ಬುಧವಾರ, ನವೆಂಬರ್ 30, 2022
19 °C
ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಸುವರ್ಣಮುಖಿ ನದಿಗೆ ನಿರ್ಮಿಸಿದ ಸೇತುವೆ

ಸುವರ್ಣಮುಖಿ ನದಿ ಸೇತುವೆ ಕುಸಿತ: ಗ್ರಾಮಗಳ ಸಂಪರ್ಕ ಕಡಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಸುವರ್ಣಮುಖಿ ನದಿಗೆ ನಿರ್ಮಿಸಿದ ಸೇತುವೆ ಮಂಗಳವಾರ ರಾತ್ರಿ ಕುಸಿದಿದೆ. ಇದರಿಂದ ಮ್ಯಾದನಹೊಳೆ - ಸಮುದ್ರದಹಳ್ಳಿ ನಡುವಿನ ಸಂಪರ್ಕ ಕಡಿತಗೊಂಡಿದೆ.

ಸುವರ್ಣಮುಖಿ ನದಿಗೆ 1979-80ರಲ್ಲಿ ಈ ಸೇತುವೆ ನಿರ್ಮಿಸಲಾಗಿತ್ತು. 60 ಮೀಟರ್ ಉದ್ದದ ಸೇತುವೆ ಕುಸಿದ ಪರಿಣಾಮ ಕೋಡಿಹಳ್ಳಿ, ಕುರುಬರಹಳ್ಳಿ ಭಾಗದ ಜನರು ಸಮುದ್ರದಹಳ್ಳಿ ಸಂಪರ್ಕಿಸಲು ತೊಂದರೆಯಾಗಿದೆ. ಆರನಕಟ್ಟೆ ಪ್ರೌಢಶಾಲೆ ಮತ್ತು ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಮನೆಯಲ್ಲಿಯೇ ಉಳಿದುಕೊಳ್ಳುವಂತಾಗಿದೆ. 

ಈಚೆಗೆ ಸುರಿದ ಭಾರಿ ಮಳೆಗೆ ಸುವರ್ಣಮುಖಿ ನದಿ ಮೈದುಂಬಿ ಹರಿದಿತ್ತು. ಸೇತುವೆ ಮುಳುಗುವಷ್ಟು ನೀರು ಹರಿದಿದ್ದು, ಕೆಲ ದಿನಗಳ ಹಿಂದೆಯಷ್ಟೇ ಪ್ರವಾಹ ಇಳಿದಿತ್ತು. ನದಿಯಲ್ಲಿ ಈಗ ಅಲ್ಪ ಪ್ರಮಾಣದ ನೀರು ಹರಿಯುತ್ತಿದೆ. ನೀರಿನ ರಭಸಕ್ಕೆ ಶಿಥಿಲಗೊಂಡಿದ್ದ ಸೇತುವೆ ಕುಸಿದು ಬಿದ್ದಿದೆ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹಿರಿಯೂರು ತಹಶೀಲ್ದಾರ್ ಪ್ರಶಾಂತ್ ಕೆ. ಪಾಟೀಲ, ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.

'ಸಂಪರ್ಕ ಸೇತುವೆ ರಾತ್ರಿ ಕುಸಿದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸೇತುವೆ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಕಾಲಾವಕಾಶ ಹಿಡಿಯಲಿದ್ದು, ಪರ್ಯಾಯ ಮಾರ್ಗ ಪರಿಶೀಲಿಸಲಾಗುತ್ತಿದೆ. ಜನರು ಆತಂಕಪಡುವ ಅಗತ್ಯವಿಲ್ಲ. ಸೇತುವೆ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ' ಎಂದು ತಹಶೀಲ್ದಾರ್ ಪ್ರಶಾಂತ್ ಕೆ. ಪಾಟೀಲ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು