ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಟನೆಗೆ ಸೀಮಿತವಾದ ಬಂದ್‌

Last Updated 13 ಫೆಬ್ರುವರಿ 2020, 13:31 IST
ಅಕ್ಷರ ಗಾತ್ರ

ಚಿತ್ರದುರ್ಗ: ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು ಎಂಬ ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಬಂದ್‌, ಜಿಲ್ಲೆಯಲ್ಲಿ ಪ್ರತಿಭಟನೆಗೆ ಮಾತ್ರ ಸೀಮಿವಾಯಿತು.

ಕನ್ನಡಪರ ಸಂಘಟನೆಗಳು ಕರೆ ನೀಡಿದ ಬಂದ್‌ಗೆ ಕೋಟೆ ನಾಡಿನ ಜನರು ಸ್ಪಂದಿಸಲಿಲ್ಲ. ಜನಜೀವನ ಎಂದಿನಂತೆ ಸಹಜವಾಗಿತ್ತು. ವಾಹನ ಸಂಚಾರ ನಿರಾತಂಕವಾಗಿ ಸಾಗಿತ್ತು. ಅಂಗಡಿ, ಶಾಲೆ–ಕಾಲೇಜು, ಸರ್ಕಾರಿ ಕಚೇರಿಗಳು ಬಾಗಿಲು ತೆರೆದಿದ್ದವು. ಯಾವುದೇ ಸಂಘಟನೆಯ ಕಾರ್ಯಕರ್ತರು ಬೀದಿಗೆ ಇಳಿದು ಬೆಂಬಲ ಕೋರಲಿಲ್ಲ. ಹೀಗಾಗಿ, ಬಂದ್‌ ಬಿಸಿ ತಟ್ಟಲಿಲ್ಲ. ಆದರೆ, ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು.

ಅಂಬೇಡ್ಕರ್‌ ಸ್ವಾಭಿಮಾನಿ ಸೇನೆಯ ಕಾರ್ಯಕರ್ತರು ಒನಕೆ ಓಬವ್ವ ವೃತ್ತದಲ್ಲಿ ಜಮಾಯಿಸಿ ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿದರು. ಅಲ್ಲಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿಯ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ರವಾನೆ ಮಾಡಿದರು.

‘ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮರು. ಆದರೆ, ಖಾಸಗಿ ಉದ್ಯಮ, ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗುತ್ತಿಲ್ಲ. ರಾಜ್ಯದ ಸಂಪನ್ಮೂಲ ಬಳಸಿಕೊಂಡು ಲಾಭ ಪಡೆಯುವ ಉದ್ದಿಮೆದಾರರು ಕನ್ನಡಿಗರನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮಾಹಿತಿ ಮತ್ತು ತಂತ್ರಜ್ಞಾನ, ಜೈವಿಕ ತಂತ್ರಜ್ಞಾನದ ಉದ್ದಿಮೆಗಳು ಬೆಂಗಳೂರಿನಲ್ಲಿ ಸಾಕಷ್ಟಿವೆ. ಇಲ್ಲಿ ಕೆಲಸ ಮಾಡುವ ಬಹುತೇಕರು ಹೊರರಾಜ್ಯದವರಾಗಿದ್ದಾರೆ. ಹೀಗಾಗಿ, ಕನ್ನಡಿಗರು ನಿರುದ್ಯೋಗಿಗಳಾಗುತ್ತಿದ್ದಾರೆ. ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತರಲು ಯಾವುದೇ ಸರ್ಕಾರ ಆಸಕ್ತಿ ತೋರುತ್ತಿಲ್ಲ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಇತ್ತ ಗಮನಹರಿಸಬೇಕು’ ಎಂದು ಆಗ್ರಹಿಸಿದರು.

ಅಂಬೇಡ್ಕರ್‌ ಸ್ವಾಭಿಮಾನಿ ಸೇನೆಯ ಜಿಲ್ಲಾ ಘಟಕದ ಗೌರವಾಧ್ಯಕ್ಷ ಪಿ.ಎಂ.ತಿಪ್ಪೇಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷ ಕೆ.ರಾಮಚಂದ್ರ, ಕಾರ್ಯಾಧ್ಯಕ್ಷ ಚಂದ್ರಪ್ಪ ಘಾಟ್‌, ಉಪಾಧ್ಯಕ್ಷ ಪೂಜಾರ್‌ ಕರಿಯಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT