ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಸುಸೂತ್ರವಾಗಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ

ಆರು ವಿದ್ಯಾರ್ಥಿಗಳಲ್ಲಿ ಕೋವಿಡ್‌ ಪತ್ತೆ, 126 ವಿದ್ಯಾರ್ಥಿಗಳು ಗೈರು
Last Updated 19 ಜುಲೈ 2021, 13:14 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೋವಿಡ್‌ ಆತಂಕದ ನಡುವೆಯೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಸೋಮವಾರ ಸುಗಮವಾಗಿ ನಡೆಯಿತು. ಬದಲಾದ ಪರೀಕ್ಷಾ ಪದ್ಧತಿಯಂತೆ ಮೊದಲ ದಿನವೇ ಮೂರು ಕೋರ್‌ ವಿಷಯಗಳಿಗೆ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಆರು ವಿದ್ಯಾರ್ಥಿಗಳಲ್ಲಿ ಕೋವಿಡ್‌ ದೃಢಪಟ್ಟಿದ್ದು, ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು.

ಜಿಲ್ಲೆಯಲ್ಲಿ 22,186 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿದ್ದರು. ಇದರಲ್ಲಿ 126 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದರು. ಜಿಲ್ಲೆಯ 133 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಹೊರ ಜಿಲ್ಲೆಯ 183 ವಿದ್ಯಾರ್ಥಿಗಳು ಚಿತ್ರದುರ್ಗದಲ್ಲಿ ಪರೀಕ್ಷೆಗೆ ಹಾಜರಾಗಿದ್ದರು. ಜುಲೈ 22ರಂದು ಭಾಷಾ ವಿಷಯಗಳ ಪರೀಕ್ಷೆ ನಡೆಯಲಿದೆ.

ಪರೀಕ್ಷೆ ಬರೆದು ಕೇಂದ್ರದಿಂದ ಹೊರಬಂದ ವಿದ್ಯಾರ್ಥಿಗಳು ಹಸನ್ಮುಖರಾಗಿಯೇ ಪೋಷಕರನ್ನು ಎದುರಾದರು. ಸಹಪಾಠಿಗಳೊಂದಿಗೆ ಬೆರೆತು ಪ್ರಶ್ನೆಪತ್ರಿಕೆ, ಉತ್ತರಗಳ ಬಗ್ಗೆ ಚರ್ಚೆ ನಡೆಸಿದರು. ಎರಡು ದಿನಗಳ ಬಳಿಕ ನಡೆಯುವ ಪರೀಕ್ಷೆಗೆ ಸಜ್ಜಾಗುವ ಸಂಕಲ್ಪದೊಂದಿಗೆ ಮನೆಗೆ ಮರಳಿದರು. ಹಲವು ದಿನಗಳಿಂದ ಪರಿಶ್ರಮಪಟ್ಟಿದ್ದ ಶಿಕ್ಷಕರಲ್ಲಿ ಮೊದಲ ದಿನದ ಪರೀಕ್ಷೆ ಸುಗಮ ನಡೆದ ತೃಪ್ತಿ ಕಾಣುತ್ತಿತ್ತು.

ಅವಧಿಗೂ ಮುನ್ನವೇ ಹಾಜರು:ಪರೀಕ್ಷೆ ಸಮಯ ಬೆಳಿಗ್ಗೆ 10.30ರಿಂದ 1.30ರವರೆಗೆ ನಿಗದಿಯಾಗಿತ್ತು. ಬೆಳಿಗ್ಗೆ 9ರಿಂದ ಕೇಂದ್ರಕ್ಕೆ ಪ್ರವೇಶ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಬಹುತೇಕ ವಿದ್ಯಾರ್ಥಿಗಳು ಬೆಳಿಗ್ಗೆ 8ಕ್ಕೆ ಕೇಂದ್ರಗಳಿಗೆ ಹಾಜರಾಗಿದ್ದರು. ಅವಧಿಗೂ ಮುನ್ನವೇ ಬಂದಿದ್ದ ವಿದ್ಯಾರ್ಥಿಗಳಿಗೆ 8.30ಕ್ಕೆ ಪ್ರವೇಶ ಕಲ್ಪಿಸಲಾಯಿತು. ಅದಾಗಲೇ ಕೇಂದ್ರದಲ್ಲಿ ಸಜ್ಜಾಗಿದ್ದ ಆರೋಗ್ಯ ಇಲಾಖೆ ಸಿಬ್ಬಂದಿ ದೇಹದ ಉಷ್ಣಾಂಶವನ್ನು ಪರೀಕ್ಷಿಸಿದರು. ಕೈಗಳನ್ನು ಸ್ಯಾನಿಟೈಸ್ ಮಾಡಿ ಪ್ರವೇಶ ಕಲ್ಪಿಸಲಾಯಿತು. ಅಗತ್ಯ ಇರುವವರಿಗೆ ಮಾಸ್ಕ್‌ ವಿತರಿಸಲಾಯಿತು.

ಪರೀಕ್ಷಾ ಕೇಂದ್ರಕ್ಕೆ ನಿಯೋಜನೆಗೊಂಡಿದ್ದ ಸಿಬ್ಬಂದಿ ಬೆಳಿಗ್ಗೆ 7.30ಕ್ಕೆ ಹಾಜರಾಗಿದ್ದರು. ಸರತಿ ಸಾಲಿನಲ್ಲಿ ಅಂತರವನ್ನು ಕಾಯ್ದುಕೊಳ್ಳಲು ಬಾಕ್ಸ್‌ ಆಕಾರದ ಪಟ್ಟಿಗಳನ್ನು ಹಾಕಿದ್ದರು. ಎರಡು ದಿನಗಳ ಹಿಂದಿನಿಂದಲೇ ಈ ಕಾರ್ಯ ನಡೆದಿತ್ತು. ಎಡಬಿಡದೇ ಸುರಿದ ಮಳೆಗೆ ಈ ಪಟ್ಟಿ ಕಣ್ಮರೆಯಾಗಿತ್ತು.

ಕೋರ್‌ ವಿಷಯಗಳಿಗೆ ಪರೀಕ್ಷೆ:ಮೂರು ಗಂಟೆಯ ಅವಧಿಯಲ್ಲಿ ಮೂರು ವಿಷಯಗಳಿಗೆ ಪರೀಕ್ಷೆ ಬರೆಯುವ ಸವಾಲು ವಿದ್ಯಾರ್ಥಿಗಳ ಮುಂದಿತ್ತು. ಪ್ರತಿ ವಿಷಯಕ್ಕೆ 40 ಅಂಕಗಳನ್ನು ನಿಗದಿ ಮಾಡಲಾಗಿತ್ತು. ಬಹು ಆಯ್ಕೆಯ ಪರೀಕ್ಷಾ ಮಾದರಿಯ ಬಗ್ಗೆ ಅಳುಕಿನಿಂದಲೇ ಹಾಜರಾದ ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆ ಕೈಗೆ ಸಿಕ್ಕಾಗ ಧೈರ್ಯ ಮೂಡಿತ್ತು. ಪರೀಕ್ಷಾ ನಕಲು, ಅಮಾನತು ಈ ಬಾರಿ ಕಂಡುಬರಲಿಲ್ಲ.

ಕೊಠಡಿಯಲ್ಲಿ ಪ್ರತಿ ಬೆಂಚಿಗೆ ಒಬ್ಬರು ವಿದ್ಯಾರ್ಥಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಕೊಠಡಿಯ ಸಾಮರ್ಥ್ಯಕ್ಕೆ ತಕ್ಕಂತೆ 12ರಿಂದ 30 ವಿದ್ಯಾರ್ಥಿಗಳವರೆಗೆ ವ್ಯವಸ್ಥೆ ಮಾಡಲಾಗಿತ್ತು. ಕುಡಿಯಲು ಬಿಸಿನೀರಿನ ಸೌಲಭ್ಯವಿತ್ತು. ಬಹುತೇಕರು ಮನೆಯಿಂದಲೇ ಕುಡಿಯುವ ನೀರು ತಂದಿದ್ದರು.

ಆರು ವಿದ್ಯಾರ್ಥಿಗಳಿಗೆ ಕೋವಿಡ್‌
ಪರೀಕ್ಷಾ ಕೊಠಡಿ ಪ್ರವೇಶಕ್ಕೂ ಮೊದಲು ನಡೆಸಿದ ಥರ್ಮಲ್‌ ಸ್ಕ್ಯಾನಿಂಗ್‌ನಲ್ಲಿ ಅನಾರೋಗ್ಯ ಇರುವ ಯಾವೊಬ್ಬ ವಿದ್ಯಾರ್ಥಿಯೂ ಪತ್ತೆಯಾಗಲಿಲ್ಲ. ಮೊದಲೇ ಕೋವಿಡ್‌ ದೃಢಪಟ್ಟ ಆರು ವಿದ್ಯಾರ್ಥಿಗಳು ಮುನ್ನೆಚ್ಚರಿಕೆಯ ಕ್ರಮಗಳೊಂದಿಗೆ ಪ್ರತ್ಯೇಕವಾಗಿ ಪರೀಕ್ಷೆ ಬರೆದರು.

ಹೊಸದುರ್ಗ ತಾಲ್ಲೂಕಿನಲ್ಲಿ ಮೂವರು, ಹೊಳಲ್ಕೆರೆ, ಚಳ್ಳಕೆರೆ ಹಾಗೂ ಹಿರಿಯೂರು ತಾಲ್ಲೂಕಿನ ತಲಾ ಒಬ್ಬರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಇಂತಹ ವಿದ್ಯಾರ್ಥಿಗಳಿಗೆ ಪ್ರತಿ ತಾಲ್ಲೂಕಿನಲ್ಲಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು. ಆರೋಗ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಸಿಬ್ಬಂದಿ ಪಿಪಿಇ ಕಿಟ್‌ ಧರಿಸಿ ಕರ್ತವ್ಯ ನಿರ್ವಹಿಸಿದರು.

ಪರೀಕ್ಷೆಗೆ ಸಜ್ಜಾದಾಗ ದೃಢವಾದ ಕೋವಿಡ್‌
ಹಿರಿಯೂರು ತಾಲ್ಲೂಕಿನ ಹೊಸ ಯಳನಾಡು ಗ್ರಾಮದ ಬಾಲಕಿಯೊಬ್ಬಳು ಪರೀಕ್ಷೆಗೆ ತೆರಳುವಾಗ ಕೋವಿಡ್‌ ದೃಢಪಟ್ಟಿದೆ. ಬಳಿಕ ಇವರನ್ನು ಆಂಬುಲೆನ್ಸ್‌ನಲ್ಲಿ ಪರೀಕ್ಷಾ ಕೇಂದ್ರಕ್ಕೆ ಕರೆತಂದು ಪರೀಕ್ಷೆ ಬರೆಸಲಾಯಿತು.

ಬಾಲಕಿಗೆ ಕೆಲ ದಿನಗಳ ಹಿಂದಿನಿಂದ ಕೋವಿಡ್‌ ಲಕ್ಷಣಗಳು ಕಾಣಿಸಿಕೊಂಡಿದ್ದವು. ಮೂರು ದಿನಗಳ ಹಿಂದೆ ಇವರಿಗೆ ಕೋವಿಡ್ ಪರೀಕ್ಷೆ ಮಾಡಿಸಲಾಗಿತ್ತು. ಬೆಳಿಗ್ಗೆ 9ಕ್ಕೆ ಪರೀಕ್ಷಾ ಕೇಂದ್ರಕ್ಕೆ ತೆರಳಲು ಮನೆಯಲ್ಲಿ ಸಿದ್ಧವಾಗುತ್ತಿದ್ದ ಸಂದರ್ಭದಲ್ಲಿ ಮೊಬೈಲ್‌ಗೆ ಬಂದ ಸಂದೇಶ ಕೋವಿಡ್ ದೃಢಪಟ್ಟ ಸಂಗತಿ ಬಹಿರಂಗಪಡಿಸಿತು.

ಅದಾಗಲೇ ಬಾಲಕಿಯ ಪೋಷಕರು ಕೂಲಿ ಕೆಲಸಕ್ಕೆ ತೆರಳಿದ್ದರು. ಗಾಬರಿಗೊಂಡ ಬಾಲಕಿ ಮುಖ್ಯ ಶಿಕ್ಷಕರಿಗೆ ತಿಳಿಸಿದ್ದಾರೆ. ತಕ್ಷಣ ಸಜ್ಜಾದ ಆರೋಗ್ಯ ಹಾಗೂ ಶಿಕ್ಷಣ ಇಲಾಖೆಯ ಸಿಬ್ಬಂದಿ ಆಂಬುಲೆನ್ಸ್‌ನಲ್ಲಿ ಮನೆಗೆ ತೆರಳಿ ಬಾಲಕಿಯನ್ನು ಹಿರಿಯೂರಿಗೆ ಕರೆತಂದಿದ್ದಾರೆ. ಮೋಕ್ಷಗುಂಡಂ ಶಾಲೆಯಲ್ಲಿ ಸ್ಥಾಪಿಸಿದ ಕೋವಿಡ್‌ ಕೇರ್‌ ಕೇಂದ್ರದಲ್ಲಿ ಬಾಲಕಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT