ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ: ಆರೋಪಿ ಸುಳಿವು ನೀಡಿದ ಚಪ್ಪಲಿ, ಎಮ್ಮೆ

Last Updated 27 ಜುಲೈ 2021, 17:15 IST
ಅಕ್ಷರ ಗಾತ್ರ

ಚಿತ್ರದುರ್ಗ: ತಾಲ್ಲೂಕಿನ ಭರಮಸಾಗರ ಠಾಣಾ ವ್ಯಾಪ್ತಿಯ ಗ್ರಾಮವೊಂದರ 13 ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಭೇದಿಸಿದ ಪೊಲೀಸರು ಕೊನೆಗೂ ಆರೋಪಿಯನ್ನು ಬಂಧಿಸಿದ್ದಾರೆ. ಕೃತ್ಯ ನಡೆದ ಸ್ಥಳದಲ್ಲಿ ಪತ್ತೆಯಾದ ಚಪ್ಪಲಿ ಹಾಗೂ ಸಮೀಪದಲ್ಲೇ ಇದ್ದ ಎಮ್ಮೆ ಆರೋಪಿಯ ಸುಳಿವು ನೀಡಿದೆ.

ನಾಗರಾಜ (24) ಅಲಿಯಾಸ್‌ ರಾಜ ಬಂಧಿತ ಆರೋಪಿ. ನ್ಯಾಯಾಧೀಶರ ಎದುರು ಹಾಜರುಪಡಿಸಿದ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ. ಕೊಲೆಯಾದ ಬಾಲಕಿಯ ಪಕ್ಕದ ಮನೆ ನಿವಾಸಿಯಾದ ಆರೋಪಿ ಜುಲೈ 23ರ ಮಧ್ಯಾಹ್ನ ಕೃತ್ಯ ಎಸಗಿದ್ದನು.

‘ಬಾಲಕಿಯನ್ನು ಕಾಪಾಡುವ ಪ್ರಯತ್ನದಲ್ಲಿ ಸಾಕ್ಷ್ಯಗಳು ನಾಶವಾಗಿದ್ದವು. ತಾಂತ್ರಿಕ ಸಾಕ್ಷ್ಯಗಳು ಇಲ್ಲದಿರುವುದರಿಂದ ತನಿಖೆ ಸವಾಲಾಗಿತ್ತು. ಕೃತ್ಯ ನಡೆದ ಬಳಿಕ ಕೊಂಚವೂ ಅಳುಕದೇ ಮನೆಯಲ್ಲೇ ಇದ್ದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿತು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕಾಮುಕ ದೃಷ್ಟಿ ಬೀರುತ್ತಿದ್ದ
‘ಸಂತ್ರಸ್ತ ಬಾಲಕಿಯ ಕುಟುಂಬ ನೆಲೆಸಿದ ಸಮುದಾಯ ಭವನದ ಪಕ್ಕದ ಮನೆಯೇ ಆರೋಪಿಯ ನಿವಾಸ. ತಾಯಿ ಹಾಗೂ ಅಣ್ಣನೊಂದಿಗೆ ಆರೋಪಿ ವಾಸವಾಗಿದ್ದನು. ಎಸ್ಸೆಸ್ಸೆಲ್ಸಿ ಅನುತ್ತೀರ್ಣಗೊಂಡಿದ್ದು, ಎಮ್ಮೆ ಕಾಯುವ ಕೆಲಸ ಮಾಡಿಕೊಂಡಿದ್ದನು. ಕುಟುಂಬದ ಸದಸ್ಯರೊಂದಿಗೆ ಆಪ್ತವಾದ ಸಂಬಂಧವನ್ನು ಹೊಂದಿರಲಿಲ್ಲ’ ಎಂದರು.

‘ಮೂರು ವರ್ಷಗಳಿಂದ ಸಮುದಾಯ ಭವದಲ್ಲಿ ನೆಲೆಸಿದ್ದ ಸಂತ್ರಸ್ತ ಬಾಲಕಿಯ ಕುಟುಂಬ ಸ್ನಾನಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಂಡಿತ್ತು. ನೆರಕೆ ಕಡ್ಡಿಗಳನ್ನು ಬಳಸಿ ಮರೆ ಮಾಡಿಕೊಂಡಿತ್ತು. ಇದಕ್ಕೆ ಹೊಂದಿಕೊಂಡಂತೆ ಆರೋಪಿ ಮನೆಯ ಶೌಚಾಲಯವಿದೆ. ಬಾಲಕಿ ಸ್ನಾನ ಮಾಡುವುದನ್ನು ಕದ್ದು ನೋಡಿ ಕಾಮುಕ ದೃಷ್ಟಿ ಬೀರುತ್ತಿದ್ದನು. ಬಾಲಕಿಯ ಮೇಲೆ ಅತ್ಯಾಚಾರ ನಡೆಸಲು ಹೊಂಚು ಹಾಕಿದ್ದನು’ ಎಂದು ವಿವರಿಸಿದರು.

ಬಹಿರ್ದೆಸೆಗೆ ತೆರಳಿದ್ದನ್ನು ನೋಡಿದ್ದ
‘ಬಾಲಕಿ ಸಾಮಾನ್ಯವಾಗಿ ಒಬ್ಬಳೇ ಬಹಿರ್ದೆಸೆಗೆ ಹೋಗುತ್ತಿರಲಿಲ್ಲ. ತಂಗಿ ಅಥವಾ ತಾಯಿಯೊಂದಿಗೆ ತೆರಳುತ್ತಿದ್ದಳು. ಜುಲೈ 23ರಂದು ಮಧ್ಯಾಹ್ನ ಅವರಿಬ್ಬರೂ ಭರಮಸಾಗರಕ್ಕೆ ಹೋಗಿದ್ದರು. ಹೀಗಾಗಿ, ಬಾಲಕಿಯೊಬ್ಬಳೇ ಬಹಿರ್ದೆಸೆಗೆ ತೆರಳಿದ್ದಳು. ಎಮ್ಮೆ ಕಾಯಲು ಹೊರಟಿದ್ದ ಆರೋಪಿ ಇದನ್ನು ಗಮನಿಸಿದ್ದ. ಬಾಲಕಿ ಬಹಿರ್ದೆಸೆಗೆ ಕುಳಿತ ಸ್ಥಳದ ಅನತಿ ದೂರದಲ್ಲಿ ಎಮ್ಮೆಗಳನ್ನು ಕಟ್ಟಿಹಾಕಿದ್ದ’ ಎಂದು ಹೇಳಿದರು.

‘ಬಹಿರ್ದೆಸೆ ಮುಗಿಸಿ ಮನೆಗೆ ಮರಳಲು ಬಾಲಕಿ ಮುಂದಾದಾಗ ಏಕಾಏಕಿ ದಾಳಿ ನಡೆಸಿದ್ದಾನೆ. ಬಾಲಕಿ ಕಿರುಚದಂತೆ ಬಾಯಿ ಮುಚ್ಚಿ ಮೆಕ್ಕೆಜೋಳದ ಹೊಲಕ್ಕೆ ಎಳೆದೊಯ್ದು ಅತ್ಯಾಚಾರ ನಡೆಸಿದ್ದಾನೆ. ಬಾಲಕಿ ಇದನ್ನು ಹೇಳಬಹುದು ಎಂಬ ಆತಂಕದಿಂದ ಕತ್ತುಹಿಸುಕಿ ಕೊಲೆ ಮಾಡಿದ್ದಾನೆ. ಬಾಲಕಿ ತರಚಿದ ಗಾಯಗಳು ಆರೋಪಿಯ ಕೊರಳು, ಕೈಮೇಲೆ ಇವೆ’ ಎಂದರು.

ಪೈಶಾಚಿಕ ಕೃತ್ಯದ ವಿಕೃತ ಮನಸ್ಥಿತಿ
‘ಸಾಮಾನ್ಯವಾಗಿ ಇಂತಹ ಪೈಶಾಚಿಕ ಕೃತ್ಯ ನಡೆಸುವ ಮನಸ್ಥಿತಿ ವಿಕೃತವಾಗಿರುತ್ತದೆ. ಮಾದಕ ವಸ್ತು, ಮದ್ಯ ಸೇವನೆ ಮಾಡಿದಾಗ ಮಾತ್ರ ಹೀಗೆ ವರ್ತಿಸಲು ಸಾಧ್ಯ. ಈ ಆಯಾಮದಲ್ಲಿ ತನಿಖೆ ಆರಂಭಿಸಿದೆವು. ಇಸ್ಪಿಟ್‌ ದಂಧೆ ನಡೆಯುತ್ತಿದ್ದ ಸುಳಿವು ಆಧರಿಸಿದ ತನಿಖೆ ನಡೆಸಿದೆವು. ಆದರೆ, ಎಲ್ಲಿಯೂ ಪೂರಕ ಸಾಕ್ಷ್ಯಗಳು ಲಭ್ಯವಾಗಲಿಲ್ಲ’ ಎಂದು ಹೇಳಿದರು.

‘ಕೃತ್ಯ ಎಸಗಿದ ಬಳಿಕ ಆರೋಪಿಯ ಬಟ್ಟೆಯೂ ಕೆಸರಾಗಿದ್ದವು. ಅಲ್ಲಿಂದ ನೇರವಾಗಿ ಮನೆಗೆ ಬಂದು ಬಟ್ಟೆ ತೆಗೆದು ಸ್ನಾನ ಮಾಡಿ ಕೃತ್ಯ ನಡೆದ ಸ್ಥಳಕ್ಕೆ ತೆರಳಿದನು. ಸಮೀಪದಲ್ಲೇ ಕಟ್ಟಿದ್ದ ಎಮ್ಮೆಯನ್ನು ಬಿಚ್ಚಿಕೊಂಡು ಹೋಗಿದ್ದಾನೆ. ಬಹಿರ್ದೆಸೆಗೆ ತೆರಳಿದ ಬಾಲಕಿ ಮನೆಗೆ ಮರಳದಿರುವುದರಿಂದ ಆತಂಕಗೊಂಡ ತಾಯಿ ಕೃತ್ಯ ನಡೆದ ಸ್ಥಳಕ್ಕೆ ತೆರಳಿದ್ದಾರೆ. ಪುತ್ರಿ ಬದುಕಿರಬಹುದು ಎಂಬ ಆಸೆಯಿಂದ ಬಾಲಕಿಯನ್ನು ಎತ್ತಿಕೊಂಡು ಮನೆಗೆ ತಂದು ಮುಖ ತೊಳೆದಿದ್ದಾರೆ. ಇದರಿಂದ ಅಗತ್ಯ ಸಾಕ್ಷ್ಯಗಳು ನಾಶವಾಗಿದ್ದವು’ ಎಂದರು.

ಎಮ್ಮೆ ನೋಡಿದ ಜನ
‘ಕೃತ್ಯ ನಡೆದ ಸ್ಥಳದ ಸಮೀಪದಲ್ಲೇ ಎಮ್ಮೆ ಇದ್ದವು ಎಂಬುದರ ಬಗ್ಗೆ ಕೆಲವರು ಸುಳಿವು ನೀಡಿದರು. ಆರೋಪಿ ಮನೆಯ ಎಮ್ಮೆ, ಗ್ರಾಮದ ಇತರ ಮನೆಯ ಎಮ್ಮೆ ಹಾಗೂ ಗೂಗಲ್‌ ನೆರವಿನಿಂದ ಅಂತರ್ಜಾಲದಲ್ಲಿ ಸಿಗುವ ಎಮ್ಮೆ ಚಿತ್ರಗಳನ್ನು ಸಾಕ್ಷ್ಯ ನುಡಿದ ವ್ಯಕ್ತಿಗೆ ತೋರಿಸಿದೆವು. ಆರೋಪಿ ಮನೆಯ ಎಮ್ಮೆಯನ್ನೇ ಬಾತ್ಮೀದಾರರು ಗುರುತಿಸಿದರು. ಘಟನೆ ನಡೆದ ಮರುದಿನವೇ ಆರೋಪಿಯ ಮೇಲೆ ನಿಗಾ ಇಡಲಾಗಿತ್ತು’ ಎಂದರು.

‘ಘಟನಾ ಸ್ಥಳದಲ್ಲಿ ದೊರೆತ ಚಪ್ಪಲಿಯ ಸುಳಿವು ಹಿಡಿದು ತಂಡವೊಂದು ತನಿಖೆ ನಡೆಸಿತು. ಚಪ್ಪಲಿ ಅಂಗಡಿ ಹಾಗೂ ಗ್ರಾಮದ ಜನರ ಮಾಹಿತಿ ಆಧರಿಸಿ ಪತ್ತೆ ಮಾಡಲು ಪ್ರಯತ್ನಿಸಿದೆವು. ಚಪ್ಪಲಿಯ ಅಳತೆ ಆರೋಪಿಯ ಕಾಲಳತೆಗೆ ಸರಿ ಹೊಂದುವಂತಿತ್ತು. ಆರೋಪಿಯ ಎರಡು ಜೊತೆ ಚಪ್ಪಲಿಯಲ್ಲಿ ಒಂದು ಜೊತೆ ಇಲ್ಲದಿರುವುದು ಗೊತ್ತಾಯಿತು. ಇದೇ ಸಂದರ್ಭದಲ್ಲಿ ಉತ್ತರಪ್ರದೇಶದ ತಂಡವೊಂದು ಚಪ್ಪಲಿ ಮಾರಾಟ ಮಾಡಲು ಗ್ರಾಮಕ್ಕೆ ಭೇಟಿ ನೀಡಿತ್ತು. ಅವರನ್ನು ವಿಚಾರಣಗೆ ಒಳಪಡಿಸಲಾಯಿತು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

***
ಎಂಟು ತಿಂಗಳ ಹಿಂದೆ ಆರೋಪಿ ಕುಟುಂಬದಲ್ಲಿ ಕೋವಿಡ್‌ ದೃಢಪಟ್ಟಿತ್ತು. ಇದರಿಂದ ಸೋಂಕು ಹರಡುತ್ತದೆ ಎಂದು ಸಂತ್ರಸ್ತ ಬಾಲಕಿಯ ತಂದೆ ಮಾತನಾಡಿದ್ದರಂತೆ. ಈ ವಿಚಾರವಾಗಿ ಗಲಾಟೆಯೂ ನಡೆದಿತ್ತು.
-ಜಿ.ರಾಧಿಕಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT