ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಮುದ್ವೇಷ ಹೆಚ್ಚಿದರೆ ಅರಾಜಕತೆ ಸೃಷ್ಟಿ: ಎಚ್‌.ಎಸ್‌.ನಾಗಮೋಹನದಾಸ್‌ ಕಳವಳ

ನಿವೃತ್ತ ನ್ಯಾಯಮೂರ್ತಿ ಎಚ್‌.ಎಸ್‌.ನಾಗಮೋಹನದಾಸ್‌ ಕಳವಳ
Last Updated 8 ಏಪ್ರಿಲ್ 2022, 11:39 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೋಮುದ್ವೇಷ, ಮೂಲಭೂತವಾದ ಹೆಚ್ಚಾದಂತೆ ಅರಾಜಕತೆ ಸೃಷ್ಟಿಯಾಗುತ್ತದೆ. ಡಾ.ಬಿ.ಆರ್‌.ಅಂಬೇಡ್ಕರ್‌ ರಚಿಸಿದ ಸಂವಿಧಾನವನ್ನು ಕಳೆದುಕೊಂಡರೆ ಗುಲಾಮರಂತೆ ಬದುಕಬೇಕಾಗುತ್ತದೆ ಎಂದುಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್‌.ಎಸ್‌.ನಾಗಮೋಹನದಾಸ್‌ ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ತರಾಸು ರಂಗಮಂದಿರದಲ್ಲಿ ಮಾನವ ಬಂಧುತ್ವ ವೇದಿಕೆ ಎರಡು ದಿನ ಹಮ್ಮಿಕೊಂಡಿರುವ ‘ರಾಜ್ಯ ಬಂಧುತ್ವ ಸಮಾವೇಶ’ವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ. ಕೋಮುವಾದ, ಭಯೋತ್ಪಾದನೆ, ಅಸಹಿಷ್ಣುತೆ, ಸಾಂಸ್ಕೃತಿಕ ದಿವಾಳಿತನ ಹೆಚ್ಚಾಗುತ್ತಿದೆ. ಅಲ್ಪಸಂಖ್ಯಾತ ಸಮುದಾಯ ಅಭದ್ರತೆಯಲ್ಲಿ ತೊಳಲಾಡುತ್ತಿದೆ. ಅಲ್ಪಸಂಖ್ಯಾತರಲ್ಲಿ ಭೀತಿಯುಂಟು ಮಾಡುವ ದೇಶದಲ್ಲಿ ಸರ್ಕಾರ ಅಸ್ತಿತ್ವದಲ್ಲಿಲ್ಲ ಎಂದೇ ಭಾವಿಸಬೇಕಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಅಂಬೇಡ್ಕರ್‌ ಪ್ರತಿಮೆಗೆ ತಲೆಭಾಗಿ ನಮಸ್ಕರಿಸುವವರು ಬೆನ್ನಹಿಂದೆ ಚೂರಿಹಾಕುವ ಕೆಲಸ ಮಾಡುತ್ತಿದ್ದಾರೆ. ಸಂವಿಧಾನ ಬದಲಾವಣೆ ಮಾಡುವ ಹುನ್ನಾರಕ್ಕೆ ಕುಮ್ಮಕ್ಕು ನೀಡಲಾಗುತ್ತಿದೆ. ಇಂತಹ ಆಷಾಢಭೂತಿತನ ನಮಗೆ ಬೇಕಾಗಿಲ್ಲ. ಇಂಥವರ ಬಗ್ಗೆ ಇನ್ನಷ್ಟು ಎಚ್ಚರಿಕೆಯಿಂದ ಇರುವ ಅಗತ್ಯವಿದೆ’ ಎಂದು ಹೇಳಿದರು.

‘ಸಂವಿಧಾನ ಬದಲಾವಣೆ ಮಾಡುವ ಮಾತುಗಳು ಜೋರಾಗುತ್ತಿವೆ. ಅಂಬೇಡ್ಕರ್‌ ರಚಿಸಿದ ಸಂವಿಧಾನಕ್ಕೆ ಪರ್ಯಾಯವಾಗಿ ಏನೂ ಕೊಡುತ್ತೀರಿ ಎಂಬುದರ ಬಗ್ಗೆ ಸ್ಪಷ್ಟಪಡಿಸಿ. ಅಂತಹ ಪರ್ಯಾಯ ಸಂವಿಧಾನವನ್ನು ಮೊದಲು ಜನರ ಮುಂದಿಟ್ಟು ಚರ್ಚೆಗೆ ಅವಕಾಶ ಕಲ್ಪಿಸಿ. ಹಿಜಾಬ್‌, ಮಾಂಸದ ವಿಚಾರವನ್ನು ಮುಂದಿಟ್ಟುಕೊಂಡು ಅಸಹಿಷ್ಣುತೆ ಬಿತ್ತುವುದು ತಪ್ಪು’ ಎಂದರು.

‘ಮಾಂಸಾಹಾರದ ಬಗ್ಗೆ ಶಾಖಾಹಾರಿ ಪಾಠ’

ಮಾಂಸಾಹಾರವನ್ನು ಹೇಗೆ ತಿನ್ನಬೇಕು, ಯಾವುದನ್ನು ಸೇವಿಸಬೇಕೆಂಬ ವಿಚಾರಕ್ಕೆ ಸಂಬಂಧಿಸಿದಂತೆ ಶಾಖಾಹಾರಿಗಳು ಬೋಧನೆ ಮಾಡುತ್ತಿದ್ದಾರೆ ಎಂದು ಮಾನವ ಬಂಧುತ್ವ ವೇದಿಕೆ ಅಧ್ಯಕ್ಷರೂ ಆಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವ್ಯಂಗ್ಯವಾಡಿದರು.

‘ಹಲಾಲ್‌, ಜಟ್ಕಾ ವಿಚಾರಗಳನ್ನು ಉದ್ದೇಶಪೂರ್ವಕವಾಗಿ ಮುನ್ನೆಲೆಗೆ ತರಲಾಗಿದೆ. ಚುನಾವಣೆ ಸಮೀಪಿಸಿದಂತೆ ಇಂತಹ ವಿಚಾರಗಳು ಇನ್ನಷ್ಟು ಚರ್ಚೆಗೆ ಬರಲಿವೆ. ಬೆಲೆ ಏರಿಕೆ ಬಗೆಗೆ ಉಂಟಾಗಿರುವ ಅಸಮಾಧಾನವನ್ನು ನಿಭಾಯಿಸಲು ಹಾಗೂ ಜನರ ಗಮನ ಬೇರೆಡೆ ಸೆಳೆಯಲು ಭಾವನಾತ್ಮಕ ವಿಚಾರಕ್ಕೆ ವಿವಾದದ ಸ್ವರೂಪ ನೀಡಲಾಗುತ್ತಿದೆ’ ಎಂದು ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT