ಶಿಕ್ಷಕರಿಂದ ಅಜ್ಞಾನಿಯೂ ಸುಜ್ಞಾನಿ ಆಗಬಲ್ಲ

ಚಿತ್ರದುರ್ಗ: ‘ಅಜ್ಞಾನಿಯನ್ನೂ ಸುಜ್ಞಾನಿ ಆಗಿಸಬಲ್ಲ ಶಕ್ತಿ ಶಿಕ್ಷಕರಲ್ಲಿದೆ. ಆದ್ದರಿಂದ ಜ್ಞಾನದಾಸೋಹ ಉಣಬಡಿಸಿದ ಶಿಕ್ಷಕರನ್ನು ವಿದ್ಯಾರ್ಥಿ ಸಮೂಹ ಎಂದಿಗೂ ಮರೆಯಬಾರದು’ ಎಂದು ಶಿವಮೂರ್ತಿ ಮುರುಘಾ ಶರಣರು ಸಲಹೆ ನೀಡಿದರು.
ಮುರುಘಾಮಠದಲ್ಲಿ ಶ್ರೀಮಠ, ಎಸ್‌ಜೆಎಂ ಶಾಂತಿ ಮತ್ತು ಪ್ರಗತಿ ಫೌಂಡೇಷನ್‌ನಿಂದ ಶನಿವಾರ ಆಯೋಜಿಸಿದ್ದ 30ನೇ ವರ್ಷದ 9ನೇ ತಿಂಗಳ ‘ಸಾಮೂಹಿಕ ಕಲ್ಯಾಣ ಮಹೋತ್ಸವ’ದಲ್ಲಿ ಅವರು ಮಾತನಾಡಿದರು.
‘ಮಾನವರಲ್ಲಿ ಅಜ್ಞಾನ ಬೆಟ್ಟದಷ್ಟಿದ್ದು, ದುಷ್ಟತನ ಬೆಳೆದು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಲು ಬಿಡುವುದಿಲ್ಲ. ಜತೆಗೆ ಮೂರ್ಖರನ್ನಾಗಿಸುತ್ತದೆ. ಸುಂದರ ಬದುಕು ಕಟ್ಟಿಕೊಳ್ಳುವ ತಿರುವುಗಳನ್ನೇ ಬದಲಿಸುತ್ತದೆ. ಆದ್ದರಿಂದ ಅಕ್ಷರ ಬೋಧಿಸುವ ಗುರುಗಳು ಸುಜ್ಞಾನಿಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕು’ ಎಂದರು.
‘ಸುಜ್ಞಾನ ಸುಮ್ಮನೆ ಬರುವಂಥದಲ್ಲ. ಅದಕ್ಕೆ ಸಾಧನೆ, ಸತತ ಪ್ರಯತ್ನ, ಹಂಬಲ ಇರಬೇಕು. ಸುಜ್ಞಾನ ಉಳ್ಳವರಿಂದ ಸಮಾಜದಲ್ಲಿ ಒಳ್ಳೆಯ ಕೆಲಸಗಳಾಗುತ್ತವೆ. ಉತ್ತಮ ಸಮಾಜ ನಿರ್ಮಿಸುವಲ್ಲಿ ಆಧ್ಯಾತ್ಮಿಕ, ಅಧ್ಯಾತ್ಮಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದ ಗುರುಗಳ ಜವಾಬ್ದಾರಿಯೂ ಹೆಚ್ಚಿದೆ’ ಎಂದು ಹೇಳಿದರು.
‘ನಮ್ಮ ಹಿರಿಯ ಗುರುಗಳಾದ ಮಲ್ಲಿಕಾರ್ಜುನ ಸ್ವಾಮೀಜಿ ಅವರು ನೂರಾರು ವಿದ್ಯಾಕೇಂದ್ರ ತೆರೆದು ಜ್ಞಾನದಾಸೋಹ ನೀಡಿದರು. ಅವನ್ನು ಈಗಲೂ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಆರೋಗ್ಯಪೂರ್ಣ ಸಮಾಜ ಸೃಷ್ಟಿಯಾಗಬೇಕಿದೆ. ಅದಕ್ಕೆ ಎಲ್ಲರ ಸಹಕಾರದ ಅಗತ್ಯವಿದೆ’ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ. ಬದರಿನಾಥ್, ‘ಜಿಲ್ಲೆಯಲ್ಲಿ ಶೈಕ್ಷಣಿಕ ಕ್ಷೇತ್ರ ಬೆಳೆಯುವಲ್ಲಿ ಮುರುಘಾಮಠದ ಪಾತ್ರವೂ ಇದೆ. ಚಿತ್ರದುರ್ಗ ಸುಂದರ ನಗರವಾಗಬೇಕು ಎಂಬುದು ನನ್ನ ಕನಸು. ಶ್ರೀಗಳ, ಸ್ಥಳೀಯ ಶಾಸಕರ ಸಹಕಾರ ಪಡೆದು ಅಭಿವೃದ್ಧಿಯತ್ತ ಕೊಂಡೊಯ್ಯುತ್ತೇನೆ’ ಎಂದು ಭರವಸೆ ನೀಡಿದರು.
ಇದೇ ವೇಳೆ ಏಳು ಜೋಡಿ ನವ ವಧುವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಶರಣಾನಂದ ದೇವರು ರಚಿಸಿರುವ ಶಿವಹಂಸಾರೂಢ ಪ್ರಭು ವಚನ ಶತಕ ಪುಸ್ತಕ ಲೋಕಾರ್ಪಣೆಯಾಯಿತು.
ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ. ದೊರೆಸ್ವಾಮಿ, ಷಣ್ಮುಖಪ್ಪ, ಮೈಸೂರಿನ ಡಿಎಸ್‌ಎಸ್ ಮುಖಂಡ ಸಿ. ರಾಮಕೃಷ್ಣ, ಪೈಲ್ವಾನ್ ತಿಪ್ಪೇಸ್ವಾಮಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.