ಭಾನುವಾರ, ಆಗಸ್ಟ್ 18, 2019
24 °C

ಗಾಂಧೀಜಿ ದೂಷಿಸುವುದು ದೇಶದ್ರೋಹ: ಎಚ್‌.ಎಸ್‌.ದೊರೆಸ್ವಾಮಿ ಅಸಮಾಧಾನ

Published:
Updated:
Prajavani

ಚಿತ್ರದುರ್ಗ: ಯಾವ ವ್ಯಕ್ತಿಯೂ ಪರಿಪೂರ್ಣರಲ್ಲ. ಇದಕ್ಕೆ ಮಹಾತ್ಮ ಗಾಂಧೀಜಿ ಕೂಡ ಹೊರತಲ್ಲ. ಅವರನ್ನು ವಿಮರ್ಶೆ ಮಾಡಬಹುದು. ಆದರೆ, ವಿನಾ ಕಾರಣ ದೂಷಿಸುವುದು ದೇಶದ್ರೋಹ, ಮಹಾ ಅಪರಾಧ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಹೇಳಿದರು.

ತಾಲ್ಲೂಕಿನ ಸೀಬಾರದಲ್ಲಿ ರಾಷ್ಟ್ರನಾಯಕ ಎಸ್‌.ನಿಜಲಿಂಗಪ್ಪ ಮೆಮೊರಿಯಲ್ ಟ್ರಸ್ಟ್‌ ಗುರುವಾರ ಆಯೋಜಿಸಿದ್ದ ನಿಜಲಿಂಗಪ್ಪ ಅವರ 19 ನೇ ವರ್ಷದ ಪುಣ್ಯಸ್ಮರಣೆ ಹಾಗೂ ಆಗಸ್ಟ್‌ ಕ್ರಾಂತಿಯ ನೆನಪು ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

‘ಎರಡು ಶತಮಾನ ಭಾರತವನ್ನು ವಸಾಹತು ಮಾಡಿಕೊಂಡಿದ್ದ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯಲು ಸಾಕಷ್ಟು ಕಷ್ಟಪಟ್ಟಿದ್ದೇವೆ. ಅನೇರ ಬಲಿದಾನ, ತ್ಯಾಗ್ಯದ ಫಲವಾಗಿ ಸ್ವಾತಂತ್ರ್ಯ ಲಭಿಸಿದೆ. ಜನಪ್ರತಿನಿಧಿಗಳೂ ಸೇರಿದಂತೆ ಯಾರೊಬ್ಬರಿಗೂ ಇದರ ಬಗ್ಗೆ ಗೌರವವಿಲ್ಲ. ಸ್ವಾತಂತ್ರ್ಯಕ್ಕೆ ಹೋರಾಡಿದ ಮಹಾತ್ಮ ಗಾಂಧೀಜಿ ಅವರನ್ನೇ ಕೊಲ್ಲಲಾಯಿತು’ ಎಂದು ಬೇಸರ ವ್ಯಕ್ತಪಡಿಸಿದರು.

‘ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಏಳು ದಶಕ ಕಳೆದಿವೆ. ಆದರೂ, ಶೇ 30ಕ್ಕಿಂತ ಹೆಚ್ಚು ಜನರು ಬಡತನ ರೇಖೆಗಿಂತ ಕೆಳಗೆ ಇದ್ದಾರೆ. ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಹೆಚ್ಚಾಗುತ್ತಿದೆ. ಸರ್ಕಾರದ ನೀತಿ, ದೋರಣೆ ಹಾಗೂ ಪರಿಕಲ್ಪನೆಯಲ್ಲಿನ ದೋಷಗಳಿಂದ ಜನರಿಗೆ ಇಂತಹ ದುಃಸ್ಥಿತಿ ಬಂದಿದೆ’ ಎಂದು ನೋವು ತೋಡಿಕೊಂಡರು.

‘ಎಸ್‌.ನಿಜಲಿಂಗಪ್ಪ ಸೇರಿದಂತೆ ನಾವೆಲ್ಲರೂ ಬಡತನವನ್ನು ಅಪ್ಪಿಕೊಂಡು ಚಳವಳಿ ಕಟ್ಟಿದೆವು. ಹಿಟ್ಟು, ಸೊಪ್ಪು ತಿಂದು ಬದುಕುತ್ತಿದ್ದೆವು. ಬ್ರಿಟಿಷರು ತೊಲಗಿದರೂ ಅರಸರ ಗುಲಾಗಿರಿ ತೊಲಗಲಿಲ್ಲ. ಭಾಷಾವಾರು ಪ್ರಾಂತ್ಯ ರಚನೆಯ ಬಳಿಕ ಕರ್ನಾಟಕ ಅಸ್ತಿತ್ವಕ್ಕೆ ಬಂದಿದೆ’ ಎಂದು ನೆನಪಿಸಿಕೊಂಡರು.

‘ಮುಖ್ಯಮಂತ್ರಿಯಾಗಿ ನಿಜಲಿಂಗಪ್ಪ ಅವರು ಅವಿಸ್ಮರಣೀಯ ಕೆಲಸ ಮಾಡಿದ್ದಾರೆ. ದಕ್ಷತೆಯಿಂದ ಹುದ್ದೆ ನಿಭಾಯಿಸಿದರು. ಅವರಿಗೆ ಎಐಸಿಸಿ ಅಧ್ಯಕ್ಷ ಪಟ್ಟಕಟ್ಟಿ ತಪ್ಪು ಮಾಡಿದರು. ಇದೊಂದು ದುರಂತ, ಹಾಗೆ ಮಾಡಬಾರದಿತ್ತು. ಇಂದಿರಾ ಗಾಂಧಿಗೆ ಭಯ ಶುರುವಾಗಿ ವಿ.ವಿ.ಗಿರಿ ಅವರನ್ನು ಆ ಸ್ಥಾನಕ್ಕೆ ತರಲಾಯಿತು. ತುರ್ತು ಪರಿಸ್ಥಿತಿ ಹೇರಿ ಪಕ್ಷವನ್ನು ಇಬ್ಬಾಗ ಮಾಡಲಾಯಿತು. ಈಗಲೂ ಇರುವುದು ಇಂದಿರಾ ಕಾಂಗ್ರೆಸ್‌ ಅಷ್ಟೇ’ ಎಂದರು.

ರಾಜ್ಯಸಭೆಯ ಮಾಜಿ ಸದಸ್ಯ ಎಚ್‌.ಹನುಮಂತಪ್ಪ ಮಾತನಾಡಿ, ‘ಬ್ರಿಟಿಷರ ವಿರುದ್ಧ ಹಳ್ಳಿ–ಹಳ್ಳಿಯಲ್ಲೂ ಹೋರಾಟ ನಡೆದಿವೆ. ಕ್ವಿಟ್‌ ಇಂಡಿಯಾ ಚಳವಳಿಗೆ ಕರೆ ನೀಡಿದ ಬಳಿಕ ಪ್ರತಿಯೊಬ್ಬರು ಹೋರಾಟಕ್ಕೆ ಧುಮುಕಿದರು. ತುರುವನೂರು ತುಂಡು ಕಂದಾಯದ ವಿರುದ್ಧ ಜನರೇ ಹೋರಾಟ ಮಾಡಿದರು’ ಎಂದು ಹೇಳಿದರು.

ಮಹಾತ್ಮ ಗಾಂಧೀಜಿ ಅವರ ಜೀವನ ಚರಿತ್ರೆಯ ಚಿತ್ರಗಳು ಹಾಗೂ ಭದ್ರತಾ ಕೊಠಡಿಯನ್ನು ಉದ್ಘಾಟಿಸಲಾಯಿತು. ಮೆಮೊರಿಯಲ್‌ ಟ್ರಸ್ಟ್ ಅಧ್ಯಕ್ಷ ಪ್ರೊ.ಎಸ್‌.ಎನ್‌.ಕಿರಣಶಂಕರ್‌ ಇದ್ದರು.

Post Comments (+)