ಭಾನುವಾರ, ಆಗಸ್ಟ್ 14, 2022
20 °C
ಕನ್ನಡ ಮಾಧ್ಯಮ, ನಗರ ಪ್ರದೇಶದ ವಿದ್ಯಾರ್ಥಿಗಳ ನಿರಾಶಾದಾಯಕ ಫಲಿತಾಂಶ

ಚಿತ್ರದುರ್ಗ ಪಿಯುಸಿ ಫಲಿತಾಂಶ: ಏಳು ವಿಷಯಗಳಲ್ಲಿ ಎಡವಿದ ವಿದ್ಯಾರ್ಥಿಗಳು

ಜಿ.ಬಿ. ನಾಗರಾಜ್‌ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ದ್ವಿತೀಯ ಪಿಯುಸಿ ಕಲೆ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ಪ್ರಮುಖ ಏಳು ವಿಷಯಗಳಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಈ ವಿಷಯಗಳು ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಾಗಿದ್ದು ಏಕೆ ಎಂಬುದನ್ನು ಪತ್ತೆ ಮಾಡಲು ಪದವಿಪೂರ್ವ ಶಿಕ್ಷಣ ಇಲಾಖೆ ಮುಂದಾಗಿದೆ.

ಪಿಯುಸಿಯ ಮೂರು ವಿಭಾಗಗಳಲ್ಲಿ ಒಟ್ಟು 25 ವಿಷಯಗಳಿವೆ. ಇದರಲ್ಲಿ ಹತ್ತು ಭಾಷಾ ವಿಷಯ, 15 ಕೋರ್ ವಿಷಯಗಳಿವೆ. ಕಲಾ ವಿಭಾಗದ ಒಂದು, ವಿಜ್ಞಾನ ವಿಭಾಗದ ನಾಲ್ಕು ಹಾಗೂ ವಾಣಿಜ್ಯ ವಿಭಾಗದ ಎರಡು ವಿಷಯಗಳಲ್ಲಿ ವಿದ್ಯಾರ್ಥಿಗಳು ಹಿಂದೆ ಬೀಳುತ್ತಿದ್ದಾರೆ. ಭಾಷಾ ವಿಷಯವಾದ ಇಂಗ್ಲಿಷ್‌ನಲ್ಲಿ ಹೆಚ್ಚು ವಿದ್ಯಾರ್ಥಿಗಳು ತೇರ್ಗಡೆ ಹೊಂದಿಲ್ಲ.

ಅರ್ಥಶಾಸ್ತ್ರ, ಇಂಗ್ಲಿಷ್‌, ಲೆಕ್ಕಶಾಸ್ತ್ರ (ಅಕೌಂಟೆನ್ಸಿ), ಭೌತವಿಜ್ಞಾನ, ರಸಾಯನವಿಜ್ಞಾನ, ಜೀವವಿಜ್ಞಾನ ಹಾಗೂ ಗಣಿತ ವಿಷಯದಲ್ಲಿ ದಡ ಮುಟ್ಟದವರೇ (ಅನುತ್ತೀರ್ಣ) ಹೆಚ್ಚು. ‘ಈ ವಿಷಯಗಳನ್ನು ಇಂಗ್ಲಿಷ್ ಮಾಧ್ಯಮದಲ್ಲೇ ವ್ಯಾಸಂಗ ಮಾಡಬೇಕಿರುವ ಅನಿವಾರ್ಯತೆ ಇರುವುದರಿಂದ ಈ ಸಮಸ್ಯೆ ಎದುರಾಗುತ್ತಿದೆ’ ಎಂಬುದು ಉಪನ್ಯಾಸಕರ ಹೇಳಿಕೆ.

ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿರುವ 8,976 ವಿದ್ಯಾರ್ಥಿಗಳಲ್ಲಿ 6,120 ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದವರು. ಇಂಗ್ಲಿಷ್ ಮಾಧ್ಯಮದ ಶೇ 56ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 

‘ಜಿಲ್ಲೆಯ ವಿದ್ಯಾರ್ಥಿಗಳು ಎಡವುತ್ತಿರುವುದು ಯಾವ ವಿಷಯದಲ್ಲಿ ಎಂಬ ಬಗ್ಗೆ ಮಾಹಿತಿ ಕಲೆಹಾಕಲಾಗಿದೆ. ಏಳು ವಿಷಯಗಳ ಬೋಧನೆಯನ್ನು ಇನ್ನಷ್ಟು ಪರಿಣಾಮಕಾರಿ ಆಗಿಸಲು ಉಪನ್ಯಾಸಕರೊಂದಿಗೆ ಚರ್ಚೆ ನಡೆಸಲಾಗಿದೆ. ವಿಷಯವಾರು ಕೂಟಗಳನ್ನು ರಚಿಸಿ ತರಬೇತಿ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ. ಇದು ಫಲಿತಾಂಶ ಸುಧಾರಣೆಗೆ ನೆರವಾಗುವ ನಿರೀಕ್ಷೆ ಇದೆ’ ಎನ್ನುತ್ತಾರೆ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್‌.ರಾಜು.

ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ಪರಿಶಿಷ್ಟ ಜಾತಿಯ 4,525 ವಿದ್ಯಾರ್ಥಿಗಳಲ್ಲಿ 1,685 (ಶೇ 37) ವಿದ್ಯಾರ್ಥಿಗಳು, ಪರಿಶಿಷ್ಟ ಪಂಗಡದ 2,942 ರಲ್ಲಿ 1,112 (ಶೇ 37) ಪರೀಕ್ಷಾರ್ಥಿಗಳು, ಪ್ರವರ್ಗ 1ರ 2,467ರಲ್ಲಿ 1,146 (ಶೇ 46) ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದಾರೆ. ಪ್ರವರ್ಗ ‘2ಎ’ 2,323ರಲ್ಲಿ 1,259 (ಶೇ 54), ‘2ಬಿ’ 1050ರಲ್ಲಿ 444 (ಶೇ 42), ಪ್ರವರ್ಗ ‘3ಎ’ 828ರಲ್ಲಿ 497 (ಶೇ 60) ಹಾಗೂ ‘3ಬಿ’ 2,012ರಲ್ಲಿ 1,234 (ಶೇ 61)ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ನಗರ ಪ್ರದೇಶಕ್ಕಿಂತ (ಶೇ 47) ಗ್ರಾಮೀಣ ಪ್ರದೇಶದ (ಶೇ 52) ವಿದ್ಯಾರ್ಥಿಗಳು, ಯುವಕರಿಗಿಂತ (ಶೇ 39) ಯುವತಿಯರು (ಶೇ 51) ಹೆಚ್ಚು ಉತ್ತೀರ್ಣರಾಗಿದ್ದಾರೆ.

ಹೊಸದುರ್ಗ: ಎಸ್‌ಜಿಆರ್‌ ಕಾಲೇಜು: ಉತ್ತೀರ್ಣರಾದವರು ಕೇವಲ ಶೇ 17

ಹೊಸದುರ್ಗದ ಎಸ್‌ಜಿಆರ್‌ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಕೇವಲ ಶೇ 17ರಷ್ಟು ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇದು ಜಿಲ್ಲೆಯಲ್ಲೇ ಅತ್ಯಂತ ಕಳಪೆ ಫಲಿತಾಂಶವಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿಯೊಬ್ಬರಿಗೆ ಸೇರಿದ ಈ ಕಾಲೇಜಿನ ಸಾಧನೆ ಅಚ್ಚರಿ ಮೂಡಿಸಿದೆ.

ಟಿ.ಎಸ್‌. ವೆಂಕಣ್ಣಯ್ಯ, ತರಾಸು ಸ್ವಗ್ರಾಮವಾದ ತಳುಕು. ಇಲ್ಲೂ ಪಿಯುಸಿ ಫಲಿತಾಂಶದಲ್ಲಿ ಕಳಪೆ ಸಾಧನೆ ಹೊರಬಂದಿದೆ. ಇದು ಗ್ರಾಮಸ್ಥರಲ್ಲಿ ಬೇಸರ ಮೂಡಿಸಿದೆ. ಜಿಲ್ಲೆಯ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ತಳಕು ಕಾಲೇಜು ಕೊನೆಯ ಸ್ಥಾನದಲ್ಲಿದೆ. ಕಲಾ ವಿಭಾಗದಲ್ಲಿ ಶೇ 16ರಷ್ಟು ಮಕ್ಕಳು ಮಾತ್ರ ತೇರ್ಗಡೆ ಹೊಂದಿದ್ದಾರೆ.

ಪರಶುರಾಂಪುರ ಕಾಲೇಜು ಸಾಧನೆ

ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರದ ಸರ್ಕಾರಿ ಪದವಿಪೂರ್ವ ಕಾಲೇಜು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಅತ್ಯುತ್ತಮ ಸಾಧನೆ ತೋರಿದೆ. ಆಂಧ್ರಪ್ರದೇಶದ ಗಡಿಯಲ್ಲಿರುವ ಅತ್ಯಂತ ಹಿಂದುಳಿದ ಪ್ರದೇಶವೆಂದು ಗುರುತಿಸಿಕೊಂಡಿರುವ ಈ ಊರಿನಲ್ಲಿರುವ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಶೇ 78ರಷ್ಟು ಪರೀಕ್ಷಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಜಿಲ್ಲೆಯ ಸರ್ಕಾರಿ ಕಾಲೇಜುಗಳ ಫಲಿತಾಂಶದಲ್ಲಿ ಇದು ಮೊದಲ ಸ್ಥಾನದಲ್ಲಿದೆ.

‘ನಿತ್ಯ ಬೆಳಿಗ್ಗೆ 9.30ರಿಂದ ಸಂಜೆ 4.30ರವರೆಗೆ ನಿರಂತರ ಬೋಧನೆ ನಡೆಯುತ್ತದೆ. ವಿದ್ಯಾರ್ಥಿಗಳ ಮೇಲೆ ಉಪನ್ಯಾಸಕರು ಕಾಳಜಿ ತೋರಿದ್ದರಿಂದ ಇದು ಸಾಧ್ಯವಾಗಿದೆ. ನಾಲ್ಕೈದು ವರ್ಷಗಳ ಪ್ರಶ್ನೆಪತ್ರಿಕೆ ನೀಡಿ ಉತ್ತರ ಬರೆಸುತ್ತಿದ್ದೆವು. ಸತತ ಪ್ರಯತ್ನದ ಫಲವಾಗಿ ಉತ್ತಮ ಫಲಿತಾಂಶ ಲಭ್ಯವಾಗಿದೆ’ ಎನ್ನುತ್ತಾರೆ ಪ್ರಾಂಶುಪಾಲ ಕೆ. ನಾಗರಾಜ.

* ವಿದ್ಯಾರ್ಥಿಗಳು ಎದುರಿಸುವ ಸಮಸ್ಯೆ ಪತ್ತೆ ಮಾಡಲಾಗುತ್ತದೆ. ವಿಷಯ ತಜ್ಞರನ್ನು ಕರೆಸಿ ಉಪನ್ಯಾಸಕರಿಗೆ ತರಬೇತಿ ನೀಡಲಾಗುತ್ತದೆ. ಫಲಿತಾಂಶ ಸುಧಾರಣೆಗೆ ಶಕ್ತಿಮೀರಿ ಪ್ರಯತ್ನಿಸುತ್ತೇವೆ.

-ಷಡಾಕ್ಷರಯ್ಯ, ಅಧ್ಯಕ್ಷರು ಅರ್ಥಶಾಸ್ತ್ರ ಕೂಟ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು