ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಸಮರ್ಪಕ ಅನುಷ್ಠಾನಕ್ಕೆ ಸ್ವಾಮೀಜಿ ಒತ್ತಾಯ

ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಸಮರ್ಪಕ ಅನುಷ್ಠಾನಕ್ಕೆ ಸ್ವಾಮೀಜಿ ಒತ್ತಾಯ
Last Updated 15 ಫೆಬ್ರುವರಿ 2021, 13:32 IST
ಅಕ್ಷರ ಗಾತ್ರ

ಚಿತ್ರದುರ್ಗ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳ ವಿಚಾರಣೆ ಹಾಗೂ ನಿರ್ವಹಣೆಗೆ ಪ್ರತ್ಯೇಕ ನಿರ್ದೇಶನಾಲಯ, ನ್ಯಾಯಾಲಯ ಹಾಗೂ ವಿಶೇಷ ಅನುದಾನ ನೀಡಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ಹಿರಿಯೂರಿನ ಆದಿಜಾಂಬವ ಮಠದ ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಕಾಯ್ದೆ ಅನುಷ್ಠಾನಗೊಳಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಅಸಮಾಧಾನ ಹೊರಹಾಕಿದರು. ಕಾಯ್ದೆಯ ಸಮರ್ಪಕ ಅನುಷ್ಠಾನಕ್ಕೆ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ರವಾನಿಸಿದರು.

ಜಿಲ್ಲೆಯ ಚಳ್ಳಕೆರೆ, ಹೊಸದುರ್ಗ, ಹಿರಿಯೂರು ತಾಲ್ಲೂಕುಗಳ ಕೆಲ ಗ್ರಾಮಗಳಲ್ಲಿ ನಡೆದಿರುವ ದೌರ್ಜನ್ಯ, ಅಸ್ಪೃಶ್ಯತೆ, ಸಾಮಾಜಿಕ ಬಹಿಷ್ಕಾರ ಪ್ರಕರಣಗಳ ಸಂತ್ರಸ್ತರಿಗೆ ನಿವೇಶನ, ಮನೆ, 5 ಎಕರೆ ಕೃಷಿ ಭೂಮಿ ಒದಗಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ದೌರ್ಜನ್ಯದಿಂದ ಕೊಲೆಯಾದ ವ್ಯಕ್ತಿಯ ಕುಟುಂಬದ ವಾರಸುದಾರರಿಗೆ ಪ್ರತಿ ತಿಂಗಳು ₹ 10 ಸಾವಿರ ಪಿಂಚಣಿ ಒದಗಿಸಬೇಕು. ಬದಲಾದ ಕಾಲಘಟ್ಟಕ್ಕೆ ತುಟ್ಟಿಭತ್ಯೆ ಕೊಡಬೇಕು. ಇದಾವುದನ್ನೂ ಮಾಡದೇ ಕಾಯ್ದೆಯ ಉದ್ದೇಶ, ಆಶಯಗಳನ್ನು ಗಾಳಿಗೆ ತೂರಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೂಲ ಸೌಲಭ್ಯಗಳಾದ ನಿವೇಶನ, ಮನೆ, ರಸ್ತೆ, ಚರಂಡಿ, ಬೀದಿ ದೀಪ, ಕುಡಿಯುವ ನೀರು, ಶಾಲೆ, ಸಮುದಾಯ ಭವನ ನಿರ್ಮಾಣವಾಗಬೇಕು. ಸರ್ಕಾರಿ ಗೋಮಾಳ, ಇತರೆ ಸರ್ಕಾರಿ ಜಮೀನಿನಲ್ಲಿ ಹೊಸ ಕಾಲೊನಿಗಳನ್ನು ನಿರ್ಮಿಸಬೇಕು. ವಿವಿಧ ಅಭಿವೃದ್ಧಿ ನಿಗಮ, ಇಲಾಖೆಗಳು, ಸರ್ಕಾರಿ ಅರೆ ಸಂಸ್ಥೆಗಳಿಂದ ಸಾಲ, ಸಹಾಯಧನ ಮತ್ತು ಗೃಹ ತೋಟಗಾರಿಕೆ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ಪ್ರಕರಣ ಹಿಂಪಡೆಯಲು ಆಗ್ರಹ

‘ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದವರ ಪರವಾಗಿ ಹೋರಾಟ ಮಾಡಿದ ಚಿತ್ರದುರ್ಗ ಹಾಗೂ ಹೊಸದುರ್ಗ ತಾಲ್ಲೂಕಿನ ದಲಿತ ಮುಖಂಡರ ಮೇಲೆ ದುರುದ್ದೇಶಪೂರ್ವಕವಾಗಿ ಪ್ರಕರಣ ದಾಖಲಿಸಲಾಗಿದೆ. ಕೂಡಲೇ ಅವೆಲ್ಲವನ್ನೂ ಹಿಂಪಡೆಯಬೇಕು’ ಎಂದು ಷಡಕ್ಷರಿಮುನಿ ಸ್ವಾಮೀಜಿ ಒತ್ತಾಯಿಸಿದರು.

‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಶೇ 90ರಷ್ಟು ಮಂದಿಗೆ ದೌರ್ಜನ್ಯ ತಡೆ ಕಾಯ್ದೆಯಡಿ ಸೂಕ್ತ ಪರಿಹಾರ ನೀಡದೇ ಸರ್ಕಾರ ವಂಚಿಸುತ್ತಿದೆ. ಮುಂದೆ ಈ ರೀತಿಯಾಗದಂತೆ ಎಚ್ಚರವಹಿಸಿ ನ್ಯಾಯಯುತ ಸೌಲಭ್ಯ ಕೊಡಿಸಬೇಕು’ ಎಂದು ಕೋರಿದರು.

ಮುಖಂಡರಾದ ಎಸ್. ಪರಮೇಶ್, ಹರೀಶ್, ಶಿವಣ್ಣ, ಕಾಂತರಾಜ್, ಜಯಣ್ಣ, ಧೃವಕುಮಾರ್, ತಿಪ್ಪೇಸ್ವಾಮಿ, ಬಾಬು, ಹನುಮಂತರಾಯ ಇದ್ದರು.

ಕಾಯ್ದೆ ಪ್ರಕಾರ ಸಂತ್ರಸ್ತರಿಗೆ ಸ್ಟಾವಲಂಬಿ, ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಮೂಲಸೌಲಭ್ಯ ನೀಡಬೇಕು. ಈ ಕುರಿತು ಜಿಲ್ಲಾಡಳಿತ ಹೆಚ್ಚಿನ ಕಾಳಜಿ ವಹಿಸಬೇಕು.

–ಟಿ.ಡಿ. ರಾಜಗಿರಿ
ದಲಿತ ಸಂಘರ್ಷ ಸಮಿತಿ ಅಧ್ಯಕ್ಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT