ಬುಧವಾರ, ಜನವರಿ 19, 2022
17 °C
ನಾಡೋಜ ಸಿರಿಯಜ್ಜಿ ಸಾಂಸ್ಕೃತಿಕ ಪ್ರತಿಷ್ಠಾನದ ಎಚ್ಚರಿಕೆ

ಕಾಡುಗೊಲ್ಲ ಹೆಸರು ಬದಲಿಸಿದರೆ ಹೋರಾಟ: ಸಿರಿಯಜ್ಜಿ ಸಾಂಸ್ಕೃತಿಕ ಪ್ರತಿಷ್ಠಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಕಾಡುಗೊಲ್ಲ ಬುಡಕಟ್ಟು ಸಮುದಾಯದೊಂದಿಗೆ ಯಾದವ, ಊರುಗೊಲ್ಲ ಜಾತಿಯನ್ನು ಸಮೀಕರಣ ಮಾಡುವುದು ಅಸಮಂಜಸ. ಶಾಸಕಿ ಕೆ.ಪೂರ್ಣಿಮಾ ಅವರ ರಾಜಕೀಯ ಒತ್ತಡಕ್ಕೆ ಮಣಿದು ಕಾಡುಗೊಲ್ಲ ಅಭಿವೃದ್ಧಿ ನಿಗಮದ ಹೆಸರು ಬದಲಿಸಿದರೆ ತೀವ್ರ ವಿರೋಧ ಎದುರಿಸಬೇಕಾಗುತ್ತದೆ ಎಂದು ನಾಡೋಜ ಸಿರಿಯಜ್ಜಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ಎಚ್ಚರಿಕೆ ನೀಡಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿರಿಯೂರು ಶಾಸಕಿ ಪೂರ್ಣಿಮಾ ಹಾಗೂ ಅವರ ಪತಿ ರಾಜ್ಯ ಯಾದವ ಗೊಲ್ಲ ಸಂಘದ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್‌ ಅವರು ನಿಗಮ ಮತ್ತು ಪರಿಶಿಷ್ಟ ಪಂಗಡದ ಸೌಲಭ್ಯದ ಬಗ್ಗೆ ನಕಾರಾತ್ಮಕ ಮನೋಭಾವ ಹೊಂದಿದ್ದಾರೆ. ಈ ನಿಲುವು ಬದಲಿಸಿಕೊಳ್ಳಬೇಕು’ ಎಂದು ಆಗ್ರಹಿಸಿದರು.

‘ಶಿರಾ ಉಪಚುನಾವಣೆಯ ಸಂದರ್ಭದಲ್ಲಿ ಕಾಡುಗೊಲ್ಲ ಅಭವೃದ್ಧಿ ನಿಗಮವನ್ನು ಸರ್ಕಾರ ಘೋಷಣೆ ಮಾಡಿತು. ಚುನಾವಣೆಯ ಕಾರ್ಯತಂತ್ರವೆಂದು ಗೊತ್ತಿದ್ದರೂ ಕಾಡುಗೊಲ್ಲ ಸಮುದಾಯ ಹರ್ಷ ವ್ಯಕ್ತಪಡಿಸಿತು. ಆದರೆ, ಶಾಸಕಿಯ ಒತ್ತಡಕ್ಕೆ ಮಣಿದು ಒಂದೇ ದಿನದಲ್ಲಿ ಇದನ್ನು ಗೊಲ್ಲ ಅಭಿವೃದ್ಧಿ ನಿಗಮ ಎಂಬ ಹೆಸರು ಬದಲಿಸಲಾಯಿತು. ಕಾಡುಗೊಲ್ಲ ಮತಗಳು ಕೈತಪ್ಪುವ ಕಾರಣಕ್ಕೆ ಮತ್ತೆ ಮೂಲ ಹೆಸರು ಉಳಿಸಿಕೊಳ್ಳಲಾಯಿತು. ಚುನಾವಣೆಯ ಬಳಿಕ ₹ 5 ಕೋಟಿ ಅನುದಾನ ಸಿಕ್ಕರೂ ಅಧ್ಯಕ್ಷರ ನೇಮಕವಾಗಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಗೊಲ್ಲ–ಕಾಡುಗೊಲ್ಲ ಅಭವೃದ್ಧಿ ನಿಗಮ ಎಂಬ ಹೆಸರು ಇಡಲು ಶಾಸಕಿ ಪೂರ್ಣಿಮಾ ಅವರು ಮತ್ತೆ ಒತ್ತಡ ತರುತ್ತಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರವೂ ಸ್ಪಂದಿಸುತ್ತಿದೆ ಎಂಬ ಮಾಹಿತಿ ಇದೆ. ಇದು ಕಾರ್ಯರೂಪಕ್ಕೆ ಬಂದರೆ ಕಾಡುಗೊಲ್ಲರ ಮೇಲೆ ಚಪ್ಪಡಿಕಲ್ಲು ಎಳೆದಂತೆ ಆಗುತ್ತದೆ. ಯಾದವ ಪ್ರೇರಿತ ಊರುಗೊಲ್ಲರಿಗೂ ಹಾಗೂ ಬುಡಕಟ್ಟು ಸಂಸ್ಕೃತಿ ಹೊಂದಿರುವ ಕಾಡುಗೊಲ್ಲರಿಗೂ ಎಳ್ಳಷ್ಟು ಸಂಬಂಧವಿಲ್ಲ. ಬೇಕಿದ್ದರೆ ಅವರು ಪ್ರತ್ಯೇಕ ನಿಮಗ ಪಡೆಯಲಿ’ ಎಂದು ಸಲಹೆ ನೀಡಿದರು.

‘ಬ್ರಿಟಿಷ್‌ ಆಳ್ವಿಕೆಯ ಕಾಲದಲ್ಲಿಯೇ ಕಾಡುಗೊಲ್ಲರ ಸ್ಥಿತಿ ದಾಖಲಾಗಿದೆ. ಬುಡಕಟ್ಟು ಸಮುದಾಯದ ದಯನೀಯ ಸ್ಥಿತಿ ವಿಶ್ಲೇಷಣೆ ಮಾಡಲಾಗಿದೆ. ಕರ್ನಾಟಕದ 27 ಬುಡಕಟ್ಟುಗಳಲ್ಲಿ ಕಾಡುಗೊಲ್ಲರೂ ಕೂಡ ಸೇರಿದ್ದಾರೆ. ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯವಾಗಿದೆ. ಡಾ.ಸಿ.ಎಸ್‌.ದ್ವಾರಕನಾಥ್‌ ಅವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಅವಧಿಯಲ್ಲಿಯೂ ಅಧ್ಯಯನ ನಡೆದಿದೆ. ಇದನ್ನು ಸರ್ಕಾರ ಗಮನಿಸಬೇಕು’ ಎಂದು ಹೇಳಿದರು.

ಉಪಾಧ್ಯಕ್ಷ ಜಿ.ವೆಂಕಟೇಶ್ ಇತರರಿದ್ದರು.

***

ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸುವ ಪ್ರಕ್ರಿಯೆಗೆ ಶಾಸಕಿ ಪೂರ್ಣಿಮಾ ತಡೆಯಾಗಿದ್ದಾರೆ. ಕುಲಶಾಸ್ತ್ರೀಯ ಅಧ್ಯಯನದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ದ್ವಂದ್ವದಿಂದ ಅವರು ಹೊರಬರಬೇಕು.

ಪ್ರೊ.ಜಿ.ರಾಜಶೇಖರಯ್ಯ, ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ 

***

ಕಾಡುಗೊಲ್ಲ ಸಮುದಾಯಕ್ಕೆ ಶತಮಾನಗಳಿಂದ ಅನ್ಯಾಯವಾಗಿದೆ. ಹಟ್ಟಿ ಜನರಿಗೆ ಸೌಲಭ್ಯ ತಲುಪಲು ಕಾಡುಗೊಲ್ಲ ಅಭವೃದ್ಧಿ ನಿಗಮದ ಅಗತ್ಯವಿದೆ. ಹೆಸರು ಬದಲಾವಣೆ ಮಾಡಿದರೆ ಹಟ್ಟಿ ಹಂತದಿಂದ ಹೋರಾಟ ನಡೆಯಲಿದೆ.

ಸಿ.ಪಾತಲಿಂಗಪ್ಪ, ಪ್ರತಿಷ್ಠಾನದ ಗೌರವಾಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು