ಚಿತ್ರದುರ್ಗ: ನಗರ ವ್ಯಾಪ್ತಿಯಲ್ಲಿ 3 ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿದ್ದು, ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದು ಇವುಗಳನ್ನು ದಾಟಬೇಕಾದ ಪರಿಸ್ಥಿತಿ ಇದೆ. ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ಸಾಗಲು ಸ್ಕೈವಾಕ್ ನಿರ್ಮಿಸಿ ಎಂಬ ಒತ್ತಾಯ ದಶಕದಿಂದಲೂ ಕೇಳಿ ಬರುತ್ತಿದೆ. ಆದರೆ ಸ್ಥಳೀಯ ಆಡಳಿತ ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇದಕ್ಕೆ ಕಿವಿಗೊಡುತ್ತಿಲ್ಲ.

ರಾಷ್ಟ್ರೀಯ ಹೆದ್ದಾರಿ–48 ಬಹುಕಾಲದವರೆಗೆ ನಗರದೊಳಗೇ ಹಾದು ಹೋಗುತ್ತಿತ್ತು. ಕೆಲ ವರ್ಷಗಳ ಹಿಂದೆ ಬೈಪಾಸ್ ನಿರ್ಮಿಸಿದ ನಂತರ ಬಹುತೇಕ ವಾಹನಗಳು ಹೊರವಲಯದ ಮೂಲಕ ತೆರಳುತ್ತಿವೆ. ಆದರೆ ಹಳೆಯ ರಾಷ್ಟ್ರೀಯ ಹೆದ್ದಾರಿ ಹಾಗೆಯೇ ಇದ್ದು, ನಗರವನ್ನು 2 ಭಾಗಗಳನ್ನಾಗಿ ಬೇರ್ಪಡಿಸಿದೆ. ಹಲವು ಕಡೆ ಕೆಳಸೇತುವೆಗಳಿದ್ದರೂ ಅವು ಮಳೆಗಾಲದಲ್ಲಿ ಕೆರೆಯಂತಾಗುತ್ತವೆ.

ಹೊಸ ಬೈಪಾಸ್ ನಿರ್ಮಾಣ ಮಾಡಿದ ನಂತರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಳೇ ಹೆದ್ದಾರಿಯನ್ನು ಮರೆತಿದ್ದಾರೆ. ನಿಯಮಾನುಸಾರ ಹಳೇ ಹೆದ್ದಾರಿಯನ್ನು, ಪ್ರಾಧಿಕಾರದ ಅಧಿಕಾರಿಗಳೇ ನಿರ್ವಹಣೆ ಮಾಡಬೇಕು. ಆ ಕೆಲಸ ಆಗುತ್ತಿಲ್ಲ. ರಸ್ತೆಯಲ್ಲಿ ಕಸಕಡ್ಡಿ ಬಿದ್ದು ಚೆಲ್ಲಾಡುತ್ತಿದ್ದರೂ ಅದನ್ನು ಸ್ವಚ್ಛಗೊಳಿಸುತ್ತಿಲ್ಲ.

ಹೆದ್ದಾರಿಯುದ್ದಕ್ಕೂ ಬೆಳಕಿನ ವ್ಯವಸ್ಥೆ ಇಲ್ಲದಿದ್ದರೂ ಅಲ್ಲಿಗೆ ಕನಿಷ್ಠ ಒಂದು ಬಲ್ಬ್ ಹಾಕಿಸುವ ವ್ಯವಸ್ಥೆಯನ್ನೂ ಮಾಡಿಲ್ಲ. ಸ್ಥಳೀಯ ಆಡಳಿತ, ಪೊಲೀಸ್ ಇಲಾಖೆ ಕೂಡ ಇಲ್ಲಿ ಬೆಳಕಿನ ವ್ಯವಸ್ಥೆ ಮಾಡಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೇಲೆ ಪ್ರಕರಣ ದಾಖಲು ಮಾಡಿ ಅವರಿಂದ ಕೆಲಸ ಮಾಡಿಸುವ ಧೈರ್ಯ ಪೊಲೀಸ್ ಅಧಿಕಾರಿಗಳಿಗೆ ಇಲ್ಲವಾಗಿದೆ ಎಂದು ಸ್ಥಳೀಯರು ದೂರುತ್ತಾರೆ.

ಸ್ಕೈವಾಕ್ ಬೇಕು ಎಂದು ಜನರು ಹಲವು ವರ್ಷಗಳಿಂದ ಒತ್ತಾಯ ಮಾಡುತ್ತಿದ್ದಾರೆ. ಸಾರ್ವಜನಿಕರು ಬೇರೆ ದಾರಿ ಇಲ್ಲದೇ ನಿಯಮ ಉಲ್ಲಂಘಿಸಿ ರಸ್ತೆ ದಾಟುತ್ತಿರುವ ಕಾರಣ ಅವರ ಪ್ರಾಣಕ್ಕೆ ಸಂಚಕಾರ ಎದುರಾಗುತ್ತಿದೆ. ಎಸ್ಜೆಎಂ ಎಂಜಿನಿಯರಿಂಗ್ ಕಾಲೇಜು ಮುಂದೆ ಸ್ಕೈವಾಕ್ ಬೇಕು ಎಂಬುದು ಬಹುಕಾಲದ ಬೇಡಿಕೆ. ಅದು ಈವರೆಗೂ ಈಡೇರದ ಕಾರಣ ವಿದ್ಯಾರ್ಥಿಗಳು ಪ್ರಾಣವನ್ನು ಒತ್ತೆ ಇಟ್ಟು ರಸ್ತೆಯ ಕಾಂಪೌಂಡ್ ಹಾರಿ ಕಾಲೇಜಿಗೆ ತೆರಳುವಂತಾಗಿದೆ.

ಅಪಾಯ ಲೆಕ್ಕಿಸದೆ ವಿದ್ಯಾರ್ಥಿಗಳು ರಸ್ತೆ ದಾಟುತ್ತಿದ್ದಾರೆ ಎಂಬ ಕಾರಣಕ್ಕೆ ರಸ್ತೆಗೆ ಬೇಲಿ ಹಾಕಲಾಗಿತ್ತು. ಆದರೆ ವಿದ್ಯಾರ್ಥಿಗಳು ಅದನ್ನು ಕಿತ್ತು ಹಾಕಿ ಗೋಡೆ ಎಗರಿ ಕಾಲೇಜಿಗೆ ತೆರಳುತ್ತಿದ್ದಾರೆ. ಕಾಲೇಜು ಪ್ರಾಧ್ಯಾಪಕರು ಹಾಗೂ ಸಿಬ್ಬಂದಿಯೂ ಕಾಂಪೌಂಡ್ ಹಾರುವ ಪರಿಪಾಠ ಬೆಳೆಸಿಕೊಂಡಿದ್ದಾರೆ.

ದಾವಣಗೆರೆ ಕಡೆಯ ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳು ಸರ್ವೀಸ್ ರಸ್ತೆಯ ಮೂಲಕ ಕಾಲೇಜಿಗೆ ತೆರಳಲು ತಡವಾಗುತ್ತದೆ. ಅರ್ಧ ಕಿ.ಮೀ ದೂರ ಸಾಗಬೇಕಾಗಿದೆ. ಸಮಯ ಉಳಿಸಲು ಅವರು ರಸ್ತೆ ದಾಟಿ ಕಾಲೇಜಿಗೆ ತೆಳುತ್ತಿದ್ದಾರೆ. ಕೆಲವರು ಬಸ್ ನಿಲ್ದಾಣದಿಂದ ಆಟೊದಲ್ಲಿ ಬಂದು ಹೆದ್ದಾರಿ ಬದಿಯಲ್ಲೇ ಇಳಿಯುತ್ತಾರೆ. ಅದೇ ಕಾಂಪೌಂಡ್ ಹಾರಿ ಕಾಲೇಜಿಗೆ ತೆರಳುತ್ತಾರೆ. ಆ ಜಾಗ ಆಟೊ ನಿಲ್ದಾಣವಾಗಿಯೂ ಮಾರ್ಪಾಡಾಗಿದೆ.

ಈ ಜಾಗದಲ್ಲಿ ವಾಹನಗಳು ವೇಗವಾಗಿ ಬರುತ್ತವೆ. ಬೈಪಾಸ್ ಇದ್ದರೂ ಬಸ್ಗಳು ಚಿತ್ರದುರ್ಗದ ಪ್ರಯಾಣಿಕರನ್ನು ಇಳಿಸುವುದಕ್ಕಾಗಿ ಹಳೇ ಹೆದ್ದಾರಿಯಲ್ಲೇ ಬರುತ್ತವೆ. ಹೊರರಾಜ್ಯಗಳಿಗೆ ತೆರಳುವ ಖಾಸಗಿ ಬಸ್ಗಳೂ ಇದೇ ಮಾರ್ಗವಾಗಿ ಬರುತ್ತವೆ. ವಿದ್ಯಾರ್ಥಿಗಳು ಕಾಂಪೌಂಡ್ ದಾಟುವ ಜಾಗದಲ್ಲಿ ರಸ್ತೆಗಳಿಗೆ ಹಂಪ್ ಹಾಕಿಲ್ಲ. ವೇಗವಾಗಿ ಬರುವ ವಾಹನಗಳು ಡಿಕ್ಕಿ ಹೊಡೆಯುವ ಅಪಾಯ ಇದೆ. ಇಷ್ಟಾದರೂ ಸ್ಥಳೀಯ ಆಡಳಿತ ವಿದ್ಯಾರ್ಥಿಗಳಿಗೆ ಬದಲಿ ವ್ಯವಸ್ಥೆ ಮಾಡಿಕೊಡುವ ಕೆಲಸ ಮಾಡಿಲ್ಲ.

‘ಜೆಎಂಐಟಿ ಮುಂದೆ ಸ್ಕೈವಾಕ್ ನಿರ್ಮಾಣ ಮಾಡಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಒತ್ತಾಯಿಸಿ ಜಿಲ್ಲಾಡಳಿತ, ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ನಮ್ಮ ವಿದ್ಯಾರ್ಥಿಗಳು ಪ್ರಾಣ ಒತ್ತೆ ಇಟ್ಟು ರಸ್ತೆ ದಾಟುತ್ತಿದ್ದಾರೆ. ಪೊಲೀಸರು ಈ ಭಾಗದಲ್ಲಿ ಸ್ಕೈವಾಕ್ ನಿರ್ಮಿಸಲು ಕ್ರಮ ವಹಿಸಬೇಕು’ ಎಂದು ಜೆಎಂಐಟಿ ಸಿಬ್ಬಂದಿಯೊಬ್ಬರು ಒತ್ತಾಯಿಸಿದರು.

ನಗರ ಹೊರವಲಯದಲ್ಲಿ ಹಳೇ ರಾಷ್ಟ್ರೀಯ ಹೆದ್ದಾರಿಗೆ 2 ಸ್ಕೈವಾಕ್ ನಿರ್ಮಿಸಿದ್ದಾರೆ. ಬೆಂಗಳೂರು ಕಡೆಗೆ ಕುಂಚಿಗನಾಳ್ ಕಣಿವೆಯಲ್ಲಿ, ದಾವಣಗೆರೆ ಕಡೆ ಸೀಬಾರದಲ್ಲಿ ಸ್ಕೈವಾಕ್ಗಳಿವೆ. ಆದರೆ ಅಲ್ಲಿ ಯಾರೂ ಓಡಾಡುತ್ತಿಲ್ಲ. ಜನರು ಓಡಾಡದ ಸ್ಥಳಗಳಲ್ಲಿ ಸ್ಕೈವಾಕ್ ನಿರ್ಮಿಸಿರುವ ಕಾರಣ ಅವುಗಳು ವ್ಯರ್ಥವಾಗುತ್ತಿವೆ. ಕಬ್ಬಿಣಗಳು ತುಕ್ಕು ಹಿಡಿಯುತ್ತಿವೆ.

ನಗರ ವ್ಯಾಪ್ತಿಯಲ್ಲಿ ಮುಖ್ಯವಾಗಿ ಬಸವೇಶ್ವರ ಆಸ್ಪತ್ರೆ ಮುಂದೆ ಸ್ಕೈವಾಕ್ ನಿರ್ಮಾಣ ಮಾಡಬೇಕಾಗಿದೆ. ಆಸ್ಪತ್ರೆಗೆ ತೆರಳುವ ಸಿಬ್ಬಂದಿ ಹೆದ್ದಾರಿ ದಾಟಿ ತೆರಳುತ್ತಿದ್ದಾರೆ. ರಸ್ತೆಯ ಇನ್ನೊಂದು ಕಡೆ ಮಹಿಳೆಯರ ಹಾಸ್ಟೆಲ್ ಇದೆ. ಆಸ್ಪತ್ರೆಯಲ್ಲಿ ಕೆಲಸ ಮಾಡುವ ನರ್ಸ್ಗಳು ರಸ್ತೆ ದಾಟುವ ಕಾರಣ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಆಸ್ಪತ್ರೆ ಪಕ್ಕದಲ್ಲೇ ಡಾನ್ಬಾಸ್ಕೊ ಶಾಲೆಯಿದ್ದು, ಅಲ್ಲಿನ ವಿದ್ಯಾರ್ಥಿಗಳೂ ರಸ್ತೆ ದಾಟುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಹಳೇ ರಾಷ್ಟ್ರೀಯ ಹೆದ್ದಾರಿ ಜೊತೆಗೆ ಶಿವಮೊಗ್ಗ, ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲೂ ಸ್ಕೈವಾಕ್ ಇಲ್ಲದ ಕಾರಣ ಜನರಿಗೆ ಪ್ರಾಣ ಸಂಕಟ ಶುರುವಾಗಿದೆ.

‘ಜೆಎಂಐಟಿ ಕಾಲೇಜು, ಐಯುಡಿಪಿ ಲೇಔಟ್, ಬಸವೇಶ್ವರ ಆಸ್ಪತ್ರೆ ಮುಂದೆ ಸ್ಕೈವಾಕ್ ನಿರ್ಮಾಣ ಮಾಡಬೇಕಾಗಿದೆ. ಜಿಲ್ಲಾಡಳಿತ, ಪೊಲೀಸರು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಜನರ ಪ್ರಾಣದ ಮೇಲೆ ಕಾಳಜಿ ಇಲ್ಲವಾಗಿದೆ’ ಎಂದು ವಕೀಲ ಪ್ರತಾಪ್ ಜೋಗಿ ಅಸಮಾಧಾನ ವ್ಯಕ್ತಪಡಿಸಿದರು.

ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಸ್ಕೈವಾಕ್ ನಿರ್ಮಾಣದ ಬಗ್ಗೆ ಚರ್ಚಿಸಲಾಗಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಕೈವಾಕ್ ನಿರ್ಮಿಸಲಿದ್ದಾರೆ. ಅಲ್ಲಿಯವರೆಗೆ ಯಾರೂ ಹೆದ್ದಾರಿ ದಾಟಬಾರದು
ರಂಜಿತ್ ಕುಮಾರ್ ಬಂಡಾರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಹಳ್ಳಿ ಜನರಿಗೂ ತೊಂದರೆ

ಶಿವಗಂಗಾ ಚಿತ್ತಯ್ಯ ಚಳ್ಳಕೆರೆ: ನಗರದ ಹೊರವಲಯದಲ್ಲಿ ಶ್ರೀರಂಗಪಟ್ಟಣ –ಬೀದರ್ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ಹೆದ್ದಾರಿ ನಿರ್ಮಿಸುವ ಸಂದರ್ಭ ಸುತ್ತಲಿನ ಗ್ರಾಮಗಳ ಜನರ ಓಡಾಟಕ್ಕೆ ಪ್ರತ್ಯೇಕ ರಸ್ತೆ ನಿರ್ಮಿಸಿಲ್ಲ. ಇದರಿಂದ ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗಿದೆ. ಸಾಣಿಕೆರೆ ಹೊಟ್ಟಪ್ಪನಹಳ್ಳಿ ಗೋಪನಹಳ್ಳಿ ಸಿದ್ದಾಪುರ ಗೊರ್ಲಕಟ್ಟೆ ಬುಡ್ನಹಟ್ಟಿ ಚಿಕ್ಕಮ್ಮನ ಹಳ್ಳಿ ಕೋಡಿಹಳ್ಳಿ ಹಿರೇಹಳ್ಳಿ ತಳಕು ಗಿರಣಿ ಕ್ರಾಸ್ ಚಿತ್ರದುರ್ಗ ಮಾರ್ಗದ ಅರಣ್ಯ ಇಲಾಖೆ ಕಚೇರಿ ಮುಂತಾದ ಪ್ರದೇಶದ ಜನರ ಓಡಾಟಕ್ಕೆ ತೊಡಕಾಗಿದೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ನೆಪದಲ್ಲಿ ಹೆದ್ದಾರಿ ಬಳಿ ಅಲ್ಲಲ್ಲಿ ನಿರ್ಮಿಸಿರುವ ಮೇಲ್ಸೇತುವೆ ಅವೈಜ್ಞಾನಿಕವಾಗಿದ್ದು ಅಲ್ಪ ಪ್ರಮಾಣದ ಮಳೆ ಬಿದ್ದರೂ ನೀರು ತುಂಬಿಕೊಳ್ಳುತ್ತದೆ. ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತದೆ. ಹೆದ್ದಾರಿ ಬಳಿ ಇರುವ ಗ್ರಾಮಗಳಿಗೆ ಸರಿಯಾದ ಸಂಪರ್ಕ ರಸ್ತೆ ಇಲ್ಲದಿರುವ ಕಾರಣ ಅಪಘಾತ ಪ್ರಕರಣಗಳ ಸಂಖ್ಯೆ ದಿನದಿನವೂ ಏರುತ್ತಿದೆ. ‘ಇದನ್ನು ತಪ್ಪಿಸಲು ಹೆದ್ದಾರಿ ಪಕ್ಕದ ಗ್ರಾಮಗಳಿಗೆ ಸಂಪರ್ಕ ರಸ್ತೆ ನಿರ್ಮಿಸಿಕೊಡಬೇಕು’ ಎಂದು ಜಿಲ್ಲಾ ನವ ಜಾಗೃತಿ ಯುವ ವೇದಿಕೆ ಅಧ್ಯಕ್ಷ ಪಿಲ್ಲಹಳ್ಳಿ ಸಿ. ಚಿತ್ರಲಿಂಗಪ್ಪ ಶಾಸಕರಿಗೆ ಮನವಿ ಮಾಡಿದ್ದಾರೆ.

ಯಾರಿಗೂ ಬೇಡವಾದ ಕೆಳಸೇತುವೆ

ಸುವರ್ಣಾ ಬಸವರಾಜ್ ಹಿರಿಯೂರು: ‘ರಾಷ್ಟ್ರೀಯ ಹೆದ್ದಾರಿ 48 ಷಟ್ಪಥ ರಸ್ತೆಯಾಗುತ್ತದೆ ಎಂದು ತಿಳಿದಾಗ ಕುಣಿದು ಕುಪ್ಪಳಿಸುವಷ್ಟು ಸಂತೋಷವಾಗಿತ್ತು. ಆದರೆ ಊರುಗಳನ್ನೇ ಬೇರ್ಪಡಿಸುತ್ತದೆ ಸಂಬಂಧಗಳಿಗೆ ಕೊಳ್ಳಿ ಇಡುತ್ತದೆ ಎಂಬುದು ಕಾಮಗಾರಿ ಮುಗಿದ ಮೇಲೆ ಅರಿವಿಗೆ ಬಂತು’ ಎಂದು ಹಿರಿಯೂರು ತಾಲ್ಲೂಕಿನ ಆದಿವಾಲ ಗ್ರಾಮದ 83 ವರ್ಷದ ಜೈನುಲಾಬ್ದಿನ್ ಬೇಸರದಿಂದ ಹೇಳಿದರು. ಹೆದ್ದಾರಿ ವಿಸ್ತರಣೆ ನಂತರ ಆದಿವಾಲ ಪಟ್ರೆಹಳ್ಳಿ ಜವನಗೊಂಡನಹಳ್ಳಿ ಐಮಂಗಲ ಗ್ರಾಮಗಳು ಇಬ್ಭಾಗವಾಗಿ ಹೋಗಿವೆ. ತನ್ನೂರಿನವರನ್ನೇ ನೋಡಲು ಕಿ.ಮೀ. ದೂರ ಸುತ್ತಿ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪಟ್ರೆಹಳ್ಳಿ–ಆದಿವಾಲ ಗ್ರಾಮಗಳ ಮಧ್ಯದಲ್ಲಿ ನಿರ್ಮಿಸಿರುವ ಕೆಳಸೇತುವೆ ಯಾರಿಗೂ ಬೇಡವಾಗಿವೆ. ಬೆರಳೆಣಿಕೆಯಷ್ಟು ಮಂದಿ ಮಾತ್ರ ಇದನ್ನು ಬಳಸುತ್ತಿದ್ದಾರೆ. ಅದ್ಯಾವ ಎಂಜಿನಿಯರ್ ತಲೆ ಓಡಿಸಿ ಕೆಳಸೇತುವೆ ರೂಪಿಸಿದ್ದಾನೋ ಭಗವಂತನಿಗೇ ಪ್ರಿಯವಾಗಬೇಕು’ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ. ಜವನಗೊಂಡನಹಳ್ಳಿ ಆದಿವಾಲ ಪಟ್ರೆಹಳ್ಳಿ ಹಿರಿಯೂರು ನಗರದ ಎರಡು ಕಡೆ ಮೇಟಿಕುರ್ಕೆ ಗುಯಿಲಾಳು ಸೇರಿ ಎಲ್ಲಾ ಕಡೆಯ ಅಂಡರ್ ಪಾಸ್ಗಳ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದಿವಾಲ ಗ್ರಾಮದ ಮಧ್ಯಭಾಗದಲ್ಲಿ ಎರಡು ವಾಹನಗಳು ಸಂಚರಿಸಬಹುದಾದಷ್ಟು ಅಗಲದ ಕೆಳಸೇತುವೆ ನಿರ್ಮಿಸಬೇಕು. ಇಲ್ಲವಾದಲ್ಲಿ ಸ್ಕೈವಾಕ್ ನಿರ್ಮಿಸಬೇಕು. ಮಳೆ ಬಂದರೆ ಕೆರೆಗಳಂತಾಗುವ ಅಂಡರ್ ಪಾಸ್ಗಳನ್ನು ನೀರು ನಿಲ್ಲದಂತೆ ಮಾಡಬೇಕು. ಹಿರಿಯೂರಿನ ಪ್ರವಾಸಿ ಮಂದಿರದ ಬಳಿ ಇರುವ ಅಂಡರ್ ಪಾಸ್ ಅನ್ನು ಅಗಲೀಕರಣ ಮಾಡಿದಲ್ಲಿ ನೂರಾರು ಅಪಘಾತಗಳನ್ನು ತಪ್ಪಿಸಬಹುದು ಎಂದು ಸಾಮಾಜಿಕ ಕಾರ್ಯಕರ್ತ ಚಮನ್ ಷರೀಫ್ ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.