ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಲ್ಕ ಬಾಕಿ; ನ್ಯಾಯಾಧೀಶರ ಮಧ್ಯಸ್ಥಿಕೆಯಲ್ಲಿ ಸಿಕ್ಕಿತು ಅಂಕಪಟ್ಟಿ

ವಿದ್ಯಾರ್ಥಿನಿಗೆ ದಾಖಲಾತಿ ಹಸ್ತಾಂತರಕ್ಕೆ ಶಿಕ್ಷಣ ಸಂಸ್ಥೆ ಹಿಂದೇಟು
Last Updated 23 ಅಕ್ಟೋಬರ್ 2021, 6:27 IST
ಅಕ್ಷರ ಗಾತ್ರ

ಚಿತ್ರದುರ್ಗ: ಶುಲ್ಕ ಬಾಕಿ ಉಳಿಸಿಕೊಂಡ ವಿದ್ಯಾರ್ಥಿನಿಗೆ ವರ್ಗಾವಣೆ ಪತ್ರ ಹಾಗೂ ದ್ವಿತೀಯ ಪಿಯು ಅಂಕಪಟ್ಟಿ ನೀಡಲು ನಿರಾಕರಿಸಿದ ಖಾಸಗಿ ಶಿಕ್ಷಣ ಸಂಸ್ಥೆಯ ವಿರುದ್ಧದ ದೂರು ನ್ಯಾಯಾಧೀಶರ ಮಧ್ಯಸ್ಥಿಕೆಯಲ್ಲಿ ಬಗೆಹರಿದಿದೆ. ಎರಡು ವರ್ಷಗಳಿಂದ ಶೈಕ್ಷಣಿಕ ದಾಖಲಾತಿಗಳಿಗೆ ಕಾಯುತ್ತಿದ್ದ ವಿದ್ಯಾರ್ಥಿನಿಯ ಪ್ರಕರಣ ಸುಖಾಂತ್ಯಕಂಡಿದೆ.

ಚಿತ್ರದುರ್ಗ ನಗರದ ಕೆಳಗೋಟೆ ಬಡಾವಣೆಯ ಸಿ.ಟಿ. ಶ್ರೀನಿವಾಸ್‌ ಎಂಬುವರ ಪುತ್ರಿ ಸಿ.ಎಸ್‌. ಅನುಷಾ ಇಂಡಿಯನ್‌ ಇಂಟರ್‌ ನ್ಯಾಷನಲ್‌ ಸ್ಕೂಲ್‌ನಲ್ಲಿ ದ್ವಿತೀಯ ಪಿಯು ವ್ಯಾಸಂಗ ಮಾಡಿದ್ದರು. 2018–19ರಲ್ಲಿ ತೇರ್ಗಡೆ ಹೊಂದಿದ್ದರೂ ವರ್ಗಾವಣೆ ಪತ್ರ ಮತ್ತು ಅಂಕಪಟ್ಟಿ ಪಡೆಯಲು ಸಾಧ್ಯವಾಗಿರಲಿಲ್ಲ. ಬಾಕಿ ಶುಲ್ಕ ಪಾವತಿಸದ ಕಾರಣ ದಾಖಲೆಗಳ ಹಸ್ತಾಂತರಕ್ಕೆ ಶಿಕ್ಷಣ ಸಂಸ್ಥೆ ಹಿಂದೇಟು ಹಾಕಿತ್ತು. ಈ ಪ್ರಕರಣ ಅಂತಿಮವಾಗಿ ಕಾನೂನು ಸೇವಾ ಪ್ರಾಧಿಕಾರದಮೆಟ್ಟಿಲೇರಿತ್ತು.

ಇಂಡಿಯನ್‌ ಇಂಟರ್‌ ನ್ಯಾಷನಲ್‌ ಶಾಲೆಯಲ್ಲಿ 8ನೇ ತರಗತಿಗೆ ಪ್ರವೇಶ ಪಡೆದಿದ್ದ ಅನುಷಾ, ಎಸ್ಸೆಸ್ಸೆಲ್ಸಿಯಲ್ಲಿ ಶೇ 91ರಷ್ಟು ಅಂಕ ಪಡೆದಿದ್ದಳು. ಪ್ರಥಮ ಮತ್ತು ದ್ವಿತೀಯ ಪಿಯು ಶಿಕ್ಷಣಕ್ಕೆ ₹ 1.2 ಲಕ್ಷ ಶುಲ್ಕವನ್ನುಶಿಕ್ಷಣ ಸಂಸ್ಥೆ ನಿಗದಿ ಮಾಡಿತ್ತು. ಕಡುಬಡತನದ ಕಾರಣಕ್ಕೆ ಶುಲ್ಕ ಪಾವತಿಗೆ ವಿದ್ಯಾರ್ಥಿನಿಗೆ ಕಾಲಾವಕಾಶ ನೀಡಿತ್ತು. ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟವಾದರೂ ಶುಲ್ಕ ಬಾಕಿ ಉಳಿಸಿಕೊಂಡ ವಿದ್ಯಾರ್ಥಿನಿಗೆ ದಾಖಲೆಗಳನ್ನು ಹಸ್ತಾಂತರಿಸಲು ಶಿಕ್ಷಣ ಸಂಸ್ಥೆನಿರಾಕರಿಸಿತ್ತು.

‘ದುಬಾರಿ ಶುಲ್ಕ ಪಾವತಿ ಅಸಾಧ್ಯವೆಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದೆವು. ಹಲವು ಸುತ್ತಿನ ಮಾತುಕತೆ ಬಳಿಕ ಎರಡು ವರ್ಷಕ್ಕೆ
₹ 80 ಸಾವಿರ ಶುಲ್ಕನಿಗದಿಪಡಿಸಲಾಗಿತ್ತು. ಇದರಲ್ಲಿ ₹ 75 ಸಾವಿರವನ್ನು ಪಾವತಿ ಮಾಡಲಾಗಿತ್ತು. ಇನ್ನೂ ₹ 40 ಸಾವಿರ ಶುಲ್ಕವನ್ನು ಪಾವತಿಸುವಂತೆ ಶಿಕ್ಷಣ ಸಂಸ್ಥೆ ಪೀಡಿಸುತ್ತಿತ್ತು. ಇದೇ ಕಾರಣಕ್ಕೆ ಕಳೆದ ಎರಡು ವರ್ಷ ಮಗಳ ಶಿಕ್ಷಣ ಮೊಟಕುಗೊಂಡಿತು’ ಎಂದು ಅನುಷಾ ತಾಯಿ ಗಾಯತ್ರಿ ಬೇಸರ ವ್ಯಕ್ತಪಡಿಸಿದರು.

ಶ್ರೀನಿವಾಸ್‌ ಹಾಗೂ ಗಾಯತ್ರಿ ದಂಪತಿಗೆ ಇಬ್ಬರು ಪುತ್ರಿಯರು. ಹಿರಿಯ ಮಗಳಾದ ಅನುಷಾ ವೈದ್ಯೆಯಾಗುವ ಕನಸು ಕಟ್ಟಿಕೊಂಡಿದ್ದಳು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂಬ ಹೆಬ್ಬಯಕೆಯಿಂದ ಮಗಳನ್ನು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗೆ ಸೇರಿಸಲಾಗಿತ್ತು. ಗಾರೆ ಕೆಲಸ ಮಾಡಿಕೊಂಡು ಕುಟುಂಬ ಸಾಗಿಸುತ್ತಿರುವ ಶ್ರೀನಿವಾಸ್‌ ಅವರಿಗೆ ಶುಲ್ಕ ಭರಿಸುವುದು ಕಷ್ಟವಾಗಿತ್ತು. ನೀಟ್‌ ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್‌ ಗಳಿಸಲು 2019–20ರಲ್ಲಿ ಪದವಿ ಶಿಕ್ಷಣಕ್ಕೆ ವಿದ್ಯಾರ್ಥಿನಿ ಪ್ರವೇಶ ಪಡೆದಿರಲಿಲ್ಲ. 2020ರಲ್ಲಿ ಎದುರಾದ ಲಾಕ್‌ಡೌನ್‌ ಈ ಕನಸನ್ನು ನುಚ್ಚುನೂರು ಮಾಡಿತ್ತು. ಇದೇ ಸಂದರ್ಭದಲ್ಲಿ ಶ್ರೀನಿವಾಸ್‌ ಅವರಿಗೆ ಕಾಣಿಸಿಕೊಂಡ ಕೊರೊನಾ ಸೋಂಕು ಕುಟುಂಬವನ್ನು ಇನ್ನಷ್ಟು ಕುಗ್ಗಿಸಿತ್ತು.

‘ಕಳೆದ ವರ್ಷ ಕುಟುಂಬಕ್ಕೆ ಸಂಕಷ್ಟ ಎದುರಾಗಿತ್ತು. ಹೀಗಾಗಿ ಮಗಳು ಶಿಕ್ಷಣ ಮುಂದುವರಿಸಲು ಸಾಧ್ಯವಾಗಲಿಲ್ಲ. ಪ್ರಸಕ್ತ ಶೈಕ್ಷಣಿಕ ವರ್ಷದ ಪ್ರವೇಶಕ್ಕೆ ವರ್ಗಾವಣೆ ಪತ್ರ ಮತ್ತು ಅಂಕಪಟ್ಟಿ ಪಡೆಯಲು ಕಾಲೇಜಿಗೆ ತೆರಳಿದಾಗ ಬಾಕಿ ಶುಲ್ಕ ಪಾವತಿಸುವಂತೆ ಸೂಚಿಸಿತು. ಹೀಗಾಗಿ, ಕಾನೂನು ಸೇವಾ ಪ್ರಾಧಿಕಾರಕ್ಕೆ ದೂರು ಸಲ್ಲಿಸುವುದು ಅನಿವಾರ್ಯವಾಯಿತು’ ಎಂದು ಗಾಯತ್ರಿ ಮಾಹಿತಿ
ನೀಡಿದರು.

ಪ್ರಕರಣ ತ್ವರಿತ ಇತ್ಯರ್ಥ

ಅಂಕಪಟ್ಟಿ ಹಾಗೂ ವರ್ಗಾವಣೆ ಪತ್ರ ಕೊಡಿಸುವಂತೆ ಕೋರಿ ಅನುಷಾ ಅವರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ್ದರು. ಮಧ್ಯಸ್ಥಿಕೆ ವಹಿಸಿಕೊಂಡ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಕೆ. ಗಿರೀಶ್‌ ಕೆಲವೇ ದಿನಗಳಲ್ಲಿ ಪ್ರಕರಣ ಇತ್ಯರ್ಥಪಡಿಸಿದರು.

ದೂರು ನೀಡಿದ ವಿದ್ಯಾರ್ಥಿನಿ ಹಾಗೂ ಶಿಕ್ಷಣ ಸಂಸ್ಥೆಯ ಉಪಪ್ರಾಂಶುಪಾಲರನ್ನು ಕರೆಸಿ ನ್ಯಾಯಾಧೀಶರು ವಿಚಾರಣೆ ನಡೆಸಿದರು. ಬಾಕಿ ಉಳಿಸಿಕೊಂಡ ಶುಲ್ಕದಲ್ಲಿ ₹ 10 ಸಾವಿರ ಪಾವತಿಸುವುದಾಗಿ ವಿದ್ಯಾರ್ಥಿನಿಯ ಪೋಷಕರು ಒಪ್ಪಿಗೆ ಸೂಚಿಸಿದರು. ಬಳಿಕ ಅಗತ್ಯ ದಾಖಲಾತಿಗಳು ವಿದ್ಯಾರ್ಥಿನಿಯ ಕೈಸೇರಿದವು.

‘ಮಾನವೀಯತೆ ತೋರಿದ್ದೆವು’

‘ಪಿಯು ವ್ಯಾಸಂಗಕ್ಕೆ ಪ್ರತಿ ವರ್ಷಕ್ಕೆ ₹ 60 ಸಾವಿರ ಶುಲ್ಕವಿದೆ. ಇದರಂತೆ ಅನುಷಾ ₹ 1.2ಲಕ್ಷ ಶುಲ್ಕ ಪಾವತಿ ಮಾಡಬೇಕಿತ್ತು. ತೇರ್ಗಡೆ ಹೊಂದಿದರೂ ಒಂದು ರೂಪಾಯಿ ಶುಲ್ಕ ಕೂಡ ಪಾವತಿಸಿರಲಿಲ್ಲ. ಬಡತನದಲ್ಲಿದ್ದ ವಿದ್ಯಾರ್ಥಿನಿಗೆ ಸಂಸ್ಥೆ ಮಾನವೀಯತೆ ತೋರಿತ್ತು’ ಎಂದು ಇಂಡಿಯನ್‌ ಇಂಟರ್‌ ನ್ಯಾಷನಲ್‌ ಸ್ಕೂಲ್‌ ಪ್ರಾಂಶುಪಾಲ ಕೊಟ್ರೇಶ್‌ ಸ್ಪಷ್ಟನೆ ನೀಡಿದ್ದಾರೆ.

‘ದ್ವಿತೀಯ ಪಿಯು ವ್ಯಾಸಂಗದ ಬಳಿಕ ಅಂಕಪಟ್ಟಿ ಹಾಗೂ ವರ್ಗಾವಣೆ ಪತ್ರ ಪಡೆಯಲು ವಿದ್ಯಾರ್ಥಿನಿ ಕಾಲೇಜಿಗೆ ಬರಲಿಲ್ಲ. 2018–19ರಲ್ಲಿ ತೇರ್ಗಡೆ ಹೊಂದಿದರೂ 2021ರವರೆಗೆ ನಮ್ಮನ್ನು ಸಂಪರ್ಕಿಸಿಲ್ಲ. ಪೂರ್ಣ ಪ್ರಮಾಣದ ಶುಲ್ಕ ಪಾವತಿಸುವ ಮೊದಲೇ ಕಾನೂನು ಸೇವಾ ಪ್ರಾಧಿಕಾರದ ಮೆಟ್ಟಿಲು ಏರಿದರು. ನ್ಯಾಯಾಧೀಶರ ಎದುರು ಪ್ರಕರಣ ಇತ್ಯರ್ಥವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT