ಬುಧವಾರ, ಮಾರ್ಚ್ 22, 2023
19 °C

ನಿತ್ರಾಣ ಸ್ಥಿತಿಯಲ್ಲಿ ಸಮೂಹ ಸಾರಿಗೆ

ಜಿ.ಬಿ. ನಾಗರಾಜ್‌ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಕೊರೊನಾ ಸೋಂಕು ದೇಶಕ್ಕೆ ಕಾಲಿಟ್ಟ ಬಳಿಕ ಆರ್ಥಿಕ ಕ್ಷೇತ್ರ ತಲ್ಲಣಿಸಿದೆ. ಸೋಂಕಿನ ತೀವ್ರತೆ ಹೆಚ್ಚಾಗಿ ಲಾಕ್‌ಡೌನ್‌ ಘೋಷಣೆಯಾದ ಪರಿಣಾಮವಾಗಿ ಹಲವು ಉದ್ಯಮಗಳು ಸಂಕಷ್ಟಕ್ಕೆ ಸಿಲುಕಿವೆ. ಕೊರೊನಾ ಸೋಂಕು ಸೃಷ್ಟಿಸಿದ ಉಕ್ಕಿನ ಸರಪಳಿಯನ್ನು ಭೇದಿಸಲು ಸಾಧ್ಯವಾಗದೇ ಸಮೂಹ ಸಾರಿಗೆ ವ್ಯವಸ್ಥೆ ನಿತ್ರಾಣಗೊಂಡಿದೆ.

ವರ್ಷದ ಹಿಂದೆ ಅನಿರೀಕ್ಷಿತವಾಗಿ ಎದುರಾದ ಲಾಕ್‌ಡೌನ್, ಸಾರಿಗೆ ಉದ್ಯಮವನ್ನು ಸಂಕಷ್ಟಕ್ಕೆ ದೂಡಿತು. ಸೋಂಕಿನ ತೀವ್ರತೆ ಕಡಿಮೆಯಾಗಿ
ಪರಿಸ್ಥಿತಿ ಸಹಜತೆಗೆ ಮರಳುತ್ತಿದೆ ಎನ್ನುವಾಗ ಕಾಣಿಸಿಕೊಂಡ ಎರಡನೇ ಅಲೆ ಸಮೂಹ ಸಾರಿಗೆ ವ್ಯವಸ್ಥೆಯನ್ನು ಪ್ರಪಾತಕ್ಕೆ ತಳ್ಳಿದೆ. ಸಾರಿಗೆ ವ್ಯವಸ್ಥೆಯನ್ನೇ
ನಂಬಿ ಸಂಪರ್ಕ ಸಾಧಿಸುತ್ತಿದ್ದ ಪ್ರಯಾಣಿಕರು ಸಮಸ್ಯೆಯ ಸುಳಿಗೆ ಸಿಲುಕಿದ್ದಾರೆ.

ಏಪ್ರಿಲ್‌ ಎರಡನೇ ವಾರದಲ್ಲಿ ಕೊರೊನಾ ಸೋಂಕಿನ ವೇಗ ಹೆಚ್ಚಾದಂತೆ ಸಮೂಹ ಸಾರಿಗೆಯ ವೇಗ ಕಡಿಮೆ ಆಯಿತು. ಅಧಿಕೃತವಾಗಿ ಲಾಕ್‌ಡೌನ್‌ ಘೋಷಣೆಯಾದ ಬಳಿಕ ಬಸ್‌ ಸೇವೆ ಸಂಪೂರ್ಣ ಸ್ಥಗಿತಗೊಂಡಿತು. ಬಸ್‌ಗಳ ಚಕ್ರಗಳು ರಸ್ತೆಯಲ್ಲಿ ಉರುಳಲಿಲ್ಲ. ಲಾಕ್‌ಡೌನ್‌ ನಿರ್ಬಂಧಗಳು ತೆರವಾದರೂ ಬಸ್‌ ಸೇವೆಗೆ ಅವಕಾಶ ಸಿಕ್ಕಿದ್ದು ಜೂನ್‌ ಕೊನೆಯ ವಾರ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಿತ್ರದುರ್ಗ ವಿಭಾಗದಲ್ಲಿ 258 ಬಸ್‌ಗಳಿವೆ. ಸುಮಾರು 250 ಮಾರ್ಗಗಳಲ್ಲಿ ಈ ಬಸ್‌ಗಳು
ಸಂಚರಿಸುತ್ತವೆ. ಇವುಗಳಲ್ಲಿ ಶೇ 40ರಷ್ಟು ಮಾರ್ಗಗಳು ಗ್ರಾಮೀಣ ಪ್ರದೇಶದಲ್ಲಿವೆ. ವಿಭಾಗದ ವ್ಯಾಪ್ತಿಯಲ್ಲಿ ನಾಲ್ಕು ಡಿಪೊಗಳಿವೆ. ಚಿತ್ರದುರ್ಗ, ಹೊಸದುರ್ಗ, ಚಳ್ಳಕೆರೆ ಹಾಗೂ ತುಮಕೂರು ಜಿಲ್ಲೆಯ ಪಾವಗಡ ಕೂಡ ಈ ವಿಭಾಗಕ್ಕೆ ಸೇರಿದೆ. ವಿಭಾಗದ ವ್ಯಾಪ್ತಿಯಲ್ಲಿ 1,250 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಜೂನ್‌ 21ರಿಂದ ಸಂಚಾರ ಸೇವೆ ಶುರುವಾಗಿದೆ. ಆದರೂ ನಿತ್ಯ ರಸ್ತೆಗೆ ಇಳಿಯುವ ಬಸ್‌ಗಳ ಸಂಖ್ಯೆ 125 ದಾಟುತ್ತಿಲ್ಲ.

ಗ್ರಾಮೀಣ ಪ್ರದೇಶದಲ್ಲಿ ಸೋಂಕಿನ ತೀವ್ರತೆ ಹೆಚ್ಚಾಗಿರುವ ಕಾರಣಕ್ಕೆ ನಗರ ಪ್ರದೇಶಕ್ಕೆ ಮಾತ್ರ ಸೇವೆ ಸೀಮಿತಗೊಂಡಿದೆ. ಜಿಲ್ಲಾ, ತಾಲ್ಲೂಕು ಕೇಂದ್ರ, ನಗರ ಹಾಗೂ ಪಟ್ಟಣಗಳಿಗೆ ನಿಗಮದ ಬಸ್‌ಗಳು ಸಂಚರಿಸುತ್ತಿವೆ. ಸೋಂಕಿನ ತೀವ್ರತೆ ಕಡಿಮೆ ಆಗುವವರೆಗೆ ಗ್ರಾಮೀಣ ಪ್ರದೇಶದ ಮಾರ್ಗಗಳಲ್ಲಿ ಸಂಚಾರ ಒದಗಿಸದಂತೆ ಸರ್ಕಾರ ಸೂಚನೆ ನೀಡಿದೆ. ಶಿವಮೊಗ್ಗ, ದಾವಣಗೆರೆ ಹಾಗೂ ಬೆಂಗಳೂರಿಗೆ ಹೆಚ್ಚು ಬಸ್‌ಗಳು ಸಂಚರಿಸುತ್ತಿವೆ. ಉಳಿದ ಸ್ಥಳಗಳಿಗೆ ನಿರೀಕ್ಷಿತ ಸ್ಪಂದನ ಸಿಗುತ್ತಿಲ್ಲ ಎಂಬುದು ಸಾರಿಗೆ ನಿಗಮದ ಅಧಿಕಾರಿಗಳ ಅನುಭವದ ಮಾತು.

‘ಬೆಳಿಗ್ಗೆ 6ರಿಂದ ಸಂಜೆ 5 ಗಂಟೆಯವರೆಗೆ ಬಸ್‌ ಸೇವೆ ಒದಗಿಸಲಾಗುತ್ತದೆ. ಅಂತರ ಕಾಪಾಡುವ ಉದ್ದೇಶದಿಂದ 55 ಆಸನ ಸಾಮರ್ಥ್ಯದ ಬಸ್ಸಿನಲ್ಲಿ 30 ಪ್ರಯಾಣಿಕರು ಕುಳಿತುಕೊಳ್ಳಲು ಮಾತ್ರ ಅವಕಾಶ ನೀಡಲಾಗುತ್ತಿದೆ. ಬೇಡಿಕೆ ಹೆಚ್ಚಿರುವ ಮಾರ್ಗಗಳಿಗೆ ಹೆಚ್ಚು ಬಸ್‌ಗಳು ಸಂಚರಿಸುತ್ತಿವೆ. ಜುಲೈ 5ರ ಬಳಿಕ ಲಾಕ್‌ಡೌನ್‌ ನಿಯಮ ಸಡಿಲಗೊಂಡರೆ ಸೇವೆ ಇನ್ನಷ್ಟು ಹೆಚ್ಚಾಗಲಿದೆ’ ಎನ್ನುತ್ತಾರೆ ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯಕುಮಾರ್‌.

45 ವರ್ಷ ಮೇಲಿನ ಸಿಬ್ಬಂದಿಯಲ್ಲಿ ಎರಡು ಡೋಸ್‌ ಲಸಿಕೆ ಪಡೆದವರನ್ನು ಮಾತ್ರ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ. 45 ವರ್ಷದ ಒಳಗಿನ ಸಿಬ್ಬಂದಿಯಲ್ಲಿ ಒಂದು ಡೋಸ್‌ ಲಸಿಕೆ ಪಡೆದಿರಬೇಕು ಎಂಬ ನಿಯಮ ಕಡ್ಡಾಯಗೊಳಿಸಲಾಗಿದೆ. ಆರೋಗ್ಯ ಸ್ಥಿತಿಯನ್ನು ನೋಡಿ ಕೆಲಸ ನೀಡಲಾಗುತ್ತಿದೆ. ಸಂಚರಿಸಿದ ಬಸ್‌ಗಳನ್ನು ನಿತ್ಯ ಸಂಜೆ ಸ್ಯಾನಿಟೈಸ್‌ ಮಾಡಲಾಗುತ್ತಿದೆ.

‘ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದರೆ ಮಾತ್ರ ಬಸ್ ಸೇವೆ ಪಡೆಯಲು ಸಾರ್ವಜನಿಕರು ಮುಂದೆ ಬರುತ್ತಾರೆ. ಶಾಲೆ–ಕಾಲೇಜು, ಕಾರ್ಖಾನೆ, ಉದ್ಯಮಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾದರೆ ಜನರು ಬಸ್‌ ಸೇವೆ ಪಡೆಯುತ್ತಾರೆ. ಇಲ್ಲವಾದರೆ ಸಾರಿಗೆ ವ್ಯವಸ್ಥೆ ಮೊದಲ ಸ್ಥಿತಿಗೆ ಮರಳುವುದು ಅನುಮಾನ’ ಎನ್ನುತ್ತಾರೆ ವಿಜಯಕುಮಾರ್‌.

ಆರ್‌ಟಿಒ ಕಚೇರಿಯಲ್ಲಿ 386 ಬಸ್‌

ಸರ್ಕಾರ ವಿಧಿಸುವ ತೆರಿಗೆಯಿಂದ ತಪ್ಪಿಸಿಕೊಳ್ಳಲು ಖಾಸಗಿ ಬಸ್‌ ಮಾಲೀಕರು ಲಾಕ್‌ಡೌನ್‌ ಸಂದರ್ಭದಲ್ಲಿ ಆರ್‌ಟಿಒಗೆ 386 ಬಸ್‌ ಒಪ್ಪಿಸಿದ್ದಾರೆ.

ಪ್ರತಿ ಮೂರು ತಿಂಗಳಿಗೊಮ್ಮೆ ಖಾಸಗಿ ಬಸ್‌ ಮಾಲೀಕರು ಸರ್ಕಾರಕ್ಕೆ ತೆರಿಗೆ ಪಾವತಿಸಬೇಕು. ಬಸ್‌ ಸಂಚಾರ ಮಾಡದಿದ್ದರೂ
ಸೇವೆ ಪಾವತಿಸುವುದು ಕಡ್ಡಾಯ. ಲಾಕ್‌ಡೌನ್‌ ಸಂದರ್ಭದಲ್ಲಿ ಬಸ್‌ ಸಂಚಾರ ಸ್ಥಗಿತಗೊಂಡಿದ್ದರಿಂದ ಮಾಲೀಕರು ಈ ಮಾರ್ಗ ಕಂಡುಕೊಂಡಿದ್ದಾರೆ.

ಜೂನ್‌ 24ರಿಂದ ಬಸ್ ಸಂಚಾರಕ್ಕೆ ಸರ್ಕಾರ ಅವಕಾಶ ನೀಡಿತ್ತು. ಒಂದು ವಾರ ಪರಿಸ್ಥಿತಿ ಅವಲೋಕಿಸಿದ ಮಾಲೀಕರು ಜುಲೈ 1ರಿಂದ ಸೇವೆ ಪ್ರಾರಂಭಿಸಿದರು. 80 ಬಸ್‌ಗಳನ್ನು ಪಡೆಯಲು ಮಾಲೀಕರು ಜುಲೈ 1ರಂದು ಪ್ರಾದೇಶಿಕ ಸಾರಿಗೆ ಅಧಿಕಾರಿಯನ್ನು ಕೇಳಿಕೊಂಡಿದ್ದಾರೆ. ಪರಿಸ್ಥಿತಿ ಅವಲೋಕಿಸಿ ಉಳಿದ ಬಸ್‌ಗಳನ್ನು ಪಡೆಯಲು ತೀರ್ಮಾನಿಸಿದ್ದಾರೆ.

ಪ್ರಯಾಣ ದರ ಹೆಚ್ಚಳ

ಡೀಸೆಲ್‌ ಬೆಲೆ ಹೆಚ್ಚಳಕ್ಕೆ ಅನುಗುಣವಾಗಿ ಖಾಸಗಿ ಬಸ್‌ ಪ್ರಯಾಣ ದರ ಶೇ 20ರಷ್ಟು ಹೆಚ್ಚಳವಾಗಲಿದೆ. ಈ ಸಂಬಂಧ ಖಾಸಗಿ ಬಸ್‌ ಮಾಲೀಕರು ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಲಿಖಿತ ಮಾಹಿತಿ ನೀಡಿದ್ದಾರೆ.

‘ಪ್ರತಿ ಕಿ.ಮೀ ಪ್ರಯಾಣ ದರವನ್ನು ₹ 1.20ಪೈಸೆಗೆ ನಿಗದಿ ಮಾಡಲಾಗಿದೆ. ಇಂಧನದ ಬೆಲೆ ಏರಿಕೆಯ ನಡುವೆ ಈ ದರಕ್ಕೆ ಸೇವೆ ಒದಿಸಲು ಸಾಧ್ಯವಿಲ್ಲ. ಆಸನದ ಸಾಮರ್ಥ್ಯದ ಶೇ 50ರಷ್ಟು ಪ್ರಯಾಣಿಕರಿಗೆ ಮಾತ್ರ ಸೇವೆ ನೀಡಲು ನಿರ್ಬಂಧವಿದೆ. ಇದು ನಷ್ಟದ ಪ್ರಮಾಣ ಇನ್ನಷ್ಟು ಹೆಚ್ಚಾಗಲು ಕಾರಣವಾಗಿದೆ. ಹೀಗಾಗಿ, ಶೇ 20ರಷ್ಟು ದರ ಏರಿಕೆ ಮಾಡಲು ಮಾಲೀಕರು ತೀರ್ಮಾನಿಸಿದ್ದೇವೆ’ ಎಂದು ಖಾಸಗಿ ಬಸ್‌ ಮಾಲೀಕರ ಸಂಘದ ಅಧ್ಯಕ್ಷ ಬಿ.ಎ. ಲಿಂಗಾರೆಡ್ಡಿ ತಿಳಿಸಿದ್ದಾರೆ.

ತೆರಿಗೆ ರದ್ದತಿಗೆ ಪಟ್ಟು

ಮೋಟಾರು ವಾಹನ ತೆರಿಗೆಯನ್ನು ಆರು ತಿಂಗಳ ಕಾಲ ರದ್ದುಪಡಿಸುವಂತೆ ಖಾಸಗಿ ಬಸ್‌ ಮಾಲೀಕರು ಪಟ್ಟು ಹಿಡಿದಿದ್ದಾರೆ. ಈ ಸಂಬಂದ ಚರ್ಚಿಸಲು ಅವಕಾಶ ಕಲ್ಪಿಸುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಕೋರಿದ್ದಾರೆ.

‘ಸಾಲ ಮಾಡಿ ಬಸ್‌ ಖರೀದಿಸಿ ಸಂಕಷ್ಟಕ್ಕೆ ಸಿಲುಕಿದ್ದೇವೆ. ಆದಾಯ ಇಲ್ಲದಿದ್ದರೂ ಸಾಲ ಮರುಪಾವತಿ ಮಾಡುತ್ತಿದ್ದೇವೆ. ಬಡ್ಡಿಯ ಹೊರೆ ದಿನ ಕಳೆದಂತೆ ಹೆಚ್ಚಾಗುತ್ತಿದೆ. ಇದರ ನಡುವೆ ತೆರಿಗೆ ಪಾವತಿಸುವಂತೆ ಒತ್ತಾಯಿಸುವುದು ತಪ್ಪು’ ಎನ್ನುತ್ತಾರೆ ಖಾಸಗಿ ಬಸ್‌ ಮಾಲೀಕರ ಸಂಘದ ಅಧ್ಯಕ್ಷ ಲಿಂಗಾರೆಡ್ಡಿ.

‘ಎರಡೂವರೆ ತಿಂಗಳಿಂದ ಬಸ್‌ ನಿಲುಗಡೆ ಮಾಡಿದ್ದೇವೆ. ಒಂದೇ ಸ್ಥಳದಲ್ಲಿ ನಿಲ್ಲವುದರಿಂದ ಟೈರ್‌ಗಳು ಹಾಳಾಗಿವೆ. ಎಂಜಿನ್‌ ಹಾಗೂ ಇತರ ಸಮಸ್ಯೆ ಕೂಡ ಕಾಣಿಸಿಕೊಂಡಿವೆ. ದುರಸ್ತಿಗೆ ಪ್ರತಿ ಬಸ್‌ಗೆ ಲಕ್ಷದವರೆಗೂ ವೆಚ್ಚ ಮಾಡಬೇಕಿದೆ’ ಎನ್ನುತ್ತಾರೆ ಲಿಂಗಾರೆಡ್ಡಿ.

ತಪ್ಪದ ಗ್ರಾಮೀಣ ಸಾರಿಗೆ ಸಮಸ್ಯೆ

ಸುರೇಶ್‌ ನೀರಗುಂದ

ಹೊಸದುರ್ಗ: ಲಾಕ್‌ಡೌನ್‌ ಸಡಿಲಿಕೆಯಾಗಿ ಬಸ್‌ ಸಂಚಾರ ಆರಂಭವಾಗಿದ್ದರೂ ತಾಲ್ಲೂಕಿನಲ್ಲಿ ಗ್ರಾಮೀಣ ರಸ್ತೆ ಸಾರಿಗೆ ಸಮಸ್ಯೆ ತಪ್ಪಿಲ್ಲ. ಪಟ್ಟಣಕ್ಕೆ ಬರುವ ಜನರಿಗೆ ಸರಕು ಸಾಗಣೆ ವಾಹನ ಹಾಗೂ ದ್ವಿಚಕ್ರ ವಾಹನಗಳೇ ಗತಿ ಎಂಬಂತಾಗಿದೆ.

330ಕ್ಕೂ ಹೆಚ್ಚು ಹಳ್ಳಿ, 2,60,000ಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ತಾಲ್ಲೂಕು ಇದಾಗಿದೆ. ಸ್ವಾತಂತ್ರ್ಯ ಬಂದು ಏಳೂವರೆ ದಶಕ ಕಳೆದರೂ ಗ್ರಾಮೀಣ ಸಾರಿಗೆ ವ್ಯವಸ್ಥೆ ಸಮರ್ಪಕವಾಗಿಲ್ಲ. ಇದರಿಂದಾಗಿ ತಾಲ್ಲೂಕಿನ ಗಡಿಭಾಗ ಹಾಗೂ ಕುಗ್ರಾಮಗಳ ಜನರು ಪಟ್ಟಣದೊಂದಿಗೆ ಸಂಪರ್ಕ ಸಾಧಿಸಲು ಪರದಾಡುವಂತಾಗಿದೆ.

ಸಣ್ಣಕಿಟ್ಟದಹಳ್ಳಿ, ಬೇವಿನಹಳ್ಳಿ, ಐನಹಳ್ಳಿ, ಶೀರನಕಟ್ಟೆ, ಮತ್ತೋಡು, ಕಂಚೀಪುರ, ಚಿಕ್ಕಬ್ಯಾಲದಕೆರೆ, ಹುಲುಕಟ್ಟೆ, ದೇವಪುರ, ಕೋಡಿಹಳ್ಳಿ, ನಾಗತಿಹಳ್ಳಿ, ಅತ್ತಿಮಗ್ಗೆ, ಜಾನಕಲ್, ಹೆಬ್ಬಳ್ಳಿ, ಮಲ್ಲಾಪುರ, ಕೆಂಕೆರೆ, ಬಲ್ಲಾಳಸಮುದ್ರ, ಗುಡ್ಡದನೇರಲಕೆರೆ, ದೊಡ್ಡತೇಕಲವಟ್ಟಿ, ಕಂಗುವಳ್ಳಿ ಸೇರಿ ಇನ್ನಿತರ ಹಳ್ಳಿಗಳ ಜನರಿಗೆ ಸಕಾಲಕ್ಕೆ ಬಸ್ ಸೌಲಭ್ಯವಿಲ್ಲ. ಸಮೂಹ ಸಾರಿಗೆ ವ್ಯವಸ್ಥೆ ಸರಿಯಲ್ಲಿದ ಪರಿಣಾಮ ದ್ವಿಚಕ್ರ ವಾಹನ ಹಾಗೂ ಕಾರು ಹೊಂದುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಬಸ್‌ ಸೌಲಭ್ಯ ಇಲ್ಲದಿರುವ ಗ್ರಾಮಗಳ ಜನರು ಅನಿವಾರ್ಯವಾಗಿ ಬಾಡಿಗೆ ಲಗೇಜ್‌ ಆಟೊ, ಟೆಂಪೊ, ಟಾಟಾಏಸ್‌ಗಳಲ್ಲಿ ಸಂಚರಿಸುತ್ತಿದ್ದಾರೆ. ಪ್ರಯಾಣಿಕರು ಅಂತರ ಪಾಲಿಸುತ್ತಿಲ್ಲ. ಹಲವರು ಮಾಸ್ಕ್‌ ಸಹ ಹಾಕುತ್ತಿಲ್ಲ. ಕೆಲವು ಬಾಡಿಗೆ ವಾಹನ ಸವಾರರು ಹೆಚ್ಚು ಜನರನ್ನು ಹತ್ತಿಸಿಕೊಂಡು ಬರುತ್ತಿದ್ದಾರೆ. ಪ್ರಯಾಣಿಕರಿಂದ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

’ರೇಷನ್ ತರಲು ಜೇಬಲ್ಲಿ ಹಣವಿಲ್ಲ‘

ಸಾಂತೇನಹಳ್ಳಿ ಸಂದೇಶ್ ಗೌಡ

ಹೊಳಲ್ಕೆರೆ: ‘ಬಸ್ ಚಾಲನೆಯಿಂದಲೇ ಜೀವನ ನಡೆಯುತ್ತಿತ್ತು. ನಾನೇ ಮನೆಯ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದೆ. ಲಾಕ್‌ಡೌನ್‌ನಿಂದ ಬಸ್ ನಿಲ್ಲಿಸಲಾಯಿತು. ಇದರಿಂದ ಕೆಲಸವಿಲ್ಲದೆ ಮನೆಯಲ್ಲಿ ಕೂತು ಹಲವು ತಿಂಗಳುಗಳೇ ಉರುಳಿದವು. ಮನೆಗೆ ರೇಷನ್ ತರಲೂ ದುಡ್ಡಿಲ್ಲ’ ಎಂದು ಖಾಸಗಿ ಬಸ್ ಚಾಲಕ ಎಲ್.ಮಧು ನೋವು ತೋಡಿಕೊಂಡರು.

‘ಚಾಲಕ ವೃತ್ತಿ ಬಿಟ್ಟರೆ ಬೇರೆ ಕೆಲಸ ಗೊತ್ತಿಲ್ಲ. ಅದರಿಂದಲೇ ದುಡಿದು ಬದುಕು ಸಾಗಿಸುತ್ತಿದ್ದೆ. ಡ್ರೈವಿಂಗ್ ಕೆಲಸಕ್ಕೆ ಹೋಗುತ್ತಿದ್ದಾಗ ನಿತ್ಯ ₹ 500 ಬಾಟಾ ಸಿಗುತ್ತಿತ್ತು. ಬಸ್ ಮಾಲೀಕರು ತಿಂಗಳಿಗೆ ₹ 3,000 ಸಂಬಳ ಕೊಡುತ್ತಿದ್ದರು. ಈಗ ದುಡಿಮೆ ಇಲ್ಲದೆ ಬರಿಗೈಲಿ ಕುಳಿತಿದ್ದೇವೆ. ಹಿಂದೆ ದುಡಿಯುತ್ತಿದ್ದಾಗ ಮನೆಯಲ್ಲಿ ಮಾಡಿದ ಸಣ್ಣಪುಟ್ಟ ಸಾಲ ತೀರಿಸುತ್ತಿದ್ದೆ. ಈಗ ಅದೂ ನಿಂತಿದ್ದು ಸಾಲದ ಜತೆ ಬಡ್ಡಿ ಬೆಳೆಯುತ್ತಿದೆ. ನಮ್ಮ ಕಷ್ಟ ಕೇಳುವವರು ಯಾರೂ ಇಲ್ಲ’ ಎನ್ನುತ್ತಾರೆ ಅವರು.

‘ಆರು ತಿಂಗಳಿನಿಂದ ಬಸ್ ನಿಲ್ಲಿಸಿದ್ದು, ಮಾಲೀಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ತೆರಿಗೆ, ವಿಮೆ ಕಟ್ಟಲೂ ಅವರ ಬಳಿ ಹಣವಿಲ್ಲ. ಈಗಿನ ಡೀಸೆಲ್ ಬೆಲೆಯಲ್ಲಿ ಬಸ್ ಓಡಿಸುವುದು ಕಷ್ಟ. ಆದ್ದರಿಂದ ಹೆಚ್ಚು ಬಸ್‌ಗಳನ್ನು ಮಾಲೀಕರು ನಿಲ್ಲಿಸಿದ್ದಾರೆ. ಇದರಿಂದ ನಮಗೆ ಮುಂದೆಯೂ ಕೆಲಸ ಸಿಗುವ ಭರವಸೆ ಇಲ್ಲ’ ಎನ್ನುತ್ತಾರೆ ಮಧು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು