ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕರ್ಷಣೆ ಕಳೆದುಕೊಂಡ ಆರ್‌ಟಿಇ

ಕಾಯ್ದೆ ತಿದ್ದುಪಡಿಯಿಂದ ಸಿಗದ ಅವಕಾಶ!
Last Updated 27 ಜೂನ್ 2022, 5:11 IST
ಅಕ್ಷರ ಗಾತ್ರ

ಚಿತ್ರದುರ್ಗ: ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಆಕರ್ಷಣೆ ಕಳೆದುಕೊಂಡಿದೆ. ಕಾಯ್ದೆ ತಿದ್ದುಪಡಿಯಾದ ಬಳಿಕ ಆರ್‌ಟಿಇ ಅಡಿಯಲ್ಲಿ ಅರ್ಜಿ ಸಲ್ಲಿಸುವ ಹಾಗೂ ಪ್ರವೇಶ ಪಡೆಯುವ ಮಕ್ಕಳ ಸಂಖ್ಯೆ ಗಣನೀಯವಾಗಿ ಕುಸಿದಿದೆ.

ಸರ್ವರಿಗೂ ಗುಣಾತ್ಮಕ ಶಿಕ್ಷಣ ಸಿಗಬೇಕೆಂಬ ಮಹತ್ತರ ಉದ್ದೇಶದಿಂದ ಈ ಕಾಯ್ದೆ ರೂಪಿಸಲಾಗಿತ್ತು. ಬಡ, ಮಧ್ಯಮ ವರ್ಗದ ಕುಟುಂಬದ ಮಕ್ಕಳು ‘ಪ್ರತಿಷ್ಠಿತ’ ಖಾಸಗಿ ಶಾಲೆಗಳಲ್ಲಿ ಉಚಿತವಾಗಿ ಪ್ರವೇಶ ಪಡೆಯುವ ಅವಕಾಶ ಸಿಕ್ಕಿದ್ದಕ್ಕೆ ಸಂಭ್ರಮ ವ್ಯಕ್ತವಾಗಿತ್ತು. ಕಾಯ್ದೆಯ ನಿಯಮಾವಳಿ ಬದಲಾದ ನಂತರ ಖಾಸಗಿ ಶಾಲೆಯಲ್ಲಿ ಉಚಿತ ಪ್ರವೇಶ ಪಡೆಯುವುದು ಕಷ್ಟವಾಗಿದೆ.

ಆರ್‌ಟಿಇ ವ್ಯಾಪ್ತಿಗೆ ಒಳಪಡುವ ಖಾಸಗಿ ಶಾಲೆಗಳು ಶೇ 25ರಷ್ಟು ಸೀಟುಗಳನ್ನು ಬಡ ವಿದ್ಯಾರ್ಥಿಗಳಿಗೆ ಮೀಸಲಿಡಬೇಕು. ಜಿಲ್ಲೆಯ 59 ಖಾಸಗಿ ಶಾಲೆಗಳು ಆರ್‌ಟಿಇ ವ್ಯಾಪ್ತಿಯಲ್ಲಿದ್ದು, 369 ಸೀಟುಗಳು ಲಭ್ಯ ಇವೆ. ಪ್ರಸಕ್ತ ಶೈಕ್ಷಣಿಕ ವರ್ಷದ ಮೊದಲ ಸುತ್ತಿನಲ್ಲಿ 120 ಹಾಗೂ ಎರಡನೇ ಸುತ್ತಿನಲ್ಲಿ 55 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಇದರಲ್ಲಿ 9 ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆದಿದ್ದಾರೆ. ಇಚ್ಛಿಸಿದ ಶಾಲೆಯಲ್ಲಿ ಪ್ರವೇಶಾತಿ ಸಿಗದ ಪರಿಣಾಮ ಬಹುತೇಕ ಪೋಷಕರು ಆರ್‌ಟಿಇ ಬಗ್ಗೆ ನಿರಾಸಕ್ತಿ ತೋರುತ್ತಿದ್ದಾರೆ.

ಸೀಟುಗಳ ಸಂಖ್ಯೆ ಕುಸಿತ:

2010ರಲ್ಲಿ ಕಾಯ್ದೆ ಜಾರಿಗೆ ಬಂದಿದ್ದು, ಜಿಲ್ಲೆಯ ಅನುದಾನಿತ ಹಾಗೂ ಅನುದಾನರಹಿತ ಶಿಕ್ಷಣ ಸಂಸ್ಥೆಗಳು ಇದರ ವ್ಯಾಪ್ತಿಯಲ್ಲಿದ್ದವು. 2,000ಕ್ಕೂ ಅಧಿಕ ಸೀಟುಗಳು ಲಭ್ಯವಿದ್ದವು. 2018–19ರಲ್ಲಿ ಜಿಲ್ಲೆಯಲ್ಲಿ 279 ಶಾಲೆಗಳಲ್ಲಿ 2,726 ಸೀಟುಗಳು ಆರ್‌ಟಿಇ ಅಡಿಯಲ್ಲಿ ಲಭ್ಯವಿದ್ದವು. ಪ್ರವೇಶ ಕೋರಿ 4,541 ಅರ್ಜಿಗಳು ಸಲ್ಲಿಕೆಯಾಗಿದ್ದವು. 2019ರಲ್ಲಿ ಕಾಯ್ದೆಗೆ ತಿದ್ದುಪಡಿ ತಂದ ಬಳಿಕ ಶಾಲೆ ಹಾಗೂ ಸೀಟುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಯಿತು. 2019–20ರಲ್ಲಿ ಸೀಟುಗಳ ಸಂಖ್ಯೆ 286ಕ್ಕೆ ಇಳಿದಿದ್ದು, 16 ವಿದ್ಯಾರ್ಥಿಗಳು ಮಾತ್ರ ಪ್ರವೇಶಾತಿ ಪಡೆಯಲು ಸಾಧ್ಯವಾಯಿತು.

ಪ್ರವೇಶ ಕೋರಿ ಅರ್ಜಿ ಸಲ್ಲಿಸುವ ಮಕ್ಕಳು ಒಂದು ಕಿ.ಮೀ. ವ್ಯಾಪ್ತಿಯ ನಿವಾಸಿಯಾಗಿರಬೇಕು. ನಿಗದಿತ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆ ಇಲ್ಲದಿದ್ದರೆ ಮಾತ್ರ ಸಮೀಪದ ಖಾಸಗಿ ಶಾಲೆಯಲ್ಲಿ ಪ್ರವೇಶ ಪಡೆಯಲು ಅರ್ಹತೆ ಹೊಂದುತ್ತಾರೆ ಎಂಬುದು ಪರಿಷ್ಕೃತ ನಿಯಮ. ಗ್ರಾಮ ಹಾಗೂ ವಾರ್ಡ್‌ವಾರು ಶಿಕ್ಷಣ ಇಲಾಖೆ ಮ್ಯಾಪಿಂಗ್‌ ಮಾಡಿದೆ. ಆರ್‌ಟಿಇ ವ್ಯಾಪ್ತಿಯ ಶಾಲೆಗಳ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಪ್ರತಿ ಡಿಸೆಂಬರ್‌ ಅಥವಾ ಜನವರಿಯಲ್ಲಿ ಅರ್ಜಿ ಆಹ್ವಾನಿಸಲಾಗುತ್ತದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದವರ ಆಯ್ಕೆಗೆ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ.

ಎಲ್‌ಕೆಜಿ ಅಥವಾ 1ನೇ ತರಗತಿಯ ವಿದ್ತಾರ್ಥಿಗಳು ಆರ್‌ಟಿಇ ಅಡಿಯಲ್ಲಿ ಪ್ರವೇಶ ಪಡೆಯಬಹುದಾಗಿದೆ. ಇಂತಹ ಮಕ್ಕಳ ಶಾಲಾ ಶಿಕ್ಷಣ ಶುಲ್ಕವನ್ನು ಸರ್ಕಾರ ಭರಿಸುತ್ತದೆ. ಒಮ್ಮೆ ಪ್ರವೇಶ ಪಡೆದರೆ 8ನೇ ತರಗತಿಯವರೆಗೆ ಉಚಿತ ಶಿಕ್ಷಣ ಪಡೆಯಬಹುದಾಗಿದೆ. 2019ರವರೆಗೆ ಜಿಲ್ಲೆಯಲ್ಲಿ ಪ್ರವೇಶ ಪಡೆದವರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ ‘1’ ಹಾಗೂ ‘2ಎ’ ವಿದ್ಯಾರ್ಥಿಗಳ ಪಾಲು ಹೆಚ್ಚು.

ಸರ್ಕಾರಿ ಶಾಲೆಯತ್ತ ಮಕ್ಕಳು:

2020ರಲ್ಲಿ ಕೋವಿಡ್‌ ಸಮಸ್ಯೆ ತಲೆದೋರಿದ್ದರಿಂದ ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ಕಂಡುಬಂದಿದೆ. ಖಾಸಗಿ ಶಾಲೆಯ ಬದಲು ಹಲವು ಮಕ್ಕಳು ಸರ್ಕಾರಿ ಶಾಲೆಗಳತ್ತ ಮುಖ ಮಾಡಿದ್ದಾರೆ. 2020–21ರ ಶೈಕ್ಷಣಿಕ ವರ್ಷದ ಬಳಿಕ ಸರ್ಕಾರಿ ಶಾಲೆ ಸೇರುವ ಮಕ್ಕಳ ಸಂಖ್ಯೆಯಲ್ಲಿ ಚೇತರಿಕೆ ಕಾಣುತ್ತಿದೆ. ಸರ್ಕಾರಿ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ, ಆಂಗ್ಲ ಮಾಧ್ಯಮ, ಕರ್ನಾಟಕ ಪಬ್ಲಿಕ್‌ ಶಾಲೆ, ವಸತಿ ಸೌಲಭ್ಯ ಹೊಂದಿದ ಶಾಲೆಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸರ್ಕಾರಿ ಶಾಲೆಗಳತ್ತ ಮಕ್ಕಳು ಆಕರ್ಷಿತರಾಗುತ್ತಿದ್ದಾರೆ. ಚಿತ್ರದುರ್ಗದ ವಿ.ಪಿ.ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಂಗ್ಲಿಷ್‌ ಮಾಧ್ಯಮಕ್ಕೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದೆ.

‘ಇತ್ತೀಚೆಗೆ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ಮೂಲಸೌಲಭ್ಯಗಳು ಅಭಿವೃದ್ಧಿಗೊಳ್ಳುತ್ತಿವೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ರಾಜ್ಯದಲ್ಲೇ ಚಿತ್ರದುರ್ಗ 4ನೇ ಸ್ಥಾನ ಪಡೆದಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಬಗ್ಗೆ ಪಾಲಕರಲ್ಲಿದ್ದ ವ್ಯಾಮೋಹ ನಿಧಾನವಾಗಿ ಕಡಿಮೆಯಾಗುತ್ತಿದೆ. 2021ರಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಮಕ್ಕಳು ಶಾಲೆಗೆ ದಾಖಲಾಗಿದ್ದರು. ಇದರಲ್ಲಿ ಸರ್ಕಾರಿ ಶಾಲೆಗೆ ಪ್ರವೇಶ ಪಡೆದವರ ಸಂಖ್ಯೆಯೇ ಹೆಚ್ಚಿತ್ತು’ ಎನ್ನುತ್ತಾರೆ ಡಿಡಿಪಿಐ ರವಿಶಂಕರ್‌ ರೆಡ್ಡಿ.

ಅನುಕೂಲ ಕಲ್ಪಿಸಿದ ಸೌಲಭ್ಯ

ಸಾಂತೇನಹಳ್ಳಿ ಸಂದೇಶ್ ಗೌಡ

ಹೊಳಲ್ಕೆರೆ: ‘ಆರ್‌ಟಿಇಯಿಂದ ನಮಗೆ ಅನುಕೂಲ ಆಗಿದೆ’ ಎಂದು ಆರ್‌ಟಿಇ ಕೋಟಾದಲ್ಲಿ ಪಟ್ಟಣದ ವಾಗ್ದೇವಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿ ಆರ್.ವಿಷ್ಣು ಅವರ ಪಾಲಕಎನ್.ರಾಘವೇಂದ್ರ ತಿಳಿಸಿದರು.

‘ಖಾಸಗಿ ಶಾಲೆಗಳಲ್ಲಿ ಹೆಚ್ಚು ಶುಲ್ಕ ಇದೆ. ದುಬಾರಿ ಶುಲ್ಕ ನೀಡಿ ಮಕ್ಕಳನ್ನು ಓದಿಸುವುದು
ಬಡವರಿಗೆ ಕಷ್ಟ. ನನ್ನ ಮಗ ಎಲ್‌ಕೆಜಿ ಇದ್ದಾಗ ಆರ್‌ಟಿಇ ಸೀಟು ಸಿಕ್ಕಿತ್ತು. ಈಗ ಅವನು 7ನೇ ತರಗತಿ ತಲುಪಿದ್ದಾನೆ. 8ನೇ ತರಗತಿವರೆಗೆ ಶುಲ್ಕ ಇರುವುದಿಲ್ಲ. ನಮ್ಮಂತಹ ಬಡ ವರ್ಗದ ಕುಟುಂಬಗಳಿಗೆಆರ್‌ಟಿಇ ವರದಾನವಾಗಿದೆ’ ಎನ್ನುತ್ತಾರೆ ಅವರು.

‘ಶಾಲಾ ಶುಲ್ಕ ಬಿಟ್ಟರೆ ವಾಹನ ಶುಲ್ಕ, ಸಮವಸ್ತ್ರ, ಪುಸ್ತಕ ಹಾಗೂ ಇತರೆ ಎಲ್ಲ ಶುಲ್ಕಗಳನ್ನುನೀಡಬೇಕು. ಬಡವರು ಹೆಚ್ಚು ಶುಲ್ಕ ನೀಡಲಾಗುವುದಿಲ್ಲ. ಆರ್‌ಟಿಇ ಕೋಟಾದಲ್ಲಿ ಪ್ರವೇಶ ಪಡೆದ ಮಕ್ಕಳಿಗೆ ಎಲ್ಲವೂಉಚಿತವಾಗಿ ನೀಡಿದರೆ ಹೆಚ್ಚು ಅನುಕೂಲ ಆಗುತ್ತದೆ’ ಎನ್ನುತ್ತಾರೆ ವಾಗ್ದೇವಿ ಶಾಲೆಯ ವಿದ್ಯಾರ್ಥಿ ಸಮರ್ಥ್ ಅವರ ತಂದೆ ಸುರೇಶ್.

ಈಗ ಖಾಸಗಿ ಶಾಲೆಗಳಲ್ಲಿ ಆರ್‌ಟಿಇ ಪ್ರವೇಶ ಪಡೆಯಲು ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆ ಇರಬಾರದು
ಎಂಬ ನಿಯಮ ಇದೆ. ಹಿಂದೆ ಈ ನಿಯಮ ಇರಲಿಲ್ಲ. ಆಗ ಪಟ್ಟಣದ ವಾಗ್ದೇವಿ ಹಾಗೂ ಸಂದೀಪನಿ ಇಂಟರ್ ನ್ಯಾಷನಲ್
ಶಾಲೆಗಳಲ್ಲಿ ಆರ್‌ಟಿಇ ಕೋಟಾದಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಈಗ ಇವೆರೆಡೂ ಶಾಲೆಗಳಲ್ಲಿ ಆರ್‌ಟಿಇ
ಕೋಟಾಗೆ ಅವಕಾಶ ಇಲ್ಲ.

5 ವರ್ಷಗಳಿಂದ 1,269 ಮಕ್ಕಳಿಗೆ ಸೌಲಭ್ಯ

ಸುವರ್ಣಾ ಬಸವರಾಜ್‌

ಹಿರಿಯೂರು: ಆರ್‌ಟಿಇ ಕಾಯ್ದೆ ಜಾರಿಗೆ ಬಂದ ಆರಂಭದ ಐದು ವರ್ಷಗಳಲ್ಲಿ ನಗರದ 20 ಹಾಗೂ ಗ್ರಾಮೀಣ ಭಾಗದಲ್ಲಿರುವ 9 ಖಾಸಗಿ ಸಂಸ್ಥೆಗಳಲ್ಲಿ 1,269 ಮಕ್ಕಳು ಪ್ರವೇಶ ಪಡೆದಿದ್ದಾರೆ. ಆರ್‌ಟಿಇ ಕಾಯ್ದೆಗೆ ತಿದ್ದುಪಡಿ ತಂದಿದ್ದರಿಂದ 2017ರ ಬಳಿಕ ಮಕ್ಕಳ ಪ್ರವೇಶ ಗಣನೀಯವಾಗಿ ಕಡಿಮೆಯಾಗಿದೆ.

2012ರಲ್ಲಿ 136 ಮಕ್ಕಳು, 2013ರಲ್ಲಿ 188, 2014ರಲ್ಲಿ 240, 2015ರಲ್ಲಿ 254, 2016ರಲ್ಲಿ 225 ಹಾಗೂ 2017ರಲ್ಲಿ 226 ಮಕ್ಕಳು ತಾಲ್ಲೂಕಿನಲ್ಲಿ ಪ್ರವೇಶ ಪಡೆದಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಒಬ್ಬ ವಿದ್ಯಾರ್ಥಿಯೂ ಆರ್‌ಟಿಇ ಸೌಲಭ್ಯದಡಿ ಶಾಲೆಗೆ ದಾಖಲಾಗಿಲ್ಲ.

ಆಜಾದ್ ಬಡಾವಣೆಯಲ್ಲಿರುವ ಬಾಪೂಜಿ ಶಾಲೆಯಲ್ಲಿ 103, ಗೋಪಾಲಪುರ ಬಡಾವಣೆಯ ರೀಜನಲ್ ಶಾಲೆ 82, ವಾಣಿವಿಲಾಸ ಶಿಕ್ಷಣ ಸಂಸ್ಥೆ 81 ಹಾಗೂ ಗಂಗಾ ಸೆಂಟ್ರಲ್ ಶಾಲೆಯಲ್ಲಿ 80 ವಿದ್ಯಾರ್ಥಿಗಳು ಆರ್‌ಟಿಇ ಅಡಿಯಲ್ಲಿ ಪ್ರವೇಶ ಪಡೆದಿದ್ದಾರೆ. ಆರ್‌ಟಿಇ ಸೌಲಭ್ಯದಡಿ ಅತಿ ಹೆಚ್ಚು ವಿದ್ಯಾರ್ಥಿಗಳು ಈ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಜವನಗೊಂಡನಹಳ್ಳಿಯ ಶಾರದಾ ಶಾಲೆಯಲ್ಲಿ 74, ಗೊಲ್ಲಹಳ್ಳಿಯ ಜಾಗೃತಿ ಶಿಕ್ಷಣ ಸಂಸ್ಥೆಗಳು 70 ಮಕ್ಕಳಿಗೆ ಪ್ರವೇಶ ನೀಡಿವೆ.

‘2017ಕ್ಕಿಂತ ಹಿಂದೆ ಆರ್‌ಟಿಇ ಅಡಿ ಅರ್ಜಿ ಹಾಕಿದ್ದ ಮಕ್ಕಳಿಗೆ ಅವರು ಇಚ್ಛಿಸಿದ ಶಾಲೆಗಳಲ್ಲಿ ಪ್ರವೇಶ ಲಭ್ಯವಾಗುತ್ತಿತ್ತು. ಕಾಯ್ದೆಗೆ ತಿದ್ದುಪಡಿ ತಂದ ಬಳಿಕ ಪರಿಸ್ಥಿತಿ ಬದಲಾಗಿದೆ. ಆರ್‌ಟಿಇ ಅಡಿ ಪ್ರವೇಶ ಪಡೆದ ಮಕ್ಕಳು ಹಾಗೂ ಇತರ ವಿದ್ಯಾರ್ಥಿಗಳ ನಡುವೆ ತಾರತಮ್ಯ ಮಾಡುತ್ತಿರುವ ಬಗ್ಗೆ ಈವರೆಗೆ ಯಾವುದೇ ದೂರು ಬಂದಿಲ್ಲ’ ಎನ್ನುತ್ತಾರೆ ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ್.

* ಕಾಯ್ದೆ ತಿದ್ದುಪಡಿಯಾದ ಬಳಿಕ ಆರ್‌ಟಿಇ ವ್ಯಾಪ್ತಿಗೆ ಒಳಪಡುವ ಶಾಲೆಗಳ ಸಂಖ್ಯೆ ಕಡಿಮೆಯಾಗಿದೆ. ನಿರೀಕ್ಷಿಸಿದ ಶಾಲೆಯಲ್ಲಿ ದಾಖಲಾತಿ ಸಾಧ್ಯವಾಗದಿರುವುದರಿಂದ ಆರ್‌ಟಿಇ ಅಡಿ ಅರ್ಜಿ ಸಲ್ಲಿಸಿದರೂ ಪ್ರವೇಶ ಪಡೆಯುತ್ತಿಲ್ಲ.

-ಕೆ.ರವಿಶಂಕರ್‌ ರೆಡ್ಡಿ, ಡಿಡಿಪಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT