ಶುಕ್ರವಾರ, ಜನವರಿ 27, 2023
27 °C

ಕೆರೆ ಏರಿ ಸುರಕ್ಷತೆಗೆ ಕ್ರಮ ಕೈಗೊಳ್ಳಿ: ಮುರುಘಾ ಶರಣರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭರಮಸಾಗರ: ಭರಮಣ್ಣನಾಯಕರ ಆಳ್ವಿಕೆ ಕಾಲದಲ್ಲಿ ಚಿತ್ರದುರ್ಗ ಪ್ರಾಂತ್ಯದಲ್ಲಿ 20 ಕೆರೆಗಳನ್ನು ನಿರ್ಮಾಣ ಮಾಡಲಾಗಿದೆ. ಅದರಲ್ಲಿ ಭರಮಸಾಗರದ ದೊಡ್ಡಕೆರೆ ಪ್ರಮುಖವಾಗಿದೆ. ಕೆರೆ ತುಂಬಿಸುವ ಮೊದಲು ಏರಿ ಸುರಕ್ಷತೆಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಚಿತ್ರದುರ್ಗ ಬೃಹನ್ಮಠದ ಶಿವಮೂರ್ತಿ ಮುರುಘಾ ಶರಣರು ಸಲಹೆ ನೀಡಿದರು.

ಇಲ್ಲಿನ ಐತಿಹಾಸಿಕ ಭರಮಣ್ಣನಾಯಕನ ದೊಡ್ಡಕೆರೆ ಏರಿ ಬಿರುಕು ಬಿಟ್ಟ ಕಾರಣ ಬುಧವಾರ ಭೇಟಿ ನೀಡಿ ಕೆರೆ ಏರಿ ಸಮಸ್ಯೆ ಪರಿಶೀಲಿಸಿದರು.

‘ದೂರದೃಷ್ಟಿಯುಳ್ಳ ಭರಮಣ್ಣ ನಾಯಕರು ತಮ್ಮ ಆಳ್ವಿಕೆ ಅವಧಿಯಲ್ಲಿ ಅನೇಕ ಲೋಕಕಲ್ಯಾಣ ಕಾರ್ಯ ಮಾಡಿದ್ದಾರೆ. ಅದರಲ್ಲಿ ಈ ರೀತಿಯ ಕೆರೆಗಳ ನಿರ್ಮಾಣ ನಾಡಿಗೆ ನೀಡಿದ ದೊಡ್ಡ ಕೊಡುಗೆ. ಸೃಷ್ಟಿಯಲ್ಲಿ ಎಲ್ಲದಕ್ಕೂ ವಯಸ್ಸು ಆಗುತ್ತದೆ. ಅದೇ ರೀತಿ ಮಾನವ ನಿರ್ಮಿತ ಯೋಜನೆಗಳಿಗೂ ವಯಸ್ಸಾಗುವುದು ಸಹಜ. 350 ವರ್ಷ ಪುರಾತನವಾದ ದೊಡ್ಡ ಕೆರೆ ಏರಿ ಕೂಡ ಸಹಜವಾಗಿ ನಾನಾ ಕಾರಣಗಳಿಂದ ಬಿರುಕು ಬಿಟ್ಟಿದೆ’ ಎಂದರು.

‘ಬರಿದಾಗಿರುವ ಕೆರೆಗಳನ್ನು ತುಂಬಿಸುತ್ತಿರುವುದು ಪುಣ್ಯದ ಕಾರ್ಯ. ಕೆರೆಗೆ ನೀರು ತರುವ ಕೆಲಸ ಮಾಡಿದವರನ್ನು ಅಭಿನಂದಿಸುತ್ತೇನೆ. 11 ವರ್ಷಗಳ ನಂತರ ತುಂಬಿಕೊಂಡಿರುವ ಸಾಗರದಂತಹ ಈ ಕೆರೆಯನ್ನು ನೋಡಲು ಆನಂದವಾಗುತ್ತದೆ. ಆದರೆ, ಕೆರೆ ಏರಿಯ ದುರವಸ್ಥೆ ನೋಡಿದರೆ ಬೇಸರವಾಗುತ್ತದೆ. ಇದು ಒಂದು ರೀತಿ ಸರ್ಕಾರಕ್ಕೂ, ನಮ್ಮೆಲ್ಲರಿಗೂ ಪಾಠವಾಗಬೇಕು. ಈ ಭಾಗದಲ್ಲಿ ಪ್ರಗತಿಯಲ್ಲಿರುವ 42 ಕೆರೆಗಳನ್ನು ತುಂಬಿಸುವ ಕಾರ್ಯದಿಂದ ಸಕಲ ಜೀವರಾಶಿಗಳಿಗೂ ಅನಕೂಲವಾಗುತ್ತದೆ. ಆದರೆ, ಕೆರೆ ತುಂಬಿಸುವ ಮೊದಲು ತಜ್ಞರು ಕೆರೆಗಳನ್ನು ಪರಿಶೀಲಿಸಿ ಕೆರೆಗಳ ಏರಿ, ಕೋಡಿ ಸುರಕ್ಷತೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದರಿಂದ ಮುಂದೆ ಆಗಬಹುದಾದ ತೊಂದರೆಯನ್ನು ತಪ್ಪಿಸಬಹುದು’ ಎಂದು ಅಭಿಪ್ರಾಯಪಟ್ಟರು.

ಇದಕ್ಕೂ ಮುನ್ನ ಕೋಡಿ ಬಳಿ ಕೆರೆ ವೀಕ್ಷಿಸುತ್ತಿದ್ದ ಮುರುಘಾ ಶರಣರ ಪಾದವನ್ನು ಗ್ರಾಮಸ್ಥರೊಬ್ಬರು ಕೆರೆಯ ನೀರಿನಿಂದ ತೊಳೆದು ಭಕ್ತಿ ಅರ್ಪಿಸಿದರು.

ಹೆಬ್ಬಾಳು ವಿರಕ್ತಮಠದ ಮಹಾಂತ ರುದ್ರೇಶ್ವರ ಸ್ವಾಮೀಜಿ, ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಚ್.ಎನ್. ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ಕೃಷ್ಣಮೂರ್ತಿ, ಮುಖಂಡರಾದ ಡಿ.ಎಸ್.ಪ್ರದೀಪ್, ಡಿ.ಎಸ್. ಪ್ರವೀಣ್, ಶೈಲೇಶ್, ಎಚ್.ಕೆ. ಕಿರಣ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು