ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ನಮನ: ಎಸ್‌.ಬಿ. ರಂಗನಾಥ್‌ ಸಾಹಿತ್ಯ ಸೇವೆ ಸ್ಮರಣೀಯ

ರಾಜ ಸಿರಿಗೆರೆ
Published 16 ಆಗಸ್ಟ್ 2024, 4:59 IST
Last Updated 16 ಆಗಸ್ಟ್ 2024, 4:59 IST
ಅಕ್ಷರ ಗಾತ್ರ

ಸದಾಕಾಲ ಸಾಹಿತ್ಯಾಸಕ್ತರು, ಕನ್ನಡ ಪರ ಸಂಘಟಕರು, ಹಳೆಯ ವಿದ್ಯಾರ್ಥಿಗಳು, ಶಿಕ್ಷಣಾಸಕ್ತರಿಂದ ಗಿಜಿಗಿಡುತ್ತಿದ್ದ ದಾವಣಗೆರೆಯ ತರಳಬಾಳು ನಗರದ 7ನೇ ಕ್ರಾಸ್‌ನಲ್ಲಿರುವ ʻಸರಸ್ವತಿʼಯ ಅಂಗಳದಲ್ಲಿ ಗುರುವಾರ ನೀರವಮೌನ ಆವರಿಸಿತ್ತು.

ಅಲ್ಲಿ ನಡೆಯುತ್ತಿದ್ದ ಸಮಾಜಮುಖಿ ಚರ್ಚೆಗಳಿಗೆ ಈಗ ತೆರೆಬಿದ್ದಿದೆ. ಅಲ್ಲಿನ ಚಟುವಟಿಕೆಗಳಿಗೆ ಚೈತನ್ಯರೂಪಿ ಕಳೆ ತಂದಿದ್ದ ಪ್ರೊ.ಎಸ್.ಬಿ. ರಂಗನಾಥ್‌ ಇಹಲೋಕ ತ್ಯಜಿಸಿದ್ದಾರೆ. ಆ ಅಂಗಳದಲ್ಲಿ ಈಗ ರಂಗನಾಥ್‌ ಅವರಿಲ್ಲ. ಆದರೆ, ಅವರ ಗುಣಗಾನ ಮಾಡುವವರು, ಕಂಬನಿ ಮಿಡಿಯುವವರನ್ನು ನೋಡಬಹುದಾಗಿದೆ.

ಎಸ್.ಬಿ. ರಂಗನಾಥ್‌ ಅಪ್ಪಟ ಗ್ರಾಮೀಣ ಪ್ರತಿಭೆ. 1942ರಲ್ಲಿ ಚನ್ನಗಿರಿ ತಾಲ್ಲೂಕಿನ ಕುಗ್ರಾಮ, ಯಾವುದೇ ಸೌಲಭ್ಯ ಇಲ್ಲದ ಸಿದ್ಧನಮಠದಲ್ಲಿ ನಾಡಿಗ ಬಸಪ್ಪ ಹಾಗೂ ಕಮಲಮ್ಮ ದಂಪತಿಯ ಪುತ್ರನಾಗಿ ಜನಿಸಿದ ಇವರು, ಯಾರೂ ಊಹಿಸಲಾರದ ಎತ್ತರಕ್ಕೆ ಬೆಳೆದು ಹೆಸರಾದರು.

ಚಿಕ್ಕಂದಿನಲ್ಲಿ ಬಡತನದ ಬೇಗುದಿ ಅನುಭಿಸಿದವರು. ಗೊತ್ತಿದ್ದವರ ಮನೆಯಲ್ಲಿದ್ದುಕೊಂಡು ವಿದ್ಯಾಬ್ಯಾಸ ಮಾಡಿದರು.

ರಾಜ್ಯದ ಪ್ರಮುಖ ಶಿಕ್ಷಣ ಸಂಸ್ಥೆಯಾದ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ ಬದುಕಿನ ದಾರಿಯ ಹೊಣೆಹೊತ್ತವರು ರಂಗನಾಥ್.‌ ಚಿತ್ರದುರ್ಗ, ಹೆಮ್ಮನಬೇತೂರು ಪ್ರೌಢಶಾಲೆಗಳಲ್ಲಿ ಕೆಲಸ ಮಾಡುವಾಗಲೇ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಯವರ ಮೆಚ್ಚುಗೆಗೆ ಪಾತ್ರರಾದರು. ಅಲ್ಲಿಂದ ಮುಂದೆ ಸಿರಿಗೆರೆಯ ಬಿ. ಲಿಂಗಯ್ಯ ವಸತಿಯುತ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ, ದಾವಣಗೆರೆಯ ಮಾಕನೂರು ಮಲ್ಲೇಶಪ್ಪ ಶಿಕ್ಷಣ ಕಾಲೇಜಿನ ಪ್ರಾಚಾರ್ಯರಾಗಿ ಕೆಲಸ ಮಾಡಿ ನಿವೃತ್ತಿ ಹೊಂದಿದ ಬಳಿಕ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿಯಾಗಿ, ಪ್ರಧಾನ ಕಾರ್ಯದರ್ಶಿಯಾಗಿ ವಿವಿಧ ಮಜಲುಗಳಲ್ಲಿ ಸೇವೆ ಸಲ್ಲಿಸಿದ್ದರು.

ಹಿರಿಯ ಶ್ರೀಗಳಾದ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಯವರಿಗೆ ರಂಗನಾಥ್‌ ಅವರಲ್ಲಿ ಅಪಾರ ವಿಶ್ವಾಸ. ರಂಗನಾಥ್‌ ಅವರೂ ಸಹ ತರಳಬಾಳು ಮಠ ಮತ್ತು ಶ್ರೀಗಳ ಬಗ್ಗೆ ಅಪಾರ ಶ್ರದ್ಧೆ ಬೆಳೆಸಿಕೊಂಡಿದ್ದರು. ಗುರುಗಳ ಮಾತಿಗೆ ಎಂದೂ ಎದುರಾಡದ ವ್ಯಕ್ತಿತ್ವ ಅವರದ್ದು. ಆ ಭಕ್ತಿ, ಶ್ರದ್ಧೆಯನ್ನು ಅವರು ಈಗಿನ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರಲ್ಲೂ ಇಟ್ಟಿದ್ದರು. ಶ್ರೀಗಳ ಕಾರ್ಯಕ್ಷೇತ್ರದಲ್ಲಿ ತೆರೆಮರೆಯಲ್ಲಿ ನಿಂತು ಕೆಲಸ ಮಾಡಿದ ವ್ಯಕ್ತಿತ್ವ ರಂಗನಾಥ್‌ ಅವರದು.

ರಂಗನಾಥ್‌ ಕೇವಲ ಶಿಕ್ಷಕರಾಗಿ ಮಾತ್ರ ಉಳಿಯಲಿಲ್ಲ. ಪ್ರಾಚಾರ್ಯರಾಗಿ, ಸಾಹಿತ್ಯ ಪರಿಚಾರಕರಾಗಿ, ಪತ್ರಕರ್ತರಾಗಿ, ಆಡಳಿತಗಾರರಾಗಿಯೂ ಛಾಪು ಮೂಡಿಸಿರುವ ರಂಗನಾಥ್‌ ಅವರಿಗೆ ನಾಡಿನ ಹಲವು ಲೇಖಕರ ಜೊತೆಗೆ ಒಡನಾಟ ಇತ್ತು. ಹಂಪಾ ನಾಗರಾಜಯ್ಯ, ಗೊ.ರು. ಚನ್ನಬಸಪ್ಪ, ವಿಮರ್ಶಕ ಎಚ್.ಎಸ್.‌ ರಾಘವೇಂದ್ರ ರಾವ್‌, ಕಾದಂಬರಿಕಾರ ಬಿ.ಎಲ್.‌ ವೇಣು ರಂಗನಾಥ್‌ ಅವರ ಸಾಹಿತ್ಯ ಕೊಡುಗೆಗಳನ್ನು ಮೆಚ್ಚಿಕೊಂಡಿದ್ದರು.

ಕವಿ ಕೆ.ಎಸ್.‌ ನಿಸಾರ್‌ ಅಹಮದ್‌ ಅವರ ಶಿಷ್ಯರಾಗಿದ್ದ ರಂಗನಾಥ್‌ ನಿಸಾರ್‌ ಅವರ ಸಮಗ್ರ ಕವಿತೆಗಳನ್ನು ತರಳಬಾಳು ಜಗದ್ಗುರು ಬೃಹನ್ಮಠದಿಂದ ಪ್ರಕಟಿಸುವಲ್ಲಿ ಸೇತುವಾಗಿದ್ದವರು ಎಂಬುದು ಸ್ಮರಣೀಯ.

ರಂಗನಾಥ್‌ ವೃತ್ತಿಯಿಂದ ಉತ್ತಮ ಅನುವಾದಕರಾಗಿದ್ದರು. 1970ರ ದಶಕದಲ್ಲಿಯೇ ಅವರು ಪತ್ರಕರ್ತ ಖುಷವಂತ್‌ ಸಿಂಗ್‌ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದರು. ‘ಇಲ್ಲಸ್ಟ್ರೇಟೆಡ್‌ ವೀಕ್ಲಿ’ಯಲ್ಲಿ ಪ್ರಕಟವಾಗುತ್ತಿದ್ದ ಅವರ ಹಲವು ಸಣ್ಣಕಥೆಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಗೊಳಿಸುವ ಕೆಲಸ ಮಾಡಿದ್ದರು. ಭಗವಾನ್‌ ಎಸ್.‌ ಗಿದ್ವಾನಿ ಮತ್ತು ಮಲಯಾಳಂನಲ್ಲಿ 1975ರ ಸುಮಾರಿನಲ್ಲಿ ಬರೆಯುತ್ತಿದ್ದ ಶಂಕರ್‌ ಪಿಳ್ಳೈ ಅವರ ಹಲವು ಕಥೆಗಳನ್ನು ರಂಗನಾಥ್‌ ಅನುವಾದಿಸಿದ್ದರು. ಸಣ್ಣಕಥೆಗಳ ಅನುವಾದಿತ ಸಂಗ್ರಹ ಭುವನ್‌ ಸೋಮ್‌, ರಣಹದ್ದುಗಳ ಮಧ್ಯೆ, ಪ್ರತಿದ್ವಂದಿ ಮತ್ತು ಭಗವಾನ್‌ ಎಸ್.‌ ಗಿದ್ವಾನಿಯ ‘ದಿ ಸ್ವೋರ್ಡ್‌ ಆಫ್‌ ಟಿಪ್ಪು ಸುಲ್ತಾನ್‌’ ಕೃತಿಯನ್ನು ಕನ್ನಡಕ್ಕೆ ತಂದು ಸಾಹಿತ್ಯಾಸಕ್ತರ ಮೆಚ್ಚುಗೆ ಗಳಿಸಿದ್ದರು.

ನಿವೃತ್ತಿಯ ನಂತರವೂ ಕಾರ್ಯದ ಒತ್ತಡ ಹೆಚ್ಚಿಸಿಕೊಂಡಿದ್ದ ಅವರು ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿಯಾಗಿ ನಂತರ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದರು. ಆ ಒತ್ತಡದ ಸಮಯದಲ್ಲಿಯೂ ಬಿಡುವು ಮಾಡಿಕೊಂಡು, ಶಶಿ ತರೂರ್‌ ಅವರ ಕೇಂದ್ರ ಸಾಹಿತ್ಯ ಕೃತಿಯನ್ನು ‘ಕಗ್ಗತ್ತಲೆಯ ಕಾಲ’, ಐಎಎಸ್‌ ಅಧಿಕಾರಿ ಮದನಗೋಪಾಲ್‌ ಅವರ ‘ಮಾವೋನಿಂದ ಮಹರ್ಷಿಯವರೆಗೆ’ ಕೃತಿಗಳನ್ನು ಕನ್ನಡಕ್ಕೆ ತಂದರು.

ಅವರೊಳಗೊಬ್ಬ ಪತ್ರಕರ್ತನೂ ಇದ್ದ. ದಶಕಕ್ಕೂ ಹೆಚ್ಚು ಕಾಲ ಅವರು ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳ ಸಿರಿಗೆರೆ ವರದಿಗಾರರಾಗಿ ಕೆಲಸ ಮಾಡಿದ್ದರು. ನಿವೃತ್ತಿಯ ನಂತರವೂ ಅವರು ‘ಪ್ರಜಾವಾಣಿ’ಯ ‘ಚುರಮುರಿ’ ವಿಭಾಗಕ್ಕೆ ಕಚಗುಳಿ ಇಡುವ ಲೇಖನಗಳ ಸರಣಿಯಲ್ಲಿ ಬರೆದಿದ್ದಾರೆ. ಆ ಲೇಖನಗಳ ಸಂಗ್ರಹ ʻಎಲೆಲೆ ಮಧುಬಾಲೆʼಯೂ ಪ್ರಕಟಿತ ಕೃತಿಯಲ್ಲಿ ಸೇರಿದೆ.

ವಿಭಜನಾಪೂರ್ವ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಆಗಿ ಸೇವೆ ಸಲ್ಲಿಸಿದ್ದ ಇವರು, ನಗರದಲ್ಲಿರುವ ಕನ್ನಡ ಭವನ ನಿರ್ಮಾಣದ ಹಿಂದೆ ಶ್ರಮಿಸಿದ್ದರು. ಕುವೆಂಪು ವಿಶ್ವವಿದ್ಯಾಲಯದ ಶಿಕ್ಷಣ ಮಂಡಳಿ, ಸಿಂಡಿಕೇಟ್, ಸೆನೆಟ್, ಕರ್ನಾಟಕ ಶಿಲ್ಪಕಲಾ ಅಕಾಡಮಿ ಮುಂತಾದವುಗಳ ಸದಸ್ಯರಾಗಿ ಕಾರ್ಯನಿರ್ವಹಿಸಿದ ಅನುಭವಿಗಳು ಅಗಿದ್ದರು.

ರಂಗನಾಥ್‌ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಶ್ರೀ ಪ್ರಶಸ್ತಿ, ಮಹಾಲಿಂಗ ಪ್ರಶಸ್ತಿ, ತಾಲ್ಲೂಕು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಉತ್ತಮ ಸೇವಾ ಪ್ರಶಸ್ತಿ ಸೇರಿ ಅನೇಕ ಗೌರವಗಳು ಸಂದಿವೆ. 'ಕಗ್ಗತ್ತಲೆಯ ಕಾಲ' ಕೃತಿಗೆ 2021ರ ಶ್ರೇಷ್ಠ ಅನುವಾದ ಕೃತಿಯೆಂದು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿಯೂ ಬಂದಿದೆ.

ಹಲವು ಸಾಮಾಜಿಕ ವಿಷಮತೆಗಳ ನಡುವೆಯೂ ರಂಗನಾಥ್‌ ಅದ್ಭುತವಾದುದನ್ನು ಸಾಧಿಸಿ ಹೋಗಿದ್ದಾರೆ. ಇನ್ನು ನೆನಪಾದ ಅವರ ಸೇವೆ ಸದಾ ಸ್ಮರಣೀಯವಾಗಬೇಕಷ್ಟೇ.

ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪುರಸ್ಕಾರ ಗೌರವದ ಸಂದರ್ಭ
ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪುರಸ್ಕಾರ ಗೌರವದ ಸಂದರ್ಭ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT