ಗುರುವಾರ , ಜನವರಿ 28, 2021
28 °C
ಹಿರಿಯೂರು: ಪೊಲೀಸರ ಫಿಟ್‌ನೆಸ್‌ ಹೆಚ್ಚಿಸಲು ವಿನೂತನ ಪ್ರಯೋಗ

ಜಲಾಶಯದ ಹಿನ್ನೀರಿನಲ್ಲಿ ಸ್ವಿಮ್ಮಿಂಗ್, ರೈಡಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರಿಯೂರು: ಸದಾ ಒತ್ತಡದಲ್ಲಿ ಕೆಲಸ ನಿರ್ವಹಿಸುವ ಪೊಲೀಸ್ ಸಿಬ್ಬಂದಿಯಲ್ಲಿನ ಮಾನಸಿಕ ಒತ್ತಡ ಕಡಿಮೆ ಮಾಡಿ ಫಿಟ್‌ನೆಸ್ ಹೆಚ್ಚಿಸಲು ಪೊಲೀಸ್ ಇಲಾಖೆ ವಿನೂತನ ಪ್ರಯೋಗಕ್ಕೆ ಮುಂದಾಗಿದೆ.

ತಾಲ್ಲೂಕಿನ ವಾಣಿವಿಲಾಸ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಆರನಕಣಿವೆ ರಂಗನಾಥಸ್ವಾಮಿ ದೇಗುಲದ ಕೆಳಭಾಗದಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿಗೆ ವಾರದಿಂದ ವಾಟರ್ ಸ್ಪೋರ್ಟ್ಸ್ ನಡೆಸುತ್ತಿದೆ. ಜಿಲ್ಲೆಯ
ವಿವಿಧ ಭಾಗದ ತಲಾ 20 ಸಿಬ್ಬಂದಿಗೆ ಪ್ರತಿ ಎರಡು ದಿನಕ್ಕೆ ಒಂದು
ತಂಡದಂತೆ ಇಲ್ಲಿ ತರಬೇತಿ ನೀಡಲಾಗುತ್ತಿದೆ.

ಸೂರ್ಯೋದಯಕ್ಕೆ ಮೊದಲೇ ಅನುಭವಿ ತರಬೇತುದಾರರು ಜೆಸ್ಸಿ ರೈಡ್, ಜಲಾಶಯದ ಅಂಚಿನಿಂದ 5 ಕಿ.ಮೀ. ದೂರದಲ್ಲಿರುವ ರಾಮಗುಡ್ಡ ದ್ವೀಪಕ್ಕೆ ಸ್ಪೀಡ್ ಬೋಟಿಂಗ್, ಆಳ ನೀರಿನಲ್ಲಿ ಸ್ವಿಮ್ಮಿಂಗ್ ಮಾಡಿಸುವ ದೃಶ್ಯಗಳು ರೋಚಕವಾಗಿವೆ.

ಸೋಮವಾರ ತರಬೇತಿ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಜೆಸ್ಸಿ ರೈಡ್ ಮಾಡುವ ಮೂಲಕ ಸಹೋದ್ಯೋಗಿಗಳಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದರು.

‘ಎರಡು ದಿನಗಳ ತರಬೇತಿಯಲ್ಲಿ ಸಂಘಟನೆ, ರಕ್ಷಣೆ, ನಾಯಕತ್ವ ಗುಣಗಳನ್ನು ಬೆಳೆಸುವ ಜತೆಗೆ, ಪ್ರವಾಹದಂತಹ ತುರ್ತು ಸಂದರ್ಭದಲ್ಲಿ ಸಾರ್ವಜನಿಕರ ರಕ್ಷಣೆ ಮಾಡುವುದು, ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಬೇಕಿರುವ ಎಚ್ಚರಿಕೆ ಕ್ರಮಗಳ ಬಗ್ಗೆ ತರಬೇತಿ ಕೊಡಿಸಲಾಗಿದೆ. ಬೋಟಿಂಗ್, ಕಯಾಕಿಂಗ್ ಮಾಡುವುದರಿಂದ ನಮ್ಮ ಸಿಬ್ಬಂದಿಯ ಫಿಟ್‌ನೆಸ್ ಹೆಚ್ಚುವ ವಿಶ್ವಾಸವಿದೆ. ಒಂದು ತಿಂಗಳು ಈ ತರಬೇತಿ ನಡೆಯಲಿದೆ. ಸಾಲು ಸಾಲು ಬಂದ್, ಪ್ರತಿಭಟನೆ, ಚುನಾವಣೆ, ಕೋವಿಡ್ –19 ಕರ್ತವ್ಯ ನಿರ್ವಹಣೆ ನಡುವೆ ಪೊಲೀಸರಿಗೆ ವಿಶ್ರಾಂತಿ ಮರೀಚಿಕೆ ಆಗಿತ್ತು. ಇಂತಹ ಚಟುವಟಿಕೆಗಳು ಮಾನಸಿಕ ಒತ್ತಡ ತಗ್ಗಿಸುವ ವಿಶ್ವಾಸವಿದೆ’ ಎಂದು ರಾಧಿಕಾ ತಿಳಿಸಿದರು.

ತರಬೇತಿ ಹೆಮ್ಮೆ ಅನಿಸಿತು

ಬೋಟ್‌ನಲ್ಲಿ ಹೋಗುವಾಗ ಅದು ಮಗುಚಿ ಬಿದ್ದರೆ ಏನು ಮಾಡಬೇಕು, ನೀರಿನ ಮಧ್ಯದಲ್ಲಿ ಸಿಕ್ಕಿಕೊಂಡರೆ ದಡ ಮುಟ್ಟಲು ಏನೇನು ಪರ್ಯಾಯ ಮಾರ್ಗಗಳು ಇವೆ ಎಂಬಿತ್ಯಾದಿ ತರಬೇತಿ ಪಡೆಯುವಾಗ ಜೀವ ಬಾಯಿಗೆ ಬಂದಂತೆ ಆಗಿತ್ತು. ತರಬೇತಿ ಪಡೆಯುತ್ತಾ ಹೀಗೂ ಜೀವ ಉಳಿಸಬಹುದು ಎಂಬ ಅರಿವಾಯಿತು. ತರಬೇತಿ ಪಡೆದ ಬಗ್ಗೆ ಹೆಮ್ಮೆ ಅನಿಸಿತು.

- ತಿಮ್ಮರಾಯಪ್ಪ, ಕಾನ್‌ಸ್ಟೆಬಲ್, ಹಿರಿಯೂರು ನಗರ ಠಾಣೆ

***

ಜೀವ ಹೋದ ಅನುಭವ ಆಗಿತ್ತು

ಬೆಂಗಳೂರಿನ ಜನರಲ್ ತಿಮ್ಮಯ್ಯ ಅಕಾಡೆಮಿಯ ಕೀರ್ತಿಕುಮಾರ್ ಎಂಬುವವರು ತರಬೇತಿ ನೀಡಲು ಬಂದಿದ್ದರು. ಸೈನ್ಯದಲ್ಲಿ ತರಬೇತಿ ಪಡೆದ ಅನುಭವ ಆಯಿತು. ದೋಣಿಯಲ್ಲಿ ರಾತ್ರಿ ವೇಳೆ ಐದಾರು ಕಿ.ಮೀ. ಕ್ರಮಿಸಿ ದ್ವೀಪದಲ್ಲಿ ಡೇರೆ ಹಾಕಿಕೊಂಡು, ಕೃತಕ ದೋಣಿ ತಯಾರಿಸಿ ದಡ ಸೇರುವ ಬಗ್ಗೆ ತಿಳಿಯುವಾಗ ಜೀವ ಬಾಯಿಗೆ ಬಂದಂತೆ ಆಗಿತ್ತು. ಪ್ರವಾಹದ ಸಮಯದಲ್ಲಿ ಕಾರ್ಯ ನಿರ್ವಹಣೆ ಬಗ್ಗೆ ಉತ್ತಮ ತರಬೇತಿ ದೊರೆಯಿತು. ತರಬೇತಿಗೆ ಹೋಗುವ ಮೊದಲು ಬೇಸರವಿತ್ತು. ಅಲ್ಲಿಂದ ಬಂದ ಮೇಲೆ ಆತ್ಮ ವಿಶ್ವಾಸ ಹೆಚ್ಚಿದೆ.

- ವಸಂತಕುಮಾರ್, ಕಾನ್‌ಸ್ಟೆಬಲ್, ಹಿರಿಯೂರು ನಗರ ಠಾಣೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು