ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರ ರಸ್ತೆ ಕಡಿತ: ಜನರ ಪರದಾಟ

ಕೆಲ್ಲೋಡು–ಅತ್ತಿಘಟ್ಟ ಗ್ರಾಮದ ಸಂಪರ್ಕ ರಸ್ತೆ
Last Updated 9 ಡಿಸೆಂಬರ್ 2020, 5:53 IST
ಅಕ್ಷರ ಗಾತ್ರ

ಹೊಸದುರ್ಗ: ತಾಲ್ಲೂಕಿನ ಕೆಲ್ಲೋಡು ಗ್ರಾಮದಿಂದ ಅತ್ತಿಘಟ್ಟಕ್ಕೆ ಸಂಪರ್ಕಿಸುವ 2 ಕಿ.ಮೀ ದೂರದ ರಸ್ತೆ ಕಡಿತವಾಗಿದ್ದು, ಜನರು ಪರದಾಡುವಂತಾಗಿದೆ.

ಗ್ರಾಮ ಪಂಚಾಯಿತಿ ಕೇಂದ್ರವಾಗಿರುವ ಕೆಲ್ಲೋಡಿನಲ್ಲಿ 400 ಮನೆಗಳಿದ್ದು, 2,500ಕ್ಕೂ ಅಧಿಕ ಜನ ವಾಸಿಸುತ್ತಿದ್ದಾರೆ. ಇಲ್ಲಿ ಗ್ರಾಮ ಪಂಚಾಯಿತಿ ಕಾರ್ಯಾಲಯ, ಬ್ಯಾಂಕ್‌, ಗ್ರಂಥಾಲಯ, ಪ್ರೌಢಶಾಲೆ ಇದೆ. ಇದರಿಂದ ಈ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಅತ್ತಿಘಟ್ಟ, ಲಿಂಗದಹಳ್ಳಿ, ಜೋಗಮ್ಮನಹಳ್ಳಿ ಗ್ರಾಮದ ನೂರಾರು ಜನರು ಇಲ್ಲಿಗೆ ಬಂದು ಹೋಗುತ್ತಾರೆ.

ನೇರ ರಸ್ತೆ ಸಂಪರ್ಕ ಇಲ್ಲದಿ ರುವುದರಿಂದ ಅತ್ತಿಘಟ್ಟ, ಲಿಂಗದಹಳ್ಳಿ, ಜೋಗಮ್ಮಹಳ್ಳಿ ಗ್ರಾಮದಿಂದ ಕೆಲ್ಲೋಡಿಗೆ ಬರುವ, ಹೋಗುವ ಜನರು ಗೊರವಿಗೊಂಡನ ಹಳ್ಳಿಯಿಂದ ಸುತ್ತಿಕೊಂಡು ಹೋಗುವಂತಾಗಿದೆ.

‘ಜನಪ್ರತಿನಿಧಿಗಳು,ಅಧಿಕಾರಿಗಳ ನಿರ್ಲಕ್ಷ್ಯದಿಂದ ಸ್ವಾತಂತ್ರ್ಯ ಬಂದು 7 ದಶಕಗಳು ಕಳೆದರೂ ಕೆಲ್ಲೋಡಿನಿಂದ ಅತ್ತಿಘಟ್ಟಕ್ಕೆ ಹೋಗಲು ರಸ್ತೆಯ ಸೌಲಭ್ಯ ಇಲ್ಲದಿರುವುದು ದುರಂತ.ಭೂಮಾಪನಾ ಇಲಾಖೆಯ ನಕ್ಷೆಯನ್ನು ಬಿಟ್ಟು ರೈತರೊಬ್ಬರ ಜಮೀನಿನಲ್ಲಿ 15 ವರ್ಷಗಳ ಹಿಂದೆ ಮಣ್ಣಿನ ರಸ್ತೆ ನಿರ್ಮಿಸಲಾಗಿತ್ತು. ಆ ರೈತ ತನ್ನ ಜಮೀನಿನಲ್ಲಿ ಅಕ್ರಮವಾಗಿ ರಸ್ತೆ ನಿರ್ಮಿಸಿರುವುದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ರೈತನ ಪರ ತೀರ್ಪು ಸಿಕ್ಕಿರುವುದರಿಂದ ರಸ್ತೆಯನ್ನು ಕಡಿತಗೊಳಿಸಿದ್ದಾರೆ’ ಎನ್ನುತ್ತಾರೆ ಗ್ರಾಮದ ಮುಖಂಡರಾದ ವಜ್ರಪ್ಪ, ರಾಜಣ್ಣ.

ಈ ರಸ್ತೆ ಕಡಿತಗೊಳಿಸಿ ಎರಡು ವರ್ಷ ಕಳೆದರೂ ರಸ್ತೆ ನಿರ್ಮಿಸಲು ಯಾರೂ ಮುಂದಾಗಿಲ್ಲ. ಒಂದೂವರೆ ವರ್ಷದ ಹಿಂದೆ ನಕ್ಷೆಯ ಪ್ರಕಾರ ಇಲ್ಲಿ ನೇರವಾಗಿ ರಸ್ತೆ ನಿರ್ಮಿಸಲು ಭೂಮಾಪನಾ ಇಲಾಖೆಯವರು ಸರ್ವೆ ಮಾಡಿಕೊಂಡು ಹೋದವರು ಇದುವರೆಗೂ ಬಂದಿಲ್ಲ. ಗ್ರಾಮ ಪಂಚಾಯಿತಿಯವರನ್ನು ಕೇಳಿದರೆ ಕಂದಾಯ ಇಲಾಖೆಯನ್ನು ಕೇಳಿ ಎನ್ನುತ್ತಾರೆ. ಕಂದಾಯ ಇಲಾಖೆಯವರು ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ದೂರುತ್ತಾರೆ ಅವರು.

‘ಇಲ್ಲಿ ಪ್ರೌಢಶಾಲೆ ಇರುವುದರಿಂದ ಸುತ್ತಮುತ್ತಲಿನ ಹಳ್ಳಿಯ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ. ಆದರೆ, ರಸ್ತೆ ಇಲ್ಲದಿರುವುದರಿಂದ ಅವರೂ ಗೊರವಿಗೊಂಡನ ಹಳ್ಳಿಯಿಂದ ಸೈಕಲ್‌ನಲ್ಲಿ ರಾಜ್ಯ ಹೆದ್ದಾರಿ ಮಾರ್ಗವಾಗಿ ಬರುವುದು ಅನಿವಾರ್ಯವಾಗಿದೆ. ಈ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುವುದರಿಂದ ವಿದ್ಯಾರ್ಥಿಗಳು ಭಯ ಪಡುತ್ತಿದ್ದಾರೆ. ಜಮೀನಿಗೆ ಹೋಗುವ ರೈತರಿಗೂ ತೊಂದರೆಯಾಗುತ್ತಿದೆ’ ಎನ್ನುತ್ತಾರೆ ಮುಖಂಡರಾದ ಈಶ್ವರಪ್ಪ, ಹನುಮಂತಪ್ಪ.

ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಕಾಳಜಿ ವಹಿಸಬೇಕು. ಜನರ ಹಾಗೂ ವಿದ್ಯಾರ್ಥಿಗಳ ಹಿತ ಕಾಪಾಡಲು ಕೆಲ್ಲೋಡಿನಿಂದ ಅತ್ತಿಘಟ್ಟಕ್ಕೆ ನೇರ ರಸ್ತೆ ನಿರ್ಮಿಸಬೇಕು ಎಂಬುದು ನಾಗರಿಕರ ಒತ್ತಾಯ.

*ವಾಹನ ದಟ್ಟಣೆಯ ರಸ್ತೆಯಲ್ಲಿ ವಿದ್ಯಾರ್ಥಿಗಳು ಸಂಚರಿಸುವುದು ಅಪಾಯಕಾರಿ. ಕೆಲ್ಲೋಡು–ಅತ್ತಿಘಟ್ಟ ನೇರ ರಸ್ತೆ ನಿರ್ಮಿಸಿದಲ್ಲಿ ಅಪಾಯ ತಪ್ಪುತ್ತದೆ.

-ಎಚ್‌.ಸಿದ್ದ‌ರಾಮಕ್ಕ, ನಿವೃತ್ತ ಮುಖ್ಯಶಿಕ್ಷಕಿ, ಕೆಲ್ಲೋಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT