ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮಪುರ | ಬತ್ತಿದ ಕೊಳವೆಬಾವಿ: ಟ್ಯಾಂಕರ್‌ ನೀರು ಸಿಗದೆ ಒಣಗುತ್ತಿದೆ ಬೆಳೆ

Published 17 ಮೇ 2024, 7:05 IST
Last Updated 17 ಮೇ 2024, 7:05 IST
ಅಕ್ಷರ ಗಾತ್ರ

ಧರ್ಮಪುರ: ಕಳೆದ ವರ್ಷ ಕಂಡುಬಂದ ಮಳೆಯ ಕೊರತೆಯಿಂದಾಗಿ ಹೋಬಳಿ ವ್ಯಾಪ್ತಿಯಲ್ಲಿ ಕೊಳವೆ ಬಾವಿಗಳು ಬತ್ತಿದ್ದು, ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಬೆಳೆಯನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.

ಹೋಬಳಿಯಲ್ಲಿ ಕೆಲವು ರೈತರು ತಮ್ಮ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ನೀರಿಗೆ ಮೊರೆ ಹೋಗಿದ್ದಾರೆ. ಇನ್ನೂ ಕೆಲವರು ಟ್ಯಾಂಕರ್ ಮೂಲಕ ನೀರು ಹಾಯಿಸಲು ಸಾಧ್ಯವಾಗದೆ ಅನಿವಾರ್ಯವಾಗಿ ಬೆಳೆಗಳನ್ನು ಕಳೆದುಕೊಳ್ಳುತ್ತಿದ್ದಾರೆ.

ಧರ್ಮಪುರ ಹೋಬಳಿಯ ಹಲಗಲದ್ದಿ ಗ್ರಾಮದ ರೈತ ಎಚ್.ಆರ್. ವೀರಭದ್ರಪ್ಪ ಅವರು 22 ಎಕರೆ ಭೂಮಿ ಹೊಂದಿದ್ದು, ನಾಲ್ಕು ಎಕರೆಯಲ್ಲಿ ದಾಳಿಂಬೆ, ಎಂಟು ಎಕರೆಯಲ್ಲಿ ಬಾಳೆ, ಎಂಟು ಎಕರೆಯಲ್ಲಿ ಅಡಿಕೆ ಬೆಳೆದಿದ್ದಾರೆ. ಉಳಿದ ಎರಡು ಎಕರೆಯಲ್ಲಿ ಸೇವಂತಿ ಹೂವು ಬೆಳೆದಿದ್ದಾರೆ. ಆದರೆ, ಕೊಳವೆಬಾವಿಗಳಲ್ಲಿ ನೀರಿಲ್ಲದ ಕಾರಣ ದಿಕ್ಕು ತೋಚದಾಗಿದ್ದಾರೆ.

ನೀರಾವರಿ ಸೌಲಭ್ಯಕ್ಕಾಗಿ 26 ಕೊಳವೆಬಾವಿ ಕೊರೆಯಿಸಲಾಗಿತ್ತು. ಅದರಲ್ಲಿ ಈಗ ಕೇವಲ ಆರು ಕೊಳವೆಬಾವಿಗಳಲ್ಲಿ ನೀರು ಬರುತ್ತಿದ್ದು, ಅಡಿಕೆ ಬೆಳೆ ಉಳಿಸಿಕೊಳ್ಳುವುದು ದುಸ್ತರವಾಗಿದೆ. ಎಂಟು ಎಕೆರೆಯಲ್ಲಿ ಸಮೃದ್ಧವಾಗಿ ಬೆಳೆದಿರುವ ಬಾಳೆ ಗೊನೆ ಒಡೆದಿದೆ. ಒಂದೊಂದು ಗೊನೆ 8ರಿಂದ 10 ಕೆ.ಜಿ. ತೂಕವಿದೆ. ಆದರೆ, ಕಳೆದ 15 ದಿನಗಳಿಂದ ನೀರು ಪೂರೈಕೆ ಇಲ್ಲದ ಕಾರಣ ಬಾಳೆ ಗೊನೆ ಸಹಿತ ಗಿಡಗಳು ನೆಲಕ್ಕುರುಳುತ್ತಿವೆ. ತಿಂಗಳವರೆಗೆ ನೀರು ಹರಿಸಿದ್ದರೆ ಲಕ್ಷಾಂತರ ರೂಪಾಯಿ ಆದಾಯ ಬರುತ್ತಿತ್ತು. ಆದರೀಗ ಹಾಕಿದ ಬಂಡವಾಳವೂ ಬಾರದಂತಾಗಿದೆ ಎಂದು ರೈತ ವೀರಭದ್ರಪ್ಪ ಅಳಲು ತೋಡಿಕೊಂಡರು.

ಅಡಿಕೆ ತೋಟ ಉಳಿಸಿಕೊಳ್ಳಲು ಒಂದು ಕಿ.ಮೀ. ದೂರವಿರುವ ಮತ್ತೊಂದು ಜಮೀನಿನಿಂದ ಪೈಪ್‌ಲೈನ್‌ ಮೂಲಕ ನೀರು ತೆಗೆದುಕೊಂಡು ಹೋಗಿದ್ದು, ಸದ್ಯ ಅಡಿಕೆ ಮತ್ತು ದಾಳಿಂಬೆ ಬೆಳೆಗೆ ನೀರುಣಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ನದಿ ಇದ್ದರೂ ನೀರಿಲ್ಲ:

‘ಸಮುದ್ರದ ನೆಂಟಸ್ಥನ ಕುಡಿಯುವ ನೀರಿಗೆ ಬಡತನ’ ಎಂಬಂತೆ ಧರ್ಮಪುರ ಹೋಬಳಿಯ ಪಶ್ಚಿಮಕ್ಕೆ ವೇದಾವತಿ ಮತ್ತು ಸುವರ್ಣಮುಖಿ ನದಿಗಳು ಹರಿದರೂ ನದಿಗಳ ನೀರಿನ ಬಳಕೆ ಅವಕಾಶ ಹೋಬಳಿಯ ಕೆಲವೇ ಗ್ರಾಮಗಳ ರೈತರಿಗೆ ಸಿಕ್ಕಿದೆ.

ಅಧಿಕ ಅಡಿಕೆ ಬೆಳೆ:

2022-23ನೇ ಸಾಲಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ಹೋಬಳಿಯ 32 ಕೆರೆಗಳಲ್ಲಿ ನೀರಿನ ಸಂಗ್ರಹ ಹೆಚ್ಚಾಗಿ ರೈತರ ಮೊಗದಲ್ಲಿ ಖುಷಿ ಮೂಡಿತ್ತು. ಇದರಿಂದ ರೈತರು ಅಡಿಕೆ ಬೆಳೆಯತ್ತಲೇ ಮುಖಮಾಡಿದ್ದರು. ಕೃಷಿ ಇಲಾಖೆ ಮೂಲಗಳ ಪ್ರಕಾರ 2021ಕ್ಕೆ ಮೊದಲು ಹಿರಿಯೂರು ತಾಲ್ಲೂಕಿನಲ್ಲಿ 6,920 ಹೆಕ್ಟೇರ್‌ನಲ್ಲಿ ಅಡಿಕೆ ನಾಟಿ ಮಾಡಲಾಗಿತ್ತು. ಇದು 2023-24ರ ವೇಳೆಗೆ 9,884 ಹೆಕ್ಟೇರ್ ಪ್ರದೇಶಕ್ಕೂ ವಿಸ್ತರಣೆಯಾಗಿದೆ. ಈಗ ಮಳೆ ಕೈಕೊಟ್ಟಿದೆ. ಕೊಳವೆ ಬಾವಿಗಳಲ್ಲಿ ಅಂತರ್ಜಲ ಕುಸಿದಿದ್ದರಿಂದ ಅಡಿಕೆ ಮತ್ತು ದಾಳಿಂಬೆ ಬೆಳೆಗಳು ಒಣಗಲಾರಂಭಿಸಿವೆ.

‘ರೈತರ ಬದುಕಿಗೆ ಆಸರೆಯಾಗುವ ನೀರಾವರಿ ಮೂಲಗಳನ್ನು ಸರ್ಕಾರ ಅಭಿವೃದ್ಧಿ ಪಡಿಸಬೇಕು. ಕೆರೆಗಳಿಗೆ ನೀರು ಹರಿಸಬೇಕು. ಆಗ ಮಾತ್ರ ರೈತ ಬದುಕಲು ಸಾಧ್ಯ’ ಎಂದು ಹರಿಯಬ್ಬೆ ರೈತ ಸಿ. ಲೋಕೇಶಪ್ಪ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT