ಗುರುವಾರ , ಅಕ್ಟೋಬರ್ 6, 2022
22 °C
ಕೋಡಿ ಬಿದ್ದ ಸಿಹಿನೀರು ಹೊಂಡ, ಕಾತ್ರಾಳು ಕೆರೆ

ಮಳೆ ಆರ್ಭಟಕ್ಕೆ ನಲುಗಿದ ಜನತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಜಿಲ್ಲೆಯಲ್ಲಿ ವರುಣನ ಆರ್ಭಟ ಪುನಃ ಆರಂಭವಾಗಿದ್ದು, ಕತ್ತಲು ಸರಿದು ಬೆಳಕು ಹರಿಯುವ ಹೊತ್ತಿಗೆ ಕೆರೆ–ಕಟ್ಟೆ, ಹೊಂಡ–ವಡ್ಡು, ಬಾವಿ–ಕಲ್ಯಾಣಿಗಳು ಬಹುತೇಕ ತುಂಬಿ ಹರಿದಿವೆ. ಮಂಗಳವಾರ ರಾತ್ರಿ ಪ್ರಾರಂಭವಾದ ಮಳೆ ಬುಧವಾರ ಮುಂಜಾನೆವರೆಗೂ ಬಿಡುವಿಲ್ಲದೆ ಸುರಿದಿದೆ.

ಬೆಳಿಗ್ಗೆ ಮೋಡಕವಿದ ವಾತಾವರಣ ನಿರ್ಮಾಣವಾಗಿತ್ತು. ಮಧ್ಯಾಹ್ನ 3 ಗಂಟೆ ಬಳಿಕ ಆರಂಭವಾದ ಮಳೆ ನಿಧಾನಗತಿಯಲ್ಲಿ ರಾತ್ರಿ 8ರ ಬಳಿಕ ಆರ್ಭಟ ಹೆಚ್ಚಾಯಿತು. ಚಿತ್ರದುರ್ಗ ತಾಲ್ಲೂಕಿನ ಎರಡು ಮಳೆಮಾಪನ ಕೇಂದ್ರದಲ್ಲಿ 4 ಸೆಂ.ಮೀ ಮಳೆ ದಾಖಲಾಗಿದೆ.

ನಗರದ ತುರುವನೂರು ರಸ್ತೆ ಮಾರ್ಗದ ಕೆಳಸೇತುವೆ, ಮೇದೆಹಳ್ಳಿ ರೇಲ್ವೆ ಹಾಗೂ ಅಂಡರ್‌ ಪಾಸ್‌ಗಳು ಬಹುತೇಕ ಜಲಾವೃತಗೊಂಡಿವೆ. ಸಂತೆಹೊಂಡ ಸಂಪೂರ್ಣ ತುಂಬಿದ ಪರಿಣಾಮ ಅಮೋಘ ಇಂಟರ್‌ ನ್ಯಾಷನಲ್‌ ಪಕ್ಕದ ರಸ್ತೆಯಲ್ಲಿ ನೀರು ಹರಿದು ವಾಹನ ಸವಾರರು ಸಮಸ್ಯೆ ಅನುಭವಿಸಿದರು. ಮಳೆ ನೀರಿನ ಜತೆ ಚರಂಡಿಯ ಕೊಳಚೆ ನೀರು ರಸ್ತೆಗೆ ಹರಿದು ಅವಾಂತರ ಸೃಷ್ಟಿಸಿತು.

ನಗರದಲ್ಲಿನ ಅನೇಕ ಹೊಂಡ, ಕಲ್ಯಾಣಿಗಳು ತುಂಬಿದ್ದು, ಸಿಹಿನೀರು ಹೊಂಡ ಹಾಗೂ ಹೊರವಲಯದ ಕಾತ್ರಾಳ್ ಕೆರೆ ಕೋಡಿ ಬಿದ್ದಿವೆ. ಮಳೆ ಹೀಗೆ ಬಿರುಸಾದರೆ ಎಲ್ಲ ಹೊಂಡಗಳು ಕೋಡಿ ಬೀಳಲಿವೆ.  ನಾಲ್ಕೈದು ದಿನದಿಂದಲೂ ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಯಿಂದಾಗಿ ಜಲಪಾತ್ರೆಗಳು ನಳನಳಿಸುತ್ತಿದ್ದು, ಅಂತರ್ಜಲ ಮಟ್ಟ ಸಹ ಹೆಚ್ಚಳವಾಗುತ್ತಿದೆ.

ಜೋಗಿಮಟ್ಟಿ ರಸ್ತೆ, ಕೆಳಗೋಟೆ, ಜೆಸಿಆರ್‌, ತುರುವನೂರು ರಸ್ತೆ ಸೇರಿದಂತೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದರಿಂದ ಜನಜೀವನ ಅಸ್ತವ್ಯಸ್ತವಾಯಿತು. ರಾತ್ರಿ ಪೂರ್ತಿ ನಿದ್ದೆಗೆಟ್ಟು ಮನೆಗಳಿಂದ ನೀರನ್ನು ಹೊರ ಹಾಕುವ ಕೆಲಸ ಮಾಡಿದರು. ಕೆಲವೆಡೆ ಚರಂಡಿಗಳಲ್ಲಿ ಕಸ ತುಂಬಿದ್ದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗಲು ಕಾರಣವಾಯಿತು.

ಜಿಲ್ಲೆಯಾದ್ಯಂತ ಒಟ್ಟು 117 ಮನೆಗಳು ಭಾಗಶಃ ಹಾಗೂ 7 ಮನೆಗಳು ತೀವ್ರ ಹಾನಿಗೆ ಒಳಗಾಗಿವೆ. ಚಿತ್ರದುರ್ಗ 31, ಹಿರಿಯೂರು 32, ಚಳ್ಳಕೆರೆ 5, ಹೊಸದುರ್ಗ 19, ಹೊಳಲ್ಕೆರೆ 24, ಮೊಳಕಾಲ್ಮುರು 6 ಮನೆಗಳು ಭಾಗಶಃ ಹಾನಿಗೆ ಒಳಗಾಗಿವೆ. 59 ಮನೆಗಳಿಗೆ ನೀರು ನುಗ್ಗಿದ್ದು, 15 ಸಣ್ಣ ಜಾನುವಾರುಗಳಿಗೆ ತೊಂದರೆಯಾಗಿದೆ. ಜಿಲ್ಲೆಯ ಹಲವು ಭಾಗಗಳಲ್ಲಿ ನದಿ ನೀರಿನ ಮಾದರಿಯಲ್ಲಿ ರಸ್ತೆ, ಜಮೀನುಗಳಿಗೆ ನೀರು ಹರಿಯಲಾರಂಭಿಸಿದೆ. ಇದು ರೈತರನ್ನು ಮತ್ತಷ್ಟು ಆತಂಕಕ್ಕೆ ನೂಕಿದೆ.

ಮಳೆಯಿಂದಾಗಿ ‘ಜೋಗಿಮಟ್ಟಿ’ ಕಣ್ಮನ ಸೆಳೆಯುತ್ತಿದೆ. ಹಚ್ಚಹಸಿರಿನಿಂದ ಕಂಗೊಳಿಸುವುದರಿಂದ ಮುಂಜಾನೆ ಈ ಸ್ಥಳಗಳಿಗೆ ಭೇಟಿ ನೀಡುವ ವಾಯುವಿಹಾರಿಗಳಿಗೆ ಕೆಲಕ್ಷಣವಾದರೂ ಮಲೆನಾಡ ಅನುಭವವನ್ನು ಉಂಟು ಮಾಡುತ್ತಿದೆ. ಐತಿಹಾಸಿಕ ಕೋಟೆ, ಚಂದ್ರವಳ್ಳಿ, ಆಡುಮಲ್ಲೇಶ್ವರ ಕೂಡ ಹಸಿರಿನಿಂದ ಕಂಗೊಳಿಸುತ್ತಿವೆ.

ಡಿ.ಮರಿಕುಂಟೆಯಲ್ಲಿ ಅಧಿಕ ಮಳೆ

ಚಳ್ಳಕೆರೆ ತಾಲ್ಲೂಕಿನ ಡಿ. ಮರಿಕುಂಟೆಯಲ್ಲಿ ಮಂಗಳವಾರ ರಾತ್ರಿ 8 ಸೆ.ಮೀ ಮಳೆಯಾಗಿದೆ. ಉಳಿದಂತೆ ಚಳ್ಳಕೆರೆ, ಪರಶುರಾಂಪುರ, ನಾಯಕನಹಟ್ಟಿ ಹಾಗೂ ತಳುಕು ಭಾಗದಲ್ಲಿ ತಲಾ 1 ಸೆ.ಮೀ ಮಳೆ ದಾಖಲಾಗಿದೆ.

ಹಿರಿಯೂರು 2, ಬಬ್ಬೂರು 3, ಈಶ್ವರಗೆರೆ 4, ಇಕ್ಕನೂರಿನಲ್ಲಿ 7, ಹೊಳಲ್ಕೆರೆ, ರಾಮಗಿರಿ, ಬಿ.ದುರ್ಗ,ಎಚ್‌.ಡಿ.ಪುರ ತಲಾ 1, ಚಿತ್ರದುರ್ಗ 4, ಐನಳ್ಳಿ, ಸಿರಿಗೆರೆ ತಲಾ 2, ಹೊಸದುರ್ಗ 6, ಮತ್ತೋಡು 4, ಮಾಡದಕೆರೆ 2, ಮೊಳಕಾಲ್ಮುರು 5, ರಾಯಾಪುರ, ಬಿ.ಜಿ. ಕೆರೆ 4 ಹಾಗೂ ದೇವಸಮುದ್ರ 2 ಸೆ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ತಿಳಿಸಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು