ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ಉಪಕರಣದ ಬೆಲೆ ಏರಿಕೆ ಬರೆ

ಹೆಚ್ಚಿದ ಬೇಡಿಕೆ–ಕುಸಿದ ಪೂರೈಕೆ, ಔಷಧ ಅಂಗಡಿಗಳಿಗೆ ಅಲೆದಾಟ
Last Updated 8 ಮೇ 2021, 3:46 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೋವಿಡ್‌ ಚಿಕಿತ್ಸೆಗೆ ನೆರವಾಗುವ ವೈದ್ಯಕೀಯ ಉಪಕರಣಗಳ ಬೆಲೆ ದಿಢೀರ್‌ ಏರಿಕೆ ಕಂಡಿದೆ. ಬೇಡಿಕೆಗೆ ಅನುಗುಣವಾಗಿ ಪೂರೈಕೆ ಇಲ್ಲದಿರುವುದರಿಂದ ಉಪಕರಣ ಕೇಳಿ ಔಷಧ ಅಂಗಡಿಗಳಿಗೆ ಅಲೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಡಿಜಿಟಲ್‌ ಥರ್ಮಾಮೀಟರ್‌, ಪಲ್ಸ್‌ ಆಕ್ಸಿಮೀಟರ್‌, ವೆಪರೈಸರ್‌ ಹಾಗೂ ಎನ್‌–95 ಮಾಸ್ಕ್‌ ಕೊರತೆ ಉಂಟಾಗಿದೆ. ಜಿಲ್ಲೆಯ ಬಹುತೇಕ ಔಷಧ ಅಂಗಡಿಗಳಲ್ಲಿ ಇವು ಖಾಲಿಯಾಗಿವೆ. ಮುಂಗಡವಾಗಿ ಹಣ ನೀಡಿದ ಗ್ರಾಹಕರಿಗೆ ಮಾತ್ರ ಸಿಗುತ್ತಿವೆ. ಅದೂ ದುಪ್ಪಟ್ಟು ಬೆಲೆ ತೆರಬೇಕಾಗಿದೆ.

ಮನೆ ಚಿಕಿತ್ಸೆಗೆ ಕಡ್ಡಾಯ:ಕೊರೊನಾ ಸೋಂಕು ಕಾಣಿಸಿಕೊಂಡು ಮನೆಯಲ್ಲೇ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಪಲ್ಸ್‌ ಆಕ್ಸಿಮೀಟರ್‌ ಕಡ್ಡಾಯ ಮಾಡಲಾಗಿದೆ. ರಕ್ತದಲ್ಲಿರುವ ಆಮ್ಲಜನಕದ ಪ್ರಮಾಣ ಗುರುತಿಸುವ ಈ ಉಪಕರಣವನ್ನು ನಿತ್ಯ ಎರಡು ಬಾರಿ ಬಳಕೆ ಮಾಡಬೇಕಿದೆ. ಸಂಬಂಧಿಸಿದ ವೈದ್ಯಕೀಯ ಸಿಬ್ಬಂದಿಗೆ ಈ ಮಾಹಿತಿಯನ್ನು ನೀಡಬೇಕಿದೆ. ಇದರಿಂದ ಪಲ್ಸ್‌ ಆಕ್ಸಿಮೀಟರ್‌ಗೆ ದಿಢೀರ್‌ ಬೇಡಿಕೆ ಸೃಷ್ಟಿಯಾಗಿದೆ.

ಸಾಮಾನ್ಯವಾಗಿ ಈ ಉಪಕರಣ ₹ 600ರಿಂದ ₹1,200ರವರೆಗೆ ಲಭ್ಯವಾಗುತ್ತಿತ್ತು. ಬೇಡಿಕೆ ಹೆಚ್ಚಾದಂತೆ ಬೆಲೆ ಏರಿಕೆಯಾಗಿದೆ. ಔಷಧ ಅಂಗಡಿಗಳು ಇದನ್ನು ₹ 3,000ಕ್ಕೆ ಮಾರಾಟ ಮಾಡುತ್ತಿವೆ. ಆದರೆ, ಬಿಲ್‌ ಮಾತ್ರನೀಡುತ್ತಿಲ್ಲ.

ಕೋವಿಡ್‌ ಮುನ್ನೆಚ್ಚರಿಕೆ:ನೀರಿನ ಹಬೆ ತೆಗೆದುಕೊಳ್ಳುವುದರಿಂದ ಆರಂಭದಲ್ಲೇ ಸೋಂಕು ಮುಕ್ತವಾಗಲು ಸಾಧ್ಯವಿದೆ. ಹಲವು ಖಾಸಗಿ ಆಸ್ಪತ್ರೆಗಳು ನೀರಿನ ಹಬೆಯನ್ನು ಕೋವಿಡ್‌ ರೋಗಿಗಳ ಚಿಕಿತ್ಸೆಗೂ ಬಳಕೆ ಮಾಡುತ್ತಿವೆ. ನೀರು ತುಂಬಿಸಿ ವಿದ್ಯುತ್‌ ಸಂಪರ್ಕ ಕಲ್ಪಿಸಿದರೆ ಹಬೆ ಉಗುಳುವ ವೆಪರೈಸರ್‌ (ಸ್ಟಿಮರ್‌) ಉಪಕರಣಕ್ಕೆ ಭಾರಿ ಬೇಡಿಕೆ ಬಂದಿದೆ. ಸಾಮಾನ್ಯವಾಗಿ ₹ 300ಕ್ಕೆ ಲಭ್ಯವಾಗುತ್ತಿದ್ದ ಇವುಗಳ ಬೆಲೆ ₹ 1,200ಕ್ಕೆ ಹೆಚ್ಚಿದೆ.

‘ಪಲ್ಸ್‌ ಆಕ್ಸಿಮೀಟರ್‌ ಮತ್ತು ಸ್ಟೀಮರ್‌ ಪೂರೈಕೆ ಸ್ಥಗಿತಗೊಂಡಿದೆ. ಏಜೆನ್ಸಿಗಳೇ ದುಪ್ಪಟ್ಟು ಬೆಲೆ ನಿಗದಿ ಮಾಡಿವೆ. ಗ್ರಾಹಕರು ಈ ಬೆಲೆಯನ್ನು ಒಪ್ಪುತ್ತಿಲ್ಲ. ಮುಂಗಡವಾಗಿ ಹಣ ನೀಡಿದರೆ ಎರಡು ದಿನಗಳಲ್ಲಿ ತರಿಸಿ ನೀಡುತ್ತೇವೆ’ ಎನ್ನುತ್ತಾರೆ ತುರುವನೂರು ರಸ್ತೆಯ ಔಷಧ ಅಂಗಡಿಯೊಂದರಮಾಲೀಕ.

ಸರ್ಜಿಕಲ್‌ ಮಾಸ್ಕ್‌ ಕೊರತೆ:ಚಿತ್ರದುರ್ಗ ನಗರದಲ್ಲಿ ಸರ್ಜಿಕಲ್ ಮಾಸ್ಕ್‌ಗಳಿಗೂ ಕೊರತೆ ಉಂಟಾಗಿದೆ. ಎನ್‌–95, ಮೂರು ಪದರದ ಸರ್ಜಿಕಲ್‌ ಮಾಸ್ಕ್‌ಗಳು ಔಷಧ ಅಂಗಡಿಗಳಲ್ಲೂ ಸಿಗುತ್ತಿಲ್ಲ. ಕೋವಿಡ್‌ ಪ್ರಕರಣ ಏರಿಕೆ ಆಗುತ್ತಿದ್ದಂತೆ ಸುರಕ್ಷಿತ ಮಾಸ್ಕ್‌ಗಳತ್ತ ಒಲವು ಬೆಳೆದಿದೆ.

‘ಸರ್ಜಿಕಲ್‌ ಮಾಸ್ಕ್‌ಗಳು ಪೂರೈಕೆ ಆಗುತ್ತಿಲ್ಲ. ಯಾವಾಗ ಲಭ್ಯ ಆಗುತ್ತವೆ ಎಂಬುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಏಜೆನ್ಸಿಯಿಂದ ಪೂರೈಕೆಯಾದರೆ ಖಂಡಿತ ಮಾರಾಟ ಮಾಡುತ್ತೇವೆ’ ಎನ್ನುತ್ತಾರೆ ಬಿ.ಡಿ. ರಸ್ತೆಯ ಔಷಧ ಅಂಗಡಿಯ ಮಾಲೀಕ.

ನಿಖರ ಮಾಹಿತಿ
ರಕ್ತದಲ್ಲಿರುವ ಆಮ್ಲಜನಕದ ಪ್ರಮಾಣವನ್ನು ಪಲ್ಸ್ ಆಕ್ಸಿಮೀಟರ್‌ ನಿಖರವಾಗಿ ಹೇಳುತ್ತದೆ. ಕೋವಿಡ್‌ ರೋಗಿಗಳಲ್ಲಿ ಆಮ್ಲಜನಕದ ಪ್ರಮಾಣ ಏರಿಳಿತ ಆಗುತ್ತಿರುವುದರಿಂದ ಇದರ ಬಳಕೆ ಹೆಚ್ಚಾಗುತ್ತಿದೆ.

ಚಿಕ್ಕ ಉಪಕರಣದಲ್ಲಿ ಬೆರಳು ತೂರಿಸಿ ಇಟ್ಟುಕೊಂಡರೆ ಮಾಹಿತಿ ನೀಡುತ್ತದೆ. ದೇಹದ ಆಮ್ಲಜನಕದ ಪ್ರಮಾಣದ ಬಗ್ಗೆ ಕರಾರುವಕ್ಕಾಗಿ ಹೇಳುತ್ತದೆ. ಶ್ವಾಸಕೋಶ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುವ ರೋಗಿಗಳಿಗೆ ಇದನ್ನು ಬಳಕೆ ಮಾಡಲಾಗುತ್ತಿತ್ತು.

ಅನಗತ್ಯ ಖರೀದಿ
‘ಕೋವಿಡ್‌ನಿಂದ ಆತಂಕಗೊಂಡಿರುವ ಬಹುತೇಕರು ಹಲವು ಉಪಕರಣಗಳನ್ನು ಅನಗತ್ಯವಾಗಿ ಖರೀದಿ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಸಂದೇಶವನ್ನು ನಂಬಿ ಮನೆಯಲ್ಲಿ ದಾಸ್ತಾನು ಇಟ್ಟುಕೊಳ್ಳುತ್ತಿದ್ದಾರೆ’ ಎನ್ನುತ್ತಾರೆ ಔಷಧ ಮಾರಾಟಗಾರರು.

‘ವಿಟಾಮಿನ್‌ ಸಿ, ಜಿಂಕ್‌ ಮಾತ್ರೆಗಳನ್ನು ಬಹುತೇಕರು ಖರೀದಿ ಮಾಡಿಕೊಂಡಿದ್ದಾರೆ. ಕೋವಿಡ್‌ ಚಿಕಿತ್ಸೆಗೆ ಬಳಸುವ ಅಜಿಥ್ರೋಮೈಸಿನ್‌ ಮಾತ್ರೆಗಳನ್ನು ಖರೀದಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಸಂದೇಶವೊಂದು ಇದಕ್ಕೆ ಪ್ರಚೋದನೆ ನೀಡಿದೆ. ವೈದ್ಯರ ಸಲಹೆಯ ಹೊರತಾಗಿ ಯಾವುದೇ ಔಷಧ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ’ ಎನ್ನುತ್ತಾರೆ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಓಂಕಾರಮೂರ್ತಿ.

*

ಔಷಧ ಹಾಗೂ ಉಪಕರಣಗಳ ಕಚ್ಚಾ ವಸ್ತು ಬೆಲೆ ಏರಿಕೆ ಆಗಿದೆ. ಮಾರುಕಟ್ಟೆಯಲ್ಲಿ ಸಹಜವಾಗಿಯೇ ದರ ಹೆಚ್ಚಾಗಿದೆ. ದಿಢೀರ್‌ ಬೇಡಿಕೆಯಿಂದ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ.

-ಓಂಕಾರಮೂರ್ತಿ, ಅಧ್ಯಕ್ಷರು, ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT