಾರಿ ಜನಾಂಗ ಹೆಚ್ಚಾಗಿ ಡೇರಿ, ಗುಡಿಸಲುಗಳಲ್ಲಿ ವಾಸ ಮಾಡುತ್ತಿದ್ದಾರೆ. ಸ್ವಂತ ಸೂರು, ನಿವೇಶನದ ಕೊರತೆ ಅವರನ್ನು ಕಾಡುತ್ತಿದೆ. ಅಲೆಮಾರಿ ಸಮುದಾಯಕ್ಕೆ ವಸತಿ ಸೌಲಭ್ಯವನ್ನು ಕಲ್ಪಿಸಿ ಡೇರಿ (ಟೆಂಟ್) ಮುಕ್ತ ಕರ್ನಾಟಕ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ. ಅಲೆಮಾರಿ ಸಮುದಾಯದ ಆಶ್ರಯ ಕಾಲೊನಿ ನಿರ್ಮಿಸುವ ಯೋಜನೆ ಇದೆ’ ಎಂದು ಹೇಳಿದರು.

ಮಾದರಿ ಗ್ರಾಮಕ್ಕೆ ಸಿದ್ಧತೆ:ದಾವಣಗೆರೆ ಜಿಲ್ಲೆಯ ಬಂಗಾರಕ್ಕನಗುಡ್ಡದಲ್ಲಿ ಅಲೆಮಾರಿ ಸಮುದಾಯ ಹೆಚ್ಚಾಗಿ ನೆಲೆ ಕಂಡಿದೆ. ಇದನ್ನು ಮಾದರಿ ಗ್ರಾಮವನ್ನಾರಿ ರೂಪಿಸುವ ಆಲೋಚನೆ ಇದೆ. ಹೀಗಾಗಿ, ಇದೇ ತಿಂಗಳು ಸಮಾವೇಶವೊಂದನ್ನು ಅಲ್ಲಿ ಆಯೋಜಿಸುವ ಬಗ್ಗೆ ತೀರ್ಮಾನಿಸಲಾಗಿದೆ. ಶೀಘ್ರದಲ್ಲೇ ದಿನಾಂಕ ನಿಗದಿ ಮಾಡಲಾಗುವುದು. ಅಲೆಮಾರಿ ಸಮುದಾಯದ ಕಲೆ, ಸಂಸ್ಕೃತಿ ಉಳಿಸಲು ಪ್ರಯತ್ನಿಸಲಾಗುವುದು ಎಂದರು.

ನಿಗಮದ ಜಿಲ್ಲಾ ವ್ಯವಸ್ಥಾಪಕ ಎನ್.ಆರ್.ಶೇಖರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮಹಲಿಂಗಪ್ಪ, ಮುಖಂಡರಾದ ಪ್ರತಾಪ್ ಜೋಗಿ ಇದ್ದರು.

ಅಲೆಮಾರಿ ಪಟ್ಟಿಗೆ ಕೋರಿಕೆ

ಕಾಡುಗೊಲ್ಲ ಸಮುದಾಯವನ್ನು ಜಾತಿ ಪಟ್ಟಿಗೆ ಸೇರ್ಪಡೆ ಮಾಡಿದ್ದು, ಅಲೆಮಾರಿ ಪಟ್ಟಿಗೂ ಸೇರಿಸಬೇಕು ಎಂದು ಕಾಡುಗೊಲ್ಲ ಕ್ಷೇಮಾಭಿವೃದ್ಧಿ ಸಂಘವು ಮನವಿ ಮಾಡಿತು.

‘ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ವಸತಿ ಯೋಜನೆಯ ಫಲಾನುಭವಿಗಳಿಗೆ ₹ 1.2 ಲಕ್ಷ ಸಹಾಯಧನ ನೀಡಲಾಗುತ್ತಿದೆ. ಮನೆಯ ತಳಪಾಯ ಹಾಕಲು ಕೂಡ ಈ ಹಣ ಸಾಕಾಗುವುದಿಲ್ಲ. ಎಲ್ಲ ನಿಗಮದ ಫಲಾನುಭವಿಗಳಿಗೂ ಏಕರೂಪದ ಸಹಾಯಧನ ನೀಡಬೇಕು’ ಎಂದು ಸಂಘದ ಅಧ್ಯಕ್ಷ ಸಿ.ಶಿವು ಯಾದವ್‌ ಅವರು ರವೀಂದ್ರ ಶೇಟ್ಟಿ ಅವರಿಗೆ ಕೋರಿಕೆ ಸಲ್ಲಿಸಿದರು.

***

ಅಲೆಮಾರಿ ಸಮುದಾಯ ಮೂಲಸೌಲಭ್ಯ ವಂಚಿತವಾಗಿದೆ. ಬಹುತೇಕರು ಶೋಚನೀಯವಾಗಿ ಬದುಕುತ್ತಿದ್ದಾರೆ. ಸ್ವಾತಂತ್ರ್ಯ ಸಿಕ್ಕು 75 ವರ್ಷವಾದರೂ ಶೋಷಿತ ಸಮುದಾಯದ ಸ್ಥಿತಿ ಬದಲಾಗಿಲ್ಲ.

–ಕೆ.ರವೀಂದ್ರ ಶೆಟ್ಟಿ
ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT