ಮಂಗಳವಾರ, ಜೂನ್ 28, 2022
21 °C
ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಸೂಚನೆ

ತಂಬಾಕು ಸೇವನೆ ವಿರುದ್ಧ ಜಾಗೃತಿ ಮೂಡಿಸಿ: ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ತಂಬಾಕು ನಿಯಂತ್ರಣ ಕಾರ್ಯಕ್ರಮ ಅನುಷ್ಠಾನಗೊಳಿಸಿರುವ ಕುರಿತು ಪ್ರತಿ ಇಲಾಖೆ ಮುಖ್ಯಸ್ಥರು ಕಡ್ಡಾಯವಾಗಿ ಅನುಪಾಲನಾ ವರದಿ ಸಲ್ಲಿಸಬೇಕು. ತಂಬಾಕು ಸೇವನೆ ವಿರುದ್ಧ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ ಸೂಚಿಸಿದರು.

ಚಿತ್ರದುರ್ಗ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ‘ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ತ್ರೈಮಾಸಿಕ ಸಮನ್ವಯ ಸಮಿತಿ’ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಶಾಲಾ–ಕಾಲೇಜು ಹಾಗೂ ವಿದ್ಯಾರ್ಥಿನಿಲಯಗಳ ಆವರಣದಲ್ಲಿ ತಂಬಾಕು ಸೇವನೆ ದುಷ್ಪರಿಣಾಮಗಳ ಕುರಿತು ಭಿತ್ತಿಚಿತ್ರಗಳನ್ನು ಅಳವಡಿಸಿ, ತಂಬಾಕು ಮುಕ್ತ ಪ್ರದೇಶವನ್ನಾಗಿ ಘೋಷಿಸಿ. ಜಾತ್ರೆಗಳಲ್ಲಿ ಪ್ರದ ರ್ಶನ ಮಳಿಗೆ ಹಾಕಿ ಗ್ರಾಮೀಣ ಜನರಲ್ಲಿ ಅರಿವು ಮೂಡಿಸಿ’ ಎಂದರು.

ರಸ್ತೆ ಸಾರಿಗೆ ನಿಗಮದ ಬಸ್ ಟಿಕೆಟ್‍ಗಳಲ್ಲಿ ತಂಬಾಕು ನಿಷೇಧ ಕುರಿತ ಸಂದೇಶ ಮುದ್ರಿಸಲು ಸಾರಿಗೆ ನಿಗಮದ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು. ವೈದ್ಯರು ನೀಡುವ ಸಲಹಾ ಹಾಗೂ ಔಷಧ ಚೀಟಿಗಳಲ್ಲಿ ಸಹ ಜಾಗೃತಿ ಮೂಡಿಸಲು ಕ್ರಮಕೈಗೊಳ್ಳುವಂತೆ ತಿಳಿಸಿದರು.

ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಬಿ.ಎಂ.ಪ್ರಭುದೇವ ಮಾತನಾಡಿ, ‘ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಮೇ 31ರಂದು ಜಿಲ್ಲೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಕಲ್ಲೇನಹಳ್ಳಿ ಹಾಗೂ ಮಳಲಿ ಗ್ರಾಮಗಳನ್ನು ತಂಬಾಕು ಮುಕ್ತ ಗ್ರಾಮಗಳನ್ನಾಗಿಸಲು ಆಯ್ಕೆ ಮಾಡಲಾಗಿದೆ’ ಎಂದರು.

ತಂಬಾಕು ನಿಯಂತ್ರಣ ಕೋಶದಿಂದ ಜಿಲ್ಲೆಯಲ್ಲಿ ಕಳೆದ ವರ್ಷದಿಂದ ಈವರೆಗೆ 1,550 ಪ್ರಕರಣ ದಾಖಲಿಸಿ
₹1,59,750, ಪೊಲೀಸ್‌ ಇಲಾಖೆಯಿಂದ 2,004 ಪ್ರಕರಣದಲ್ಲಿ ₹ 2,02,300, ಅಬಕಾರಿ ಇಲಾಖೆಯಿಂದ 403 ಪ್ರಕರಣ ದಾಖಲಿಸಿ ₹ 79,300 ದಂಡ ವಸೂಲಿ ಮಾಡಲಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್‌. ರಂಗನಾಥ, ಜಿಲ್ಲಾ ತಂಬಾಕು ನಿಯಂತ್ರಣ ಅಧಿಕಾರಿ ಡಾ.ಕಾಶಿ, ಡಿವೈಎಸ್‌ಪಿ ಪಾಂಡುರಂಗ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರವಿಶಂಕರ್‌ ರೆಡ್ಡಿ, ನಗರಾಭಿವೃದ್ಧಿ ಕೋಶದ ಕೆ.ಬಿ. ನರೇಂದ್ರಬಾಬು ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು