ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಂಕುಸ್ಥಾಪನೆಯಾದ ಡಿಪೊದಲ್ಲೀಗ ಮುಳ್ಳುಗಂಟಿ; ಹಿರಿಯೂರು ದುಸ್ಥಿತಿ

ಘಟಾನುಘಟಿಗಳು ಸಚಿವರಾಗಿದ್ದರೂ ಹಿರಿಯೂರಿಗೆ ಸಿಗದ ಬಸ್‌ ಡಿಪೊ
Last Updated 16 ಆಗಸ್ಟ್ 2021, 2:18 IST
ಅಕ್ಷರ ಗಾತ್ರ

ಹಿರಿಯೂರು: ಕೆ.ಎಚ್. ರಂಗನಾಥ್, ಡಿ. ಮಂಜುನಾಥ್, ಡಿ. ಸುಧಾಕರ್ ಅವರಂತಹವರು ಹಿರಿಯೂರು ಕ್ಷೇತ್ರದಿಂದ ಶಾಸಕರಾಗಿ, ಸಚಿವರಾಗಿದ್ದರೂ ಹಿರಿಯೂರು ನಗರಕ್ಕೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಡಿಪೊ ಮಂಜೂರಾಗದಿರುವುದು ತಾಲ್ಲೂಕಿನ ಜನರಲ್ಲಿ ತೀವ್ರ ನಿರಾಸೆಗೆ ಕಾರಣವಾಗಿದೆ.

ಚಳ್ಳಕೆರೆ, ಹೊಸದುರ್ಗ ಪಟ್ಟಣಗಳಲ್ಲಿ ಡಿಪೊಗಳು ಕಾರ್ಯನಿರ್ವಹಿಸುತ್ತಿದ್ದು, ಹಿರಿಯೂರು ಹೆಚ್ಚಿನ ಜನಸಂಖ್ಯೆ, ವಾಹನದಟ್ಟಣೆ ಹೊಂದಿದ್ದರೂ ಡಿಪೊ ಮಂಜೂರು ಮಾಡದಿರುವುದಕ್ಕೆ ಜನಪ್ರತಿನಿಧಿಗಳ ಬದ್ಧತೆಯ ಕೊರತೆ ಕಾರಣ ಎಂಬ ಆರೋಪ ಸಾರ್ವಜನಿಕರದ್ದು.

2010ರಲ್ಲಿ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಡಿ. ಸುಧಾಕರ್ ಅವರು ಸಾರಿಗೆ ಸಚಿವ ಆರ್. ಅಶೋಕ್ ಅವರನ್ನು ಕರೆತಂದು ಹುಳಿಯಾರು ರಸ್ತೆಯಲ್ಲಿ ಹಾಲಿ ತಾಲ್ಲೂಕು ಕ್ರೀಡಾಂಗಣದ ಪಕ್ಕದಲ್ಲಿ ಸಾರಿಗೆ ಸಂಸ್ಥೆ ಡಿಪೊಗೆ ಭೂಮಿಪೂಜೆ ಮಾಡಿಸಿದ್ದರು. ಈಗ ಅಲ್ಲಿಗೆ ಹೋಗಿ ನೋಡಿದರೆ ಆಳೆತ್ತರಕ್ಕೆ ಬೆಳೆದಿರುವ ಮುಳ್ಳುಗಂಟಿಯ ಜಾಗಕ್ಕೆ ‘ಕೆಎಸ್ಆರ್‌ಟಿಸಿ ಹಿರಿಯೂರು ಬಸ್‌ ಡಿಪೊ’ ಎಂಬ ಬರಹವುಳ್ಳ ಕಬ್ಬಿಣದ ಗೇಟ್ ಮಾತ್ರ ಕಣ್ಣಿಗೆ ಬೀಳುತ್ತದೆ. ಆಡಳಿತ ವ್ಯವಸ್ಥೆ ಎಷ್ಟು ಜಡ್ಡುಗಟ್ಟಿದೆ ಎಂಬುದಕ್ಕೆ ಇದೊಂದು ಉತ್ತಮ ನಿದರ್ಶನ.

1998ರಲ್ಲಿ ಹಿರಿಯೂರಿನಲ್ಲಿ ಪ್ರಧಾನ ರಸ್ತೆಗೆ ಹೊಂದಿಕೊಂಡಂತೆ ವಾರದ ಸಂತೆ ನಡೆಯುತ್ತಿದ್ದ ಜಾಗವನ್ನು ಪುರಸಭೆಯಿಂದ ಕೆಎಸ್‌ಆರ್‌ಟಿಸಿಗೆ ಹಸ್ತಾಂತರಿಸಿ ₹ 39 ಲಕ್ಷ ವೆಚ್ಚದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಿಸಲಾಗಿತ್ತು. ಆರಂಭದಲ್ಲಿ ನಿಲ್ದಾಣದ ಒಳಗೆ ಹೋಗಲು ಮತ್ತು ಹೊರಗೆ ಬರಲು ಪ್ರತ್ಯೇಕ ಮಾರ್ಗಗಳಿದ್ದವು. ಖಾಸಗಿ ಬಸ್‌ ಮಾಲೀಕರು ತಗಾದೆ ತೆಗೆದ ಕಾರಣ ಸಾರಿಗೆ ಸಂಸ್ಥೆಗೆ ಬಿಟ್ಟು ಕೊಡದೇ ಉಳಿದಿದ್ದ ಜಾಗವನ್ನು ಖಾಸಗಿ ಬಸ್ ನಿಲ್ದಾಣಕ್ಕೆ ಬಿಟ್ಟುಕೊಟ್ಟಿದ್ದರಿಂದ ನಿಲ್ದಾಣದ ಪ್ರವೇಶ ರಸ್ತೆ ಕಿರಿದಾಗಿದೆ. ಜೊತೆಗೆ ತಗ್ಗು ಪ್ರದೇಶದಲ್ಲಿ ನಿರ್ಮಿಸಿರುವುದರಿಂದ ನಿಲ್ದಾಣದ ಅಂದ ಹಾಳಾಗಿದೆ.

ನೂತನ ಬಸ್ ನಿಲ್ದಾಣ ಉದ್ಘಾಟನೆಯಾದ ಸಂದರ್ಭದಲ್ಲಿ ಅಂದಿನ ಸಾರಿಗೆ ಸಚಿವ ಪಿ.ಜಿ.ಆರ್. ಸಿಂಧ್ಯಾ ಅವರಿಗೆ ಡಿಪೊ ಮಂಜೂರು ಮಾಡುವಂತೆ ಡಿ. ಮಂಜುನಾಥ್ ಮನವಿ ಮಾಡಿದ್ದರು. 1998ರಿಂದಲೂ ಡಿಪೊ ವಿಚಾರ ಜೀವಂತವಾಗಿದ್ದು, ಭರವಸೆಗಳಿಗೆ ಕೊನೆಯೇ ಇಲ್ಲವಾಗಿದೆ. ಡಿ. ಸುಧಾಕರ್ ಡಿಪೊ ಮಾಡಿಸಿಯೇ ಬಿಟ್ಟರು ಅಂದುಕೊಂಡಿದ್ದ ನಾಗರಿಕರಿಗೆ ಅದೂ ಕೂಡ ಭರವಸೆ ಮಾತ್ರ ಎಂಬ ಸತ್ಯ ಅರಿವಾಯಿತು. ಡಿಪೊಗೆ ಗುರುತಿಸಿರುವ ಜಾಗ ಚಿಕ್ಕದಿದೆ. ಬೀದರ್–ಶ್ರೀರಂಗಪಟ್ಟಣ ಹೆದ್ದಾರಿಗೆ ಹೊಂದಿಕೊಂಡಿದೆ. ವಾಹನ ದಟ್ಟಣೆಗೆ ಕಾರಣವಾಗುತ್ತದೆ ಎಂಬ ನೆಪ ಹೇಳಲಾಯಿತು.

ಚಿತ್ರದುರ್ಗಕ್ಕಿಂತ ಹೆಚ್ಚು ಬಸ್ಸು:

ಹಿರಿಯೂರಿನಲ್ಲಿ ಬೀದರ್–ಶ್ರೀರಂಗಪಟ್ಟಣ, ಪುಣೆ–ಬೆಂಗಳೂರು ಹೆದ್ದಾರಿಗಳು ಹಾದು ಹೋಗಿದ್ದು, ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ಇಲ್ಲಿಯ ನಿಲ್ದಾಣಕ್ಕೆ ಚಿತ್ರದುರ್ಗಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಹೋಗುತ್ತವೆ. ಇಲ್ಲಿಗೆ ಡಿಪೊ ಮಂಜೂರು ಮಾಡಿದಲ್ಲಿ ತುಮಕೂರು, ಚಿಕ್ಕಮಗಳೂರು, ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಹಲವು ಪ್ರಮುಖ ಸ್ಥಳಗಳಿಗೆ ಸಂಸ್ಥೆಯ ಬಸ್ಸುಗಳನ್ನು ಓಡಿಸಬಹುದು. ಇದು ಲಾಭದಾಯಕ ಕೂಡ. 2010ರಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಭೂಮಿ ಪೂಜೆ ನಡೆದು, ನಿಂತು ಹೋಗಿದ್ದ ಡಿಪೊ ಕಾಮಗಾರಿ ಮತ್ತೆ ಬಿಜೆಪಿ ಅವಧಿಯಲ್ಲೇ ಆರಂಭಗೊಳ್ಳಲಿ ಎಂಬ ನಿರೀಕ್ಷೆ ಜನರದ್ದು.

‘ಜಾಗ ಹಸ್ತಾಂತರಿಸಿದ್ದೇವೆ’

ಕೆಎಸ್‌ಆರ್‌ಟಿಸಿ ಡಿಪೊ ಆರಂಭಿಸುವ ಬಗ್ಗೆ ನನ್ನಲ್ಲಿ ಬದ್ಧತೆ ಇದೆ. ಸುಳ್ಳು ಹೇಳುವ ಅಗತ್ಯವಿಲ್ಲ. ಪಟ್ರೆಹಳ್ಳಿ ಸಮೀಪ ಆದಿವಾಲ ಗ್ರಾಮದ ರಿ.ಸ.ನಂ. 109ರಲ್ಲಿ ಎಂಟು ಎಕರೆ ಭೂಮಿಯನ್ನು ರಸ್ತೆ ಸಾರಿಗೆ ಸಂಸ್ಥೆಗೆ ಹಸ್ತಾಂತರಿಸಿದ್ದೇವೆ. ಡಿಪೊ ನಿರ್ಮಾಣಕ್ಕೆ ₹ 10 ಕೋಟಿ ಅನುದಾನ ಕೇಳಿದ್ದು, ಆರ್ಥಿಕ ಇಲಾಖೆ ಅನುಮೋದನೆಗೆ ಪ್ರಸ್ತಾವ ಹೋಗಿದೆ. ಲಾಕ್‌ಡೌನ್ ಇಲ್ಲದೇ ಹೋಗಿದ್ದರೆ, ಈ ವೇಳೆಗೆ ಕಾಮಗಾರಿ ಆರಂಭವಾಗುತ್ತಿತ್ತು.

– ಕೆ. ಪೂರ್ಣಿಮಾ ಶ್ರೀನಿವಾಸ್,ಶಾಸಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT