ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಬರದ ನಾಡಿನ ಮಳೆನೀರು ಆಂಧ್ರದ ಪಾಲು

Last Updated 11 ಸೆಪ್ಟೆಂಬರ್ 2020, 4:20 IST
ಅಕ್ಷರ ಗಾತ್ರ
ADVERTISEMENT
""

ಚಿತ್ರದುರ್ಗ: ನೀರಿನ ಗಡಿ ಬಿಕ್ಕಟ್ಟು ನೆರೆ ರಾಜ್ಯಗಳೊಂದಿಗೆ ಬಹುಕಾಲದಿಂದಲೂ ಇದೆ. ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವ ವಿಚಾರದಲ್ಲಿ ಪ್ರತಿ ವರ್ಷ ಇದು ಮುನ್ನೆಲೆಗೆ ಬರುತ್ತದೆ. ರಾಜ್ಯದ ನೀರು ಆಂಧ್ರಪ್ರದೇಶದ ಪಾಲಾಗುತ್ತಿರುವ ಸಂಗತಿ ಚರ್ಚೆಗೆ ಬಂದಿದ್ದು ಅಪರೂಪ. ಚಿತ್ರದುರ್ಗದ ಮಳೆ ನೀರು ನೆರೆಯ ರಾಜ್ಯಕ್ಕೆ ನಿರಂತರವಾಗಿ ಹರಿಯುತ್ತಲೇ ಇದೆ.

ಬಯಲು ಪ್ರದೇಶವಾದ ಚಿತ್ರದುರ್ಗ ಬರದ ನಾಡು ಎಂದೇ ಹೆಸರಾಗಿದೆ. ವಾರ್ಷಿಕ 50 ಸೆ.ಮೀ ಸರಾಸರಿ ಮಳೆ ಬೀಳುತ್ತದೆ. ರಾಜ್ಯದಲ್ಲೇ ಅತಿ ಕಡಿಮೆ ಮಳೆ ಬೀಳುವ ಪ್ರದೇಶವಾಗಿ ನಾಯಕನಹಟ್ಟಿ ಗುರುತಿಸಿಕೊಂಡಿದೆ. ಅಪರೂಪಕ್ಕೆ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತದೆ. ಆಗ ಹಳ್ಳ–ಕೊಳ್ಳ, ಕೆರೆ, ಚೆಕ್‌ಡ್ಯಾಂಗಳು ಭರ್ತಿಯಾಗುತ್ತವೆ. ಈ ಜಲಮೂಲಗಳು ಕೆಲವೊಮ್ಮೆ ತುಂಬಿ ಹರಿಯುತ್ತವೆ. ಈ ನೀರನ್ನು ಹಿಡಿದಿಡುವ ವ್ಯವಸ್ಥೆ ಯೋಜನಾಬದ್ಧವಾಗಿ ಇನ್ನೂ ನಡೆದಿಲ್ಲ ಎಂಬ ಕೊರಗು ಜನರನ್ನು ಕಾಡುತ್ತಿದೆ.

ಪ್ರತಿ ಮೂರು ಅಥವಾ ಐದು ವರ್ಷಕ್ಕೊಮ್ಮೆ ಸರಾಸರಿಗಿಂತ ಹೆಚ್ಚು ಮಳೆ ಬೀಳುತ್ತದೆ ಎಂಬುದನ್ನು ದಾಖಲೆಗಳೇ ಹೇಳುತ್ತವೆ. 2019ರ ಹಿಂಗಾರು ಮಳೆಗೆ ಹಲವು ಕೆರೆಗಳು ಒಡೆದು ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದ್ದನ್ನು ಹೊಸದುರ್ಗ ತಾಲ್ಲೂಕಿನ ಜನತೆ ಇನ್ನೂ ಮರೆತಿಲ್ಲ. ಹೊಳಲ್ಕೆರೆ ತಾಲ್ಲೂಕಿನ ಲೋಕದೊಳಲು ದೊಡ್ಡಹೊಟ್ಟೆ ರಂಗನಾಥಸ್ವಾಮಿ ದೇಗುಲದ ಬೆಟ್ಟ ಕುಸಿದು ಸೃಷ್ಟಿಯಾಗಿದ್ದ ಆತಂಕ ಕಡಿಮೆಯಾಗಿಲ್ಲ. 2017ರ ಸೆ.10ರಂದು ಸುರಿದ ಮಳೆಗೆ ಜಿಲ್ಲೆಯ ಎಲ್ಲ ಜಲಮೂಲಗಳು ಭರ್ತಿಯಾಗಿದ್ದವು. ಇದೇ ಸೆ.9ರಂದು ಇಂತಹದೇ ಭಾರಿ ಮಳೆ ಸುರಿದಿದೆ. ಒಂದೇ ರಾತ್ರಿ ಚಿತ್ರದುರ್ಗದಲ್ಲಿ 13 ಸೆ.ಮೀ ಮಳೆಯಾಗಿದೆ. ಭೂಮಿಗೆ ಇಳಿದ ವರುಣ ಅಷ್ಟೇ ಸರಾಗವಾಗಿ ಹರಿದು ನೆರೆಯ ಆಂಧ್ರಪ್ರದೇಶ ಸೇರುತ್ತಿದೆ.

ಹೊಸದುರ್ಗ ತಾಲ್ಲೂಕಿನಲ್ಲಿ ಸುರಿದ ಮಳೆನೀರು ವೇದಾವತಿಗೆ ಜೀವಕಳೆ ತುಂಬುತ್ತದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿದರೆ ವಿ.ವಿ.ಸಾಗರದ ನೀರಿನ ಮಟ್ಟ ಹೆಚ್ಚಾಗುತ್ತದೆ. 2019ರಲ್ಲಿ ವಿ.ವಿ.ಸಾಗರಕ್ಕೆ ಅಂದಾಜು ಮೂರು ಟಿಎಂಸಿ ಅಡಿಯಷ್ಟು ಮಳೆ ನೀರು ಹರಿದುಬಂದಿತ್ತು. ಮಳೆ ನೀರಿನೊಂದಿಗೆ ಭದ್ರಾ ಜಲಾಶಯದ ನೀರು ಸೇರಿದ್ದರಿಂದ ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು ತಾಲ್ಲೂಕಿನ ನೀರಿನ ಬವಣೆ ನೀಗಿತ್ತು. ಮಳೆ ನೀರು ಸಂಗ್ರಹಕ್ಕೆ ಮೈಸೂರು ಅರಸರು ಜಿಲ್ಲೆಯಲ್ಲೇ ಮಾದರಿಯೊಂದನ್ನು ರೂಪಿಸಿದ್ದಾರೆ. ಈ ವ್ಯವಸ್ಥೆ ಉಳಿದೆಡೆ ಕಾಣುತ್ತಿಲ್ಲ.

ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆ ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ ಬಿದ್ದ ಮಳೆ ನೀರು ಆಂಧ್ರಪ್ರದೇಶಕ್ಕೆ ಹರಿದು ಹೋಗುವ ಭೌಗೋಳಿಕ ವ್ಯವಸ್ಥೆ ನೈಸರ್ಗಿಕವಾಗಿ ಸೃಷ್ಟಿಯಾಗಿದೆ. ಐತಿಹಾಸಿಕ ಕಲ್ಲಿನ ಕೋಟೆಯ ಬೆಟ್ಟದ ಮೇಲೆ ಬಿದ್ದ ಮಳೆ ನೀರನ್ನು ಹಿಡಿದಿಡುವ ವ್ಯವಸ್ಥೆಯನ್ನು ಶತಮಾನಗಳ ಹಿಂದೆ ಪಾಳೆಗಾರರು ರೂಪಿಸಿದ್ದಾರೆ. ಕೋಟೆನಗರಿಯಲ್ಲಿ ನಿರ್ಮಾಣ ಆಗಿರುವ ಹೊಂಡ, ಕಲ್ಯಾಣಿ ಜಲಸಂರಕ್ಷಣೆಯ ಸಾಕ್ಷ್ಯದಂತೆ ಗೋಚರಿಸುತ್ತವೆ. ಈ ಜಲಮೂಲಗಳು ಭರ್ತಿಯಾದರೆ ನೀರು ಮಲ್ಲಾಪುರ ಕೆರೆ ಸೇರುತ್ತದೆ. ಕೆರೆಯಿಂದ ಕೋಡಿ ಬಿದ್ದ ನೀರು ಗೋನೂರು, ದ್ಯಾಮೇನಹಳ್ಳಿ ಕೆರೆ ತಲುಪುತ್ತದೆ. ಅಲ್ಲಿಂದ ಚಳ್ಳಕೆರೆ ತಾಲ್ಲೂಕಿನ ಸಾಣಿಕೆರೆ ಹಾಗೂ ರಾಣಿಕೆರೆಗೆ ಹರಿದು ಜಿನಗಿ ಹಳ್ಳದ ಮೂಲಕ ಆಂಧ್ರಪ್ರದೇಶಕ್ಕೆ ಸಾಗುತ್ತದೆ.

ಹಿರಿಯೂರು ತಾಲ್ಲೂಕಿನಲ್ಲಿ ಬಿದ್ದ ಮಳೆ ನೀರು ವೇದಾವತಿ ನದಿ ಸೇರುತ್ತದೆ. ನದಿ ನೀರು ಹಿಡಿದಿಡುವ ಉದ್ದೇಶದಿಂದ ಚಳ್ಳಕೆರೆ ತಾಲ್ಲೂಕಿನ ಚೌಳೂರು, ಪರಶುರಾಂಪುರ, ಪಗಡಲಬಂಡೆ, ಹರವಿಗೊಂಡನಹಳ್ಳಿ, ಜಾಜೂರು ಹಾಗೂ ನಾಗಗೊಂಡನಹಳ್ಳಿಯಲ್ಲಿ ಬ್ಯಾರೇಜುಗಳನ್ನು ಇತ್ತೀಚೆಗೆ ನಿರ್ಮಿಸಲಾಗಿದೆ. ಇವು ಭರ್ತಿಯಾದರೆ ವೇದಾವತಿ ಆಂಧ್ರಪ್ರದೇಶದತ್ತ ಮುಖ ಮಾಡುತ್ತದೆ. ಚಳ್ಳಕೆರೆ ಹಾಗೂ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಡಿಯುವ ಉದ್ದೇಶಕ್ಕಾಗಿ ವಿ.ವಿ.ಸಾಗರ ಜಲಾಶಯದಿಂದ ವೇದಾವತಿ ನದಿಗೆ ಹರಿಸಿದ ನೀರು ಹೀಗೆ ಆಂಧ್ರಪ್ರದೇಶಕ್ಕೆ ಹರಿಯಿತು ಎಂಬ ಆರೋಪ ಬೇಸಿಗೆಯಲ್ಲಿ ಕೇಳಿಬಂದಿತ್ತು.

ಆಂಧ್ರಪ್ರದೇಶಕ್ಕೆ ಹರಿಯುವ ನೀರಿಗೆ ತಡೆಯೊಡ್ಡುವಂತೆ ಮೊಳಕಾಲ್ಮುರು ತಾಲ್ಲೂಕಿನಲ್ಲಿ ಕೂಗು ಕೇಳಿಬರುತ್ತಲೇ ಇದೆ. ದಾವಣಗೆರೆ ಜಿಲ್ಲೆಯ ಜಗಳೂರು ಹಾಗೂ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನಲ್ಲಿ ಮಳೆ ಹೆಚ್ಚಾದರೆ ಮೊಳಕಾಲ್ಮುರು ತಾಲ್ಲೂಕಿನ ಜಿನಗಿಹಳ್ಳ ನದಿ ಸ್ವರೂಪ ಪಡೆಯುತ್ತದೆ. ಈ ಹಳ್ಳಕ್ಕೆ ಬೃಹತ್‌ ಬ್ಯಾರೇಜ್‌ ನಿರ್ಮಿಸಿ ನೀರು ಹಿಡಿದಿಡುವ ಸಾಧ್ಯತೆ ಇದೆ. ಆದರೆ, ಇಂತಹ ಪ್ರಯತ್ನ ಈವರೆಗೆ ನಡೆದಿಲ್ಲ.

ರಂಗಯ್ಯನದುರ್ಗ ಜಲಾಶಯಕ್ಕೆ ಜಿನಗಿಹಳ್ಳದ ನೀರು ಹರಿಸುವ ಅವಕಾಶದ ಬಗ್ಗೆ ಚಿಂತನೆ ನಡೆದಿತ್ತು. ₹ 5 ಕೋಟಿ ವೆಚ್ಚದ ಕ್ರಿಯಾ ಯೋಜನೆ ಕೂಡ ಸಿದ್ಧವಾಗಿತ್ತು. ಸರ್ಕಾರದ ಇಚ್ಛಾಶಕ್ತಿಯ ಕೊರತೆಯಿಂದ ಇದು ಕಾರ್ಯರೂಪಕ್ಕೆ ಬರಲೇ ಇಲ್ಲ. ದೇವಸಮುದ್ರ, ಚಿಕ್ಕೇರಹಳ್ಳ, ನಾಗಸಮುದ್ರ ಸೇರಿ ಹಲವು ಕೆರೆಗಳನ್ನು ಭರ್ತಿ ಮಾಡಿಸುವ ಸಾಧ್ಯತೆಯ ಬಗ್ಗೆಯೂ ಜನರು ಗಮನ ಸೆಳೆದಿದ್ದರು. ಇದು ಕೂಡ ನನೆಗುದಿಗೆ ಬಿದ್ದಿದೆ. ಮಳೆನೀರು ಸರಾಗವಾಗಿ ಆಂಧ್ರಪ್ರದೇಶಕ್ಕೆ ಹರಿಯುತ್ತಿದೆ. ಜಿಲ್ಲೆಯ ಅಂತರ್ಜಲ ಪಾತಾಳಕ್ಕೆ ಕುಸಿಯುತ್ತಿದೆ. ಸಾವಿರ ಅಡಿ ಆಳಕ್ಕೆ ಕೊಳವೆ ಬಾವಿ ಕೊರೆದರೂ ನೀರು ಮರೀಚಿಕೆಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT