ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದತ್ತ ಓದುಗರನ್ನು ಸೆಳೆದಿದ್ದ ತರಾಸು: ಸಾಹಿತಿ ಶಾ.ಮಂ. ಕೃಷ್ಣರಾ

ತರಾಸು ಜನ್ಮಶತಮಾನೋತ್ಸವ ಸಮಾರಂಭ
Last Updated 31 ಮೇ 2022, 3:45 IST
ಅಕ್ಷರ ಗಾತ್ರ

ಚಿತ್ರದುರ್ಗ: ಇಂಗ್ಲಿಷ್‌ ಸಾಹಿತ್ಯಕ್ಕೆ ಜೋತುಬಿದ್ದ ದಿನಗಳವು. ಕನ್ನಡ ಸಾಹಿತ್ಯವನ್ನು ಯಾರೊಬ್ಬರೂ ಇಷ್ಟಪಟ್ಟು ಓದುತ್ತಿರಲಿಲ್ಲ. ತರಾಸು ರಚಿಸಿದ ಕಾದಂಬರಿಗಳು ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ಇತಿಹಾಸವೊಂದನ್ನು ಸೃಷ್ಟಿಸಿದವು. ಅಪಾರ ಓದುಗ ವರ್ಗವನ್ನು ಬೆಳೆಸಿದವು ಎಂದು ಸಾಹಿತಿ ಶಾ.ಮಂ. ಕೃಷ್ಣರಾಯ ಅಭಿಪ್ರಾಯಪಟ್ಟರು.

ಇಲ್ಲಿನ ತರಾಸು ರಂಗಮಂದಿರದಲ್ಲಿ ಕನ್ನಡ ಸಾಹಿತ್ಯ ಅಕಾಡೆಮಿ ತರಾಸು ಜನ್ಮಶತಮಾನೋತ್ಸವದ ಅಂಗವಾಗಿ ಏರ್ಪಡಿಸಿದ್ದ ‘ತರಾಸು ವ್ಯಕ್ತಿತ್ವ ಮತ್ತು ಸಾಹಿತ್ಯ’ ಎರಡು ದಿನಗಳ ವಿಚಾರಸಂಕಿರಣವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ತರಾಸು, ಅನಕೃ ಹಾಗೂ ಬಸವರಾಜ ಕಟ್ಟಿಮನಿ ಸೇರಿ ಅನೇಕರ ಸಾಹಿತ್ಯ ಕನ್ನಡದಲ್ಲಿ ಹೊಸ ಸಂಚಲನ ಸೃಷ್ಟಿಸಿತು. ಇವರು ಕಾಲವಾಗಿ ದಶಕಗಳು ಉರುಳುತ್ತಿದ್ದರೂ ಅವರ ಸಾಹಿತ್ಯ ಮಾತ್ರ ಮರುಮುದ್ರಣವಾಗುತ್ತಿದೆ. ಹೊಸ ಓದುಗರು ಸೃಷ್ಟಿಯಾಗುತ್ತಿದ್ದಾರೆ’ ಎಂದರು.

‘ತರಾಸು ಅವರ ಸಾಹಿತ್ಯದಲ್ಲಿ ಮಾನವ ಬದುಕಿನ ನೈಜ ಚಿತ್ರಣವಿದೆ. ಅವರ ಸಾಹಿತ್ಯದ ಸ್ಥಾಯಿಭಾವವೇ ಬದುಕು. ಮಾನವನ ಬದುಕಿಗೆ ದೂರವಾದ ಸಂಗತಿ, ಸುಳ್ಳನ್ನು ಅವರು ಸಾಹಿತ್ಯದಲ್ಲಿ ಎಂದಿಗೂ ತರಲಿಲ್ಲ. ಅದ್ಭುತ ಬರವಣಿಗೆ ಶೈಲಿ, ಉತ್ತಮ ಭಾಷೆ ಕನ್ನಡಕ್ಕೆ ಹೊಸ ಆಯಾಮ ನೀಡಿತು. ಕನ್ನಡವನ್ನು ಇಷ್ಟು ಶಕ್ತಿಯುತವಾಗಿ ಬರೆಯಬಹುದು ಎಂಬುದಕ್ಕೆ ತರಾಸು ಮಾದರಿ’ ಎಂದು ಕೊಂಡಾಡಿದರು.

‘ದುರ್ಗಾಸ್ತಮಾನ’ ಕಾದಂಬರಿ ರಚನೆಗೂ ಮುನ್ನ ಅವರು ಆಸ್ಪತ್ರೆ ಸೇರಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಏಕಾಏಕಿ ಮನೆಗೆ ಬಂದು ಕಾದಂಬರಿ ರಚನೆಯಲ್ಲಿ ತೊಡಗಿದರು. ಅತ್ಯಂತ ದೊಡ್ಡ ಕ್ಯಾನ್ವಾಸ್‌ ಹೊಂದಿದ ಕಾದಂಬರಿಯನ್ನು 130 ದಿನಗಳಲ್ಲಿ ಪೂರ್ಣಗೊಳಿಸಿದರು. ಪಾಳೆಗಾರರನ್ನು ಮಹಾರಾಜರಂತೆ ಚಿತ್ರಿಸಿ ಯಶಸ್ವಿಯಾದರು. ಕಾದಂಬರಿಯಲ್ಲಿ ಬರುವ ಯುದ್ಧತಂತ್ರಗಳು ವಿಸ್ಮಯ ಮೂಡಿಸುತ್ತವೆ’ ಎಂದು ನೆನಪಿಸಿಕೊಂಡರು.

‘ಕನ್ನಡ ಸಾಹಿತ್ಯವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಅಭಿಲಾಷೆ ತರಾಸು ಅವರಲ್ಲಿತ್ತು. ಎಲ್ಲ ಪುಸ್ತಕಗಳು ಒಂದೆಡೆ ಲಭ್ಯವಾಗಬೇಕು ಎಂಬ ಕನಸು ಕಂಡಿದ್ದರು. ನಾಲ್ಕೈದು ಎಕರೆ ಭೂಮಿಯಲ್ಲಿ ಇಂತಹದ್ದೊಂದು ವ್ಯವಸ್ಥೆ ಮಾಡಿದರೆ ಅನುಕೂಲ. ಓದು, ಅಧ್ಯಯನ ಹಾಗೂ ವಸತಿಗೆ ಅವಕಾಶ ಇರುವಂತಹ ಬೃಹತ್‌ ಪುಸ್ತಕಲೋಕವೊಂದರ ಅಗತ್ಯವಿದೆ. ಅವರ ಹೆಸರಿನಲ್ಲಿ ಈವರೆಗೆ ಪ್ರತಿಷ್ಠಾನ ಹಾಗೂ ಅಧ್ಯಯನ ಪೀಠ ಸ್ಥಾಪಿಸದಿರುವುದು ಬೇಸರದ ಸಂಗತಿ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ, ‘ತರಾಸು ಅವರಿಗೆ ಹಲವು ಅಭಿರುಚಿಗಳಿದ್ದವು. ಸಾಹಿತ್ಯ, ಇತಿಹಾಸ, ಪ್ರಸಕ್ತ ವಿದ್ಯಮಾನ ಸೇರಿ ಹಲವು ವಿಚಾರಗಳ ಬಗ್ಗೆ ನಿರರ್ಗಳವಾಗಿ ಮಾತನಾಡುವಷ್ಟು ವಿದ್ವತ್ತು ಹೊಂದಿದ್ದರು. ಕಾದಂಬರಿಯಲ್ಲಿ ಅವರು ಬಳಸುತ್ತಿದ್ದ ಸಮ್ಮೋಹಕ ಭಾಷೆ ಎಲ್ಲರನ್ನೂ ಹಿಡಿದಿಡುತ್ತಿತ್ತು. ಅವರು ನಿಜಕ್ಕೂ ಕನ್ನಡದ ಆಸ್ತಿ. ಅವರನ್ನು ಸ್ಮರಣೆ ಮಾಡುವ ಅಗತ್ಯವಿದೆ’ ಎಂದರು.

ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಇ.ರುದ್ರಮುನಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಎನ್. ಕರಿಯಪ್ಪ, ಸಂಘಟಕರಾದ ಡಾ.ಜೆ. ಕರಿಯಪ್ಪ ಮಾಳಿಗೆ, ಪ್ರೊ.ಕೆ. ರಾಜೀವ ಲೋಚನ, ಡಾ.ಎಚ್.ಜಿ. ವಿಜಯಕುಮಾರ್ ಇದ್ದಾರೆ.

‘ಸರ್ಕಾರಕ್ಕಿದೆ ಸಾಂಸ್ಕೃತಿಕ ಹೊಣೆ’
ರಾಜ್ಯ ಸರ್ಕಾರ ಸಾಂಸ್ಕೃತಿಕ ಜವಾಬ್ದಾರಿಯನ್ನು ಹೊತ್ತಿದೆ. ಹೀಗಾಗಿ, ತರಾಸು ಸಮಗ್ರ ಸಂಪುಟ ಹೊರತರಲು ₹ 18 ಲಕ್ಷ ಅನುದಾನವನ್ನು ಬಿಡುಗಡೆ ಮಾಡಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ
ಡಾ.ಬಿ.ವಿ.ವಸಂತಕುಮಾರ್ ತಿಳಿಸಿದರು.

‘ಜಾತಿ, ಧರ್ಮ, ಪ್ರಾಂತ್ಯ ಹಾಗೂ ಕಾಲದ ನಡುವೆ ಸಾಹಿತಿ ಮತ್ತು ಸಾಹಿತ್ಯ ಸೇತುವೆಯಾಗಿರಬೇಕು. ಯಾವುದೇ ಕಾರಣಕ್ಕೂ ಕಂದಕ ಆಗಬಾರದು. ತರಾಸು ಸಾಹಿತ್ಯ ಮತ್ತು ವ್ಯಕ್ತಿತ್ವವನ್ನು ನಮ್ಮ ಒಳಗೆ ತುಂಬಿಕೊಳ್ಳಬೇಕಾಗಿರುವುದು ವರ್ತಮಾನದ ಅಗತ್ಯವಾಗಿದೆ’ ಎಂದು ಹೇಳಿದರು.

*
ತಂದೆ ತರಾಸು ಅವರ ಹೆಸರಿನಲ್ಲಿ ಪ್ರತಿಷ್ಠಾನ ರೂಪಿಸಬೇಕು ಎಂಬ ಅಭಿಲಾಷೆ ಹಲವು ದಿನಗಳಿಂದ ಇದೆ. ಇದು ನೆರವೇರಲು ಎಲ್ಲರ ಸಹಕಾರ ಅಗತ್ಯ. ಅವರ ಸಾಹಿತ್ಯ ಎಲ್ಲರನ್ನೂ ತಲುಪಬೇಕು.
–ಪೂರ್ಣಿಮಾ ಸುಂದರ್‌, ತರಾಸು ಪುತ್ರಿ

*
ದಾವಣಗೆರೆ ವಿಶ್ವವಿದ್ಯಾಲಯದ ಜಿ.ಆರ್‌. ಹಳ್ಳಿಯ ಸ್ನಾತಕೋತ್ತರ ಕೇಂದ್ರದಲ್ಲಿ ತರಾಸು ಅಧ್ಯಯನ ಪೀಠ ಸ್ಥಾಪಿಸಲು ಅವಕಾಶವಿದೆ. ಅವರನ್ನು ಸ್ಮರಿಸುವ ಕುರಿತು ವಿಶ್ವವಿದ್ಯಾಲಯಕ್ಕೆ ಮನವಿ ಮಾಡಿಕೊಳ್ಳಲಾಗುವುದು.
–ಎಚ್‌.ವಿಶ್ವನಾಥ್‌, ನಿರ್ದೇಶಕರು, ಸ್ನಾತಕೋತ್ತರ ಅಧ್ಯಯನ ಕೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT