ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳನ್ನು ಕರೆತಂದ ಬಳಿಕ ಪಾಲಕರ ಸುಪರ್ದಿಗೆ ಒಪ್ಪಿಸಲಾಗಿದೆ: ಬಸವರಾಜನ್‌

ಮಾಜಿ ಶಾಸಕ ಎಸ್‌.ಕೆ. ಬಸವರಾಜನ್‌ ಹೇಳಿಕೆ
Last Updated 2 ಸೆಪ್ಟೆಂಬರ್ 2022, 4:40 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಬೆಂಗಳೂರಿನ ಕಾಟನ್‌ಪೇಟೆ ಪೊಲೀಸ್ ಠಾಣೆಯಿಂದ ಮಕ್ಕಳನ್ನು ಕರೆತಂದ ಬಳಿಕ ಪಾಲಕರ ಸುಪರ್ದಿಗೆ ಒಪ್ಪಿಸಲಾಗಿದೆ. ಮಕ್ಕಳು ಪಾಲಕರ ಜೊತೆಗೆ ಇದ್ದರು’ ಎಂದು ಮಾಜಿ ಶಾಸಕ ಎಸ್‌.ಕೆ. ಬಸವರಾಜನ್‌ ತಿಳಿಸಿದರು.

ಜಾಮೀನು ಪಡೆದು ನ್ಯಾಯಾಲಯದಿಂದ ಹೊರಬಂದ ಅವರು ಗುರುವಾರ ಮಾಧ್ಯಮ ಪ್ರತಿನಿಧಿಗಳ ಎದುರು ಮಾತನಾಡಿದರು.

‘ಆಪತ್ತಿನಲ್ಲಿದ್ದ ಮಕ್ಕಳನ್ನು ರಕ್ಷಣೆ ಮಾಡಿದ್ದೇನೆ. ಮಠ ಹಾಗೂ ಮುರುಘಾಶ್ರೀ ವಿರುದ್ಧ ಪಿತೂರಿ ಮಾಡಿಲ್ಲ. ಅಂತಹ ಉದ್ದೇಶ ಇದ್ದಿದ್ದರೆ 14 ವರ್ಷಗಳ ಹಿಂದೆಯೇ ಮಾಡುತ್ತಿದ್ದೆ’ ಎಂದು ಹೇಳಿದರು.

‘ಮಕ್ಕಳಿಬ್ಬರು ಹಾಸ್ಟೆಲ್‌ನಿಂದ ಹೊರಬಂದು ಬೆಂಗಳೂರು ತಲುಪಿದ್ದರು. ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿರುವ ಮಾಹಿತಿ ಲಭ್ಯವಾಗಿತ್ತು. ಆಡಳಿತಾಧಿಕಾರಿ ಹಾಗೂ ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿಯಾಗಿದ್ದರಿಂದ ಅವರನ್ನು ಕರೆತರಲು ತೆರಳಿದ್ದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಸುಳ್ಳು ಪ್ರಕರಣ ದಾಖಲಿಸಲು ಮಕ್ಕಳನ್ನು ಬಳಸಿಕೊಳ್ಳುವ ವ್ಯಕ್ತಿತ್ವ ನನ್ನದಲ್ಲ. ಮಕ್ಕಳು ದಾಖಲಿಸಿದ ಪ್ರಕರಣದಿಂದ ತಪ್ಪಿಸಿಕೊಳ್ಳಲು ನಮ್ಮ ವಿರುದ್ಧ ಸುಳ್ಳು ಮೊಕದ್ದಮೆ ದಾಖಲಿಸಲಾಗಿದೆ. ತಿಂಗಳು ಕಾಲ ಪಿತೂರಿ ನಡೆಸಿ ನನ್ನ ವಿರುದ್ಧ ದೂರು ದಾಖಲಿಸಲಾಗಿದೆ’ ಎಂದು ಆರೋಪಿಸಿದರು.

ಮಠದ ಆಡಳಿತಾಧಿಕಾರಿ ಹುದ್ದೆಯಿಂದ ಕಿತ್ತು ಹಾಕಿರುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ‘ಬದಲಾವಣೆ ಮಾಡುವ ಅಧಿಕಾರ ಅವರಿಗಿದೆ. ಇದನ್ನು ಪ್ರಶ್ನಿಸುವುದಿಲ್ಲ’ ಎಂದರು.

‘ತಪ್ಪು ಮಾಡಿದ್ದರೆ ಪತಿಗೂ ಶಿಕ್ಷೆಯಾಗಲಿ’: ‘ಮಕ್ಕಳು ಮಾಡಿರುವ ಆಪಾದನೆ ಕೇಳಿ ನೋವಾಗಿದೆ. ಮಕ್ಕಳಿಗೆ ನ್ಯಾಯ ಸಿಗಬೇಕು. ಪತಿ ಬಸವರಾಜನ್ ತಪ್ಪು ಮಾಡಿದ್ದರೆ ಅವರಿಗೂ ಶಿಕ್ಷೆಯಾಗಲಿ’ ಎಂದು ಸೌಭಾಗ್ಯ ಬಸವರಾಜನ್‌ ತಿಳಿಸಿದರು.

ಜಾಮೀನು ಪಡೆದು ನ್ಯಾಯಾಲಯದಿಂದ ಹೊರಬಂದ ಅವರು ಗುರುವಾರ ಮಾಧ್ಯಮ ಪ್ರತಿನಿಧಿಗಳ ಎದುರು ಮಾತನಾಡಿದರು.

‘ಮಕ್ಕಳು ಬೆಂಗಳೂರಿನ ಕಾಟನ್‌ ಪೇಟೆ ಪೊಲೀಸ್‌ ಠಾಣೆಯಲ್ಲಿದ್ದಾಗ ಪತಿ ಜೊತೆ ತೆರಳಿದ್ದೆ. ಅದರಹೊರತಾಗಿ ಮಠದ ಯಾವ ವ್ಯವಹಾರಗಳೂ ಗೊತ್ತಿಲ್ಲ. ಮುರುಘಾಶ್ರೀ ಪ್ರಕರಣದಲ್ಲಿ ನಿರಪರಾಧಿಯಾಗಿ ಹೊರಬಂದರೆ ಸಂತೋಷವಾಗಲಿದೆ. ಸತ್ಯಕ್ಕೆ ಎಂದಿಗೂ ಜಯ ಸಿಗಬೇಕು’ ಎಂದು ತಿಳಿಸಿದರು.

‘ಹಿರಿಯ ಗುರುಗಳ ಗದ್ದುಗೆ ಪೂಜೆಗೆ ಪ್ರತಿ ಸೋಮವಾರ ಮುರುಘಾ ಮಠಕ್ಕೆ ಭೇಟಿ ನೀಡುತ್ತಿದ್ದೆ. ಗದ್ದುಗೆ ಪೂಜೆ ಮುಗಿಸಿ ಮರಳುತ್ತಿದ್ದ ನನಗೆ ಹಾಸ್ಟೆಲ್‌ ವಾರ್ಡನ್‌ ರಶ್ಮಿ ಅವರ ಪರಿಚಯ ಇಲ್ಲ’ ಎಂದು ತಿಳಿಸಿದರು.

‘ಮುರುಘಾಶ್ರೀ ತಪ್ಪು ಮಾಡಿಲ್ಲ’

ಚಿತ್ರದುರ್ಗ: ‘ಭವ್ಯ ಪರಂಪರೆಯ ಮಠದ ಪೀಠಾಧ್ಯಕ್ಷರಾದ ಶಿವಮೂರ್ತಿ ಮುರುಘಾ ಶರಣರು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಅವರು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂಬ ನಂಬಿಕೆ ನಮಗಿಲ್ಲ’ ಎಂದು ಜೆಡಿಎಸ್ ಮುಖಂಡ ಕೆ.ಸಿ.ವೀರೇಂದ್ರ (ಪಪ್ಪಿ) ತಿಳಿಸಿದರು.

ಬುಧವಾರ ಮಠಕ್ಕೆ ಬಂದ ಅವರು ಮುರುಘಾ ಶರಣರನ್ನು ಭೇಟಿ ಮಾಡಿ ಸುದ್ದಿಗಾರರ ಜತೆ ಮಾತನಾಡಿದರು.

‘ವಿದ್ಯಾಪೀಠದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಆರೋಪ ಮಾಡಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದ್ದು ಅನ್ಯಾಯವಾದವರಿಗೆ ನ್ಯಾಯ ಸಿಗುತ್ತದೆ’ ಎಂದರು.

‘ವಿದ್ಯಾಪೀಠದ ನಿರ್ದೇಶಕನಾಗಿರುವ ನಾನು ಕಳೆದ ಐದು ದಿನದಿಂದ ನಿತ್ಯವು ಶರಣರನ್ನು ಭೇಟಿಯಾಗುತ್ತಿದ್ದೇನೆ. ಇಂದು ಸಹ ಶರಣರು ನಿತ್ಯದ ಚಟುವಟಿಕೆಯಲ್ಲಿದ್ದಾರೆ. ಕಾನೂನು ಬಲಿಷ್ಠವಾಗಿದ್ದು ತಪ್ಪಿಸ್ಥರಿಗೆ ಶಿಕ್ಷೆಯಾಗುವುದನ್ನು ಯಾರಿಂದಲೂ ತಪ್ಪಿಸಲು ಆಗುವುದಿಲ್ಲ’ ಎಂದರು.

ವಿದ್ಯಾರ್ಥಿನಿಯರ ಸ್ಥಳಾಂತರ

ಚಿತ್ರದುರ್ಗ: ಇಲ್ಲಿನ ಮುರುಘಾ ಮಠದ ಶಿವಮೂರ್ತಿಮುರುಘಾ ಶರಣರ ವಿರುದ್ಧ ಪೋಕ್ಸೊ ಪ್ರಕರಣ
ದಾಖಲಾದ ಕಾರಣ ಮಠದ ಆವರಣದಲ್ಲಿನವಿದ್ಯಾರ್ಥಿನಿಲಯದ ವಿದ್ಯಾರ್ಥಿನಿಯರನ್ನುಬುಧವಾರ ಸಂಜೆ ತಾಲ್ಲೂಕಿನ ಸರ್ಕಾರಿ
ವಿದ್ಯಾರ್ಥಿನಿಲಯಗಳಿಗೆ ಸ್ಥಳಾಂತರಿಸಲಾಗಿದೆ.

ಪ್ರಕರಣ ಸಂಬಂಧ ಮಠ ಹಾಗೂ ವಿದ್ಯಾರ್ಥಿನಿಲಯದಲ್ಲಿ ತನಿಖಾ ತಂಡ ಸ್ಥಳ ಮಹಜರು ನಡೆಸುತ್ತಿದೆ. ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎಂಬ ಕಾರಣಕ್ಕೆಮಕ್ಕಳ ಕಲ್ಯಾಣ ಸಮಿತಿ ಶಿಫಾರಸಿನ ಮೇರೆಗೆ ಮೊರಾರ್ಜಿ ದೇಸಾಯಿ ವಸತಿ ನಿಲಯಕ್ಕೆ
ಸ್ಥಳಾಂತರಿಸಲಾಯಿತು.

ಪ್ರಕರಣದ ಸುದ್ದಿ ಹೊರ ಬೀಳುತ್ತಿದ್ದಂತೆಯೇ ಕೆಲ ಪಾಲಕರು ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಿದ್ದರು. ನಿಲಯಕ್ಕೆ ಭೇಟಿ ನೀಡಿದ್ದ ರಾಜ್ಯ ಮಕ್ಕಳ ಆಯೋಗದ ಹಂಗಾಮಿ ಅಧ್ಯಕ್ಷೆ ಜಯಶ್ರೀ ಬಳಿ ವಿದ್ಯಾರ್ಥಿ‌ನಿಯರು ಆತಂಕ ವ್ಯಕ್ತಪಡಿಸಿದ್ದರು ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT