ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ರಸ್ತೆಗಳು ಹಾಳಾಗುತ್ತಿರುವುದು ಓವರ್‌ ಲೋಡ್‌ ವಾಹನಗಳಿಂದ: ಪಿಡಬ್ಲೂಡಿ ಸಚಿವ

ಅಸಹಾಯಕತೆ ವ್ಯಕ್ತಪಡಿಸಿದ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ
Last Updated 18 ಸೆಪ್ಟೆಂಬರ್ 2021, 10:38 IST
ಅಕ್ಷರ ಗಾತ್ರ

ಚಿತ್ರದುರ್ಗ: ರಾಜ್ಯದ ಬಹುತೇಕ ರಸ್ತೆಗಳು ಓವರ್‌ ಲೋಡ್‌ ಸಮಸ್ಯೆಯಿಂದ ಬಳಲುತ್ತಿವೆ. ಗುಣಮಟ್ಟದ ರಸ್ತೆ ನಿರ್ಮಿಸಿದರೂ ಭಾರಿ ವಾಹನಗಳ ಸಂಚಾರದಿಂದ ಬಹುಬೇಗ ಹಾಳಾಗುತ್ತಿವೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಅಸಹಾಯಕತೆ ವ್ಯಕ್ತಪಡಿಸಿದರು.

ಲೋಕೋಪಯೋಗಿ ಇಲಾಖೆ ಕಚೇರಿ, ವಿಐಪಿ, ವಿವಿಐಪಿ ಅತಿಥಿಗೃಹ ಉದ್ಘಾಟನೆ ಹಾಗೂ ಸರ್ಕಿಟ್‌ ಹೌಸ್‌ ನಿರ್ಮಾಣಕ್ಕೆ ಶನಿವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಭಾರಿ ವಾಹನಗಳು ರಾತ್ರಿ ವೇಳೆ ನಿಗದಿಂತ ಹೆಚ್ಚು ಪ್ರಮಾಣದ ಸರಕು ತುಂಬಿಕೊಂಡು ಸಂಚರಿಸುತ್ತಿವೆ. ಮರಳು ಗಣಿಗಾರಿಕೆ ನಡೆಯುವ ಪ್ರದೇಶದ ರಸ್ತೆಗಳು ಬಹುಬೇಗ ಹಾಳಾಗುತ್ತಿವೆ. ರಸ್ತೆಯ ಸಾಮರ್ಥ್ಯಕ್ಕೆ ಅನುಗುಣವಾಗಿ ಸರಕು ತುಂಬಿದರೆ ರಸ್ತೆ ಬಹುದಿನ ಬಾಳಿಕೆ ಬರುತ್ತವೆ. ಸಾರಿಗೆ ಇಲಾಖೆ ಸರಿಯಾಗಿ ಕೆಲಸ ಮಾಡಿದರೆ ಲೋಕೋಪಯೋಗಿ ಇಲಾಖೆಗೆ ಅನುಕೂಲವಾಗಲಿದೆ. ಸಾರಿಗೆ ಸಚಿವ ಶ್ರೀರಾಮುಲು ಸಹಕಾರ ನೀಡಬೇಕು’ ಎಂದು ವೇದಿಕೆಯ ಮೇಲಿದ್ದ ಅವರತ್ತ ಗಮನ ಹರಿಸಿದರು.

‘ಸತತವಾಗಿ ಸುರಿಯುವ ಮಳೆಯಿಂದ ರಸ್ತೆ ಕಾಮಗಾರಿಗೆ ಅಡ್ಡಿಯಾಗುತ್ತಿದೆ. ನಿರ್ಮಾಣವಾಗುವ ರಸ್ತೆ, ಸೇತುವೆ ಹಾಗೂ ಕಟ್ಟಡಗಳು ಕನಿಷ್ಠ 30 ವರ್ಷವಾದರೂ ಸುಸ್ಥಿತಿಯಲ್ಲಿ ಇರಬೇಕು. ಗುಣಮಟ್ಟದ ಕಾಮಗಾರಿಗೆ ಹೆಚ್ಚು ಒತ್ತು ನೀಡಬೇಕು. ಪ್ಯಾಕೇಜ್‌ ಗುತ್ತಿಗೆಗೆಯಿಂದ ಆಗುತ್ತಿರುವ ಸಮಸ್ಯೆ ಗಮನಕ್ಕೆ ಬಂದಿದೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಹಣಕಾಸು ಇಲಾಖೆಯೊಂದಿಗೆ ಚರ್ಚಿಸಲಾಗುವುದು’ ಎಂದು ಹೇಳಿದರು.

‘ನೂತನ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳುವದಕ್ಕೂ ಮೊದಲು ತಕರಾರು ಬಗೆಹರಿಸಿಕೊಳ್ಳಬೇಕು. ತಕರಾರು ಇಟ್ಟುಕೊಂಡು ಕಾಮಗಾರಿ ಪ್ರಾರಂಭಿಸಿದರೆ ಮುಂದೊಂದು ದಿನ ಸಮಸ್ಯೆಗೆ ಸಿಲುಕಬೇಕಾಗುತ್ತದೆ. ಇಂತಹ ಹಲವು ಪ್ರಕರಣ ಇಲಾಖೆಗೆ ತೊಡಕಾಗಿವೆ. ಪರಿಸರ ಮತ್ತು ಅರಣ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ಸೂಕ್ತ’ ಎಂದು ಸಲಹೆ ನೀಡಿದರು.

ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ, ‘ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಹಲವು ಜಿಲ್ಲೆಗೆ ಚಿತ್ರದುರ್ಗ ಸಂಪರ್ಕ ಕಲ್ಪಿಸಿದೆ. ಈ ಮಾರ್ಗದಲ್ಲಿ ಸಂಚರಿಸುವ ಗಣ್ಯರ ವಿಶ್ರಾಂತಿಗೆ ಅತಿಥಿ ಗೃಹಗಳೇ ಇರಲಿಲ್ಲ. ₹ 2.5 ಕೋಟಿ ವೆಚ್ಚದಲ್ಲಿ ವಿಐಪಿ ಅತಿಥಿ ಗೃಹ ಹಾಗೂ ₹ 5 ಕೋಟಿ ವೆಚ್ಚದಲ್ಲಿ ವಿವಿಐಪಿ ಅತಿಥಿಗೃಹ ನಿರ್ಮಿಸಲಾಗಿದೆ. ಲೋಕೋಪಯೋಗಿ ಇಲಾಖೆಗೆ ₹ 2.5 ಕೋಟಿ ವೆಚ್ಚದಲ್ಲಿ ನೂತನ ಕಚೇರಿ ಸಜ್ಜಾಗಿದೆ’ ಎಂದು ಹೇಳಿದರು.

‘ಪ್ರತಿ ವರ್ಷ ಜಿಲ್ಲೆಯ ಬಹುತೇಕ ವಿಧಾನಸಭಾ ಕ್ಷೇತ್ರಕ್ಕೆ ಎಸ್‌ಇಪಿ/ಟಿಎಸ್‌ಪಿ ಅನುದಾನ ಬರುತ್ತಿತ್ತು. ಇತ್ತೀಚೆಗೆ ಇದು ಸಕಾಲಕ್ಕೆ ಸಿಗುತ್ತಿಲ್ಲ. ಇದು ಅಭಿವೃದ್ಧಿ ಕಾಮಗಾರಿಯ ಮೇಲೆ ಪರಿಣಾಮ ಬೀರಿದೆ. ಗ್ರಾಮೀಣ ಪ್ರದೇಶದ ಬಹುತೇಕ ರಸ್ತೆಗಳು ತೀರಾ ಹಾಳಾಗಿವೆ. ಜಿಲ್ಲೆಗೆ ಅಗತ್ಯ ಇರುವ ₹ 80 ಕೋಟಿ ಅನುದಾನ ನೀಡಬೇಕು’ ಎಂದು ಲೋಕೋಪಯೋಗಿ ಸಚಿವರನ್ನು ಕೋರಿದರು.

ಪಿಪಿಪಿ ಮಾದರಿಗೆ ತೀವ್ರ ಆಕ್ಷೇಪ

ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ (ಪಿಪಿಪಿ) ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ನಡೆಗೆ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ಮಾದರಿಯ ಕಾಲೇಜು ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂಬ ಸಂದೇಶ ರವಾನಿಸಿದರು.

‘ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕು ಎಂಬುದು ಜಿಲ್ಲೆಯ ಜನರ ಬಹುದಿನಗಳ ಬೇಡಿಕೆ. ಜನ ಹಾಗೂ ಜನಪ್ರತಿನಿಧಿಗಳ ಆಶಯಕ್ಕೆ ವಿರುದ್ಧವಾಗಿ ಕಾಲೇಜು ನಿರ್ಮಿಸುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಸರ್ಕಾರಿ ಕಾಲೇಜು ಮಂಜೂರು ಮಾಡಿದರೆ ಮಾತ್ರ ಒಪ್ಪುತ್ತೇವೆ’ ಎಂದು ಹೇಳಿದರು.

ಹಿಂಬಾಲಕರಿಗೆ ಗುತ್ತಿಗೆ: ಆರೋಪ

ಅರ್ಹ ಗುತ್ತಿಗೆದಾರರನ್ನು ಕಡೆಗಣಿಸಿ ಜನಪ್ರತಿನಿಧಿಗಳ ಹಿಂಬಾಲಕರಿಗೆ ಗುತ್ತಿಗೆ ನೀಡಲಾಗುತ್ತಿದೆ. ಇದರಿಂದ ನೋಂದಾಯಿತ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್‌.ಮಂಜುನಾಥ್‌ ಆಕ್ಷೇಪ ವ್ಯಕ್ತಪಡಿಸಿದರು.

‘ಸರ್ಕಾರ ಪ್ಯಾಕೇಜ್‌ ರೂಪದಲ್ಲಿ ನೀಡುವ ಗುತ್ತಿಗೆಯಿಂದ ಆಂಧ್ರಪ್ರದೇಶದವರಿಗೆ ಅನುಕೂಲವಾಗುತ್ತಿದೆ. ರಾಜಕೀಯ ಹಾಗೂ ಆರ್ಥಿಕವಾಗಿ ಸಬಲರಾದವರು ಗುತ್ತಿಗೆ ಪಡೆಯುತ್ತಿದ್ದಾರೆ. ನಿರ್ಮಿತಿ ಕೇಂದ್ರ ಕೂಡ ರಾಜಕಾರಣಿಗಳ ಹಿಂಬಾಲಕರಿಗೆ ಮಾತ್ರ ಗುತ್ತಿಗೆ ನೀಡುತ್ತಿದೆ’ ಎಂದು ಬಹಿರಂಗವಾಗಿ ಅಸಮಾಧಾನ ಹೊರಹಾಕಿದರು.

ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು, ವಿಧಾನಪರಿಷತ್‌ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಎಂ.ಚಿದಾನಂದಗೌಡ, ರಾಜ್ಯ ಖನಿಜ ನಿಗಮದ ಅಧ್ಯಕ್ಷ ಎಸ್‌.ಲಿಂಗಮೂರ್ತಿ, ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಂದಿನಿದೇವಿ, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಕೆ.ಎಸ್‌.ಕೃಷ್ಣ ರೆಡ್ಡಿ, ಶಿವಮೊಗ್ಗ ವಲಯದ ಮುಖ್ಯ ಎಂಜಿನಿಯರ್‌ ಕಾಂತರಾಜ್‌, ಕಾರ್ಯನಿರ್ವಾಹಕ ಎಂಜಿನಿಯರ್‌ ಸತೀಶಬಾಬು, ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಎಂಜಿನಿಯರ್‌ ರಾಘವನ್‌ ಇದ್ದರು.

***

ಗುತ್ತಿಗೆದಾರರು ಸೌಜನ್ಯದ ಶಬ್ದ ಬಳಸಬೇಕು. ಏನು ಮಾತನಾಡಿದರೆ ಯಾವ ಅರ್ಥ ಬರುತ್ತದೆ ಎಂಬ ಬಗ್ಗೆ ಅರಿವು ಇರಬೇಕು. ನೀವೂ ಈ ಮೊದಲು ಬೇರೊಬ್ಬರ ಹಿಂಬಾಲಕರಾಗಿದ್ದಿರಿ ಎಂಬುದನ್ನು ಮರೆಯಬಾರದು.

ಸಿ.ಸಿ.ಪಾಟೀಲ

ಲೋಕೋಪಯೋಗಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT